ಶರದ್ ಪವಾರ್‌ಗೆ ಪ್ರಧಾನಿ ಮೋದಿ ಕರೆ: ಸುಳೆ ಬಗ್ಗೆ ಆಡಿದ ಮಾತಿನಿಂದ ಮಹಾರಾಷ್ಟ್ರದಲ್ಲಿ ಶುರುವಾಯ್ತು ಹೊಸ ಸಂಚಲನ! | Narendra Modi

ಸುಳೆ ಬಗ್ಗೆ ಆಡಿದ ಮಾತಿನಿಂದ ಮಹಾರಾಷ್ಟ್ರದಲ್ಲಿ ಶುರುವಾಯ್ತು ಹೊಸ ಸಂಚಲನ!
ಸುಳೆ ಬಗ್ಗೆ ಆಡಿದ ಮಾತಿನಿಂದ ಮಹಾರಾಷ್ಟ್ರದಲ್ಲಿ ಶುರುವಾಯ್ತು ಹೊಸ ಸಂಚಲನ!
Published on: 

ಪುಣೆ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಈ ಸುದೀರ್ಘ ಸಂಭಾಷಣೆಯ ವೇಳೆ ಪ್ರಧಾನಿ ಮೋದಿ ಅವರು, ಸಾಹೇಬರೇ, ದೇಶದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಿಮ್ಮ ಪುತ್ರಿ ಸುಪ್ರಿಯಾ ಸುಳೆ ಈಗ ಸಂಪೂರ್ಣ ಸಿದ್ಧರಾಗಿದ್ದಾರೆ. ಸುಪ್ರಿಯಾ ಮತ್ತು ನಾವು ಸೇರಿ ದೇಶದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತೇವೆ. ನೀವು ಯಾವುದೇ ಚಿಂತೆ ಇಲ್ಲದೆ ಸಂಪೂರ್ಣ ವಿಶ್ರಾಂತಿ ಪಡೆಯಿರಿ ಎಂದು ಆತ್ಮೀಯವಾಗಿ ಶರದ್ ಪವಾರ್ ಅವರ ಬಳಿ ಕೋರಿಕೊಂಡಿದ್ದಾರೆ. ಈ ಕುರಿತು ಶರದ್ ಪವಾರ್ ಅವರ ನಿಕಟವರ್ತಿ ಹಾಗೂ ಹಿರಿಯ ಬೆಂಬಲಿಗ ವಿಠ್ಠಲ್ ಮಣಿಯಾರ್ ಅವರು ಪುಣೆಯಲ್ಲಿ ಮಾಧ್ಯಮಗಳಿಗೆ ಸಂಪೂರ್ಣ ವಿವರ ನೀಡಿದ್ದಾರೆ.

ಪುಣೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ವಿಠ್ಠಲ್ ಮಣಿಯಾರ್, ಬುಧವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಕರೆ ಮಾಡಿ ಸಾಹೇಬರ (ಶರದ್ ಪವಾರ್) ಆರೋಗ್ಯ ಪರಿಸ್ಥಿತಿಯನ್ನು ಅತ್ಯಂತ ಪ್ರೀತಿ, ಕಾಳಜಿ ಹಾಗೂ ಗೌರವದಿಂದ ವಿಚಾರಿಸಿದರು. ಸಾಹೇಬರೇ, ನೀವು ದಯವಿಟ್ಟು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಿ. ಸುಪ್ರಿಯಾ ಈಗ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ. ಸುಪ್ರಿಯಾ ಮತ್ತು ನಾವು ದೇಶದ ಕೆಲಸಗಳನ್ನು ವಹಿಸಿಕೊಳ್ಳುತ್ತೇವೆ, ನೀವು ವಿಶ್ರಾಂತಿ ಪಡೆಯಬೇಕು ಎಂಬುದೇ ನನ್ನ ಮನವಿ ಎಂದು ಮೋದಿ ಹೇಳಿದರು.

Also Read
ಚುನಾವಣಾ ಆಯುಕ್ತರ ಕಾನೂನು ವಿನಾಯಿತಿ ಕಾಯ್ದೆ ಪ್ರಶ್ನಿಸಿ ಅರ್ಜಿ: ಕೇಂದ್ರ ಸರ್ಕಾರ ಹಾಗೂ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್! | Supreme Court
ಸುಳೆ ಬಗ್ಗೆ ಆಡಿದ ಮಾತಿನಿಂದ ಮಹಾರಾಷ್ಟ್ರದಲ್ಲಿ ಶುರುವಾಯ್ತು ಹೊಸ ಸಂಚಲನ!

