ಮೋದಿ ಕಠಿಣ ಪರಿಶ್ರಮಿ, ದಯಾಳು, ಪ್ರಖರ ವಾಗ್ಮಿ ಎಂದ ಕಾಂಗ್ರೆಸ್ ನಾಯಕ! ನಮೋ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? | Modi Pitroda Friendship

ಮೋದಿಯನ್ನು ಗುಜರಾತಿ ಗೆಳೆಯ ಎಂದ ಪಿತ್ರೋಡಾ; ಸ್ಯಾಮ್ ಭಾಯ್ ಎಂದು ಕರೆದು ದೀಪಾವಳಿ ವಿಶ್ ಮಾಡಿದ ನಮೋ
ಮೋದಿಯನ್ನು ಗುಜರಾತಿ ಗೆಳೆಯ ಎಂದ ಪಿತ್ರೋಡಾ; ಸ್ಯಾಮ್ ಭಾಯ್ ಎಂದು ಕರೆದು ದೀಪಾವಳಿ ವಿಶ್ ಮಾಡಿದ ನಮೋ
Published on: 

ನವದೆಹಲಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಮತ್ತು ಭಾಷಣ ಕಲೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಮೋದಿ ಅವರು ಅತ್ಯಂತ ಪ್ರೀತಿ ಮತ್ತು ಕಾಳಜಿಯುಳ್ಳ ವ್ಯಕ್ತಿ ಎಂದು ಬಣ್ಣಿಸಿರುವ ಪಿತ್ರೋಡಾ, ತಮ್ಮಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳು ಕೇವಲ ಸೈದ್ಧಾಂತಿಕವಾಗಿವೆಯೇ ಹೊರತು ವೈಯಕ್ತಿಕವಾದದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ಅವರ ಈ ಮೆಚ್ಚುಗೆಯ ಮಾತುಗಳಿಗೆ ಪ್ರಧಾನಿ ಮೋದಿ ಅವರು ಕೂಡ ಅಷ್ಟೇ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದು, ಪಿತ್ರೋಡಾ ದಂಪತಿಗೆ ದೀಪಾವಳಿ ಮತ್ತು ಗುಜರಾತಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

ಮೋದಿ ಒಬ್ಬ ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ

ಸುದ್ದಿಸಂಸ್ಥೆ ಐಎಎನ್‌ಎಸ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸ್ಯಾಮ್ ಪಿತ್ರೋಡಾ, ಈ ಹಿಂದೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೋದಿಯವರನ್ನು ದೊಡ್ಡ ವಾಗ್ಮಿ ಎಂದು ಕರೆದಿದ್ದರ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ನನ್ನ ಗುಜರಾತಿ ಸ್ನೇಹಿತ. ಒಬ್ಬ ವ್ಯಕ್ತಿಯಾಗಿ ನಾನು ಅವರನ್ನು ಗೌರವಿಸುತ್ತೇನೆ. ನಾನು ಮತ್ತು ನನ್ನ ಪತ್ನಿ ಅವರನ್ನು ಭೇಟಿಯಾಗಿದ್ದೇವೆ. ವೈಯಕ್ತಿಕ ನೆಲೆಯಲ್ಲಿ ಅವರು ಬಹಳ ಆತ್ಮೀಯರು, ದಯಾಳು ಮತ್ತು ಕಾಳಜಿಯುಳ್ಳವರಾಗಿದ್ದಾರೆ. ನಿಸ್ಸಂದೇಹವಾಗಿ ಅವರು ಒಬ್ಬ ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಪಿತ್ರೋಡಾ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಒಬ್ಬ ಗುಜರಾತಿ ನಾಯಕನಾಗಿ, ಸ್ನೇಹಿತನಾಗಿ ಮತ್ತು ಹಿತೈಷಿಯಾಗಿ ಮೋದಿಯವರ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಅವರು ನನ್ನೊಂದಿಗೆ ಬಹಳ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ, ಅದು ನನಗೆ ಇಷ್ಟ ಎಂದು ತಿಳಿಸಿದ್ದಾರೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ಬೇರೆ, ವೈಯಕ್ತಿಕ ಸಂಬಂಧವೇ ಬೇರೆ

ರಾಜಕೀಯ ವಿರೋಧದ ನಡುವೆಯೂ ವೈಯಕ್ತಿಕ ಸಂಬಂಧವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ ಪಿತ್ರೋಡಾ, ತಮ್ಮ ಮತ್ತು ಮೋದಿ ನಡುವಿನ ಭಿನ್ನಾಭಿಪ್ರಾಯಗಳ ಸ್ವರೂಪವನ್ನು ಸ್ಪಷ್ಟಪಡಿಸಿದರು. ನಾನು ಗುಜರಾತ್‌ನಲ್ಲಿರುವ ಅವರ ನಿವಾಸಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಜಗತ್ತನ್ನು ನೋಡುವ ಅವರ ದೃಷ್ಟಿಕೋನ ಮತ್ತು ಅವರ ಸಿದ್ಧಾಂತಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅದು ಸಂಪೂರ್ಣವಾಗಿ ವಿಭಿನ್ನವಾದ ವಿಷಯ. ಅದು ವ್ಯಕ್ತಿಯ ವಿರುದ್ಧವಲ್ಲ, ಬದಲಾಗಿ ಅವರ ವಿಚಾರಧಾರೆಯ ವಿರುದ್ಧವಾಗಿದೆ. ಇವೆರಡೂ ಪ್ರತ್ಯೇಕ ಸಂಗತಿಗಳು ಎಂದು ಕಾಂಗ್ರೆಸ್​ ನಾಯಕ ವಿವರಿಸಿದ್ದಾರೆ.

