AI ಏಕೆ ಓಡುವ ಮೊಲವಲ್ಲ ನಿಧಾನವಾಗಿ ನಡೆವ ಆಮೆ? Airtificial Intelligence

AI ಏಕೆ ಓಡುವ ಮೊಲವಲ್ಲ ನಿಧಾನವಾಗಿ ನಡೆವ ಆಮೆ?
AI ಏಕೆ ಓಡುವ ಮೊಲವಲ್ಲ ನಿಧಾನವಾಗಿ ನಡೆವ ಆಮೆ?
Published on
ಕೆನ್ ಫಿಶರ್,  ಫಿಶರ್ ಇನ್ವೆಸ್ಟ್‌ಮೆಂಟ್ಸ್‌ನ ಸಂಸ್ಥಾಪಕರು, ಕಾರ್ಯಕಾರಿ ಅಧ್ಯಕ್ಷರು ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿ

ಕೃತಕ ಬುದ್ಧಿಮತ್ತೆ (AI - Airtificial Intelligence ) ಕುರಿತ ಕಪೋಲಕಲ್ಪಿತ ಊಹೆಗಳು ಇಂದು ಹೇರಳವಾಗಿವೆ. ಆದರೆ, ವಾಸ್ತವಾಂಶ ಮಾತ್ರ ತುಂಬಾ ಭಿನ್ನವಾಗಿದೆ. ಯಾವುದೇ ಒಂದು ದೊಡ್ಡ ತಂತ್ರಜ್ಞಾನ, ದಶಕಗಳ ಕಾಲ ಕ್ರಮೇಣ ಜಾರಿಯಾಗುತ್ತದೆಯೇ ಹೊರತು ಕೆಲವೇ ತಿಂಗಳುಗಳಲ್ಲಿ ಅಲ್ಲ. ವಿವಿಧ ರಂಗಗಳ ಮೇಲೆ AI ಪ್ರಭಾವ ಭಿನ್ನವಾಗಿರಲಿದೆ. ಇದು ಉದ್ಯೋಗಗಳನ್ನು ಕಸಿದುಕೊಳ್ಳುವ ಬದಲು ಕೆಲಸದ ದಕ್ಷತೆಯನ್ನು ವೃದ್ಧಿಸಲಿದೆ.

ಒಂದು ಕಡೆ ಕರ್ನಾಟಕದಾದ್ಯಂತ ಬೃಹತ್ ಡೇಟಾ ಸೆಂಟರ್ ವಿಸ್ತರಣೆಗೆ ಯೋಜನೆಗಳು ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ AI ತಂತ್ರಜ್ಞಾನದಿಂದ ಎದುರಾಗಿರುವ ಲೇ-ಆಫ್ ಮತ್ತು ಉದ್ಯೋಗ ಅಭದ್ರತೆಯ ವಿರುದ್ಧ ಬೆಂಗಳೂರಿನಲ್ಲಿ ನೂರಾರು ಟೆಕ್ ಉದ್ಯೋಗಿಗಳು ಪ್ರತಿಭಟನೆಗಿಳಿದಿದ್ದಾರೆ. ಇರಾನ್ ಯುದ್ಧದ ಆರ್ಥಿಕ ಹೊಡೆತಕ್ಕೆ AI ಒಂದೇ ಮದ್ದು, ಅದು ಉತ್ಪಾದಕತೆ ಹೆಚ್ಚಿಸಿ ಹಣದುಬ್ಬರವನ್ನು ಮಣಿಸಲಿದೆ ಎಂಬುದು ತಜ್ಞರ ವಾದ. ಆದರೆ, ಅದು ಕೋಟ್ಯಂತರ ನಿರುದ್ಯೋಗಿಗಳನ್ನು ಸೃಷ್ಟಿಸಿಲಿದೆ. ಅಲ್ಲದೆ, ಪ್ರಕೃತಿಯನ್ನು ಬರಿದಾಗಿಸಲಿದೆ.
