ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಎಲ್ಲವೂ ಛಿದ್ರ! ಒಂದು ಶ್ವಾನದಿಂದ ಮುರಿದುಬಿತ್ತು ಅದ್ಧೂರಿ ಲವ್​ ಮ್ಯಾರೇಜ್​ | Wedding

ಮುರಿದುಬಿದ್ದ ಮದುವೆ
ಮುರಿದುಬಿದ್ದ ಮದುವೆ
Published on

ಪ್ರಮುಖ ಮುಖ್ಯಾಂಶಗಳು

  • ಒಂದು ಶ್ವಾನದಿಂದ ಮುರಿದುಬಿತ್ತು ಲವ್ ಕಮ್​ ಅರೆಂಜ್​​ ಮ್ಯಾರೇಜ್​
  • ಎರಡೂ ಕುಟುಂಬಸ್ಥರ ನಡುವೆ ಮದುವೆ ಮಂಟಪದಲ್ಲೇ ಮಾರಾಮಾರಿ
  • ಮದುವೆ ಮುರಿದುಬಿತ್ತು, ಆತನನ್ನು ಮದುವೆ ಆಗೋದಿಲ್ಲ ಎಂದ ಸಾಕು ನಾಯಿ ಒಡತಿ
ಉತ್ತರ ಪ್ರದೇಶ: ವಧು ಇರಲಿ, ವರನೇ ಇರಲಿ ಮದುವೆಗೂ ಮುನ್ನ ಅಥವಾ ಮದುವೆ ಬಳಿಕ ಅನ್ಯರೊಂದಿಗೆ ಪ್ರೇಮ ಸಂಬಂಧ ಇಟ್ಟುಕೊಂಡ ವಿಷಯ ಏನಾದರೂ ಹಸಮಣೆ ಏರುವ ಸಮಯಕ್ಕೆ ಗೊತ್ತಾದರೆ, ಆ ಮದುವೆ ಮುರಿದುಬೀಳುವ ಎಲ್ಲಾ ಸಾಧ್ಯತೆಗಳಿರುತ್ತದೆ. ಮುರಿದು ಬಿದ್ದ ನಿದರ್ಶನಗಳು ಸಾಕಷ್ಟಿವೆ. ಇದರಲ್ಲಿ ಕೆಲವು ವರದಕ್ಷಿಣೆ ವಿಚಾರಕ್ಕೂ ಕೊನೆ ಘಳಿಗೆಯಲ್ಲಿ ಅಂತ್ಯಗೊಂಡಿದ್ದು ಇವೆ. ಆದರೆ, ಇಲ್ಲೊಂದು ಅದ್ಧೂರಿ ವಿವಾಹ ಕೇವಲ ಒಂದು ಶ್ವಾನದಿಂದ ಅರ್ಧಕ್ಕೆ ನಿಂತು ಹೋಯಿತು ಎಂಬ ಸಂಗತಿ ಸದ್ಯ ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಎರಡೂ ಕುಟುಂಬಗಳ ಮಧ್ಯೆ ಮಾರಾಮಾರಿ

ಈ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಖಾಗಾ ಕೊಟ್ವಾಲಿ ಪ್ರದೇಶದಲ್ಲಿ ವರದಿಯಾಗಿದ್ದು, ಒಂದಷ್ಟು ವರ್ಷಗಳಿಂದ ಪ್ರೀತಿಸಿದ ಸುಮಿತ್​​ ಕೇಶರ್ವನಿ ಜೋಡಿ, ಮನೆಯವರು ಆರಂಭದಲ್ಲಿ ಒಪ್ಪಲಿಲ್ಲ ಎಂದು ಮನೆಯಿಂದ ಓಡಿ ಹೋಗಿ, ವಿವಾಹವಾಗಲು ಇಚ್ಛಿಸಿದ್ದರು. ಆದರೆ, ಕಡೆಗೆ ಎರಡೂ ಮನೆಯವರು ಒಪ್ಪಿಗೆ ನೀಡಿದ ಮೇರೆಗೆ ಅದ್ಧೂರಿಯಾಗಿ ಮಂಟಪದಲ್ಲಿ ಮದುವೆ ಆಗಲು ಸಿದ್ಧತೆ ಮಾಡಿಕೊಂಡಿದ್ದರು. ಅಂತೆಯೇ, ಛತ್ರಕ್ಕೆ ಬಂದ ವಧು ಮತ್ತು ವರನ ಕುಟುಂಬದವರು ಮದುವೆ ಮಂಟಪದಲ್ಲಿಯೇ ಹಿಗ್ಗಾಮುಗ್ಗಾ ಬಡಿದಾಡಿಕೊಂಡಿರುವುದು ಸ್ವತಃ ಸ್ಥಳೀಯ ಪೊಲೀಸರಿಗೆ ಅಚ್ಚರಿ ಮೂಡಿಸಿದೆ.

ಶ್ವಾನಕ್ಕೆ ಹೊಡೆದಿದ್ದೇ ಕಾರಣ

ಬೆಳಗ್ಗೆ 4 ಗಂಟೆಯಿಂದ ಮದುವೆ ಕಾರ್ಯಗಳು ಆರಂಭಗೊಂಡಿದ್ದು, ವಧು ಮನೆಯ ಸಾಕು ನಾಯಿಯನ್ನು ಮಂಟಪದ ಬದಿಯಲ್ಲಿ ಕಟ್ಟಲಾಗಿತ್ತು. ಶಾಸ್ತ್ರಗಳ ನಡೆಯುತ್ತಿದ್ದ ವೇಳೆ ಶ್ವಾನ ಪದೇ ಪದೇ ಬೊಗಳಲು ಶುರುಮಾಡಿದೆ. ಇದರಿಂದ ಕುಪಿತಗೊಂಡ ವರನ ಕಡೆಯವರು, ಏಕಾಏಕಿ ನಾಯಿಗೆ ಥಳಿಸಿದ್ದಾರೆ. ತಕ್ಷಣವೇ, ವಧು ಮತ್ತು ವರನ ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಎರಡೂ ಕುಟುಂಬಗಳು ಮಂಟಪದಲ್ಲೇ ಕುರ್ಚಿಗಳಿಂದಲೇ ಬಡಿದಾಡಿಕೊಂಡಿದ್ದಾರೆ.

ಎಲ್ಲವೂ ವಾಪಾಸ್​

ಈ ವೇಳೆ ಎರಡೂ ಕುಟುಂಬವನ್ನು ಸಮಾಧಾನಕ್ಕೆ ತಂದ ಸ್ಥಳೀಯರು, ಪಂಚಾಯಿತಿ ನಡೆಸಿ ಮುಂದೇನು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವಧು, ನನಗೆ ಈ ಮದುವೆ ಬೇಕಾಗಿಲ್ಲ. ಇದರ ಅವಶ್ಯಕತೆ ನನಗಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾಳೆ. ನಂತರದಲ್ಲಿ, ಮದುವೆಗೆ ಬಂದಿದ್ದ ಉಡುಗೊರೆಗಳು ಮತ್ತು ಏನೇನು ಕೊಡಲಾಗಿತ್ತೋ ಅದನ್ನೆಲ್ಲ ಅವರವರ ಕುಟುಂಬಕ್ಕೆ ವಾಪಾಸ್​ ನೀಡಲಾಗಿದೆ. ಘಟನೆ ಕುರಿತು ಯಾರೊಬ್ಬರೂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಕೇವಲ ಒಂದು ಶ್ವಾನದಿಂದ ಮದುವೆಯೇ ನಿಂತು ಹೋಯಿತು ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net