ಬೈಕ್ ಸವಾರನ ಹೊಟ್ಟೆ ಮೇಲೆ ಕಾಲಿಟ್ಟ ಕಾಡಾನೆ: ಸಾವಿನ ದವಡೆಯಿಂದ ಪಾರಾಗಿದ್ದೇ ರೋಚಕ; ವಿಡಿಯೋ ವೈರಲ್|Elephant Attack

A terrifying scene of a wild elephant attacking a Bullet motorcycle rider on a highway in the Doiwala area of ​​Dehradun.
ಡೆಹ್ರಾಡೂನ್‌ನ ದೋಯಿವಾಲಾ ಪ್ರದೇಶದ ಹೈವೇಯಲ್ಲಿ ಬುಲೆಟ್ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ನಡೆಸಿದ ಭಯಾನಕ ದೃಶ್ಯ
Published on: 

ಡೆಹ್ರಾಡೂನ್‌​: ಕಾಡಾನೆ ದಾಳಿಗಳ ಬಗ್ಗೆ ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅಥವಾ ಗದ್ದೆ-ತೋಟಕ್ಕೆ ಆನೆಗಳು ದಾಳಿ ಮಾಡಿ ಬೆಳೆ ನಾಶದ ಜತೆಗೆ ಮಾಲೀಕರ ಸಾವಿಗೆ ಕಾರಣವಾದ ಸುದ್ದಿಯನ್ನು ಓದಿರುತ್ತೇವೆ.

ಆದರೆ, ಡೆಹ್ರಾಡೂನಿನ ವಿಮಾನ ನಿಲ್ದಾಣದ ಬಳಿ ಇರುವ ಹೈವೇಯಲ್ಲಿ ತನ್ನ ಬೈಕ್​ ಮೇಲೆ ಸಾಗುತ್ತಿದ್ದ ಸವಾರನ ಮೇಲೆ ಆನೆಯೊಂದು ದಾಳಿ ಮಾಡಿ, ಅವನನ್ನು ತುಳಿದಿರುವ ಘಟನೆ ಈಗ ಸೋಷಿಯಲ್​ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿದೆ.

ಆನೆ ನಡೆದಿದ್ದೇ ದಾರಿ!

ಮಾಹಿತಿ ಪ್ರಕಾರ, ಡೆಹ್ರಾಡೂನ್‌ನ ದೋಯಿವಾಲಾ ಪ್ರದೇಶದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ವ್ಯಕ್ತಿಯೊಬ್ಬ ತನ್ನ ಬುಲೆಟ್​ ಬೈಕ್​ ಮೇಲೆ ಹೋಗುತ್ತಿದ್ದು, ಆನೆ ಒಮ್ಮೆಲೇ ಕಾಡಿನ ದಾರಿ ಮೂಲಕ ನಡೆದುಕೊಂಡು ಬಂದಿದೆ.

ದಿಢೀರನೇ ಆನೆಯನ್ನು ನೋಡಿದ ಬೈಕ್​ ಚಾಲಕ ವಿಚಲಿತನಾಗಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಅವನು ಆನೆಯ ದಾರಿಗೆ ಅಡ್ಡಬಂದಿದ್ದ ಕಾರಣ, ಆನೆ ದಾಳಿ ಮಾಡಿದೆ. ಆನೆ ದಾಳಿಗೆ ತುತ್ತಾಗಿ, ಬೈಕ್​ನಿಂದ ಕೆಳಗೆ ಬಿದ್ದ ಚಾಲಕನ ಹೊಟ್ಟೆ ಮೇಲೆ ಆನೆ ಕಾಲಿಟ್ಟು ಕ್ರೌರ್ಯ ಮೆರೆದಿದೆ. ಆದರೆ, ಚಮತ್ಕಾರ ಎಂಬಂತೆ ಆನೆ ದಾಳಿಯಿಂದ ಆ ಸವಾರ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.

ಸಾರ್ವಜನಿಕರ ಕೂಗಿನಿಂದ ಉಳಿದ ಪ್ರಾಣ!

ಘಟನೆ ನಡೆದಿರುವ ದೋಯಿವಾಲಾ ಪ್ರದೇಶವು ಎಲಿಫೆಂಟ್​ ಕಾರಿಡಾರ್​ ಆಗಿದ್ದು, ಇಲ್ಲಿ ಆನೆಗಳ ಸಂಚಾರ ಸಾಮಾನ್ಯವಾಗಿರುತ್ತದೆ. ಹೀಗೆ ಆನೆ, ಬೈಕ್​ ಸವಾರನ ಮೇಲೆ ದಾಳಿ ಮಾಡಲು ಮುಂದಾದಾಗ ಸುತ್ತ-ಮುತ್ತಲಿನ ಜನರು ಜೋರಾಗಿ ಕೂಗುತ್ತಾ ಆನೆಗೆ ಭಯ ಪಡಿಸಲು ಮುಂದಾಗಿ, ಯಶಸ್ವಿಯಾಗಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಬೈಕ್​ ಸವಾರನ ಪ್ರಾಣ ಹೋಯಿತೆಂದು ತಿಳಿಯುವ ವೇಳೆಗೆ ಆನೆ ತನ್ನ ಮನಸ್ಸನ್ನು ಬದಲಿಸಿಕೊಂಡು ಕಾಡಿನತ್ತ ಹೆಜ್ಜೆ ಹಾಕಿದೆ.

Also Read
ಅರವಿಂದ್ ಕೇಜ್ರಿವಾಲ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ: 7 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್! Arvind Kejriwal
A terrifying scene of a wild elephant attacking a Bullet motorcycle rider on a highway in the Doiwala area of ​​Dehradun.

ಆಸ್ಪತ್ರೆ ಸೇರಿದ ಚಾಲಕ!

ಇನ್ನೂ ಆನೆ ಕಾಡಿನತ್ತ ಮುಖ ಮಾಡುತ್ತಲೇ, ಸ್ಥಳದಲ್ಲಿದ್ದ ಜನರು, ಬೈಕ್​ ಸವಾರನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಪ್ರಸ್ತುತ ಆರೋಗ್ಯ ಸ್ಥಿತಿ ಸರಿಯಾಗಿದೆ ಎಂಬ ಮಾಹಿತಿಯಿದೆ. ಆದರೆ, ಆನೆ ಮೈ ಮೇಲೆ ಕಾಲಿಟ್ಟ ಕಾರಣ ಕೆಲ ಮೂಳೆಗಳು ಮುರಿದಿರುವ ಬಗ್ಗೆ ಹೇಳಲಾಗುತ್ತಿದ್ದು, ಪ್ರಾಣಕ್ಕೇನು ಅಪಾಯವಿಲ್ಲ ಎಂಬ ಸುದ್ದಿ ಲಭ್ಯವಾಗಿದೆ, (ಏಜೆನ್ಸೀಸ್​).