AI ಬಗ್ಗೆ ತರಹೇವಾರಿ ಭಾವನಾತ್ಮಕ ಕಥೆಗಳು ಕೇಳಿಬರುತ್ತಿರುವಾಗ ಇದು ಆರ್ಥಿಕತೆ, ಕೈಗಾರಿಕೆ ಹಾಗು ನಿಮ್ಮ ಪ್ರಪಂಚದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಅಂದಾಜಿಸುವುದು ಹೇಗೆ? ವಾಸ್ತವ ಮತ್ತು ಕಾಲ್ಪನಿಕ  ವ್ಯತ್ಯಾಸವನ್ನು ನಾವು ಕಂಡುಕೊಳ್ಳುವುದು ಹೇಗೆ?
ಮೊದಲು, AI ಸ್ವರ್ಗ ಅಥವಾ ನರಕ ಸೃಷ್ಟಿಸಲಿದೆ ಎಂಬ ಭ್ರಮೆಯಿಂದ ಹೊರಬನ್ನಿ. ಸ್ವತಃ ಈ ಕ್ಷೇತ್ರದ ತಜ್ಞರಿಗೂ AI ಭವಿಷ್ಯದ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ. AI ಕುರಿತ ಊಹೆಗಳ ಆಧಾರದ ಮೇಲೆ ಉದ್ಯಮ ಅಥವಾ ಆರ್ಥಿಕತೆಯ ಭವಿಷ್ಯವನ್ನು ನಿರ್ಧರಿಸುವುದು ಮೂರ್ಖತನ. ಆದರೂ, ಅನೇಕರು ಪ್ರಯತ್ನಿಸುತ್ತಲೇ ಇದ್ದಾರೆ. ಅಂತ್ಯವಿಲ್ಲದ ಭವಿಷ್ಯವಾಣಿಗಳು ತೀವ್ರ ಮತ್ತು ಬೃಹತ್ ಬದಲಾವಣೆಗಳನ್ನೇ ಸಾರುತ್ತಿವೆ. ಅವುಗಳಲ್ಲಿ ನಕಾರಾತ್ಮಕತೆಯೇ ಹೆಚ್ಚು. ಪಾಶ್ಚಿಮಾತ್ಯ ಕಂಪನಿಗಳು ಇತ್ತೀಚೆಗೆ ಮಾಡುತ್ತಿರುವ ಉದ್ಯೋಗ ಕಡಿತಕ್ಕೆ AI ತಂತ್ರಜ್ಞಾನವೇ ಪ್ರಮುಖ ಕಾರಣ ಎಂದು ಬಿಂಬಿಸಲಾಗುತ್ತಿದೆ. ಫಿನ್ ಟೆಕ್ ಕಂಪೆನಿಯಾದ ಬ್ಲಾಕ್ AI ಅಳವಡಿಕೆಗಾಗಿ ತನ್ನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸಲಿದೆ ಎಂಬ ವದಂತಿ ಇದೆ. AI ಜಗತ್ತಿನಲ್ಲಿ ಕರ್ನಾಟಕದ ಕೋಡಿಂಗ್ ಸೈನ್ಯ ನಿರುಪಯುಕ್ತವಾಗಿ, ಟೆಕ್ ದೈತ್ಯ ಕಂಪನಿಗಳು ಭಾರತದ ಔಟ್‌ಸೋರ್ಸಿಂಗ್ ಕೈಬಿಡಲಿವೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಆವಿಷ್ಕಾರಗಳು ಕೇವಲ ವಿನಾಶ ತರುತ್ತವೆಯೇ ಹೊರತು ಹೊಸ ಅವಕಾಶಗಳನ್ನಲ್ಲ ಎಂಬ ವಾದ ತರ್ಕಹೀನವಾದುದು. ಇಂತಹ ನಕಾರಾತ್ಮಕ ಆಲೋಚನೆಗಳು ಇತಿಹಾಸದುದ್ದಕ್ಕೂ ಕಂಡುಬಂದಿದೆ. 1980ರ ದಶಕದಲ್ಲಿ ಕಂಪ್ಯೂಟರ್ ಹಾಗೂ ರೋಬೋಟ್‌ಗಳು ಕಾರ್ಮಿಕರ ಸ್ಥಾನವನ್ನು ಅಲಂಕರಿಸಲಿವೆ ಎಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದರು. ಹಾಗಾಗಲಿಲ್ಲ! ಕೆಲಸದ ಸ್ವರೂಪಗಳು ಬದಲಾದವು. ನೌಕರರೂ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡರು. ಒಟ್ಟಾರೆ ಬದುಕು ಮತ್ತಷ್ಟು ಉತ್ತಮಗೊಂಡಿತು. ಇತಿಹಾಸದ ಅದೇ ಅಧ್ಯಾಯ ಈಗ ಮರುಕಳಿಸುತ್ತಿದೆ.
