ರೆಡ್ ಕಾರಿಡಾರ್‌ನ ಹೃದಯಭಾಗದಲ್ಲೇ ನಿಂತು 'ನಕ್ಸಲ್ ಅಂತ್ಯ' ಎಂದ ಗೃಹ ಸಚಿವ ಅಮಿತ್​ ಷಾ; ಬಸ್ತಾರ್ ಆಯ್ಕೆಯ ಹಿಂದಿದೆ ಶಕ್ತಿಶಾಲಿ ರಾಜತಾಂತ್ರಿಕ ನಡೆ! | Naxal Free Bastar

 Naxal Free Bastar | ರೆಡ್ ಕಾರಿಡಾರ್‌ನ ಹೃದಯಭಾಗದಲ್ಲೇ ನಿಂತು 'ನಕ್ಸಲ್ ಅಂತ್ಯ' ಎಂದ ಗೃಹ ಸಚಿವ ಅಮಿತ್​ ಷಾ
Naxal Free Bastar | ರೆಡ್ ಕಾರಿಡಾರ್‌ನ ಹೃದಯಭಾಗದಲ್ಲೇ ನಿಂತು 'ನಕ್ಸಲ್ ಅಂತ್ಯ' ಎಂದ ಗೃಹ ಸಚಿವ ಅಮಿತ್​ ಷಾ
Published on
Naxal Free Bastar: ಭಾರತದ ಆಂತರಿಕ ಭದ್ರತೆಯ ಇತಿಹಾಸದಲ್ಲಿ  2010 ಏಪ್ರಿಲ್ 6 ಕರಾಳ ದಿನವಾಗಿ ದಾಖಲಾಗಿತ್ತು. ಅಂದು ಛತ್ತೀಸ್‌ಗಢದ ಬಸ್ತಾರ್‌ನ ದಟ್ಟ ಅರಣ್ಯದಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಗೆ 76 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ದಶಕಗಳ ಕಾಲ ನಡೆದ ಹಿಂಸಾಚಾರ, ರಕ್ತಪಾತ ಮತ್ತು ಹಿಂದುಳಿಯುವಿಕೆಗೆ ಸಮಾನಾರ್ಥಕವಾಗಿದ್ದ ಅದೇ ಬಸ್ತಾರ್‌ನಿಂದ ಈಗ ಇಡೀ ದೇಶವೇ ಹೆಮ್ಮೆಪಡುವಂತಹ ಐತಿಹಾಸಿಕ ಘೋಷಣೆಯೊಂದು ಹೊರಬಿದ್ದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಬಸ್ತಾರ್‌ನಲ್ಲಿ ನಿಂತು, ಭಾರತ ಈಗ ಸಂಪೂರ್ಣ ನಕ್ಸಲ್ ಮುಕ್ತವಾಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ದೇಶದಿಂದ ಎಡಪಂಥೀಯ ಉಗ್ರವಾದವನ್ನು ನಿರ್ಮೂಲನೆ ಮಾಡಲು ಸರ್ಕಾರ ನಿಗದಿಪಡಿಸಿದ್ದ 2026 ರ ಮಾರ್ಚ್ 31ರ ಗಡುವು ಈಗ ಯಶಸ್ವಿಯಾಗಿ ಸಾಕಾರಗೊಂಡಿದೆ.

ಬಸ್ತಾರವನ್ನೇ ಆಯ್ದುಕೊಂಡಿದ್ದೇಕೆ..?

ಗೃಹ ಸಚಿವರು ಈ ಮಹತ್ವದ ಘೋಷಣೆಗೆ ಬಸ್ತಾರ್ ಅನ್ನು ಆಯ್ಕೆ ಮಾಡಿಕೊಂಡಿರುವುದು ಕೇವಲ ಆಕಸ್ಮಿಕವಲ್ಲ, ಅದೊಂದು ಬಲಿಷ್ಠ ರಾಜತಾಂತ್ರಿಕ ಹಾಗೂ ಭದ್ರತಾ ಸಂದೇಶವಾಗಿದೆ. ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕಿದ್ದರೂ, ಬಸ್ತಾರ್‌ನ 14.1 ಲಕ್ಷ ಜನರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು ಮಾರ್ಚ್ 31, 2026ರ ನಂತರ ಎಂದು ಗೃಹ ಸಚಿವರು ಉಲ್ಲೇಖಿಸಿದ್ದಾರೆ. ಆ ಮೂಲಕ ಆರು ದಶಕಗಳ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನಡೆಗೆ ಕೊನೆಹಾಡಿದ ಸಂದೇಶವನ್ನು ರವಾನಿಸಲಾಗಿದೆ. ಒಂದು ಕಾಲದಲ್ಲಿ ನಕ್ಸಲಿಸಂನ ಭದ್ರಕೋಟೆಯಾಗಿದ್ದ ಜಾಗದಲ್ಲೇ ನಿಂತು ಈ ಯಶಸ್ಸನ್ನು ಘೋಷಿಸುವುದು ಸರ್ಕಾರದ ಭದ್ರತಾ ಕಾರ್ಯತಂತ್ರಕ್ಕೆ ಸಿಕ್ಕ ದೊಡ್ಡ ಗೆಲುವಾಗಿದ್ದು, ಇದು ಈ ಪ್ರದೇಶದ ಮೇಲಿದ್ದ ಭಯದ ಹಣೆಪಟ್ಟಿಯನ್ನು ಸಂಪೂರ್ಣವಾಗಿ ಅಳಿಸಿಹಾಕುವ ಪ್ರಯತ್ನವಾಗಿದೆ.

