

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ನಡುವೆ ವಾಗ್ವಾದ ಮುಂದುವರೆದಿದ್ದು, ಕುಮಾರಸ್ವಾಮಿಯವರೇ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಅಂತ ನಾವೆಲ್ಲಿ ಹೇಳಿದ್ದೇವೆ?, ನಿಮ್ಮ ಮನೆಯಲ್ಲಿ ಮೊಬೈಲ್ ಎಕ್ಸ್ಚೇಂಜ್ ಆಗಿಲ್ವಾ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲದಕ್ಕೂ ಒಂದು ಮಿತಿ ಇದೆ. ಪ್ರತಿ ದಿನ ಅವರು ಒಂದೊಂದು ಹೇಳಿದರೆ ಏನು ಉತ್ತರ ಕೊಡೋದು. ಅವರಿಗೆ ಕೆಲಸ ಕಮ್ಮಿ ಆಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪ್ರಿಯಾಂಕ್ ಬಿಟ್ಟರೆ ಬೇರೆ ಏನೂ ಇಲ್ಲ ಅವರಿಗೆ ಎಂದು ಕಿಡಿಕಾರಿದ್ದಾರೆ.
ಸ್ಟಿಂಗ್ ಆಪರೇಷನ್ ಯಾರು ಮಾಡಿದ್ದಾರೆ, ಅವರನ್ನು ಹಲವು ಬಾರಿ ವಿಚಾರಣೆ ಮಾಡಿದ್ದೇವೆ. ಇವರಿಗೆ ಯಾಕೆ ಅಷ್ಟು ಅರ್ಜೆಂಟ್?, ಅವರಿಗೆ ಏನು ಮಾಹಿತಿಯಿದೆ? ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಸರ್ಕಾರವೇ ಪುರಸ್ಕಾರ ನೀಡಿಲ್ವಾ?, ಅಮಿತ್ ಶಾ ಅವರೇ ಕರ್ನಾಟಕ ಪೊಲೀಸರ ಒಳ್ಳೆ ಕೆಲಸ ಗುರುತಿಸಿ ಅವಾರ್ಡ್ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಾನು ಗೃಹ ಸಚಿವ, ಸಂವಿಧಾನದ ಅಡಿ ನನಗೇನು ಹೆಚ್ಚಿನ ಅಧಿಕಾರವಿರಲ್ಲ. ಕಾನೂನಿನ ಅಡಿಯಲ್ಲಿ ಏನು ನಿಯಮಗಳಿವೆ ಎಂಬುದರ ಅಡಿಯಲ್ಲೇ ನಾನು ಕೆಲಸ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟೇ ಸಣ್ಣ ಸಾಕ್ಷಿ ಸಿಕ್ಕಿದರೂ ನಾವು ತನಿಖೆ ಮಾಡುತ್ತೇವೆ. ಸಣ್ಣ ಕಾರ್ಯಕರ್ತರಿರಲಿ, ಸಂಸದರೇ ಇರಲಿ ಅಥವಾ ಸಚಿವರೇ ಆಗಿರಲಿ. ನೊಟೀಸ್ ಕೊಟ್ಟು ಕರೆಸಬೇಕಾದರೆ ಕರೆಸುತ್ತೇವೆ ಎಂದು ಹೇಳಿದ್ದಾರೆ.
ಸ್ಟಿಂಗ್ ಪ್ರಕರಣದ ಮೊಬೈಲ್ ಅನ್ನು ರಿತೇಶ್ ಪಾಂಡೆಗೆ ಕಳಿಸಿದ್ದು ಯಾರು? ಮೊಬೈಲ್ ಎಲ್ಲಿ ಹೋಗಿತ್ತು? ಗಾಝಿಯಾಬಾದ್ನಲ್ಲೇ ನಾವು ಪಾಂಡೆಯನ್ನು ಪಿಕಪ್ ಮಾಡಿದ್ದೇವೆ. ಕೇಂದ್ರ ಸಚಿವರ ಮನೆಯಿಂದ ಪಿಕಪ್ ಮಾಡಿದ್ದೇವೆ ಅಂತ ನಾವು ಹೇಳಿಲ್ಲ. ನಿಮ್ಮ ಮನೆಯಲ್ಲಿ ಮೊಬೈಲ್ ಎಕ್ಸಚೇಂಜ್ ಆಗಿದೆಯಾ ಹೇಳಿ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದ್ದಾರೆ.
ಟೆಕ್ನಿಕಲ್ ಸಾಕ್ಷ್ಯಾಧಾರಗಳನ್ನು ಸೂಕ್ತ ಸಂದರ್ಭದಲ್ಲಿ ಹೊರಗಡೆ ಬಿಡುತ್ತೇವೆ. ನಾವು ಕುಮಾರಸ್ವಾಮಿ ಟಚ್ ಮಾಡ್ತೇವೆ ಅಂತ ಎಲ್ಲಿ ಹೇಳಿದ್ದೇವೆ? ಟಚ್ ಮಿ ಟಚ್ ಮಿ ಅಂತ ಅವರೇ ಹೇಳಿದ್ದಲ್ವಾ? ಆರ್ಎಸ್ಎಸ್ನಾ ಡಿ ಗ್ರೂಪ್ ನೌಕರರಾ ಅವರು ಹಾಗಾದ್ರೆ? ಎಂದು ವಾಗ್ದಾಳಿ ನಡೆಸಿದ್ದಾರೆ.