ಭಾರತ ಯಾವುದೇ ಕಾರಣಕ್ಕೂ ಸೆಮಿಫೈನಲ್​ಗೆ ಹೋಗಲ್ಲ! ಯಾಕೆಂದು ಕಾರಣ ಸಹಿತ ಹೇಳಿದ ಪಾಕ್​ ಕ್ರಿಕೆಟಿಗ​ | T20 World Cup

ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ಅಮೀರ್
ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ಅಮೀರ್
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟ ಪಾಕ್​ ಕ್ರಿಕೆಟಿಗ
  • ಈ ಮೊದಲು ಅಭಿಷೇಕ್ ಶರ್ಮ ಬಗ್ಗೆ ವ್ಯಂಗ್ಯವಾಡಿದ್ದ ಮೊಹಮ್ಮದ್ ಅಮೀರ್
  • ಈಗ ಸೆಮಿಫೈನಲ್​ಗೆ ಭಾರತ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿಕೆ
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸರಣಿ ಗೆಲುವು ಸಾಧಿಸಿ, ಇದೀಗ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಗೆಲುವಿನ ಓಟ ಮುಂದುವರೆಸಿದೆ. ಈಗಾಗಲೇ ಸೂಪರ್​ 8 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆ ಯಾವುದೇ ಕಾರಣಕ್ಕೂ ಸೆಮಿಫೈನಲ್​ಗೆ ಪ್ರವೇಶಿಸುವುದಿಲ್ಲ ಎಂದು ಪಾಕಿಸ್ತಾನಿ ಆಟಗಾರ ಮೊಹಮ್ಮದ್​ ಅಮಿರ್​ ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ಬಹಿರಂಗಪಡಿಸಿದ್ದಾರೆ.

ನಾಲಿಗೆ ಹರಿಬಿಟ್ಟ ಪಾಕಿ

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, ಭಾರತ ಪರ ಸ್ಫೋಟಕ ಇನ್ನಿಂಗ್ಸ್ ಆಡುವ ಅಭಿಷೇಕ್ ಶರ್ಮ ಟಿ20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್​ ಡಕ್​ಔಟ್ ಆಗಿದ್ದಕ್ಕೆ ಲೇವಡಿ ಮಾಡಿದ್ದ ಅಮೀರ್​, "ಅಭಿಷೇಕ್​ ಒಬ್ಬ ಅದ್ಭುತ ಬ್ಯಾಟರ್​ ಏನಲ್ಲ. ಆತ ಟೆಕ್ನಿಕ್​ ಇಲ್ಲದೆ ಆಡುವ ಕ್ರಿಕೆಟಿಗ. ಅಭಿಷೇಕ್​ರನ್ನು ನಾನು ನಮ್ಮದೇ ತಂಡದ ಬ್ಯಾಟರ್​ ಸೈಮ್​ ಆಯುಬ್​ಗೆ ಹೋಲಿಸುತ್ತೇನೆ. ಕಾರಣ, ಆಯುಬ್​ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್​ಸೈಡ್​ ರನ್​ಗಳನ್ನು ಕಲೆಹಾಕುತ್ತಿದ್ದ. ಬಾಲ್​ ನಾಲ್ಕನೇ ಅಥವಾ ಐದನೇ ಸ್ಟಂಪ್​ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದ. ಈಗ ಟೀಮ್ ಇಂಡಿಯಾ ಸೆಮಿಫೈನಲ್​ ಹೋಗುವುದು ಕನಸು ಎಂದು ನಾಲಿಗೆ ಹರಿಬಿಟ್ಟಿರುವುದು ಸದ್ಯ ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ. 

ಬ್ಯಾಟಿಂಗ್ ಲೈನ್​ಅಪ್​ ಕುಸಿದಿದೆ

'ಹಾರ್ನ ಮನ ಹೈನ್' ಶೋನಲ್ಲಿ ಈ ಕುರಿತಂತೆ ಮಾತನಾಡಿದ ಅಮೀರ್​ಗೆ ಒಂದು ಟಾಸ್ಕ್​ ನೀಡಲಾಯಿತು. ಈಗ ಸೂಪರ್​-8 ಹಂತಕ್ಕೆ ಹೋಗಿರುವ 8 ತಂಡಗಳ ಪೈಕಿ ಪ್ರತಿ ಗುಂಪಿನಿಂದ ಯಾವ ಎರಡು ತಂಡ ಸೆಮಿಫೈನಲ್​ಗೆ ಪ್ರವೇಶಿಸಲಿದೆ ಎನ್ನುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಾಕ್​ ಕ್ರಿಕೆಟಿಗ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್​ ಇಂಡೀಸ್​ ಹೋಗುತ್ತದೆ. ಆದರೆ, ಭಾರತ ಮಾತ್ರ ಸೆಮಿಫೈನಲ್​ಗೆ ಲಗ್ಗೆ ಇಡೋದಿಲ್ಲ ಎಂದು ಪರೋಕ್ಷವಾಗಿ ಟೀಮ್ ಇಂಡಿಯಾಗೆ ಕುಟುಕಿದರು. 
ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ ಇನ್ನೆಲ್ಲ ಪಂದ್ಯಗಳಲ್ಲಿಯೂ ಭಾರತದ ಬ್ಯಾಟಿಂಗ್ ಲೈನ್​ಅಪ್​ ಕುಸಿದಿದೆ. ಉತ್ತಮವಾಗಿ ಆಡಿಲ್ಲ. ಅದೇ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್​ ಅದ್ಭುತವಾಗಿ ಆಡಿಕೊಂಡು ಬಂದಿದ್ದಾರೆ. ಈ ತಂಡಗಳು ಇನ್ಯಾವುದೇ ಟೀಮ್​ಗಳನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಾರಣ ಸಹಿತ ಉತ್ತರಿಸಿದ್ದಾರೆ. ಅಸಲಿಗೆ, ಇಲ್ಲಿ ಭಾರತದ ಬಗ್ಗೆ ಮಾತೇ ಇರಲಿಲ್ಲ. ಆದರೂ ಸಹ ಕೆಣಕುವ ಪ್ರಯತ್ನಕ್ಕೆ ಮುಂದಾಗಿರುವುದು ಪಾಕಿಸ್ತಾನದ ನರಿಬುದ್ಧಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. 

ಅಭಿಷೇಕ್ ಶರ್ಮ​ ಕುರಿತು ವ್ಯಂಗ್ಯ 

ಅಭಿಷೇಕ್ ಶರ್ಮ ಅಂತಹ ಬ್ಯಾಟರ್​ ಏನಲ್ಲ. ಆತ ಟೆಕ್ನಿಕ್​ ಇಲ್ಲದೆ ಆಡುವ ಕ್ರಿಕೆಟಿಗ. ಅಪರೂಪಕ್ಕೆ ಚೆನ್ನಾಗಿ ಆಡುತ್ತಾನೆ. ಅದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನವೇ ಹೆಚ್ಚು. 8 ಇನ್ನಿಂಗ್ಸ್​ನಲ್ಲಿ ಯಾವುದೋ ಒಂದರಲ್ಲಿ ಉತ್ತಮವಾಗಿ ಆಡಿರ್ತಾನೆ. ಇಲ್ಲದಿದ್ದರೆ, ಆತನ ಸ್ಕೋರ್​, 10,15, 0 ಮತ್ತು 20 ಹೀಗೆ ಇರುತ್ತದೆ ಎಂದು ಅಮೀರ್ ವ್ಯಂಗ್ಯವಾಡಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net