ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಪಿತ್ರೋಡಾ ಪಕ್ಷಾಂತರ ಮಾಡ್ತಾರಾ? ಬಿಜೆಪಿ ಸೇರ್ಪಡೆ ಬಗ್ಗೆ ರಾಹುಲ್​ ಆಪ್ತನ ಶಾಕಿಂಗ್​ ಹೇಳಿಕೆ! | Sam Pitroda

ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಪಿತ್ರೋಡಾ ಪಕ್ಷಾಂತರ ಮಾಡ್ತಾರಾ? ಬಿಜೆಪಿ ಸೇರ್ಪಡೆ ಬಗ್ಗೆ ರಾಹುಲ್​ ಆಪ್ತನ ಶಾಕಿಂಗ್​ ಹೇಳಿಕೆ! | Sam Pitroda
Published on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಬೆನ್ನಲ್ಲೇ ತಾವು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುವ ಚಿಂತನೆಯಲ್ಲಿದ್ದೇನೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಅವರ ಹೇಳಿಕೆಗೆ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದು, ತಾವು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎನ್‌ಡಿಟಿವಿ ಜೊತೆ ಮಾತನಾಡಿದ ಸ್ಯಾಮ್ ಪಿತ್ರೋಡಾ, ಹುಸೇನ್ ದಳವಾಯಿಗೆ ಹುಚ್ಚು ಹಿಡಿದಿದೆ, ಆದ್ದರಿಂದ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಪಕ್ಷ ತಮಗೆ ಹಲವಾರು ಅವಕಾಶಗಳನ್ನು ನೀಡಿದೆ. ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಮತ್ತು ಡಾ. ಮನಮೋಹನ್ ಸಿಂಗ್ ದೇಶ ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಲು ದೊಡ್ಡ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದರು ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಕಾಂಗ್ರೆಸ್ ಸಿದ್ಧಾಂತಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಪಿತ್ರೋಡಾ, ನಾನು ಜಾತ್ಯತೀತತೆ, ಸ್ವಾತಂತ್ರ್ಯ, ನ್ಯಾಯ, ಪ್ರಜಾಪ್ರಭುತ್ವ ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನು ಹುಟ್ಟಿನಿಂದಲೇ ಕಾಂಗ್ರೆಸ್ ಸಿದ್ಧಾಂತದಲ್ಲಿ ಬೆಳೆದು ಬಂದವನು. ಹುಸೇನ್ ದಳವಾಯಿ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Also Read
ಮೋದಿ ಕಠಿಣ ಪರಿಶ್ರಮಿ, ದಯಾಳು, ಪ್ರಖರ ವಾಗ್ಮಿ ಎಂದ ಕಾಂಗ್ರೆಸ್ ನಾಯಕ! ನಮೋ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? | Modi Pitroda Friendship
ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಪಿತ್ರೋಡಾ ಪಕ್ಷಾಂತರ ಮಾಡ್ತಾರಾ? ಬಿಜೆಪಿ ಸೇರ್ಪಡೆ ಬಗ್ಗೆ ರಾಹುಲ್​ ಆಪ್ತನ ಶಾಕಿಂಗ್​ ಹೇಳಿಕೆ! | Sam Pitroda

ಪಿತ್ರೋಡಾ ಬಗ್ಗೆ ದಳವಾಯಿ ಹೇಳಿದ್ದೇನು...?

ಇತ್ತೀಚೆಗೆ ಸ್ಯಾಮ್ ಪಿತ್ರೋಡಾ ಅವರು ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸಿದ್ದು, ಪ್ರತಿಯಾಗಿ ಪ್ರಧಾನಿ ಮೋದಿ, ಪಿತ್ರೋಡಾಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯ ಕುರಿತು ಸುದ್ದಿಸಂಸ್ಥೆ ಐಎಎನ್‌ಎಸ್ ಜೊತೆ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ, ಪಿತ್ರೋಡಾ ಅವರ ನಿಲುವನ್ನು ಪ್ರಶ್ನಿಸಿದ್ದರು.

ಸ್ಯಾಮ್ ಪಿತ್ರೋಡಾ ದೇಶದಲ್ಲಿ ವಾಸಿಸುತ್ತಿಲ್ಲ, ಅವರು ವಿದೇಶದಲ್ಲಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ಬಹುಶಃ ಅವರು ಪಕ್ಷಾಂತರ ಮಾಡುವ ಬಗ್ಗೆ ಯೋಚಿಸುತ್ತಿರಬಹುದು. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ ಎಂದು ದಳವಾಯಿ ಅನುಮಾನ ವ್ಯಕ್ತಪಡಿಸಿದ್ದರು. ಈಗ ದಳವಾಯಿ ಹೇಳಿಕೆಯು ಪಿತ್ರೋಡಾರನ್ನು ಕೆರಳಿಸಿದೆ.

ಪ್ರಧಾನಿ ಮೋದಿ ಶುಭಾಶಯ

ಈ ಎಲ್ಲಾ ವಿವಾದಗಳಿಗೆ ನಾಂದಿ ಹಾಡಿದ್ದು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ಸ್ಯಾಮ್ ಪಿತ್ರೋಡಾ ನೀಡಿದ ಸಂದರ್ಶನ. ಆ ಸಂದರ್ಶನದಲ್ಲಿ ಪಿತ್ರೋಡಾ ಅವರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಮೋದಿ ಅವರನ್ನು ತಮ್ಮ ಗುಜರಾತಿ ಸ್ನೇಹಿತ ಎಂದು ಬಣ್ಣಿಸಿದ್ದ ಪಿತ್ರೋಡಾ, ಮೋದಿ ನನ್ನ ಗುಜರಾತಿ ಸ್ನೇಹಿತ. ಒಬ್ಬ ಮನುಷ್ಯನಾಗಿ ನಾನು ಅವರನ್ನು ಗೌರವಿಸುತ್ತೇನೆ. ನಾನು ಮತ್ತು ನನ್ನ ಪತ್ನಿ ಅವರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕವಾಗಿ ಅವರು ಅತ್ಯಂತ ಆತ್ಮೀಯ, ದಯಾಳು, ಪ್ರೀತಿಯ ಮತ್ತು ಕಾಳಜಿಯುಳ್ಳ ವ್ಯಕ್ತಿ. ಖಂಡಿತವಾಗಿಯೂ ಅವರು ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ ಕೂಡ ಹೌದು ಎಂದು ಹೇಳಿದ್ದರು.

ಸ್ಯಾಮ್ ಪಿತ್ರೋಡಾ ಅವರ ಈ ಸೌಹಾರ್ದಯುತ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅಷ್ಟೇ ಆತ್ಮೀಯವಾಗಿ ಸ್ಪಂದಿಸಿದ್ದರು. ಗುರುವಾರ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡು ದೀಪಾವಳಿ ಮತ್ತು ಗುಜರಾತಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದರು. ಮುಂಬರುವ ವರ್ಷವು ಸಂತೋಷ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಜಗನ್ನಾಥ್ ಎಂದು ಮೋದಿ ಬರೆದುಕೊಂಡಿದ್ದರು(ಏಜೆನ್ಸೀಸ್​).