ಬಿಜೆಪಿ ನಾಯಕರನ್ನು ಕೇಳದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ! ಎನ್​​ಸಿಪಿ ವಿಲೀನದ ಬಗ್ಗೆ ಸಚಿವ ಛಗನ್ ಭುಜಬಲ್ ಮಹತ್ವದ ಹೇಳಿಕೆ | NCP Merger Talks

 ಎನ್​​ಸಿಪಿ ವಿಲೀನದ ಬಗ್ಗೆ ಸಚಿವ ಛಗನ್ ಭುಜಬಲ್ ಮಹತ್ವದ ಹೇಳಿಕೆ
ಎನ್​​ಸಿಪಿ ವಿಲೀನದ ಬಗ್ಗೆ ಸಚಿವ ಛಗನ್ ಭುಜಬಲ್ ಮಹತ್ವದ ಹೇಳಿಕೆ
Published on: 

NCP Merger Talks: ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ಸುಮಾರು 10 ತಿಂಗಳ ನಂತರ, ಸುನೇತ್ರಾ ಪವಾರ್ ಮತ್ತು ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (NCP) ಎರಡೂ ಬಣಗಳ ಸಂಭಾವ್ಯ ವಿಲೀನದ ಕುರಿತು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಈ ಕುರಿತು ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲೇ ಇವೆ ಎಂದು ಹಿರಿಯ ಸಚಿವ ಛಗನ್ ಭುಜಬಲ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಭುಜಬಲ್, ಎರಡೂ ಬಣಗಳನ್ನು ಒಗ್ಗೂಡಿಸುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ನಿಜವಾದರೂ, ವಿಲೀನಕ್ಕೆ ಯಾರು ಮುಂದಾಳತ್ವ ವಹಿಸಬೇಕು ಮತ್ತು ಈ ಪ್ರಕ್ರಿಯೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು.

ವಿಲೀನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ನಾವೂ ಗಮನಿಸುತ್ತಿದ್ದೇವೆ. ಆದರೆ, ಯಾವುದೇ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವಂತಹ ಪರಿಸ್ಥಿತಿ ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ ಎಂದು ಭುಜಬಲ್ ತಿಳಿಸಿದರು. ಎರಡೂ ಬಣಗಳು ಒಂದಾಗಬೇಕು ಎಂಬುದು ಪಕ್ಷದ ಅನೇಕ ಸದಸ್ಯರ ಆಶಯವಾಗಿದ್ದರೂ, ಈ ಪ್ರಕ್ರಿಯೆಗೆ ಬಹಳ ಎಚ್ಚರಿಕೆಯ ಚಿಂತನೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

Also Read
ಎನ್‌ಸಿಪಿ ವಿಲೀನಕ್ಕೆ ಹೆಚ್ಚಿದ ಒತ್ತಡ: ಬಿಜೆಪಿ ಲೆಕ್ಕಾಚಾರಕ್ಕೆ ಸುನೇತ್ರಾ-ಪಾರ್ಥ್ ಪವಾರ್ ವಿರೋಧ..? | NCP Merger Talks
 ಎನ್​​ಸಿಪಿ ವಿಲೀನದ ಬಗ್ಗೆ ಸಚಿವ ಛಗನ್ ಭುಜಬಲ್ ಮಹತ್ವದ ಹೇಳಿಕೆ

ಎನ್‌ಸಿಪಿ ವಿಲೀನ ಚರ್ಚೆಗಳು ಜಟಿಲವಾಗಿದ್ದೇಕೆ..?

ಎರಡೂ ಬಣಗಳ ವಿಭಿನ್ನ ರಾಜಕೀಯ ನಿಲುವುಗಳು ವಿಲೀನ ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ ಎಂದು ಭುಜಬಲ್ ವಿವರಿಸಿದರು. ಒಂದು ಬಣವು ಬಿಜೆಪಿ ನೇತೃತ್ವದ ಎನ್​ಡಿಎ ಭಾಗವಾಗಿದ್ದರೆ, ಶರದ್ ಪವಾರ್ ನೇತೃತ್ವದ ಮತ್ತೊಂದು ಬಣವು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದೆ.

ತಮ್ಮ ಪಕ್ಷವು ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವುದರಿಂದ ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸದೆ ಯಾವುದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಭುಜಬಲ್ ಸ್ಪಷ್ಟಪಡಿಸಿದರು. ನಾವು ಸರ್ಕಾರದಲ್ಲಿದ್ದೇವೆ. ಅವರನ್ನು ಸಂಪರ್ಕಿಸದೆ ನಾವು ಯಾವುದೇ ಹೆಜ್ಜೆ ಇಡಲು ಸಾಧ್ಯವಿಲ್ಲ, ಅವರ ಒಪ್ಪಿಗೆಯನ್ನು ಪಡೆಯಲೇಬೇಕಾಗುತ್ತದೆ ಎಂದು ಅವರು ಹೇಳಿದರು. ಅಲ್ಲದೆ, ಎರಡೂ ಕಡೆಯ ನಾಯಕರು ತಮ್ಮದೇ ಆದ ನಿರೀಕ್ಷೆಗಳು ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಹೊಂದಿದ್ದು, ಯಾವುದೇ ಒಪ್ಪಂದಕ್ಕೆ ಬರುವ ಮೊದಲು ಅವೆಲ್ಲವನ್ನೂ ಸಮನ್ವಯಗೊಳಿಸುವುದು ದೊಡ್ಡ ಸವಾಲಾಗಿದೆ. ಪ್ರಸ್ತಾವಿತ ವಿಲೀನದಿಂದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಏನನ್ನು ಬಯಸುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಭುಜಬಲ್ ತಿಳಿಸಿದರು.

