ಕ್ಲೀನ್ ಚಿಟ್ ಕೊಡಲು, ವಿಡಿಯೋ ಮಾಡಿದವರಿಗೆ ರಕ್ಷಣೆ ನೀಡಲು ಈ ತನಿಖೆ: ಸರ್ಕಾರದ ವಿರುದ್ಧ ಹರಿಹಾಯ್ದ ಎಚ್‌ಡಿಕೆ!

ಕ್ಲೀನ್ ಚಿಟ್ ಕೊಡಲು, ವಿಡಿಯೋ ಮಾಡಿದವರಿಗೆ ರಕ್ಷಣೆ ನೀಡಲು ಈ ತನಿಖೆ: ಸರ್ಕಾರದ ವಿರುದ್ಧ ಹರಿಹಾಯ್ದ ಎಚ್‌ಡಿಕೆ!
Published on: 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್​ ಆಪರೇಷನ್​ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಜೆಡಿಎಸ್​ ಕಚೇರಿ ಜೆ ಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಚ್​ಡಿಕೆ, ಇದು ಕೇವಲ ಕಟ್ಟುಕತೆ ಎಂದು ತನಿಖಾ ವರದಿ ನೀಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ವಿಡಿಯೋ ಮಾಡಿದವರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ತನಿಖೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ತನಿಖೆ ಪ್ರಾಮಾಣಿಕವಾಗಿ ಆಗಬೇಕು ಮತ್ತು ಸರಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ತಾವು ಖುದ್ದಾಗಿ ಕಮಿಷನರ್‌ಗೆ ಹೇಳಿ ಬಂದಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪೊಲೀಸ್ ತನಿಖೆಯ ವಿರುದ್ಧ ಕಿಡಿ!

ನಡೆದ ತನಿಖೆಯ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವರು, ಯಾವುದೇ ನೋಟೀಸ್ ನೀಡದೆ ಪೊಲೀಸರು ತರಾತುರಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ತಮ್ಮ ಪಕ್ಷದ ಕಾರ್ಯಕರ್ತ ಮೋಹನ್ ಗೌಡ ಮನೆಗೆ ತನಿಖೆಗಾಗಿ ಹೋದ ಪೊಲೀಸರು, ಅಲ್ಲಿನ ಹೆಣ್ಣುಮಕ್ಕಳ ಜೊತೆ ದುರ್ವರ್ತನೆ ತೋರಿ ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಪೊಲೀಸರ ಚೈನ್ ಕಳ್ಳತನವಾಗಿದೆ ಎಂದು ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸುತ್ತಾ, ತನಿಖೆ ಮಾಡುವಾಗ ಬ್ರಾಸ್ಲೆಟ್​​ ಹಾಕಿಕೊಂಡು ಹೋಗಿದ್ದೇಕೆ ಎಂದು ಪ್ರಶ್ನಿಸಿದರು, ಸರಕಾರದ ಈ ತನಿಖೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಇದರಿಂದಲೇ ತಿಳಿಯಬಹುದು ಎಂದು ಅವರು ವಾಗ್ದಾಳಿ ನಡೆಸಿದರು.

ಇದು ಕೇವಲ ಟ್ರೈಲರ್, ಮುಂದೆ ಪಿಕ್ಚರ್ ಇದೆ ಎಂಬ ಗೃಹ ಸಚಿವರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಪ್ರಿಯಾಂಕ್ ಖರ್ಗೆ ಅವರೇ, ಇಂತಹ ಎಷ್ಟೋ ಟ್ರೈಲರ್‌ಗಳನ್ನು ನಾವು ನಮ್ಮ ಜೀವನದಲ್ಲಿ ನೋಡಿದ್ದೇವೆ ಎಂದರು.

12 ವರ್ಷಗಳ ನಂತರ ಪ್ರಕರಣ ಮುನ್ನೆಲೆಗೆ ಬಂದಿದ್ದೇಕೆ..?

ಇದೆಲ್ಲವೂ ಕ್ಲೀನ್ ಚಿಟ್ ಮತ್ತು ಕಟ್ಟುಕತೆ ಎಂದು ಬಿಂಬಿಸಲಾಗುತ್ತಿದ್ದು, ಬರೋಬ್ಬರಿ 12 ವರ್ಷಗಳ ಹಿಂದೆ ಈ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ 12 ವರ್ಷಗಳ ನಂತರ ಈ ಪ್ರಕರಣ ಈಗೇಕೆ ಮುನ್ನೆಲೆಗೆ ಬಂತು..? ಸ್ವತಃ ಸಿದ್ದರಾಮಯ್ಯನವರೇ ಇದು ಸ್ಟಿಂಗ್ ಆಪರೇಷನ್ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಆರೋಪ ಹೊತ್ತು ಸದ್ಯ ಕಾಂಗ್ರೆಸ್​ ಪಕ್ಷದಿಂದ ಉಚ್ಚಾಟನೆಗೊಂಡಿರುವ ಕೃಪಾ ಆಳ್ವಾ ಅವರನ್ನು ನಿಗಮದ ಅಧ್ಯಕ್ಷೆಯನ್ನಾಗಿ ಮಾಡಿದ್ದು ಸಿದ್ದರಾಮಯ್ಯ. 2023ರಲ್ಲಿ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಜೊತೆಗೆ ಮತ್ತೋರ್ವ ವ್ಯಕ್ತಿ ಇದ್ದಾನೆ. ಆ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ಭೇಟಿಯಾದ್ರಾ? ಆತನ ಹೇಳಿಕೆ ಪಡೆದ್ರಾ? ಕೃಪಾ ಆಳ್ವಾ ಆ ಮುಸ್ಲಿಂ ಮಹಿಳೆಯನ್ನು ಯಾಕೆ ಕರೆತಂದರು? ಈ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಲಾಗಿದೆಯೇ ಎಂದು ಎಚ್​ಡಿಕೆ ಪ್ರಶ್ನಿಸಿದ್ದು, ಈ ಸಂಪೂರ್ಣ ಪ್ರಕರಣದ ಹಿಂದೆ ಬ್ಲ್ಯಾಕ್ ಮೇಲ್ ತಂತ್ರ ಹಾಗೂ ಸಿಡಿ ಸಂಸ್ಕೃತಿ ಇದೆ ಎಂದು ದೂರಿದರು.

ಡಿಕೆ ಶಿವಕುಮಾರ್ ಹಳೆಯ ವಿಡಿಯೋ ಪ್ರದರ್ಶನ

ಈ ಹಿಂದೆ ಫೋನ್ ಕದ್ದಾಲಿಕೆ, ಸ್ಟಿಂಗ್ ಆಪರೇಷನ್ ಹಾಗೂ ಬ್ಲ್ಯಾಕ್ ಮೇಲ್ ಕುರಿತು ಸ್ವತಃ ಡಿ ಕೆ ಶಿವಕುಮಾರ್ ಕಲಾಪದಲ್ಲಿ ಮಾತನಾಡಿದ್ದ ಹಳೆಯ ವಿಡಿಯೋವನ್ನು ಎಚ್​ಡಿಕೆ ಬಿಡುಗಡೆ ಮಾಡಿದರು.