ಚುನಾವಣಾ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟಿದ್ದೇಕೆ..? ಕೇಂದ್ರದ ನಡೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್; ಸರ್ಕಾರ ಹೇಳಿದ್ದೇನು..? | CEC Appointment

CEC Appointment | ಚುನಾವಣಾ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟಿದ್ದೇಕೆ..? ಕೇಂದ್ರದ ನಡೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್; ಸರ್ಕಾರ ಹೇಳಿದ್ದೇನು..?
CEC Appointment | ಚುನಾವಣಾ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟಿದ್ದೇಕೆ..? ಕೇಂದ್ರದ ನಡೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್; ಸರ್ಕಾರ ಹೇಳಿದ್ದೇನು..?
Published on
CEC Appointment: ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಚುನಾವಣಾ ಆಯುಕ್ತರ (ECs) ನೇಮಕಾತಿಯಲ್ಲಿ ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಪ್ರಕ್ರಿಯೆಯ ಅಗತ್ಯವನ್ನು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗವು ಕೇವಲ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಸಾಲದು, ಅದು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಎಂಬುದು ಸಾರ್ವಜನಿಕವಾಗಿ ಕಣ್ಣಿಗೆ ಕಾಣಿಸುವಂತಿರಬೇಕು ಎಂದು ಗುರುವಾರ ಅಭಿಪ್ರಾಯಪಟ್ಟಿದೆ. ಇದರೊಂದಿಗೆ, ಕಾಯ್ದೆಯನ್ನು ರೂಪಿಸುವಾಗ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಹೊರಗಿಡಲು ಸಂಸತ್ತು ಏಕೆ ನಿರ್ಧರಿಸಿತು ಎಂದೂ ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಸಿಬಿಐ ನಿರ್ದೇಶಕರು ಮತ್ತು ಲೋಕಪಾಲ್ ನಂತಹ ಪ್ರಮುಖ ಹುದ್ದೆಗಳ ಆಯ್ಕೆ ಸಮಿತಿಗಳಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಭಾಗವಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿತು. ಯಾವುದೇ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿರುವ ಚುನಾವಣಾ ಆಯೋಗದ ನೇಮಕಾತಿಗಳಿಂದ ಅವರನ್ನು ಹೊರಗಿಟ್ಟಿರುವುದನ್ನು ಏನನ್ನು ಸೂಚಿಸುತ್ತದೆ ಎಂದು ಪೀಠ ಪ್ರಶ್ನಿಸಿತು. ವಿಷಯವನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಬೇಕೆಂಬ ಕೇಂದ್ರದ ಮನವಿಯ ಕುರಿತು ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿಯವರಿಂದ ನಾಮನಿರ್ದೇಶನಗೊಂಡ ಕೇಂದ್ರ ಸಂಪುಟ ಸಚಿವರನ್ನೊಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಿಸುವ 2023 ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಪ್ರಸ್ತುತ ನಡೆಸುತ್ತಿದೆ.

ಪ್ರಧಾನಿಯವರ ನಿರ್ಧಾರಗಳಲ್ಲಿ ನಂಬಿಕೆ ಇಡಬೇಕು

ಪ್ರಧಾನ ಮಂತ್ರಿಯವರು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂಬ ಕಲ್ಪನೆಯೊಂದಿಗೆ ನ್ಯಾಯಾಲಯ ಮುಂದುವರಿಯಬಾರದು ಎಂದು ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಕಾಯ್ದೆಯನ್ನು ಸಮರ್ಥಿಸಿಕೊಂಡ ಮೆಹ್ತಾ, ಪ್ರಧಾನ ಮಂತ್ರಿಯವರ ಕಚೇರಿಯ ಪವಿತ್ರತೆಯನ್ನು ಒತ್ತಿಹೇಳಿದರು ಮತ್ತು ಸಾರ್ವಜನಿಕರು ಪ್ರಧಾನಿಯವರ ನಿರ್ಧಾರಗಳಲ್ಲಿ ನಂಬಿಕೆ ಇಡಬೇಕು ಎಂದು ಪ್ರತಿಪಾದಿಸಿದರು.
ಸರ್ಕಾರದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಸ್ವತಂತ್ರವಾಗಿದ್ದು, ಪರಸ್ಪರರ ಕ್ಷೇತ್ರಗಳನ್ನು ಗೌರವಿಸಬೇಕು, ಜನರು ಪ್ರಧಾನ ಮಂತ್ರಿಯವರ ಮೇಲೆ ನಂಬಿಕೆ ಇಡಬೇಕು. ಆ ಕಚೇರಿಗೆ ತನ್ನದೇ ಆದ ಪವಿತ್ರತೆ ಇದೆ. ಪ್ರತಿಯೊಂದು ನಿರ್ಧಾರವನ್ನು ದುರುದ್ದೇಶಪೂರ್ವಕ ಎಂದೇ ಭಾವಿಸುವುದಾದರೆ, ಅದೇ ತರ್ಕದಂತೆ ಸಂಪುಟ ನೇಮಕಾತಿಗಳಿಗೂ ಹೊರಗಿನವರನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಮೆಹ್ತಾ ವಾದಿಸಿದರು. ಚುನಾಯಿತ ಪ್ರತಿನಿಧಿಗಳು ಕೇವಲ ಬಹುಮತವನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಭಾವಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೆ ಉತ್ತರಿಸಿದ ಪೀಠವು, ತಾವು ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಪ್ರಶ್ನಿಸುತ್ತಿಲ್ಲ, ಬದಲಾಗಿ ಸಾಂಸ್ಥಿಕ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಪ್ರಸ್ತುತ ಎಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಪೀಠ ಪ್ರಶ್ನಿಸಿತಲ್ಲದೆ, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಜವಾಬ್ದಾರಿಯುತ ಹುದ್ದೆಗಳನ್ನು ನೀಡದಂತೆ ಸರ್ಕಾರವೇ ನೋಡಿಕೊಳ್ಳುತ್ತದೆ ಎಂದು ನ್ಯಾಯಾಲಯವು ಈ ಹಿಂದೆ ನಂಬಿಕೆ ಇಟ್ಟಿತ್ತು ಎಂಬುದನ್ನು ನೆನಪಿಸಿತು.
ವಾದ ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ಅರ್ಜಿಗಳನ್ನು ಐವರು ನ್ಯಾಯಾಧೀಶರ ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ತೀರ್ಪನ್ನು ಕಾಯ್ದಿರಿಸಿದೆ.

ಏನಿದು ಚರ್ಚೆ..?

2023ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವತಂತ್ರತೆಯನ್ನು ಕಾಯ್ದುಕೊಳ್ಳಲು ಸಂಸತ್ತು ನೂತನ ಕಾಯ್ದೆ ರೂಪಿಸುವವರೆಗೆ ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿಯೇ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ನಿರ್ದೇಶಿಸಿತ್ತು. ಆದರೆ ತದನಂತರ ಸಂಸತ್ತು 2023ರ ಹೊಸ ಕಾಯ್ದೆಯನ್ನು ಅಂಗೀಕರಿಸಿ, ಸಿಜೆಐ ಅವರ ಬದಲಿಗೆ ಕೇಂದ್ರ ಸಂಪುಟ ಸಚಿವರೊಬ್ಬರನ್ನು ಈ ಸಮಿತಿಗೆ ಸೇರ್ಪಡೆಗೊಳಿಸಿತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net