ಕ್ಷೇತ್ರ ವಿಂಗಡಣೆ ಮಸೂದೆಗೆ ಡಿಎಂಕೆ ಗ್ರೀನ್ ಸಿಗ್ನಲ್...? ಮೋದಿ ಸರ್ಕಾರಕ್ಕೆ ಸ್ಟಾಲಿನ್ ವಿಧಿಸಿದ ಆ 3 ಷರತ್ತು ಏನು..? | Delimitation Bill

Delimitation Bill | ತ್ರ ವಿಂಗಡಣೆ ಮಸೂದೆಗೆ ಡಿಎಂಕೆ ಗ್ರೀನ್ ಸಿಗ್ನಲ್...?
Delimitation Bill | ತ್ರ ವಿಂಗಡಣೆ ಮಸೂದೆಗೆ ಡಿಎಂಕೆ ಗ್ರೀನ್ ಸಿಗ್ನಲ್...?
Published on

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಕ್ಷೇತ್ರ ವಿಂಗಡಣೆ ಮಸೂದೆಯನ್ನು (Delimitation Bill) ಮತ್ತೆ ತರಲು ನಿರ್ಧರಿಸಿದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಅದನ್ನು ಬೆಂಬಲಿಸುವ ಸಾಧ್ಯತೆ ಇದ್ದು, ಆದರೆ ಇದಕ್ಕೆ ಮೂರು ಮುಖ್ಯ ಷರತ್ತುಗಳನ್ನು ವಿಧಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

1971ರ ಜನಗಣತಿಯ ಆಧಾರದ ಮೇಲೆಯೇ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿಡುವ ನಿಯಮವು 2027ಕ್ಕೆ ಮುಗಿಯಲಿದ್ದು, ಇದನ್ನು ಸಂವಿಧಾನ ತಿದ್ದುಪಡಿ ಮಾಡಿ ಇನ್ನು 25 ವರ್ಷಗಳ ಕಾಲ ವಿಸ್ತರಿಸಬೇಕು ಎಂಬುದು ಮೊದಲ ಷರತ್ತಾಗಿದೆ. ಏಪ್ರಿಲ್‌ನಲ್ಲಿ ಮಸೂದೆ ಮಂಡಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದಂತೆ, ಎಲ್ಲಾ ರಾಜ್ಯಗಳ ಲೋಕಸಭಾ ಸೀಟುಗಳ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಬೇಕು ಎಂಬುದು ಎರಡನೇ ಷರತ್ತು. ಹಾಗೂ ಈ ಹೊಸ ಕಾನೂನಿನ ಜೊತೆಗೆ, ಎಲ್ಲಾ ರಾಜ್ಯಗಳ ಹೊಸ ಲೋಕಸಭಾ ಕ್ಷೇತ್ರಗಳ ಸಂಪೂರ್ಣ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂಬುದು ಮೂರನೇ ಷರತ್ತಾಗಿದೆ.

ಸ್ಟಾಲಿನ್​ ಕೇಂದ್ರದ ಬೆಂಬಲಕ್ಕೆ ನಿಂತಿದ್ದೇಕೆ..?

