ಎನ್‌ಸಿಪಿ ವಿಲೀನಕ್ಕೆ ಹೆಚ್ಚಿದ ಒತ್ತಡ: ಬಿಜೆಪಿ ಲೆಕ್ಕಾಚಾರಕ್ಕೆ ಸುನೇತ್ರಾ-ಪಾರ್ಥ್ ಪವಾರ್ ವಿರೋಧ..? | NCP Merger Talks

ಎನ್‌ಸಿಪಿ ವಿಲೀನಕ್ಕೆ ಹೆಚ್ಚಿದ ಒತ್ತಡ: ಬಿಜೆಪಿ ಲೆಕ್ಕಾಚಾರಕ್ಕೆ ಸುನೇತ್ರಾ-ಪಾರ್ಥ್ ಪವಾರ್ ವಿರೋಧ..? | NCP Merger Talks
Published on: 

NCP Merger Talks: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸುಮಾರು ಮೂರು ವರ್ಷಗಳಿಂದ ಇಬ್ಬಾಗವಾಗಿದ್ದ ಎನ್‌ಸಿಪಿಯ ಎರಡೂ ಬಣಗಳು ಮತ್ತೆ ಒಂದಾಗುವ ಸಾಧ್ಯತೆಗಳು ದಟ್ಟವಾಗಿವೆ. ಅಜಿತ್ ಪವಾರ್ ಬಣವು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಬಣದೊಂದಿಗೆ ಮರುಸೇರ್ಪಡೆಯಾಗಲು ತೀವ್ರ ಆಸಕ್ತಿ ತೋರಿಸುತ್ತಿದ್ದು, ಮಹಾರಾಷ್ಟ್ರದಲ್ಲಿ ಎರಡೂ ಬದಿಗಳನ್ನು ಮತ್ತೆ ಒಂದೇ ಸೂರಿನಡಿ ತರಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟಿವಿ ವರದಿ ಮಾಡಿದೆ.

ಸುನಿಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ನೇತೃತ್ವದ ಅಜಿತ್​ ಬಣವು ಎನ್‌ಸಿಪಿ ವಿಲೀನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಬೇಕೆಂದು ಬಯಸುತ್ತಿದೆ. ಆದರೆ, ಈ ಪ್ರಸ್ತಾವನೆಗೆ ಸುನೇತ್ರಾ ಪವಾರ್ ಹಾಗೂ ಪಾರ್ಥ್ ಪವಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಲೀನದ ಹಾದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ ಎನ್ನಲಾಗಿದೆ.

ವಿಲೀನದ ಕುರಿತು ಪ್ರಫುಲ್ - ಶರದ್ ಪವಾರ್ ಚರ್ಚೆ

ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಾಯಕ ಶರದ್ ಪವಾರ್ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಹಿರಿಯ ನಾಯಕ ಪ್ರಫುಲ್ ಪಟೇಲ್ ಭೇಟಿ ನೀಡಿದ್ದರು. ಈ ಸೌಹಾರ್ದಯುತ ಭೇಟಿಯ ವೇಳೆಯಲ್ಲಿ, ಎರಡೂ ಬಣಗಳ ವಿಲೀನದ ಕುರಿತು ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಶರದ್ ಪವಾರ್ ಅವರಿಗೆ ರವಾನಿಸಿದ್ದ ಪ್ರಮುಖ ಸಂದೇಶದ ಕುರಿತಾಗಿಯೂ ಪ್ರಫುಲ್ ಪಟೇಲ್ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಸಿಪಿ ವಿಲೀನವಾದರೆ ಬಿಜೆಪಿಗೆ ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ಭಾರಿ ಅನುಕೂಲವಾಗಲಿದೆ. ಎನ್‌ಸಿಪಿ ಬಣ ಹೊಂದಿರುವ 8 ಪ್ರಮುಖ ಸಂಸದರ ಬೆಂಬಲ ಬಿಜೆಪಿಗೆ ಸಿಗಲಿದ್ದು, ಸಂಸತ್ತಿನಲ್ಲಿ ಎನ್‌ಡಿಎ ಬಲ ಮತ್ತಷ್ಟು ಹೆಚ್ಚಾಗಲಿದೆ. ಇದಲ್ಲದೆ, ಶರದ್ ಪವಾರ್ ಅವರು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಎನ್‌ಡಿಎ ಕೂಟಕ್ಕೆ ಬಂದರೆ, ವಿಪಕ್ಷಗಳ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗಲಿದ್ದು, ಆಡಳಿತಾರೂಢ ಮೈತ್ರಿಕೂಟದ ವಿರುದ್ಧ ರೂಪುಗೊಳ್ಳುತ್ತಿರುವ ರಾಜಕೀಯ ಬಲ ಕುಸಿಯಲಿದೆ.

