ಮಸೂದ್ ಅಜರ್ ಎಲ್ಲಿದ್ದಾನೆ? 70 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನ; FATF ಭಯಕ್ಕೆ ಹೊಸ ನಾಟಕ! Masood Azhar

ಮಸೂದ್ ಅಜರ್ (JeM ಮುಖ್ಯಸ್ಥ) - ಪಾಕಿಸ್ತಾನದ FIA 'ರೆಡ್ ಬುಕ್'ನಲ್ಲಿ ಸೇರ್ಪಡೆ ಹಾಗೂ ಬಹುಮಾನ ಘೋಷಣೆ
ಮಸೂದ್ ಅಜರ್ (JeM ಮುಖ್ಯಸ್ಥ) - ಪಾಕಿಸ್ತಾನದ FIA 'ರೆಡ್ ಬುಕ್'ನಲ್ಲಿ ಸೇರ್ಪಡೆ ಹಾಗೂ ಬಹುಮಾನ ಘೋಷಣೆ
Published on
ಇಸ್ಲಾಮಾಬಾದ್​: ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸುತ್ತಿರುವ ಪಾಕಿಸ್ತಾನ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ (FATF) ಸರ್ವಸದಸ್ಯರ ಸಭೆ ಹತ್ತಿರ ಬರುತ್ತಿದ್ದಂತೆ, ಭಯೋತ್ಪಾದನೆಯ ವಿರುದ್ಧ ತಾನು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಪೋಸ್​ ಕೊಡಲು ಮುಂದಾಗಿದೆ. 
ಇದರ ಹಿನ್ನಲೆ ಕುಖ್ಯಾತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ಮುಖ್ಯಸ್ಥ, ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ (Masood Azhar) ತಲೆಗೆ ಕೇವಲ 70 ಲಕ್ಷ ರೂಪಾಯಿ ಬಹುಮಾನ ಘೋಷಿಸುವ ಮೂಲಕ ತನ್ನ ನರಿ ಬುದ್ಧಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

ಕಣ್ಣೊರೆಸುವ ತಂತ್ರಕ್ಕೆ ಮತ್ತೊಂದು ಉದಾಹರಣೆ!

ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ತನ್ನ ಹೊಸ ರೆಡ್ ಬುಕ್ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರನ್ನು ಸೇರಿಸಿದೆ. ಆತನ ಬಂಧನಕ್ಕೆ ಅಥವಾ ಸುಳಿವು ನೀಡಿದವರಿಗೆ 70 ಲಕ್ಷ ಪಾಕಿಸ್ತಾನಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಎಫ್‌ಎಟಿಎಫ್ (FATF) ಸಭೆಯ ಮುನ್ನ ಈ ಕ್ರಮ ಕೈಗೊಂಡಿರುವುದು, ಇದು ಸಂಪೂರ್ಣವಾಗಿ ಜಾಗತಿಕ ಒತ್ತಡದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ಸಾಂಕೇತಿಕ ನಾಟಕ ಎಂಬುದು ಜಗಜ್ಜಾಹೀರಾಗಿದೆ.
ಮಸೂದ್ ಅಜರ್ ಪಾಕಿಸ್ತಾನದಲ್ಲಿಲ್ಲ, ಬದಲಿಗೆ ಅಫ್ಘಾನಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ಪಾಕಿಸ್ತಾನ ಕಳೆದ ಹಲವು ವರ್ಷಗಳಿಂದಲೂ ಸುಳ್ಳುಗಳನ್ನು ಹೇಳುತ್ತಾ ಬಂದಿದೆ. ಆದರೆ, ಭಾರತೀಯ ಗುಪ್ತಚರ ಸಂಸ್ಥೆಗಳು ನೀಡಿರುವ ಖಚಿತ ಮಾಹಿತಿ ಪ್ರಕಾರ, ಕಳದ ಕೆಲವು ತಿಂಗಳುಗಳಿಂದ ಮಸೂದ್ ಅಜರ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್‌ಶಾ ನಗರದ ಸುರಕ್ಷಿತ ತಾಣದಲ್ಲೇ ಅಡಗಿದ್ದಾನೆ ಎಂಬುದು ಸಾಬೀತಾಗಿದೆ. 

ಮುಂಬೈ ದಾಳಿಯ ಉಗ್ರರ ಮೇಲೂ ಕಣ್ಣಾಮುಚ್ಚಲೆ ಆಟ!