ಹೌದು, ಕೌಶಾಲ್ಯಭಿವೃದ್ಧಿಗೆ ಹಣ ವ್ಯಯವಾಗುತ್ತದೆ. ಕೆಲವು ಕಂಪನಿಗಳು ಇದನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೇ ಕಾರ್ಮಿಕ ದಿನದಂದು ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದವು. ಆದರೆ, ಮರುತರಬೇತಿ ಎಂದರೆ ಭಾರಿ ಪ್ರಮಾಣದ ಉದ್ಯೋಗ ನಷ್ಟ ಎಂದಲ್ಲ. AI ನಿಂದ ಕರ್ನಾಟಕದ ಎಂಜಿನಿಯರ್‌ಗಳ ಅವಕಾಶಗಳು ಕುಂಠಿತವಾಗಲ್ಲ, ಅವರ ಕಾರ್ಯದಕ್ಷತೆ ಮತ್ತಷ್ಟು ಹೆಚ್ಚಲಿದೆ.
ನಿಜ ಹೇಳಬೇಕೆಂದರೆ, ಉದ್ಯೋಗ ಕಡಿತದಲ್ಲಿ AIನ ನೈಜ ಪಾಲು ತೀರಾ ನಗಣ್ಯ. ಆದರೆ, ವಾಸ್ತವ ಬೇರೆಯೇ ಇದೆ. ಇತ್ತೀಚಿನ ದಿನಗಳಲ್ಲಿ 'ಬ್ಲಾಕ್' ಸಂಸ್ಥೆಯ ಮಾರುಕಟ್ಟೆ ಮೌಲ್ಯ ತೀವ್ರವಾಗಿ ಕುಸಿದಿದೆ. ಕೋವಿಡ್ ನಂತರ ಈ ಕಂಪನಿಗಳು ಅಗತ್ಯಕ್ಕಿಂತ ಅತಿ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿದ್ದವು. ಈಗ ಆ ತಪ್ಪುಗಳನ್ನು ಮರೆಮಾಚಲು AI ಅನ್ನು ಬಲಿಪಶು ಮಾಡಲಾಗುತ್ತಿದೆ ಅಷ್ಟೆ.
ಭಾರೀ ಬದಲಾವಣೆಯ ವೇಗವನ್ನು ಆಶಾವಾದಿಗಳು ಅತಿಯಾಗಿ ಅಂದಾಜಿಸುತ್ತಾರೆ. ಇಂಟರ್ನೆಟ್ ಕ್ರಾಂತಿ ಜಗತ್ತನ್ನು ಬದಲಿಸಿದ್ದು ರಾತ್ರೋರಾತ್ರಿಯಲ್ಲ. ನಿಧಾನವಾಗಿ. ಮೊದಲಿಗೆ ಬಂದಿದ್ದು ಆಮೆಗತಿಯ ಡೆಸ್ಕ್‌ಟಾಪ್ ಡಯಲ್-ಅಪ್ ಇಂಟರ್ನೆಟ್. ನಂತರ ಬಂದದ್ದೇ ಬ್ರಾಡ್‌ಬ್ಯಾಂಡ್, ವೈರ್‌ಲೆಸ್ ನೆಟ್‌ವರ್ಕ್ ಮತ್ತು ಕೈಗೆಟುಕುವ ದರದ ಲ್ಯಾಪ್‌ಟಾಪ್‌ಗಳು. ಆಮೇಲೆ ಸ್ಮಾರ್ಟ್‌ಫೋನ್‌ಗಳು, ಸೋಷಿಯಲ್ ಮೀಡಿಯಾ, ವಿಡಿಯೋ ಕಾನ್ಫರೆನ್ಸಿಂಗ್, ಮೊಬೈಲ್ ಪೇಮೆಂಟ್‌ಗಳು...  ಈ ಬದಲಾವಣೆಗೆ ಮೂರು ದಶಕಗಳು ಬೇಕಾದವು.
