Wedding Tragedy: ಮದುವೆ ಮುಗಿದ ಕೆಲವೇ ಗಂಟೆಗಳಲ್ಲಿ ತಂದೆಯ ದಾರುಣ ಅಂತ್ಯ… ಕಾರಣ ಏನು ಗೊತ್ತಾ?

Wedding Tragedy
Wedding Tragedy
Published on
ನಂದಿಗಾಮ (ತೆಲಂಗಾಣ): ಅದು ಆ ಬಡ ಕುಟುಂಬದಲ್ಲಿ ಸಂಭ್ರಮದ ಸಡಗರ ಮನೆ ಮಾಡಿದ್ದ ಕ್ಷಣ. ಪ್ರಾಯಕ್ಕೆ ಬಂದ ಮಗಳನ್ನು ಉತ್ತಮ ಮನೆತನಕ್ಕೆ ಕೊಟ್ಟು ಮದುವೆ ಮಾಡಬೇಕೆಂಬ ತಂದೆಯ ಕನಸು ನನಸಾಗಿತ್ತು. ಬೆಳಗ್ಗೆಯಷ್ಟೇ ಮಗಳ ಕರಗ್ರಹಣ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಆದರೆ, ಆ ಸಂಭ್ರಮ ರಾತ್ರಿಯಾಗುವಷ್ಟರಲ್ಲಿ ಆ ಮನೆಯ ಪಾಲಿಗೆ ಎಣಿಸಲಾಗದ ಕರಾಳ ಶೋಕವಾಗಿ(Wedding Tragedy) ಮಾರ್ಪಾಟಾಗಿದೆ.
ಹೌದು, ಮಗಳ ಮದುವೆಗೆಂದು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸಾಕಿದ್ದ ಕುರಿಗಳನ್ನು ಮಾರಾಟ ಮಾಡಿದ ನೋವಿನಲ್ಲೇ ಕುರಿಗಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತೆಲಂಗಾಣದ ನವೀಪೇಟಾ ಮಂಡಲದ ನಂದಿಗಾಮದಲ್ಲಿ ನಡೆದಿದೆ.

ಘಟನೆಯ ವಿವರ

ನಂದಿಗಾಮ ನಿವಾಸಿಗಳಾದ ಎಲ್ಕಾ ದೇವಣ್ಣ ಮತ್ತು ಸಾಯಮ್ಮ ದಂಪತಿಗೆ ಒಬ್ಬಳು ಮಗಳು ಮತ್ತು ಇಬ್ಬರು ಪುತ್ರರಿದ್ದಾರೆ. ವೃತ್ತಿಯಲ್ಲಿ ಕುರಿಗಾಯಿಯಾಗಿದ್ದ ದೇವಣ್ಣ ಅವರಿಗೆ ತಮ್ಮ ಕುರಿಗಳೆಂದರೆ ಅಪಾರ ಪ್ರೀತಿ. ನೂರಕ್ಕೂ ಹೆಚ್ಚು ಕುರಿಗಳನ್ನು ಹೊಂದಿದ್ದ ಅವರು, ತಮ್ಮ ಇಡೀ ಜೀವನವನ್ನೇ ಅವುಗಳ ಆರೈಕೆಯಲ್ಲಿ ಕಳೆಯುತ್ತಿದ್ದರು. ಮಗಳಾದ ಪ್ರವಳಿಕಾಳ ವಿವಾಹವನ್ನು ಕಾಮರೆಡ್ಡಿ ಜಿಲ್ಲೆಯ ನಸ್ರುಲ್ಲಾಬಾದ್ ಮಂಡಲದ ಅಂಕೋಲ್ ಗ್ರಾಮದ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು.
ಬಡತನದ ನಡುವೆಯೂ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂಬ ಹಂಬಲ ದೇವಣ್ಣ ಅವರದ್ದಾಗಿತ್ತು. ಮದುವೆಯ ಖರ್ಚು ವೆಚ್ಚಗಳಿಗಾಗಿ ಬೇರೆ ದಾರಿ ಕಾಣದೆ, ಅನಿವಾರ್ಯವಾಗಿ ತಾನು ಸಾಕಿದ್ದ 30ಕ್ಕೂ ಹೆಚ್ಚು ಕುರಿಗಳನ್ನು ಇತ್ತೀಚೆಗೆ ಮಾರಾಟ ಮಾಡಿದ್ದರು. ಕುರಿಗಳನ್ನು ಮಾರಾಟ ಮಾಡುವುದು ಅವರಿಗೆ ಇಷ್ಟವಿಲ್ಲದಿದ್ದರೂ, ಮಗಳ ಭವಿಷ್ಯಕ್ಕಾಗಿ ಈ ಕಠಿಣ ನಿರ್ಧಾರ ತಗೆದುಕೊಂಡಿದ್ದರು.