ಕೇಂದ್ರ ಸರ್ಕಾರ ಈ ಮೂರು ಷರತ್ತುಗಳನ್ನು ಒಪ್ಪಿಕೊಂಡರೆ, ಮಸೂದೆಗೆ ಬೆಂಬಲ ನೀಡಲು ಸಿದ್ಧ ಎಂದು ಡಿಎಂಕೆ ಮೂಲಗಳು ತಿಳಿಸಿವೆ. ಆದರೆ, ಮಸೂದೆಯ ಅಂತಿಮ ಪ್ರತಿಯನ್ನು ಪರಿಶೀಲಿಸಿದ ನಂತರವೇ ಪಕ್ಷದ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಡಿಎಂಕೆ ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿತ್ತು ಮತ್ತು ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ನಷ್ಟವಾಗುತ್ತದೆ ಎಂದು ಹೇಳುತ್ತಿತ್ತು. ಆದರೆ, ಕಳೆದ ವಿಧಾನಸಭಾ ಚುನಾವಣೆಯ ನಂತರ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಜೊತೆ ಕಾಂಗ್ರೆಸ್ ಕೈಜೋಡಿಸಿದ್ದರಿಂದ, ಇಂಡಿಯಾ ಕೂಟದ ಹಳೆ ಮೈತ್ರಿ ಮುರಿದುಬಿದ್ದಿದೆ. ಅಂದಿನಿಂದ ಸ್ಟಾಲಿನ್ ಪಕ್ಷವು ಮೋದಿ ಸರ್ಕಾರಕ್ಕೆ ಬೆಂಬಲ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರಲು ಲೋಕಸಭಾ ಸೀಟುಗಳ ಸಂಖ್ಯೆಯನ್ನು 543 ರಿಂದ 816 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಮಸೂದೆಗೆ ಸಂಸತ್ತಿನಲ್ಲಿ ಒಪ್ಪಿಗೆ ಸಿಗಲು ಬಿಜೆಪಿಯ ಎನ್‌ಡಿಎ ಕೂಟಕ್ಕೆ ಮೂರನೇ ಎರಡರಷ್ಟು (2/3) ಬಹುಮತದ ಅಗತ್ಯವಿದೆ. ಕಳೆದ ಏಪ್ರಿಲ್‌ನಲ್ಲಿ ಈ ಮಸೂದೆ ಮಂಡನೆಯಾದಾಗ 298 ಮತಗಳು ಸಿಕ್ಕಿದ್ದವು. ಆಗ ಜಗನ್‌ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ, ಝಡ್‌ಪಿಎಂ ಮತ್ತು ಒಬ್ಬ ಸ್ವತಂತ್ರ ಸಂಸದ ಬೆಂಬಲಿಸಿದ್ದರು. ಆದರೆ, ಸಂಸತ್ತಿನಲ್ಲಿ ಎಲ್ಲ 540 ಸದಸ್ಯರು ಹಾಜರಿದ್ದರೆ ಮಸೂದೆ ಗೆಲ್ಲಲು 360 ಮತಗಳು ಬೇಕಾಗುತ್ತವೆ.

ಇನ್ನೂನು ಬೇಕಾಗಿದೆ!...

ಪ್ರಸ್ತುತ ಶಿವಸೇನೆಯ (ಯುಬಿಟಿ) ಏಳು ಸಂಸದರ ಸೇರ್ಪಡೆ ಹಾಗೂ ಎನ್‌ಸಿಪಿಐ ಬಂಡಾಯ ನಾಯಕರ ಬೆಂಬಲದೊಂದಿಗೆ ಎನ್‌ಡಿಎ ಕೂಟವು 319 ಸಂಸದರ ಬಲ ಹೊಂದಿದೆ. ಈಗ 22 ಸಂಸದರನ್ನು ಹೊಂದಿರುವ ಡಿಎಂಕೆ ಬೆಂಬಲಿಸಿದರೆ, ಎನ್‌ಡಿಎ ಬಲ 341ಕ್ಕೆ ಏರಲಿದೆ. ಎಂಟು ಸಂಸದರಿರುವ ಶರದ್ ಪವಾರ್ ಅವರ ಎನ್‌ಸಿಪಿ ಕೂಡ ಬೆಂಬಲಿಸಬಹುದು ಎನ್ನಲಾಗುತ್ತಿದ್ದು, ವೈಎಸ್‌ಆರ್‌ಸಿಪಿ ಮತ್ತು ಝಡ್‌ಪಿಎಂ ಮತ್ತೆ ಬೆಂಬಲ ನೀಡಿದರೆ ಎನ್‌ಡಿಎ ಬಲ 354ಕ್ಕೆ ತಲುಪಲಿದೆ.
ಇದೇ ವಿಷಯಕ್ಕಾಗಿ ಆಗಸ್ಟ್ 16 ರಿಂದ 18 ರವರೆಗೆ ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿದೆ ಎಂಬ ವದಂತಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಳ್ಳಿಹಾಕಿದ್ದು, ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net