ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಒಡಕು; ಎರಡೂ ಬಣಗಳ ವಾದ ಆಲಿಸಿದ ನಂತರವಷ್ಟೇ ಅಂತಿಮ ನಿರ್ಧಾರ ಅಂದ್ರಾ ಸ್ಪೀಕರ್​ ಓಂ ಬಿರ್ಲಾ..? | Trinamool Congress

Trinamool Congress
Trinamool Congress
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷದೊಳಗಿನ ರಾಜಕೀಯ ಬಿಕ್ಕಟ್ಟು ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಟಿಎಂಸಿ ಪಕ್ಷದ ಬಂಡಾಯ ಸಂಸದರ ಕುರಿತಾದ ನಿರ್ಧಾರವನ್ನು ಸಂಬಂಧಪಟ್ಟ ಎಲ್ಲಾ ಪಕ್ಷಗಳ ವಾದವನ್ನು ಆಲಿಸಿದ ನಂತರವಷ್ಟೇ ತೆಗೆದುಕೊಳ್ಳಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ ಎನ್ನಲಾಗಿದ್ದು, ಯಾವುದೇ ತೀರ್ಪು ನೀಡುವ ಮುನ್ನ ಸಭೆಗೆ ಹಾಜರಾಗಿ ತಮ್ಮ ನಿಲುವನ್ನು ಮಂಡಿಸುವಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರವಾಗಿರುವ ಟಿಎಂಸಿ ಸಂಸದರ ಗುಂಪಿಗೆ ಸ್ಪೀಕರ್ ಕಚೇರಿಯು ಪತ್ರ ಬರೆದಿದೆ ಎಂದು ಮೂಲಗಳ ತಿಳಿಸಿರುವುದಾಗಿ ವರದಿಯಾಗಿದೆ.
ಸುಮಾರು 20 ಸಂಸದರನ್ನೊಳಗೊಂಡ ಟಿಎಂಸಿಯ ಬಂಡಾಯ ಬಣ ಸ್ಪೀಕರ್ ಅವರನ್ನು ಭೇಟಿಯಾಗಿ, ತಮ್ಮ ಗುಂಪಿಗೆ ಅಧಿಕೃತ ಮಾನ್ಯತೆ ನೀಡಬೇಕು ಮತ್ತು ತಮ್ಮನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ (NCP) ವಿಲೀನಗೊಳಿಸಲು ಅನುಮತಿ ನೀಡಬೇಕು ಎಂದು ಪತ್ರ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.  ಸ್ಪೀಕರ್ ಅವರು ಮೂಲ ಪಕ್ಷದ ನಾಯಕತ್ವ ಮತ್ತು ಬಂಡಾಯ ಗುಂಪು ಎರಡರ ವಾದವನ್ನೂ ಆಲಿಸಿ, ವಿಲೀನ ಅಥವಾ ಮಾನ್ಯತೆಯ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ. ಇದರೊಂದಿಗೆ ಈ ವಿಷಯದ ಕುರಿತು ಅವರು ಕಾನೂನು ಅಭಿಪ್ರಾಯವನ್ನೂ ಪಡೆಯುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಜುಲೈ ಮೂರನೇ ವಾರದಲ್ಲಿ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಟಿಎಂಸಿಯಲ್ಲಿ ಹೆಚ್ಚಾಯ್ತು ಒಡಕು...

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ 64 ಶಾಸಕರ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದ್ದು, ಅಲ್ಲಿನ ಸ್ಪೀಕರ್ ರಿತಬ್ರತಾ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾನ್ಯ ಮಾಡಿದ್ದಾರೆ. ಲೋಕಸಭೆಯಲ್ಲಿ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 20ಕ್ಕೂ ಹೆಚ್ಚು ಸಂಸದರ ಬಂಡಾಯ ಗುಂಪು ತಮಗೆ ಅಧಿಕೃತ ಮಾನ್ಯತೆ ಕೋರಿದೆ. ಆದರೆ, ಈ ಬಂಡಾಯ ಗುಂಪಿಗೆ ಯಾವುದೇ ರೀತಿಯ ಮಾನ್ಯತೆ ನೀಡಬಾರದು ಎಂದು ಪಕ್ಷದ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್‌ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲೂ ಈ ಬಿಕ್ಕಟ್ಟು ಮುಂದುವರಿದಿದ್ದು, ಈಗಾಗಲೇ ನಾಲ್ವರು ಟಿಎಂಸಿ ಸಂಸದರು ರಾಜೀನಾಮೆ ನೀಡಿರುವುದು ಸಂಸತ್ತಿನಲ್ಲಿ ಪಕ್ಷದ ಆಂತರಿಕ ಕಲಹವನ್ನು ಬಹಿರಂಗಪಡಿಸಿದೆ. ಇದರ ನಡುವೆ, ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುದೀಪ್ ಬಂಡೋಪಾಧ್ಯಾಯ ಅವರು, ಸ್ಪೀಕರ್ ನಿರ್ಧಾರ ಪ್ರಕಟಿಸಿದ ನಂತರ ತಮ್ಮ ಬಣವು ಪಕ್ಷದ ಚಿಹ್ನೆಗಾಗಿ ಕಾನೂನು ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net