ಖಾಲಿ ಕೊಟ್ಟಿಗೆ ಕಂಡು ಮರುಗಿದ ಜೀವ

ಕಳೆದ ಭಾನುವಾರ ಬೆಳಿಗ್ಗೆ ಮಗಳ ವಿವಾಹ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಅಂಕೋಲ್ ಗ್ರಾಮದಲ್ಲಿ ನೆರವೇರಿತು. ಎಲ್ಲವೂ ಸುಸೂತ್ರವಾಗಿ ಮುಗಿದಿತ್ತು. ಅಂದು ರಾತ್ರಿ ಸುಮಾರು 9:30ರ ವೇಳೆಗೆ ದೇವಣ್ಣ ಮತ್ತು ಅವರ ಕೆಲವು ಸಂಬಂಧಿಕರು ನವದಂಪತಿಗಳಿಗಿಂತ ಮುಂಚಿತವಾಗಿ ನಂದಿಗಾಮದ ತಮ್ಮ ಮನೆಗೆ ಬಂದರು. ಮನೆಗೆ ಬಂದ ಕೂಡಲೇ ದೇವಣ್ಣ ಅವರು ಕುರಿಗಳನ್ನು ಕಟ್ಟುವ ಕೊಟ್ಟಿಗೆಯತ್ತ ತೆರಳಿದರು. ಆದರೆ, ಸದಾ ಕುರಿಗಳ ಸದ್ದಿನಿಂದ ತುಂಬಿರುತ್ತಿದ್ದ ಕೊಟ್ಟಿಗೆ ಇಂದು ಕುರಿಗಳ ಮಾರಾಟದಿಂದಾಗಿ ಅರ್ಧದಷ್ಟು ಖಾಲಿಯಾಗಿತ್ತು.
ಮಗಳ ಮದುವೆಗಾಗಿ ತಾನು ಸಾಕಿದ್ದ ಮೂಕ ಪ್ರಾಣಿಗಳನ್ನು ಕಳೆದುಕೊಂಡೆನಲ್ಲ ಎಂಬ ನೋವು ಮತ್ತು ಖಾಲಿಯಾದ ಆವರಣವನ್ನು ನೋಡಿ ದೇವಣ್ಣ ತೀವ್ರ ಮಾನಸಿಕ ಅಸಮಾಧಾನಕ್ಕೆ ಒಳಗಾದರು ಎಂದು ಹೇಳಲಾಗಿದೆ. ಇದೇ ಬೇಸರದಲ್ಲಿ ಮನೆಯೊಳಗೆ ತೆರಳಿದ ಅವರು, ಯಾರೂ ಇಲ್ಲದ ಸಮಯದಲ್ಲಿ ಬಾಗಿಲು ಹಾಕಿಕೊಂಡು ದೂಲಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಭ್ರಮದ ಮನೆಯಲ್ಲಿ ಆಕ್ರಂದನ

ಸ್ವಲ್ಪ ಸಮಯದ ನಂತರ ವಧು-ವರರು ಮತ್ತು ಮನೆಯ ಇತರ ಸದಸ್ಯರು ಸಂಭ್ರಮದಿಂದ ಮನೆಗೆ ಬಂದರು. ಆದರೆ ಮನೆಯಲ್ಲಿ ದೇವಣ್ಣ ಅವರ ಶವ ನೇಣು ಸ್ಥಿತಿಯಲ್ಲಿರುವುದನ್ನು ಕಂಡು ಎಲ್ಲರೂ ದಿಗ್ಭ್ರಮೆಗೊಂಡರು. ಗಂಡನ ಮನೆಗೆ ಹೋಗಬೇಕಿದ್ದ ಮಗಳು ತಂದೆಯ ಸಾವು ಕಂಡು ಕಣ್ಣೀರು ಹಾಕುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕರುಳು ಹಿಂಡುವಂತಿತ್ತು. ಹಸೆಮಣೆ ಏರಿ ಸುಖಜೀವನ ಆರಂಭಿಸಬೇಕಿದ್ದ ನವಜೋಡಿಗೆ ಮೊದಲ ದಿನವೇ ತಂದೆಯ ಅಗಲಿಕೆಯ ಬರಸಿಡಿಲು ಬಡಿದಂತಾಗಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗಳ ಮದುವೆ ಮುಗಿಸಿದ ದಿನವೇ ತಂದೆ ಈ ರೀತಿ ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಬಡ ಕುರಿಗಾಯಿಯೊಬ್ಬ ಮಗಳ ಮದುವೆಗಾಗಿ ತನ್ನ ಜೀವನೋಪಾಯವನ್ನೇ ತ್ಯಾಗ ಮಾಡಿ, ಕೊನೆಗೆ ಅದೇ ನೋವಿನಲ್ಲಿ ಜೀವ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net