ಇದಕ್ಕೆ ಪ್ರತ್ಯುತ್ತರ ನೀಡಿದ ಪವಾರ್, ನೀವೆಲ್ಲರೂ ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿರುವಾಗ ನನಗೆ ದೇಶದ ಬಗ್ಗೆ ಯಾವುದೇ ಆತಂಕವಿಲ್ಲ. ನಾನು ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೇನೆ. ನೀವು ನಿಮ್ಮ ದೇಶಸೇವೆಯ ಕೆಲಸವನ್ನು ಹೀಗೆಯೇ ಮುಂದುವರಿಸಿ ಎಂದು ಪ್ರಧಾನಿ ಮೋದಿಯವರ ಕಾಳಜಿಗೆ ಧನ್ಯವಾದ ಅರ್ಪಿಸಿದರು ಎಂದು ಮಾಹಿತಿ ನೀಡಿದರು. ಆದಾಗ್ಯೂ, ಈ ಖಾಸಗಿ ಸಂಭಾಷಣೆಯ ಕುರಿತು ಪ್ರಧಾನಿ ಕಚೇರಿಯಾಗಲಿ ಅಥವಾ ಶರದ್ ಪವಾರ್ ಅವರಾಗಲಿ ಅಧಿಕೃತವಾಗಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಿಲ್ಲ.

ಶರದ್ ಪವಾರ್​ಗೆ ಏನಾಗಿತ್ತು..?

85 ವರ್ಷದ ಹಿರಿಯ ನಾಯಕ ಶರದ್ ಪವಾರ್ ಅವರು ತೀವ್ರ ಕೆಮ್ಮು ಹಾಗೂ ಎದೆನೋವಿನ ಸಮಸ್ಯೆಯಿಂದಾಗಿ ನವೆಂಬರ್ 2ರಂದು ಪುಣೆಯ ರೂಬಿ ಹಾಲ್ ಕ್ಲಿನಿಕ್‌ಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವ ಕೆಲವೇ ದಿನಗಳ ಮುನ್ನ ಅವರು ಮಹಾರಾಷ್ಟ್ರದ ತೀವ್ರ ಬರಪೀಡಿತ ಪ್ರದೇಶಗಳಲ್ಲಿ ಸುದೀರ್ಘ ಪ್ರವಾಸ ಕೈಗೊಂಡು ರೈತರ ಕುಂದುಕೊರತೆಗಳನ್ನು ಆಲಿಸಿದ್ದರು. ಪ್ರಸ್ತುತ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶರದ್ ಪವಾರ್ ಅವರ ಎಲ್ಲಾ ಆರೋಗ್ಯ ತಪಾಸಣಾ ವರದಿಗಳು ಸ್ಥಿರವಾಗಿವೆ ಎಂದು ಅವರ ಪುತ್ರಿ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶರದ್ ಪವಾರ್ ಅವರಿಗೆ ಮಾಡಿದ ಈ ಸೌಹಾರ್ದಯುತ ಕರೆ ಕೇವಲ ಆರೋಗ್ಯ ವಿಚಾರಣೆಗೆ ಸೀಮಿತವೇ ಅಥವಾ ಇದರ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆಯೇ ಎಂಬ ಚರ್ಚೆ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎನ್‌ಸಿಪಿ (ಎಸ್‌ಪಿ) ಬಣವು ಶೀಘ್ರದಲ್ಲೇ ಆಡಳಿತಾರೂಢ ಮೈತ್ರಿಕೂಟದೊಂದಿಗೆ ಅಥವಾ ಬಂಡಾಯ ಎನ್‌ಸಿಪಿ ಬಣದೊಂದಿಗೆ ವಿಲೀನಗೊಳ್ಳಲಿದೆ, ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂಬ ಊಹಾಪೋಹಗಳು ಮತ್ತೆ ಕಾವು ಪಡೆದುಕೊಂಡಿವೆ.

2023ರ ಜೂನ್-ಜುಲೈ ಅವಧಿಯಲ್ಲಿ ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಬಂಡಾಯ ಎದ್ದು ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರಿಂದ ಮೂಲ ಎನ್‌ಸಿಪಿ ಇಬ್ಬಾಗವಾಗಿತ್ತು. ಕೇಂದ್ರ ಚುನಾವಣಾ ಆಯೋಗವು ಅಧಿಕೃತ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಅಜಿತ್ ಬಣಕ್ಕೆ ನೀಡಿದ್ದರಿಂದ ಶರದ್ ಪವಾರ್ ತಮ್ಮ ಪಕ್ಷಕ್ಕೆ ಎನ್‌ಸಿಪಿ (ಶರದ್‌ಚಂದ್ರ ಪವಾರ್) ಎಂದು ಮರುನಾಮಕರಣ ಮಾಡಿಕೊಂಡಿದ್ದರು. ಈ ವರ್ಷ ಜನವರಿ 28ರಂದು ಬಾರಾಮತಿಯಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಸಿಎಂ ದೇವಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು(ಏಜೆನ್ಸೀಸ್​).