ನಕ್ಸಲ್ ಮುಕ್ತ ಭಾರತದ ಹಾದಿ ಮತ್ತು ಅಂಕಿ-ಅಂಶಗಳ ಚಿತ್ರಣ

ಈ ಯಶಸ್ಸು ರಾತ್ರೋರಾತ್ರಿ ಬಂದಿದ್ದಲ್ಲ, ಬದಲಿಗೆ 2019ರಿಂದಲೇ ಮೋದಿ ಸರ್ಕಾರ ನಕ್ಸಲ್ ಮುಕ್ತ ಭಾರತದ ಗುರಿ ಹೊಂದಿತ್ತು. 2023ರಲ್ಲಿ ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕಾರ್ಯಾಚರಣೆಗಳು ಮತ್ತಷ್ಟು ತೀವ್ರಗೊಂಡವು. ಸರ್ಕಾರದ ದತ್ತಾಂಶಗಳ ಪ್ರಕಾರ, 2024ರಲ್ಲಿ 224 ನಕ್ಸಲರನ್ನು ಮತ್ತು 2025ರಲ್ಲಿ ಸುಮಾರು 400ಕ್ಕೂ ಹೆಚ್ಚು ನಕ್ಸಲರನ್ನು ಸದೆಬಡಿಯಲಾಯಿತು. ಹಾಗೆಯೇ ಕಳೆದ 10 ವರ್ಷಗಳಲ್ಲಿ 10,000ಕ್ಕೂ ಹೆಚ್ಚು ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ.
ಸಾಲ್, ತೇಗ ಮತ್ತು ಬಿದಿರಿನ ದಟ್ಟ ಅರಣ್ಯಗಳಿಂದ ಕೂಡಿದ ಬಸ್ತಾರ್, ಭದ್ರತಾ ಪಡೆಗಳಿಗೆ ಅತ್ಯಂತ ಕಠಿಣ ಸವಾಲಾಗಿತ್ತು. ಕಳೆದ ಎರಡು ದಶಕಗಳಲ್ಲಿ ಸುಮಾರು 1,300 ಭದ್ರತಾ ಸಿಬ್ಬಂದಿ ಮತ್ತು 1,800ಕ್ಕೂ ಹೆಚ್ಚು ನಾಗರಿಕರು ನಕ್ಸಲರ ಹಿಂಸಾಚಾರಕ್ಕೆ ಬಲಿಯಾಗಿದ್ದರು. ಇಂತಹ ಕಠಿಣ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಭದ್ರತಾ ಪಡೆಗಳು ಈಗ ಐತಿಹಾಸಿಕ ಜಯ ಸಾಧಿಸಿವೆ.

ಭದ್ರತೆ ಮತ್ತು ಅಭಿವೃದ್ಧಿಯ ದ್ವಿಮುಖ ಕಾರ್ಯತಂತ್ರ

ಕೇಂದ್ರ ಸರ್ಕಾರವು ಬಸ್ತಾರ್‌ನಲ್ಲಿ ಕೇವಲ ಸೇನಾ ಕಾರ್ಯಾಚರಣೆಯನ್ನಷ್ಟೇ ನಂಬಿರಲಿಲ್ಲ, ಬದಲಿಗೆ ದ್ವಿಮುಖ ಕಾರ್ಯತಂತ್ರವನ್ನು (Dual Strategy) ಅಳವಡಿಸಿಕೊಂಡಿತ್ತು. ಒಂದು ಕಡೆ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿ ಕೇವಲ 12 ತಿಂಗಳಲ್ಲಿ 400ಕ್ಕೂ ಹೆಚ್ಚು ಬಂಡುಕೋರರನ್ನು ಮಟ್ಟಹಾಕಿದರೆ, ಮತ್ತೊಂದೆಡೆ ದಟ್ಟ ಅರಣ್ಯಗಳಲ್ಲೂ ರಸ್ತೆಗಳ ವಿಸ್ತರಣೆ, ಮೊಬೈಲ್ ಕನೆಕ್ಟಿವಿಟಿ, ಬ್ಯಾಂಕಿಂಗ್ ವ್ಯವಸ್ಥೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಅತ್ಯಂತ ವೇಗವಾಗಿ ಮಾಡಲಾಯಿತು.

