ಒಂದೂವರೆ ಕೋಟಿಗೆ ಡೀಲ್​ ಫಿಕ್ಸ್: ಗಂಡನನ್ನು ಆತನ ಪ್ರೇಯಸಿಗೆ ಮಾರಿದ ಪತ್ನಿ, ಹುಬ್ಬೇರಿಸುವ ಕಾರಣ ಹೀಗಿದೆ... Wife Sells Husband

ಗಂಡನನ್ನು ಆತನ ಪ್ರೇಯಸಿಗೆ ಮಾರಿದ ಪತ್ನಿ ( Wife Sells Husband )
ಗಂಡನನ್ನು ಆತನ ಪ್ರೇಯಸಿಗೆ ಮಾರಿದ ಪತ್ನಿ ( Wife Sells Husband )
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾದಲ್ಲಿ ನೋಡುವ ದೃಶ್ಯಗಳು ಕೆಲವೊಮ್ಮೆ ನಿಜ ಜೀವನದಲ್ಲಿ ನಡೆದಾಗ ನಾವು ಹುಬ್ಬೇರಿಸುತ್ತೇವೆ
  • ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇತ್ತೀಚೆಗೆ ನಡೆದಿದೆ
  • ಹೆಂಡತಿಯೊಬ್ಬಳು ಹಣಕ್ಕಾಗಿ ತನ್ನ ಗಂಡನನ್ನೇ ಆತನ ಪ್ರೇಯಸಿಗೆ ಮಾರಿದ್ದಾಳೆ
Wife Sells Husband : ಸಿನಿಮಾದಲ್ಲಿ ನೋಡುವ ದೃಶ್ಯಗಳು ಕೆಲವೊಮ್ಮೆ ನಿಜ ಜೀವನದಲ್ಲಿ ನಡೆದಾಗ ನಾವು ಹುಬ್ಬೇರಿಸುತ್ತೇವೆ. ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇತ್ತೀಚೆಗೆ ನಡೆದಿದೆ. ಹೌದು, ಹೆಂಡತಿಯೊಬ್ಬಳು ಹಣಕ್ಕಾಗಿ ತನ್ನ ಗಂಡನನ್ನೇ ಆತನ ಪ್ರೇಯಸಿಗೆ ಮಾರಿದ್ದಾಳೆ. ಕೇಳಲು ಇದು ಅಚ್ಚರಿ ಎನಿಸಿದರೂ ಇದೇ ಸತ್ಯ.
ಕೇಂದ್ರ ಸರ್ಕಾರದ ಇಲಾಖೆಯೊಂದರಲ್ಲಿ ಕೆಲಸ ಮಾಡುತ್ತಿರುವ 42 ವರ್ಷದ ವ್ಯಕ್ತಿ, ಅದೇ ಇಲಾಖೆಯಲ್ಲಿ ಕೆಲಸ ಮಾಡುವ 54 ವರ್ಷದ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದಾರೆ. ಅವರಿಬ್ಬರ ನಡುವೆ 12 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ. ಆದರೆ, ಇದೇನು ದೊಡ್ಡ ವಿಷಯವೇನಲ್ಲ. ಗಮನಾರ್ಹ ಸಂಗತಿ ಏನೆಂದರೆ, ಆ ವ್ಯಕ್ತಿ ವಿವಾಹಿತನಾಗಿದ್ದು, ಆತನಿಗೆ 16 ವರ್ಷ ಮತ್ತು 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಪತ್ನಿಗೆ ತಿಳಿಯದೇ ಆ ವ್ಯಕ್ತಿ ವಿವಾಹೇತರ ಸಂಬಂಧವನ್ನು ಹೊಂದಿದ್ದ. ಇದು ಕುಟುಂಬಕ್ಕೆ ಗೊತ್ತಾದ ಕೂಡಲೇ ದಿನನಿತ್ಯ ಕುಟುಂಬದಲ್ಲಿ ಜಗಳಗಳು ನಡೆಯುತ್ತಿದ್ದವು. ಇದು ಮಕ್ಕಳ ಮಾನಸಿಕ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಭಾರಿ ಪರಿಣಾಮ ಬೀರಿತು. ಆದ್ದರಿಂದ, ಹೆಂಡತಿ ಅಂತಿಮವಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ಬಳಿಕ ನ್ಯಾಯಾಲಯ ಪತಿ ಮತ್ತು ಪತ್ನಿ ಇಬ್ಬರನ್ನೂ ಸಮಾಲೋಚನೆಗಾಗಿ ಕರೆಯಿತು.
ಸಮಾಲೋಚನೆ ಸಮಯದಲ್ಲಿ, ತನ್ನ ಮಕ್ಕಳನ್ನು ಪ್ರೀತಿಸುತ್ತೇನೆ ಆದರೆ, ನನ್ನ ಹೆಂಡತಿಯೊಂದಿಗೆ ವಾಸಿಸಲು ನಾನು ಬಯಸುವುದಿಲ್ಲ ಎಂದು ಪತಿ ಹೇಳಿದ. ಅಲ್ಲದೆ, ನನ್ನ ಹೆಂಡತಿ ಪ್ರತಿದಿನ ನನ್ನೊಂದಿಗೆ ಜಗಳವಾಡುತ್ತಾಳೆ. ಇನ್ನು ಮುಂದೆ ಮನೆಗೆ ಹೋಗಲು ನಾನು ಬಯಸುವುದಿಲ್ಲ. ಆಕೆಯನ್ನು ಬಿಟ್ಟು ಹೊಸ ಪ್ರೇಮಿಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದ್ದೇನೆ ಎಂದು ಆತ ಹೇಳಿದ.
ನ್ಯಾಯಾಲಯದ ಸಲಹೆಗಾರರು ದಂಪತಿಯ ನಡುವೆ ಸಮನ್ವಯ ಮೂಡಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ಪತಿ ಮಾತ್ರ ಅದಕ್ಕೆ ಒಪ್ಪಲೇ ಇಲ್ಲ. ಇತ್ತ ಪತ್ನಿ ಕೂಡ ವಿಚ್ಛೇದನಕ್ಕೆ ಒಪ್ಪಲಿಲ್ಲ. ಹಲವಾರು ಕೌನ್ಸೆಲಿಂಗ್​ ನಂತರ, ದಂಪತಿ ಒಂದು ಒಪ್ಪಂದಕ್ಕೆ ಬಂದರು.
ಮಕ್ಕಳ ಭವಿಷ್ಯವನ್ನು ರಕ್ಷಿಸಲು ನಾನು ಬಯಸುತ್ತೇನೆಂದು ಪತ್ನಿ ಹೇಳಿದಳು. ನನಗೆ 1.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ನಗದು ನೀಡಿದರೆ ವಿಚ್ಛೇದನಕ್ಕೆ ಒಪ್ಪುತ್ತೇನೆ ಎಂದಳು. ಇದಕ್ಕೆ ಒಪ್ಪಿದ ಗಂಡನ ಪ್ರೇಯಸಿ, ತನ್ನ ಪ್ರಿಯಕರನನ್ನು ತನ್ನದಾಗಿಸಿಕೊಳ್ಳಲು ಅವಳಿಗೆ ಫ್ಲಾಟ್ ಮತ್ತು ಹಣವನ್ನು ನೀಡಿದಳು. ಅಲ್ಲಿಗೆ ಈ ಪ್ರಕರಣ ಒಂದು ಅಂತ್ಯ ಕಂಡಿತು. ಸದ್ಯ ಭೋಪಾಲ್​ನಲ್ಲಿ ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್​ ಮಾಡಿ ನಮಗೆ ತಿಳಿಸಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net