ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕಲು ಸ್ಪರ್ಧೆ...ಬಿಎಂಸಿ ಮೇಲೆ ಕೇಸರಿ ಧ್ವಜ ಹಾರಿಸುವುದು ಪಕ್ಕಾ ಅಂದ್ರು ಫಡ್ನವೀಸ್ | Devendra Fadnavis

Devendra Fadnavis | ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
Devendra Fadnavis | ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
Published on
ಮುಂಬೈ: ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕುವ ಪ್ರಮುಖ ಗುರಿಯೊಂದಿಗೆ ಬಿಜೆಪಿ ರಾಜ್ಯದಲ್ಲಿ ನಡೆಯುತ್ತಿರುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಫಡ್ನವೀಸ್, ಕೇಸರಿ ಪಕ್ಷವು ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಜನರಿಗಾಗಿ ಹೋರಾಡುತ್ತಿದೆ. ಜಿಹಾದಿ ಮನಸ್ಥಿತಿಯನ್ನು ಹತ್ತಿಕ್ಕಲು ನಾವು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಪ್ರವೇಶಿಸಿದ್ದೇವೆ. ಜನವರಿ 16 ರಂದು ಬಿಎಂಸಿ ಮೇಲೆ ಮಹಾಯುತಿಯ ಕೇಸರಿ ಧ್ವಜವನ್ನು ಹಾರಿಸಬೇಕಾಗಿದೆ ಎಂದು ಹೇಳಿದರು.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಹಾಯುತಿಯ ಪ್ರಮುಖ ಪಾಲುದಾರರಾಗಿ ಮುಂದುವರೆಯುತ್ತಾರೆ ಎಂದಿರುವ ಫಡ್ನವೀಸ್, ಮೂರು ಪಕ್ಷಗಳು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು. ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ಎಲ್ಲರ ಬಯಕೆ, ಆದರೆ ಕೆಲವೇ ಜನರಿಗೆ ಟಿಕೆಟ್ ನೀಡಲು ಸಾಧ್ಯ. ಟಿಕೆಟ್ ಸಿಗಲಿ ಅಥವಾ ಸಿಗದಿರಲಿ, ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡುವತ್ತ ಗಮನಹರಿಸಬೇಕು ಎಂದರು.
ಬಿಎಂಸಿ ಸೇರಿದಂತೆ ಮಹಾನಗರ ಪಾಲಿಕೆ ಚುನಾವಣೆಗಳಿಗೆ ಜನವರಿ 15 ರಂದು ಮತದಾನ ನಡೆಯಲಿದೆ. ಜನವರಿ 16 ರಂದು ಮತ ಎಣಿಕೆ ನಡೆಯಲಿದೆ. ಇತ್ತೀಚೆಗೆ ನಡೆದ ಪುರಸಭೆ ಮತ್ತು ನಗರ ಪಂಚಾಯತ್‌ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ 288 ಸ್ಥಾನಗಳಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತು.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ (SEC) ಪ್ರಕಾರ, ಬಿಜೆಪಿ 117 ಪುರಸಭೆ ಅಧ್ಯಕ್ಷ ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿವಸೇನೆ 53 ಮತ್ತು NCP 37 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 28, NCP (SP) 7 ಮತ್ತು ಶಿವಸೇನೆ (UBT) 9 ಸ್ಥಾನಗಳನ್ನು ಗೆದ್ದುಕೊಂಡಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net