ಹೋಗುವವರಿದ್ದರೆ ಹೋಗಲಿ, ನಾನು ತಡೆಯಲ್ಲ!...ನಾಳೆ ನಮ್ಮದೇ ಎನ್ನುತ್ತಾ ಬಾಗಿಲು ತೆರೆದಿಟ್ಟ ಠಾಕ್ರೆ | Uddhav Thackeray

Uddhav Thackeray >  ಶಿವಸೇನಾ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ
Uddhav Thackeray > ಶಿವಸೇನಾ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ
Published on
ಮುಂಬೈ: ಶಿವಸೇನಾ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರು ತಮ್ಮ ಪಕ್ಷದ ಸಂಸದರ ನಿಷ್ಠೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ ಕೊನೆಗೂ ಮೌನ ಮುರಿದಿದ್ದು, ಪಕ್ಷದಲ್ಲಿ ಉಳಿಯಲು ಇಷ್ಟವಿಲ್ಲದ ಯಾರನ್ನೂ ತಾವು ಬಲವಂತವಾಗಿ ತಡೆದು ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಂಸದರ ಪ್ರಮುಖ ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, 2022ರಲ್ಲಿ ನಡೆದ ಶಿವಸೇನೆಯ ವಿಭಜನೆಯನ್ನು ನೆನಪಿಸಿಕೊಂಡರು. ಅಂದು ಬಂಡಾಯದ ಮುನ್ಸೂಚನೆ ತಮಗೆ ಮೊದಲೇ ಸಿಕ್ಕಿದ್ದರೂ, ಯಾರ ಮೇಲೂ ತಾವು ಒತ್ತಡ ಹೇರಲಿಲ್ಲ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿರುವ ಉದ್ಧವ್​ ಠಾಕ್ರೆ, ಇಂದಿನ ದಿನ ನಮ್ಮದಾಗಿಲ್ಲದೇ ಇರಬಹುದು, ಆದರೆ ಮುಂಬರುವ ದಿನಗಳು ಖಂಡಿತವಾಗಿಯೂ ನಮ್ಮದೇ ಆಗಿರುತ್ತವೆ, ಅಲ್ಲಿಯವರೆಗೆ ನಾವು ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದು ಹೋದವರು ಮುಂದೊಂದು ದಿನ ತಮ್ಮ ನಿರ್ಧಾರದ ಬಗ್ಗೆ ಖಂಡಿತವಾಗಿ ಪಶ್ಚಾತ್ತಾಪಪಡುತ್ತಾರೆ, ಆದರೆ ಆಗ ಪರಿಸ್ಥಿತಿ ಕೈಮೀರಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಅಂದು ಅಖಂಡ ಶಿವಸೇನೆಯಿಂದ 40 ಶಾಸಕರು ಹೊರನಡೆದಾಗ, ತಮಗೆ ಎಲ್ಲಾ ಬೆಳವಣಿಗೆಗಳ ಮಾಹಿತಿ ಇತ್ತಾದರೂ ತಾವು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದಿರುವ ಉದ್ಧವ್ ಠಾಕ್ರೆ, ಜನಸಾಮಾನ್ಯರಿಗೆ ತಿಳಿಯುತ್ತಿದ್ದ ವಿಷಯಗಳು ಮುಖ್ಯಮಂತ್ರಿಯಾಗಿದ್ದ ತಮಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬಂಡಾಯದ ಮುನ್ಸೂಚನೆ ಸಿಕ್ಕಿತ್ತು, ಆದರೆ ಯಾರ ಮೇಲೂ ಒತ್ತಡ ಹೇರಲಿಲ್ಲ ಅಥವಾ ಅವರ ಹಗರಣಗಳ ತನಿಖೆಯ ಫೈಲ್‌ಗಳನ್ನು ಓಪನ್ ಮಾಡಿಸಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಮನಸ್ಸಿಲ್ಲದವರನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ, ಹೋಗುವವರಿಗೆ ಮುಕ್ತ ಅವಕಾಶವಿದ್ದು ಅವರಿಗೆ ತಾವು ಒಳ್ಳೆಯದನ್ನೇ ಬಯಸುವುದಾಗಿ ಠಾಕ್ರೆ ತಿಳಿಸಿದ್ದಾರೆ.

ವದಂತಿಗೆ ಕಾರಣವೇನು..?