ವಿಲೀನಕ್ಕೆ ತಾವೇ ಮುಂದಾಳತ್ವ ವಹಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಭುಜಬಲ್, ಈ ನಿರ್ಧಾರವು ಪಕ್ಷದ ನಾಯಕತ್ವಕ್ಕೆ ಬಿಟ್ಟಿದ್ದು ಎಂದು ಹೇಳಿದರು. ನಮ್ಮ ಪಕ್ಷದ ನಾಯಕರು, ಶಾಸಕರು ಮತ್ತು ಜಿಲ್ಲಾಧ್ಯಕ್ಷರು ಈ ಬಗ್ಗೆ ನಿರ್ಧರಿಸಬೇಕು. ಅವರ ಮುಂದೆ ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ ಎಂದರು.

ಅಜಿತ್ ಪವಾರ್ ನಿಧನದ ಬಳಿಕ ಬದಲಾದ ಸ್ಥಿತಿ!..

ಬಾರಾಮತಿಯಲ್ಲಿ ನಡೆದ ಕೃಷಿ ಪ್ರದರ್ಶನವೊಂದರಲ್ಲಿ ಶರದ್ ಪವಾರ್ ಮತ್ತು ಅವರ ನಾಲ್ಕೈದು ಸಹಚರರು ಸಂಸದೆ ಸುಪ್ರಿಯಾ ಸುಳೆ ಅವರ ಸಮ್ಮುಖದಲ್ಲಿ ಅಜಿತ್ ಪವಾರ್ ಅವರನ್ನು ಭೇಟಿಯಾಗಿದ್ದ ಘಟನೆಯನ್ನು ಭುಜಬಲ್ ಈ ಸಂದರ್ಭದಲ್ಲಿ ಸ್ಮರಿಸಿದರು. ಆದರೆ, ಅಜಿತ್ ಪವಾರ್ ಅವರ ಹಠಾತ್ ನಿಧನದ ನಂತರ ರಾಜ್ಯದ ರಾಜಕೀಯ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಒಂದು ವೇಳೆ ಅಜಿತ್ ದಾದಾ ಇಂದು ಇದ್ದಿದ್ದರೆ, ಅವರು ಖಂಡಿತವಾಗಿಯೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಮುನ್ನಡೆಸುತ್ತಿದ್ದರು. ಆದರೆ ಅವರ ಅಕಾಲಿಕ ಮರಣ ಇಡೀ ಚಿತ್ರಣವನ್ನೇ ಬದಲಿಸಿದೆ ಎಂದು ಭುಜಬಲ್ ಭಾವುಕರಾಗಿ ನುಡಿದರು. ಪತಿಯ ನಿಧನದ ನಂತರ ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ಸುನೇತ್ರಾ ಪವಾರ್ ಅವರು ಸೂಕ್ತ ಸಮಯದಲ್ಲಿ ಪಕ್ಷದ ಸದಸ್ಯರಿಗೆ ಎಲ್ಲಾ ಬೆಳವಣಿಗೆಗಳನ್ನು ವಿವರಿಸಿ, ಅವರ ಆತಂಕಗಳನ್ನು ದೂರ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಭುಜಬಲ್ ವ್ಯಕ್ತಪಡಿಸಿದರು.

ಶರದ್ ಪವಾರ್ ಜೊತೆಗಿನ ಬಾಂಧವ್ಯ!

ಶರದ್ ಪವಾರ್ ಅವರೊಂದಿಗಿನ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಸಂಬಂಧದ ಬಗ್ಗೆ ಮಾತನಾಡಿದ ಭುಜಬಲ್, ಪವಾರ್ ಅವರನ್ನು ಮಹಾರಾಷ್ಟ್ರದ ಅತ್ಯಂತ ಹಿರಿಯ ಮತ್ತು ಪ್ರಬುದ್ಧ ರಾಜಕೀಯ ನಾಯಕ ಎಂದು ಬಣ್ಣಿಸಿದರು. ಬೇರೆ ಬೇರೆ ರಾಜಕೀಯ ಬಣಗಳಲ್ಲಿದ್ದರೂ ಶರದ್ ಪವಾರ್ ಅವರು ಪಕ್ಷಾತೀತವಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಮತ್ತು ಪ್ರತಿಯೊಂದು ವಿಷಯದಲ್ಲೂ ರಾಜಕೀಯವನ್ನು ತರುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.(ಏಜೆನ್ಸೀಸ್​).