ಬೃಹತ್ ಡೇಟಾ ಸೆಂಟರ್‌ಗಳು ಸಾಮಾನ್ಯವಾಗಿ ನೀರಿನ ನಿರ್ವಹಣೆಯನ್ನು ಉತ್ತೇಜಿಸುತ್ತವೆ. ವಿದ್ಯುತ್ ಹಾಗು ಭೂಮಿ ಕಳೆದುಕೊಳ್ಳುವ ಆತಂಕ ಸಹಜ. ಆದರೆ ಪ್ರಾದೇಶಿಕ ಪ್ರತಿರೋಧ (ಈಗ ವಿಶಾಖಪಟ್ಟಣದ ಹಾಗೆ ದೇಶದೆಲ್ಲೆಡೆ ಕಂಡುಬರುತ್ತಿರುವಂತೆ), ಚಿಪ್‌ಗಳ ಕೊರತೆ ಮತ್ತು ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಈ ತಂತ್ರಜ್ಞಾನ ವಿಸ್ತರಣೆಯ ವೇಗಕ್ಕೆ ಮುಳ್ಳಾಗಿವೆ.
AI ಕೆಲವು ಕೈಗಾರಿಕೆಗಳ ಚಿತ್ರಣವನ್ನೇ  ಬದಲಾಯಿಸಲಿದೆ. ಉಳಿದ ರಂಗಗಳಲ್ಲಿ ಇದರ ಅಬ್ಬರ ಅಷ್ಟಕ್ಕಷ್ಟೆ. ಅದು ಧಾರವಾಡ ಪೇಡಾದ ರುಚಿಯನ್ನು ಹೆಚ್ಚಿಸಬಲ್ಲದೇ? ಹರಿದದ್ದನ್ನು ಅಂಟಿಸುವ ಡಕ್ಟ್ ಟೇಪ್‌ನ ಉಪಯುಕ್ತತೆಯನ್ನು ಇದು ಮೀರಿಸಬಲ್ಲದೇ? ಆದರೆ, ಆಹಾರ ಮತ್ತು ಟೇಪ್‌ಗಳಂತಹ ವಸ್ತುಗಳ ಸಾಗಣೆ ಹಾಗು ದಾಸ್ತಾನು ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು AI ಖಂಡಿತವಾಗಿಯೂ ನೆರವಾಗಬಲ್ಲದು. ಅದನ್ನು ಬಿಟ್ಟರೆ ಬೇರೇನಿದೆ?
ಭಾರತದಲ್ಲಿರುವಂತಹ ಜ್ಞಾನಾಧಾರಿತ ಸೇವಾ ವಲಯದಲ್ಲಿ, ಗ್ರಾಹಕರು ಕೇವಲ ಪರಿಣತಿಗಷ್ಟೇ ಬೆಲೆ ಕೊಡುವುದಿಲ್ಲ. ಅವರು ಜವಾಬ್ದಾರಿಯನ್ನೂ ಬಯಸುತ್ತಾರೆ.  ತೆರಿಗೆ ಅಸಮರ್ಪಕ ನಿರ್ವಹಣೆಗೆ AI ನ್ನು ಜವಾಬ್ದಾರಿ ಮಾಡಲಾಗುತ್ತಾ? AIನಂಬಿ ಯಾವ ನಿವೃತ್ತಿದಾರರೂ ತಮ್ಮ ಜೀವಮಾನದ ದುಡಿಮೆಯನ್ನು ಹೂಡಿಕೆ ಮಾಡಲು ಧೈರ್ಯ ಮಾಡುತ್ತಾರೆ? ಅಲ್ಲದೆ, ಗ್ರಾಹಕರ ಖಾಸಗಿ ಮಾಹಿತಿಯ ರಕ್ಷಣೆಯೂ ಇಲ್ಲಿ ಮುಖ್ಯ.
