Arnab Cyclone: ಬಂಗಾಳ ಕೊಲ್ಲಿಯಲ್ಲಿ ರಚನೆಗೊಂಡಿರುವ ‘ಅರ್ನಬ್’ ಚಂಡಮಾರುತದ ಅಬ್ಬರದ ಆತಂಕ ಸದ್ಯ ಕರಾವಳಿ ರಾಜ್ಯಗಳಲ್ಲಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ವರುಣಾರ್ಭಟದ ಮುನ್ಸೂಚನೆ ಲಭಿಸಿದೆ. ಬುಧವಾರ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.
ಶಾಲಾ-ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆಯನ್ನು ತಾತ್ಕಾಲಿಕ ಮಟ್ಟಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸದಂತೆ ಮತ್ತು ಮೂಲಸೌಕರ್ಯಗಳಿಗೆ ಕನಿಷ್ಠ ಹಾನಿಯಾಗದಂತೆ ನೋಡಿಕೊಳ್ಳಲು ರಕ್ಷಣಾ ಪಡೆಗಳು ಕಡಲತೀರಗಳಲ್ಲಿ ತೀರ ನಿಗಾ ವಹಿಸಿವೆ. ಚಂಡಮಾರುತದ ಪರಿಣಾಮ ಎದುರಿಸಲು ಎರಡೂ ರಾಜ್ಯಗಳ ಆಡಳಿತ ಸಜ್ಜಾಗಿದೆ.
ಕಳೆದ ಕೆಲವು ಗಂಟೆಗಳಿಂದ ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಈ ಸೈಕ್ಲೋನ್, ಪ್ರಸ್ತುತ ವಿಶಾಖಪಟ್ಟಣದಿಂದ ಆಗ್ನೇಯಕ್ಕೆ 650 ಕಿ.ಮೀ, ಕಾಕಿನಾಡದಿಂದ 730 ಕಿ.ಮೀ, ಮಚಲಿಪಟ್ಟಣದಿಂದ 830 ಕಿ.ಮೀ ಮತ್ತು ಬಾಪಟ್ಲಾದಿಂದ 910 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ, ಈ ಚಂಡಮಾರುತವು ತೀವ್ರವಾಗಿ, ನಂತರ ಅತ್ಯಂತ ತೀವ್ರವಾದ ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಇದು ಅಕ್ಟೋಬರ್ 28 (ಬುಧವಾರ) ವೇಳೆಗೆ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ಸರ್ಕಾರಗಳು ಗಂಭೀರ ಹಾನಿಯನ್ನು ತಪ್ಪಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜತೆಗೆ ಜನರಿಗೆ ಅಲರ್ಟ್ ಮಾಡಿದೆ.
ಅಷ್ಟಕ್ಕೂ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿರುವ ಈ ಚಂಡಮಾರುತಕ್ಕೆ 'ಸೈಕ್ಲೋನ್ ಅರ್ನಾಬ್' ಎಂದು ಹೆಸರಿಸಿಟ್ಟಿರುವುದೇಕೆ? ಎಂಬ ಕೆಲವರ ಕುತೂಹಲಕಾರಿ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ. ಸಮುದ್ರದಲ್ಲಿ ರೂಪುಗೊಳ್ಳುವ ಚಂಡಮಾರುತಕ್ಕೆ 'ಅರ್ನಾಬ್' ಎಂಬ ಹೆಸರಿಗೆ ವಿಶೇಷ ಅರ್ಥವಿದೆ. ಬಂಗಾಳಿ ಭಾಷೆಯಲ್ಲಿ 'ಅರ್ನಾಬ್' ಎಂದರೆ ಸಮುದ್ರ ಅಥವಾ ಸಾಗರ. ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರ) ರೂಪುಗೊಳ್ಳುವ ಸೈಕ್ಲೋನ್ಗೆ ಹೆಸರಿಡುವ ಪದ್ಧತಿಯ ಪ್ರಕಾರ, ಬಾಂಗ್ಲಾದೇಶ ಈ ಬಾರಿ ಅರ್ನಾಬ್ ಹೆಸರನ್ನು ಸೂಚಿಸಿದೆ.
ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ಯುರೋಪ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ಜಂಟಿಯಾಗಿ ಉತ್ತರ ಹಿಂದೂ ಮಹಾಸಾಗರದ ಜಲಾನಯನ ಪ್ರದೇಶದಲ್ಲಿ 13 ದೇಶಗಳನ್ನು ಒಳಗೊಂಡಿರುವ ಫಲಕವನ್ನು ಆಯೋಜಿಸುತ್ತದೆ. ಇದರಲ್ಲಿ ಸದಸ್ಯ ರಾಷ್ಟ್ರಗಳನ್ನಾಗಿ ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುಎಇ, ಯೆಮೆನ್ ಮತ್ತು ಇರಾನ್ ಅನ್ನು ಸೇರಿಸಲಾಗಿದೆ.
ಈ 13 ದೇಶಗಳು ತಲಾ 13 ಹೆಸರುಗಳ ವಿಶೇಷ ಪಟ್ಟಿಯನ್ನು ಸಿದ್ಧಪಡಿಸಿದ್ದು, ಒಟ್ಟು 169 ಹೆಸರುಗಳಿವೆ. ವ್ಯವಸ್ಥಿತ ರೀತಿಯಲ್ಲಿ, ಸರಣಿ ಸಂಖ್ಯೆಗಳ ಆಧಾರದ ಮೇಲೆ ಚಂಡಮಾರುತಗಳಿಗೆ ಈ ಪಟ್ಟಿಯಿಂದ ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ. ಸೈಕ್ಲೋನ್ಗಳು ಸಮುದ್ರದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಅಥವಾ ಪದೇ ಪದೇ ರೂಪುಗೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ, ಗೊಂದಲವನ್ನು ತಪ್ಪಿಸಲು ಮತ್ತು ಅವುಗಳು ಯಾವುವು ಎಂಬುದನ್ನು ಸುಲಭವಾಗಿ ಪತ್ತೆಹಚ್ಚಲು ಈ ಹೆಸರುಗಳು ಮುಖ್ಯ ಎನ್ನಲಾಗಿದೆ,(ಏಜೆನ್ಸೀಸ್).