ಅಭಿವೃದ್ಧಿ ಮಾದರಿಯತ್ತ ಭವಿಷ್ಯದ ಬಸ್ತಾರ್

ನಕ್ಸಲಿಸಂ ನಿರ್ಮೂಲನೆಯಾದ ನಂತರ ಬಸ್ತಾರ್ ಈಗ ಹೂಡಿಕೆ ಮತ್ತು ಪ್ರವಾಸೋದ್ಯಮದ ಆಕರ್ಷಣೀಯ ಕೇಂದ್ರವಾಗಿ ಬದಲಾಗಲು ಸಜ್ಜಾಗಿದೆ. ಬಸ್ತಾರ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಭದ್ರತಾ ಪಡೆಗಳ ಕ್ಯಾಂಪ್‌ಗಳನ್ನು ಈಗ ಜನಸೇವಾ ಕೇಂದ್ರಗಳಾಗಿ (Jan Seva Kendras) ಪರಿವರ್ತಿಸುವ ಬ್ಲೂಪ್ರಿಂಟ್ ಅನ್ನು ಪ್ರಕಟಿಸಲಾಗಿದೆ. ಈ ಕೇಂದ್ರಗಳು ಒಂದೇ ಸೂರಿನಡಿ ನಾಗರಿಕ ಸೇವೆಗಳು, ಡಿಜಿಟಲ್ ಸಂಪರ್ಕ, ಬ್ಯಾಂಕಿಂಗ್ ಸೌಲಭ್ಯಗಳು, ವಿವಿಧ ಸರ್ಕಾರಿ ಗುರುತಿನ ಚೀಟಿಗಳ ಸೇವೆಗಳು ಹಾಗೂ ಆಡಳಿತಾತ್ಮಕ ಬೆಂಬಲವನ್ನು ನೀಡಲಿವೆ. 
ಬಸ್ತಾರ್‌ನಲ್ಲಿ ಇತ್ತೀಚೆಗೆ ನಡೆದ 26ನೇ ಕೇಂದ್ರ ವಲಯ ಮಂಡಳಿ (Central Zonal Council) ಸಭೆಯು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಹಿಂದೆ ಇಂತಹ ಪ್ರಮುಖ ಸಭೆಗಳು ಕೇವಲ ದೆಹಲಿ ಅಥವಾ ರಾಜ್ಯಗಳ ರಾಜಧಾನಿಗಳಲ್ಲಿ ನಡೆಯುತ್ತಿದ್ದವು. ಆದರೆ ಈಗ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಗಳು ಗೃಹ ಸಚಿವರೊಂದಿಗೆ ಬಸ್ತಾರ್‌ನಲ್ಲೇ ಸಭೆ ನಡೆಸಿರುವುದು, ಈ ಪ್ರದೇಶ ಈಗ ಸಂಪೂರ್ಣ ಸುರಕ್ಷಿತವಾಗಿದೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಿದೆ.
ದಶಕಗಳ ಕಾಲ ಸೂರ್ಯಾಷ್ಟದ ನಂತರ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದ ಬಸ್ತಾರ್, ಇಂದು ಹೊಸ ಹೂಡಿಕೆ, ಸುಧಾರಿತ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮದ ಆಶಾವಾದದೊಂದಿಗೆ ಮುನ್ನಡೆಯುತ್ತಿದೆ. ಅಮಿತ್​ ಷಾರ ಈ ಭೇಟಿ ಮತ್ತು ಘೋಷಣೆಯು ಬಸ್ತಾರ್ ಅನ್ನು ಭಯದ ನೆರಳಿನಿಂದ ಹೊರತಂದು, ಭಾರತದ ಮುಖ್ಯವಾಹಿನಿಯ ಅಭಿವೃದ್ಧಿಯ ಚಕ್ರದೊಂದಿಗೆ ಭದ್ರವಾಗಿ ಜೋಡಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net