

ಚೆನ್ನೈ: ತಮಿಳಿನ ಖ್ಯಾತ ನಟ ಧನುಷ್ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿರುವ ನಡುವೆಯೇ, ನೀವು ಭವಿಷ್ಯದಲ್ಲೇ ಯಾವುದೇ ನಿರ್ಧಾರ ತೆಗೆದುಕೊಂಡರೂ ಸರಿ, ಆದರೆ ವಿಜಯ್ ಸರ್ ರೀತಿ ನಟನೆಯನ್ನು ಬಿಡುವ ನಿರ್ಧಾರ ಮಾತ್ರ ಮಾಡಬೇಡಿ ಎಂದು ನಟಿ ಸಾಯಿ ಪಲ್ಲವಿ ಧನುಷ್‌ಗೆ ಮನಪೂರ್ವಕ ಮನವಿ ಮಾಡಿದ್ದಾರೆ.
ತಮ್ಮ ಮುಂಬರುವ ಚಿತ್ರ 'ಓಂ: ಚಾಪ್ಟರ್ ಒನ್' ಪ್ರಿ ರಿಲೀಸ್ ಇವೆಂಟ್ನಲ್ಲಿ ಮಾತನಾಡಿರುವ ನಟಿ ಸಾಯಿ ಪಲ್ಲವಿ, ತಾವು ಕಾರ್ಯಕ್ರಮದ ಸ್ಥಳಕ್ಕೆ ಬರುವ ದಾರಿಯಲ್ಲಿ ಕಂಡ ರಾಜಕೀಯ ಪಕ್ಷಗಳ ಧ್ವಜಗಳನ್ನು ನೆನಪಿಸಿಕೊಳ್ಳುತ್ತಾ, ಈ ಸಮಾವೇಶವು ಒಂದು ರಾಜಕೀಯ ಸಭೆಯಂತೆಯೇ ಭಾಸವಾಗುತ್ತಿದೆ ಎಂದು ತಮಾಷೆ ಮಾಡಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ಅವರು ಚಲನಚಿತ್ರ ರಂಗದಿಂದ ದೂರ ಸರಿದು ರಾಜಕೀಯಕ್ಕೆ ಪ್ರವೇಶಿಸಿದ ನಿರ್ಧಾರವನ್ನು ಸಾಯಿ ಪಲ್ಲವಿ ಪ್ರಸ್ತಾಪಿಸಿದ್ದು, ಜೀವನದಲ್ಲಿ ನೀವು ಯಾವುದೇ ಹಾದಿಯನ್ನು ಆರಿಸಿಕೊಂಡರೂ, ನಟನೆಯನ್ನು ಮಾತ್ರ ಕೈಬಿಡಬಾರದು. ಧನುಷ್ ಅವರಂತಹ ಪ್ರತಿಭಾವಂತ ಕಲಾವಿದನನ್ನು ಚಿತ್ರರಂಗ ಕಳೆದುಕೊಳ್ಳಬಾರದು ಎಂದಿದ್ದಾರೆ. ಈ ಮಾತುಗಳಿಗೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ಬಂದಿದ್ದು, ಸಭಾಂಗಣವು ಸಾಕಷ್ಟು ಸಮಯ ಜೋರಾದ ಹರ್ಷೋದ್ಗಾರಗಳಿಗೆ ಕಾರಣವಾಗಿದೆ.
ನೀವು ಏನೇ ಮಾಡಿದರೂ, ನಿಮಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ. ನನ್ನೊಳಗಿರುವ ಕಲಾವಿದೆಯ ದೃಷ್ಟಿಯಿಂದ ಹೇಳುವುದಾದರೆ, ವಿಜಯ್ ಸರ್ ರಾಜಕೀಯಕ್ಕೆ ಸೇರಿ ನಟನೆಯನ್ನು ನಿಲ್ಲಿಸಿಬಿಟ್ಟರಲ್ಲ ಎಂಬ ಯೋಚನೆ ನನ್ನಲ್ಲಿ ಸದಾ ಇರುತ್ತದೆ. ಹಾಗಾಗಿ, ಧನುಷ್ ಅವರು ನಟನೆಯನ್ನು ಮುಂದುವರಿಸಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮುಂದುವರೆದು, ಸಿನಿಮಾಗಳಲ್ಲಿ ಧನುಷ್ ಅವರ ಉಪಸ್ಥಿತಿ ತಮಗೆ ಏಕೆ ಮುಖ್ಯ ಎಂಬುದನ್ನೂ ವಿವರಿಸಿರುವ ಸಾಯಿ ಪಲ್ಲವಿ, ಅವರ ಅಭಿನಯ ಮತ್ತು ಅವರು ಪ್ರೇಕ್ಷಕರ ಮುಂದಿಡುವ ವಾಸ್ತವಿಕ ಕಥೆಗಳು ದೀರ್ಘಕಾಲದ ಪ್ರಭಾವ ಬೀರುತ್ತವೆ. 'ಪೊಲ್ಲಾದವನ್' ಚಿತ್ರದ ಬಳಿಕ, ಅನೇಕರು ಅದೇ ರೀತಿಯ ಬೈಕ್ ಖರೀದಿಸಿದರು ಮತ್ತು ಆ ಶೈಲಿ ಹಾಗೂ ವರ್ತನೆಯನ್ನು ಅಳವಡಿಸಿಕೊಂಡರು. ಇಂತಹ ಪ್ರಭಾವವನ್ನು ಉಂಟುಮಾಡಲು ಒಬ್ಬ ನಟ ಸಿನಿಮಾ ರಂಗದಲ್ಲಿರಬೇಕು ಎಂದಿದ್ದಾರೆ.
ಧನುಷ್ ಕುರಿತು ಸಾಯಿ ಪಲ್ಲವಿ ಹೊಗಳಿಕೆಯ ಮಾತುಗಳು ಧನುಷ್ ಅಭಿಮಾನಿಗಳಿಗೆ ಭಾರಿ ಖುಷಿ ಕೊಟ್ಟಿವೆ. ಅಷ್ಟೇ ಅಲ್ಲದೇ, ಅವರ ಮಾತಿಗೆ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಂದ ಭಾರಿ ಹರ್ಷೋದ್ಗಾರ ವ್ಯಕ್ತವಾಗಿದೆ. ಇನ್ನೂ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ (ಏಜೆನ್ಸೀಸ್).