Also Read
ಶರದ್ ಪವಾರ್‌ಗೆ ಪ್ರಧಾನಿ ಮೋದಿ ಕರೆ: ಸುಳೆ ಬಗ್ಗೆ ಆಡಿದ ಮಾತಿನಿಂದ ಮಹಾರಾಷ್ಟ್ರದಲ್ಲಿ ಶುರುವಾಯ್ತು ಹೊಸ ಸಂಚಲನ! | Narendra Modi
ಎನ್‌ಸಿಪಿ ವಿಲೀನಕ್ಕೆ ಹೆಚ್ಚಿದ ಒತ್ತಡ: ಬಿಜೆಪಿ ಲೆಕ್ಕಾಚಾರಕ್ಕೆ ಸುನೇತ್ರಾ-ಪಾರ್ಥ್ ಪವಾರ್ ವಿರೋಧ..? | NCP Merger Talks

ಶರದ್ ಬಣಕ್ಕೇನು ಅನುಕೂಲ?

ಈ ವಿಲೀನ ಪ್ರಸ್ತಾವನೆಯು ಶರದ್ ಪವಾರ್ ಬಣಕ್ಕೂ ಹಲವು ರಾಜಕೀಯ ಲಾಭಗಳನ್ನು ತರಲಿದೆ. ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು, ಒಂದೇ ಪಕ್ಷವಾಗುವ ಎನ್‌ಸಿಪಿಯಲ್ಲಿ ಅವರ ರಾಜಕೀಯ ಭವಿಷ್ಯ ಭದ್ರವಾಗಲಿದೆ. ಇದಷ್ಟೆ ಅಲ್ಲದೇ ಎನ್‌ಸಿಪಿ ಹಿರಿಯ ನಾಯಕ ಜಯಂತ್ ಪಾಟೀಲ್​ಗೆ ಮಹಾರಾಷ್ಟ್ರ ಸಂಪುಟದಲ್ಲಿ ಹಣಕಾಸು ಖಾತೆ ಒಲಿಯುವ ಸಾಧ್ಯತೆಯಿದೆ.

ಶರದ್ ಪವಾರ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

ಕೆಮ್ಮು ಹಾಗೂ ಶ್ವಾಸನಾಳದ ಸೋಂಕಿನ ಲಕ್ಷಣಗಳಿಂದ ಬಳಲುತ್ತಿರುವ ಶರದ್ ಪವಾರ್ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಪೂನಾದ ರೂಬಿ ಹಾಲ್ ಕ್ಲಿನಿಕ್‌ನಿಂದ ಡಿಸ್ಚಾರ್ಜ್ ಆದ ನಂತರ ಮುಂಬೈಗೆ ಬಂದಿದ್ದ ಅವರಿಗೆ, ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಶರದ್ ಪವಾರ್ ಅವರ ಆಪ್ತ ಸ್ನೇಹಿತ ವಿಠ್ಠಲ್ ಮಣಿಯಾರ್ ನೀಡಿರುವ ಮಾಹಿತಿಯಂತೆ, ಪ್ರಧಾನಿ ಮೋದಿ ಅವರು ಸುಪ್ರಿಯಾ ಸುಳೆ ಸಿದ್ಧರಾಗಿದ್ದಾರೆ, ದೇಶದ ಜವಾಬ್ದಾರಿ ವಹಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ನೀವು ದೇಶದ ಬಗ್ಗೆ ಚಿಂತಿಸದೆ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂಬ ಮಹತ್ವದ ಸಂದೇಶ ರವಾನಿಸಿದ್ದಾರೆ(ಏಜೆನ್ಸೀಸ್​).