

ನವದೆಹಲಿ: ಶನಿವಾರ (ಅ.10) ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿ ನಿಲ್ಲಿಸುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಕೋರಿ ಕಾಕ್ರೋಚ್ ಜನತಾ ಪಾರ್ಟಿ (CJP) ಜಂತರ್-ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಇದರ ಹಿನ್ನಲೆ, ನಾಳೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಭಾಗವಹಿಸುವವರ ಸಂಖ್ಯೆ ಅಧಿಕವಿರುವ ಕಾರಣ ಭದ್ರತೆಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು, ಅರೆ ಮಿಲಿಟರಿ ಪಡೆಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೆ, ದೆಹಲಿ ಪೊಲೀಸರು, ಕಾಕ್ರೋಚ್ ಜನತಾ ಪಾರ್ಟಿಗೆ ಬರೆದಿರುವ ಬಹಿರಂಗ ಪತ್ರವೊಂದು ಸಕ್ಕತ್ ವೈರಲ್ ಆಗುತ್ತಿದೆ.
ಶನಿವಾರ, ಜಂತರ್-ಮಂತರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಕಾರಣ, ಪೊಲೀಸರಿಂದ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗವಾಗುವ ಸಾಧ್ಯತೆಯಿದೆ. ನೀಟ್ ಪ್ರತಿಭಟನೆ ಸಮಯದಲ್ಲಿ ಕೂಡ ಇದೇ ರೀತಿ ಘಟನೆ ನಡೆದಿತ್ತು. ಹೀಗಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ತಪ್ಪಿಸುವ ಉದ್ದೇಶದಿಂದ ಪೊಲೀಸರು ಸಿಜೆಪಿ ನಾಯಕರಿಗೊಂದು ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ, "ಆತ್ಮೀಯ ನಾಗರಿಕರೇ, ನಿಮ್ಮ ಧ್ವನಿ ನಿಮ್ಮ ಹಕ್ಕು, ಹಾಗೂ ನಿಮ್ಮ ಸುರಕ್ಷತೆ ನಮ್ಮ ಕರ್ತವ್ಯ. ಸಮವಸ್ತ್ರ ಧರಿಸಿದವ ಹಿಂದೆ, ಕುಟುಂಬ ಮತ್ತು ಪ್ರೀತಿಪಾತ್ರರನ್ನು ಹೊಂದಿರುವ ಒಬ್ಬ ಮನುಷ್ಯನೂ ಇರುತ್ತಾನೆ. ನಮ್ಮ,ನಿಮ್ಮ ನಡುವೆ ಇರುವ ಏಕೈಕ ವ್ಯತ್ಯಾಸವೆಂದರೆ ಸಮವಸ್ತ್ರವೇ ಹೊರತು ಮಾನವೀಯತೆಯಲ್ಲ," ಎಂದು ಆ ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಿಸುವ ಕಾರಣ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶವಾಗುವ ಸಂಭವವಿರುವ ಹಿನ್ನಲೆ, ಸುಮಾರು 57 ಮೆಟ್ರೋ ನಿಲ್ದಾಣಗಳಲ್ಲಿ ಸಾರಿಗೆ ಸೇವೆ ಲಭ್ಯವಿರುವುದಿಲ್ಲವೆಂದು ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ಘೋಷಿಸಿದೆ.
ಈ 57 ಮೆಟ್ರೋ ನಿಲ್ದಾಣಗಳಲ್ಲಿ, ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಸೇವೆ ಅಲಭ್ಯವಾಗಲಿದ್ದು, ಶನಿವಾರ ಮುಂದಿನ ಆದೇಶದವೆರೆಗ ಯಾವುದೇ ಮೆಟ್ರೋ ಸೇವೆ ದೊರೆಯುವುದಿಲ್ಲ, ದೆಹಲಿ ನಾಗರಿಕರು ಸಹಕರಿಸಬೇಕಾಗಿ DMRC ಟ್ವೀಟ್ ಮಾಡಿದೆ.
ಇವತ್ತು ಬೆಳಿಗ್ಗೆ ಪತ್ರಿಕಾಗೋಷ್ಟಿ ನಡೆಸಿದ್ದ ಪೊಲೀಸ್ ಜಂಟಿ ಆಯುಕ್ತೆ ನುಪೂರ್ ಪ್ರಸಾದ್, ಮೆಟ್ರೋ ಕಾರ್ಪೋರೇಷನ್ಗೆ ಭದ್ರತೆ ಹಿನ್ನಲೆ, ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಈಗ ಪೊಲೀಸರ ಮನವಿಗೆ ಪ್ರತಿಕ್ರಿಯಿಸಿರುವ ಮೆಟ್ರೋ ಕಾರ್ಪೋರೇಷನ್ ಅಧಿಕೃತ ಹೇಳಿಕೆಯನ್ನು ನೀಡಿದೆ.
ಶುಕ್ರವಾರ, ಪತ್ರಿಕಾಗೋಷ್ಟಿ ನಡೆಸಿದ ದೆಹಲಿ ಪೊಲೀಸ್ ಆಯುಕ್ತೆ, ನುಪೂರ್ ಪ್ರಸಾದ್, ನಾಳೆ ನಡೆಯುವ ಪ್ರತಿಭಟನೆಗೆ ಕಾಕ್ರೋಚ್ ಜನತಾ ಪಾರ್ಟಿ ನಮ್ಮಿಂದ ಅನುಮತಿ ಪಡೆದಿಲ್ಲ. ಅಕ್ಟೋಬರ್ 7 ರಂದು ನಮಗೆ ಪ್ರತಿಭಟನೆಗೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದರು. ಆದರೆ, ಇಷ್ಟು ಕಡಿಮೆ ಸಮಯದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಆದರೂ ನಾಳೆ ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದ್ದು, ಸಮಾಜದ ಶಾಂತಿ ಕೆಡೆಸುವ ಪ್ರಯತ್ನ ನಡೆದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯುಕ್ತೆ ಖಡಕ್ ಎಚ್ಚರಿಕೆ ನೀಡಿದ್ದಾರೆ, (ಏಜೆನ್ಸೀಸ್).