ಈ ಸಭೆಯಲ್ಲಿ ಸಂಸದರ ಗೈರುಹಾಜರಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಶಿವಸೇನಾ (UBT) ಹೊಂದಿರುವ ಒಟ್ಟು ಒಂಬತ್ತು ಲೋಕಸಭಾ ಸದಸ್ಯರ ಪೈಕಿ ಕೇವಲ ನಾಲ್ವರು ಮಾತ್ರ ಮುಂಬೈನ ಸಭೆಗೆ ಖುದ್ದಾಗಿ ಹಾಜರಾಗಿದ್ದರು. ಇದರಿಂದಾಗಿ ಸಂಸದರನ್ನು ಸೆಳೆಯಲು ಎದುರಾಳಿಗಳು ಆಪರೇಷನ್ ಟೈಗರ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಜೋರಾಗಿವೆ.
ಸಂಸದ ಸಂಜಯ್ ರಾವತ್ ನೀಡಿರುವ ಮಾಹಿತಿ ಪ್ರಕಾರ, ಅರವಿಂದ್ ಸಾವಂತ್, ಅನಿಲ್ ದೇಸಾಯಿ, ರಾಜಾಭಾವು ವಾಜೆ ಮತ್ತು ಸಂಜಯ್ ಪಾಟೀಲ್ ಅವರು ಮಾತ್ರ ಸಭೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದರು. ಇನ್ನುಳಿದಂತೆ ಓಂಪ್ರಕಾಶ್ ರಾಜೇ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ನಾಗೇಶ್ ಬಾಪುರಾವ್ ಪಾಟೀಲ್ ಅಷ್ಟಿಕರ್ ಮತ್ತು ಸಂಜಯ್ ದೇಶ್‌ಮುಖ್ ಅವರು ಆನ್‌ಲೈನ್ (ವರ್ಚುವಲ್) ಮೂಲಕ ಸಭೆಗೆ ಜಾಯಿನ್ ಆಗಿದ್ದರು. ಮತ್ತೊಬ್ಬ ಸಂಸದರಾದ ಸಂಜಯ್ ಜಾಧವ್ ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಮುಂಬೈನಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ವದಂತಿ ತಳ್ಳಿಹಾಕಿದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್

ಈ ಪಕ್ಷಾಂತರದ ಸುದ್ದಿಯನ್ನು ಶಾಸಕ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಒಂಬತ್ತೂ ಸಂಸದರು ಪಕ್ಷದೊಂದಿಗೇ ಗಟ್ಟಿಯಾಗಿದ್ದಾರೆ ಎಂದು ಸೋಮವಾರ ಪುಣೆಯಲ್ಲಿ ಮಾಧ್ಯಮಗಳಿಗೆ ತಿಳಿಸಿದ ಆದಿತ್ಯ ಠಾಕ್ರೆ, ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲಾ ಸಂಸದರಿಗಾಗಿ ಹಗಲಿರುಳು ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಿದ್ದರು ಎಂಬುದನ್ನು ನೆನಪಿಸಿದ ಅವರು, ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು. 
ಸಂಜಯ್ ರಾವತ್ ಕೂಡ ಪಕ್ಷದ ಸಂಸದರ ನಿಷ್ಠೆಯನ್ನು ಶ್ಲಾಘಿಸಿದ್ದು, ಈ ಹಿಂದೆ ಪಕ್ಷ ಒಡೆದಾಗ ಹೋಗಬೇಕಾದವರು ಹೋಗಿದ್ದಾರೆ, ಈಗ ಉಳಿದಿರುವವರ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ. ಇದೇ ವೇಳೆ ವಿರೋಧಿಗಳ ಆಪರೇಷನ್ ಟೈಗರ್ ಯೋಜನೆಗೆ ಟಾಂಗ್ ನೀಡಿದ ಅವರು, ತಾವು ಎದುರಾಳಿಗಳ ವಿರುದ್ಧ ಆಪರೇಷನ್ ವುಲ್ಫ್ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಿಂಧೆ ಬಣದಿಂದ ಮುಕ್ತ ಆಹ್ವಾನ

ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ಶಿಂಧೆ ಬಣದ ಶಿವಸೇನಾ ಸಂಸದ ಹಾಗೂ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್, ಉದ್ಧವ್ ಬಣದ ಹಲವು ಸಂಸದರು ಪಕ್ಷದ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ ಮತ್ತು ಅವರು ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಯುಬಿಟಿ ಬಣದ ಸಂಸದರೆಲ್ಲರೂ ತಮಗೆ ಹಳೆಯ ಸ್ನೇಹಿತರಾಗಿದ್ದು, ಹಿಂದೆ ಜೊತೆಯಾಗಿ ಕೆಲಸ ಮಾಡಿರುವುದಾಗಿ ನೆನಪಿಸಿಕೊಂಡ ಅವರು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಅಸಮಾಧಾನಗೊಂಡಿದ್ದ ಮಾದರಿಯಲ್ಲೇ ಇಲ್ಲೂ ಸಂಸದರು ಬೇಸತ್ತಿದ್ದಾರೆ ಎಂದರು. ತಮ್ಮ ಬಣವೇ ನಿಜವಾದ ಶಿವಸೇನೆಯಾಗಿದ್ದು, ಬಾಳಾಸಾಹೇಬ್ ಅವರ ತತ್ವಗಳ ಮೇಲೆ ಕೆಲಸ ಮಾಡುತ್ತಿದೆ ಎನ್ನುತ್ತಾ, ಬೇಸರದಲ್ಲಿರುವ ಉದ್ಧವ್ ಬಣದ ಸಂಸದರಿಗೆ ಪಕ್ಷಕ್ಕೆ ಬರುವಂತೆ ಬಹಿರಂಗ ಆಹ್ವಾನ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net