ನಾನು ಮೋದಿಯವರೊಂದಿಗೆ ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿರಬಹುದು, ಆದರೆ ಅದೇ ಸಮಯದಲ್ಲಿ ಅವರೊಂದಿಗೆ ಕುಳಿತು ಊಟ ಮಾಡಬಹುದು ಮತ್ತು ನಗುತ್ತಾ ಹರಟೆ ಹೊಡೆಯಬಹುದು. ಅದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಪಿತ್ರೋಡಾ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಸೋನಿಯಾ ಗಾಂಧಿ ಅವರು ಸಹ ಪ್ರಧಾನಿ ಮೋದಿ ಅವರ ಭಾಷಣ ಕಲೆಯನ್ನು ಉಲ್ಲೇಖಿಸಿದ್ದರು. ಉತ್ತಮ ಭಾಷಣಗಳನ್ನು ಮಾಡುವ ಸಾಮರ್ಥ್ಯದ ಬಗ್ಗೆ ಮೋದಿ ಹೆಮ್ಮೆಪಡುತ್ತಾರೆ. ಅವರು ಒಬ್ಬ ಉತ್ತಮ ವಾಗ್ಮಿ ಮತ್ತು ನಟನಂತೆ ಮಾತನಾಡುತ್ತಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ ಅವರು ಹೋದಲ್ಲೆಲ್ಲಾ ತಪ್ಪು ಮಾಹಿತಿಗಳನ್ನು ಮಾತನಾಡುತ್ತಾರೆ ಎಂಬುದು ದೇಶಕ್ಕೆ ಆಶ್ಚರ್ಯ ತಂದಿದೆ ಎಂದು ಸೋನಿಯಾ ಗಾಂಧಿ ಆ ಸಂದರ್ಭದಲ್ಲಿ ಟೀಕಿಸಿದ್ದರು.

ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿತ್ತು!

ಸ್ಯಾಮ್ ಪಿತ್ರೋಡಾ ಅವರು ತಮ್ಮನ್ನು ಗುಜರಾತಿ ಸ್ನೇಹಿತ ಎಂದು ಕರೆದು, ವೈಯಕ್ತಿಕ ಆತ್ಮೀಯತೆಯನ್ನು ಶ್ಲಾಘಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಪಿತ್ರೋಡಾ ಮತ್ತು ಅವರ ಪತ್ನಿ ಅಂಜನಾ ಅವರಿಗೆ ದೀಪಾವಳಿ ಹಾಗೂ ಗುಜರಾತಿ ಹೊಸ ವರ್ಷದ ಶುಭಾಶಯಗಳನ್ನು ಕೋರಿರುವ ಪ್ರಧಾನಿ, ಸ್ಯಾಮ್ ಭಾಯ್ ಮತ್ತು ಅಂಜನಾ ಬೆನ್ ಅವರಿಗೆ ದೀಪಾವಳಿ ಹಾಗೂ ನೂತನ ವರ್ಷಾಭಿನಂದನ್ (ಗುಜರಾತಿ ಹೊಸ ವರ್ಷದ ಶುಭಾಶಯಗಳು). ಮುಂಬರುವ ವರ್ಷವು ಸಂತೋಷ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಜಗನ್ನಾಥ್ ಎಂದು ಬರೆದುಕೊಂಡಿದ್ದಾರೆ.

ರಾಜಕೀಯದಲ್ಲಿ ವೈಯಕ್ತಿಕ ವಾಗ್ದಾಳಿಗಳು, ಅಶ್ಲೀಲ ಪದ ಬಳಕೆಯನ್ನು ಹಾಸಿ ಹೊದ್ದಿರುವುದು ಸಾಮಾನ್ಯವಾಗಿರುವ ಈ ದಿನಗಳಲ್ಲಿ, ಆಡಳಿತ ಮತ್ತು ವಿರೋಧ ಪಕ್ಷದ ಹಿರಿಯ ನಾಯಕರ ನಡುವಿನ ಈ ಸೌಹಾರ್ದಯುತ ಸಂಭಾಷಣೆ ಮತ್ತು ಪರಸ್ಪರ ಗೌರವದ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದೆ(ಏಜೆನ್ಸೀಸ್​).