ಇಷ್ಟೇ ಅಲ್ಲದೆ, FIA ಬಿಡುಗಡೆ ಮಾಡಿರುವ ಹೊಸ ರೆಡ್ ಬುಕ್ ಪಟ್ಟಿಯಲ್ಲಿ 26/11ರ ಮುಂಬೈ ಭಯೋತ್ಪಾದಕ ದಾಳಿಗೆ ನೆರವಾದ 19 ಶಂಕಿತರ ಹೆಸರುಗಳೂ ಸೇರಿವೆ. ದಾಳಿಕೋರರಿಗೆ ಹಣಕಾಸು ನೆರವು ನೀಡಿದವರು ಹಾಗೂ ಸಮುದ್ರ ಮಾರ್ಗದಲ್ಲಿ ಬದಲು ಬೋಟ್‌ಗಳನ್ನು ವ್ಯವಸ್ಥೆ ಮಾಡಿದವರ ವಿವರಗಳು ಇದರಲ್ಲಿವೆ. 
ಪಟ್ಟಿಯಲ್ಲಿರುವ 19 ಮಂದಿಯ ಪೈಕಿ ಇಬ್ಬರು ಪ್ರಮುಖ ಆರೋಪಿಗಳಾದ ಮೊಹಮ್ಮದ್ ಖಾನ್ ಹಾಗೂ ಅಬ್ದುಲ್ ರೆಹಮಾನ್ ಅವರ ಫೋಟೋಗಳು ಮತ್ತು ಲಷ್ಕರ್-ಎ-ತೈಬಾ (LeT) ಜೊತೆಗಿನ ನಂಟು ಹಾಗೂ ಮುಂಬೈ ದಾಳಿಯಲ್ಲಿನ ಪಾತ್ರದ ವಿವರಗಳನ್ನು ಈಗ ತೆಗೆದುಹಾಕಲಾಗಿದೆ. 
ಕೇವಲ ಹೆಸರನ್ನು ಮಾತ್ರ ಉಳಿಸಿಕೊಂಡು, ಉಳಿದ ಸಾಕ್ಷ್ಯಗಳನ್ನು ಮಾಯ ಮಾಡುವ ಮೂಲಕ ಪಾಕಿಸ್ತಾನ ತನ್ನ ಅಸಲಿ ಮುಖವನ್ನು ಮತ್ತೊಮ್ಮೆ ತೋರಿಸಿದೆ. ಮುಂಬೈ ದಾಳಿಗೆ ಹಣಕಾಸು ಒದಗಿಸಿದ ಆರು ಮಂದಿ ಹಾಗೂ ದೋಣಿ ಕಾರ್ಯಾಚರಣೆಯಲ್ಲಿ ಭಾಗಿಯಾದ 11 ಲಷ್ಕರ್ ಉಗ್ರರು ಕಳೆದ 18 ವರ್ಷಗಳಿಂದ ಪಾಕಿಸ್ತಾನದಲ್ಲೇ ತಲೆಮರೆಸಿಕೊಂಡಿದ್ದರೂ, ಆ ದೇಶದ ಪೊಲೀಸರಿಗೆ ಮಾತ್ರ ಸಿಕ್ಕಿಲ್ಲ.
5 ವರ್ಷಗಳಲ್ಲಿ 35% ಹೆಚ್ಚಿದ ಉಗ್ರರ ಪಟ್ಟಿ!
ಪಾಕಿಸ್ತಾನದ FIA ದತ್ತಾಂಶದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಬರೋಬ್ಬರಿ ಶೇಕಡಾ 35ರಷ್ಟು ಏರಿಕೆಯಾಗಿದೆ. 2021ರಲ್ಲಿ 1,330 ಉಗ್ರರಿದ್ದ ಈ ಪಟ್ಟಿ ಈಗ 1,804ಕ್ಕೆ ಏರಿದೆ. ಅಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಕಡಿಮೆಯಾಗುವ ಬದಲು ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ ಎಂಬುದಕ್ಕೆ ಇದು ನೇರ ಸಾಕ್ಷಿಯಾಗಿದೆ.
ಉಗ್ರರಿಗೆ ಮಂಚೂಣಿಯಲ್ಲಿ ನಿಂತು ಆಶ್ರಯ ನೀಡುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಕಣ್ಣುತಪ್ಪಿಸಲು ಇಂತಹ ನಾಟಕೀಯ ಘೋಷಣೆಗಳನ್ನು ಮಾಡುವುದನ್ನು ರೂಢಿ ಮಾಡಿಕೊಂಡಿದೆ. ಜಾಗತಿಕ ರಾಷ್ಟ್ರಗಳು ಪಾಕ್‌ನ ಈ ಕಪಟ ನಾಟಕವನ್ನು ಅರ್ಥಮಾಡಿಕೊಂಡಿದ್ದು, ಉಗ್ರರ ಹೆಡೆಮುರಿಕಟ್ಟಲು ಕಠಿಣ ಕ್ರಮ ಜರುಗಿಸಬೇಕಿದೆ, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net