ಏಕೆಂದರೆ, ದೊಡ್ಡ ತಾಂತ್ರಿಕ ಬದಲಾವಣೆಗಳು ಕೇವಲ 'ಹೌದು' ಅಥವಾ 'ಇಲ್ಲ' ಎಂಬ ಸರಳ ಆಯ್ಕೆಗಳ ಮೇಲೆ ನಿಂತಿಲ್ಲ. ಸ್ವಿಗ್ಗಿಯಂತಹ ಸ್ಮಾರ್ಟ್‌ಫೋನ್ ಆಧಾರಿತ ಫುಡ್ ಡೆಲಿವರಿ ಸೇವೆಗಳು ಅತಿ ವೇಗವಾಗಿ ಜನಪ್ರಿಯತೆ ಗಳಿಸಿದವು. ಅದೇ ಸಮಯದಲ್ಲಿ ದಿನಸಿ ಮತ್ತು ಹೋಟೆಲ್‌ಗಳ ನೇರ ಮಾರಾಟವೂ ನಿರಂತರವಾಗಿ ಬೆಳೆಯುತ್ತಲೇ ಸಾಗಿತು. ದೊಡ್ಡ ಮಾಲ್‌ಗಳು ಚಿಲ್ಲರೆ ವ್ಯಾಪಾರದ ಸ್ವರೂಪವನ್ನೇ ಬದಲಿಸಿದವು. ಆಮೇಲೆ ಆನ್‌ಲೈನ್ ಶಾಪಿಂಗ್ ಆ ಜಾಗವನ್ನು ಆಕ್ರಮಿಸಿತು. ಆದರೂ, ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್‌ಸಿಟಿಯಂತಹ ಬೃಹತ್ ಶಾಪಿಂಗ್ ಸೆಂಟರ್‌ಗಳ ಪಕ್ಕದಲ್ಲೇ ಸಣ್ಣ ಪುಟ್ಟ ಅಂಗಡಿಗಳು ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ.
AI  ದೊಡ್ಡ ಬದಲಾವಣೆಯನ್ನೇನೂ ಮಾಡಲಾರದು. ಭವಿಷ್ಯದಲ್ಲಿ ಈ ತಂತ್ರಜ್ಞಾನ, ಯುವ ವಕೀಲರಿಗೆ ಯಾಂತ್ರಿಕ ಕೆಲಸದ ಬದಲು ಹೆಚ್ಚು ಮೌಲ್ಯಯುತ ಕೆಲಸದಲ್ಲಿ ತೊಡಗಿಸಿಕೊಳ್ಳಲು ನೆರವಾಗಬಲ್ಲದು. ಕೊನೆಗೆ, ಚಾಲಕರಹಿತ ಟ್ರಕ್‌ಗಳು ಜಾಗತಿಕ ಚಾಲಕರ ಕೊರತೆಯನ್ನು ನೀಗಿಸಲಿವೆ. ಕಾಲಕ್ರಮೇಣ ಸ್ವಯಂಚಾಲಿತ ಕಾರುಗಳು ಅಂಧರು ಮತ್ತು ವಿಕಲಚೇತನರಿಗೆ ಊಹಿಸಲೂ ಸಾಧ್ಯವಾಗದಂತಹ ಸ್ವಾವಲಂಬನೆಯನ್ನು ತಂದುಕೊಡಲಿವೆ. ಈಗಾಗಲೇ ಈ ನಿಟ್ಟಿನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ವಿಪ್ರೋ ಸಂಸ್ಥೆಯು ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಮತ್ತು ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಜೊತೆಗೂಡಿ ಭಾರತದ ಮೊದಲ ಸ್ವದೇಶಿ ಸ್ವಯಂಚಾಲಿತ ಕಾರನ್ನು ಅನಾವರಣಗೊಳಿಸಿವೆ
ಹೆಚ್ಚುತ್ತಿರುವ ವಯೋವೃದ್ಧರ ಜನಸಂಖ್ಯೆಗೆ AI ಆರೋಗ್ಯ ರಕ್ಷಣಾ ಕವಚ ತುರ್ತಾಗಿ ಬೇಕಿದೆ. ವೃದ್ಧರು ಬೀಳುವುದನ್ನು ಪತ್ತೆಹಚ್ಚುವ ಮತ್ತು ಅವರ ಆರೋಗ್ಯದ ಏರುಪೇರುಗಳನ್ನು ಗುರುತಿಸುವ 'ಕ್ಲಿಕ್' (CLYKK) ನಂತಹ ಆಪ್‌ಗಳು,  ಕೆಲಸದ ಗಡಿಬಿಡಿಯ ನಡುವೆಯೂ ಹಿರಿಯರ ಆರೈಕೆಯನ್ನೂ ನಿಭಾಯಿಸುತ್ತಿರುವ ಕುಟುಂಬಗಳಿಗೆ ದೊಡ್ಡ ಆಸರೆಯಾಗಿವೆ.
ದಕ್ಷತೆ ಮುಖ್ಯ. ಆದರೆ, ಕೇವಲ ಕಡಿಮೆ ಜನರಿಂದ ಹೆಚ್ಚು ಲಾಭ ಗಳಿಸಿದ ಮಾತ್ರಕ್ಕೆ ಯಾವುದೇ ಶ್ರೇಷ್ಠ ಕಂಪನಿ ಜಗತ್ತನ್ನು ಬದಲಿಸಲು ಸಾಧ್ಯವಿಲ್ಲ. ಶ್ರೇಷ್ಠ ಸಂಸ್ಥೆಗಳ ನಿಜವಾದ ಯಶಸ್ಸು ಸಮಸ್ಯೆಗಳಿಗೆ ಹಿಂದೆಂದೂ ಕಾಣದ ವಿಶಿಷ್ಟ ಪರಿಹಾರಗಳನ್ನು ಶೋಧಿಸುವುದರಲ್ಲಿದೆ. AI ಹೆಗ್ಗುರುತು ಉದ್ಯೋಗ ಕಡಿತದಲ್ಲಿ ಅಲ್ಲ, ಸಬಲೀಕರಣದಲ್ಲಿ ಅಡಗಿದೆ. ಇದು ಈಗಾಗಲೇ ಕಾರ್ಖಾನೆಗಳು ಹಾಗೂ ಕಾಲ್ ಸೆಂಟರ್‌ಗಳಲ್ಲಿ ಮಾನವನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿದೆ. ಆದರೆ, ಅದು ಸದ್ಯಕ್ಕಂತೂ ಮಾನವನ ಬುದ್ಧಿಮತ್ತೆ ಹಾಗೂ ಸೃಜನಶೀಲತೆಯನ್ನು ಮೀರಿಸಲು ಸಾಧ್ಯವಿಲ್ಲ.
ದೊಡ್ಡ ಬದಲಾವಣೆ ಖಚಿತ, ಆದರೆ ಅದಿನ್ನೂ ದೂರದಲ್ಲಿದೆ. ಸಮಚಿತ್ತದಿಂದಿದರಿ.
ಲೇಖಕರ ಬಗ್ಗೆ
ಕೆನ್ ಫಿಶರ್ ಅವರು 1979 ರಲ್ಲಿ ಫಿಶರ್ ಇನ್ವೆಸ್ಟ್‌ಮೆಂಟ್ಸ್ ಅನ್ನು ಸ್ಥಾಪಿಸಿದರು, ಇದು ಜಾಗತಿಕವಾಗಿ 386 ಬಿಲಿಯನ್ ಯುಎಸ್‌ಡಿ ಗಿಂತ ಹೆಚ್ಚಿನ ಹಣವನ್ನು ನಿರ್ವಹಿಸುವ ಹೂಡಿಕೆ ಸಲಹಾ ಸಂಸ್ಥೆಯಾಗಿದೆ. ಅವರು 37 ವರ್ಷಗಳ ಕಾಲ ಫಿಶರ್ ಇನ್ವೆಸ್ಟ್‌ಮೆಂಟ್ಸ್‌ನ ಸಿಇಒ ಆಗಿದ್ದರು ಮತ್ತು ಪ್ರಸ್ತುತ ಕಾರ್ಯಕಾರಿ ಅಧ್ಯಕ್ಷರು ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 4 ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್‌ಗಳು ಸೇರಿದಂತೆ 11 ಪುಸ್ತಕಗಳ ಲೇಖಕರಾಗಿದ್ದಾರೆ ಮತ್ತು ವಿಶ್ವದ 28 ದೇಶಗಳ ಪ್ರಮುಖ ಮಾಧ್ಯಮಗಳಲ್ಲಿ ಮಾಸಿಕ ಅಂಕಣಗಳನ್ನು ಆಯಾ ದೇಶದ ಸ್ಥಳೀಯ ಭಾಷೆಗಳಲ್ಲಿ ಬರೆಯುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net