ಚುನಾವಣೆಯ ಗೆಲುವಿಗಾಗಿ ಕಷ್ಟಪಟ್ಟು ಕೆಲಸ ಮಾಡಿ... ಬಂಗಾಳ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದರೊಂದಿಗೆ ಸಭೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಗೆಲುವಿಗಾಗಿ ಏನೆಲ್ಲಾ ಅಗತ್ಯವಿದೆಯೋ, ಅದನ್ನೆಲ್ಲಾ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬಂಗಾಳದಲ್ಲಿ ಬಿಜೆಪಿ ಪ್ರತಿ ಚುನಾವಣೆಗೂ ತನ್ನ ವ್ಯಾಪ್ತಿಯನ್ನು ವೃದ್ದಿಸಿಕೊಳ್ಳುತ್ತಲೇ ಬಂದಿದ್ದು, ದೊಡ್ಡ ಮಟ್ಟದ ಪ್ರಗತಿ ಸಾಧಿಸಿದೆ. ಆದರೂ ಚುನಾವಣೆ ಗೆಲ್ಲಲು ಇದಷ್ಟೆ ಸಾಕಾಗುವುದಿಲ್ಲ ಎಂದು ಅರಿತಿರುವ ಪ್ರಧಾನಿಗಳು, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಸುವಂತೆ ಸಲಹೆ ನೀಡಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.
ನೀವೆಲ್ಲಾ ಕಷ್ಟಪಟ್ಟು ಕೆಲಸ ಮಾಡಬೇಕು, ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕು. ನೀವೆಲ್ಲರೂ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೀರಿ, ಈ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಬೇಕು ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ವರದಿಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತಂತೆಯೂ ಮಾತನಾಡಿರುವ ಪ್ರಧಾನಿಗಳು, ಇದು ಶುದ್ಧೀಕರಣದ ಹೆಜ್ಜೆಯಾಗಿದೆ, ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂಪರ್ಕ ಕಾಯ್ದುಕೊಳ್ಳುವಂತೆ ಸಂಸದರಿಗೆ ಸೂಚನೆ ನೀಡಿದ್ದಾರೆ

ಸಾಮಾಜಿಕ ಜಾಲತಾಣಗಳತ್ತ ಗಮನಹರಿಸಿ

ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಯನ್ನು ಸಾರ್ವಜನಿಕರಿಗೆ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಹತ್ವವನ್ನು ಒತ್ತಿ ಹೇಳಿರುವ ಪ್ರಧಾನಿ ಮೋದಿ, ಜಾಗೃತಿ ಮೂಡಿಸಲು ಮತ್ತು ಸಾಧನೆಗಳನ್ನು ತಿಳಿಸಲು ಸಂಸದರುಗಳು ಚಾನೆಲ್‌ಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಎಸ್‌ಐಆರ್ ಕುರಿತು ಟಿಎಂಸಿ ಆರೋಪ

ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ತೃಣಮೂಲ ಕಾಂಗ್ರೆಸ್ ಪಕ್ಷ ಟೀಕಿಸಿದ್ದು, ಈ ಪ್ರಕ್ರಿಯೆ ಪಶ್ಚಿಮ ಬಂಗಾಳ ಮತ್ತು ಅದರ ನಿವಾಸಿಗಳನ್ನು ಗುರಿಯಾಗಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದೆ. ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ಸಂಸದೆ ಸಜ್ದಾ ಅಹ್ಮದ್, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ನಿನ್ನೆ ನಾವು ಚುನಾವಣಾ ಆಯೋಗದೊಂದಿಗೆ ಸಭೆ ನಡೆಸಿದ್ದೇವೆ. ಸಭೆ ಬಹಳ ಸಮಯದವರೆಗೆ ನಡೆಯಿತು, ಆದರೆ ನಾವು ಎತ್ತಿದ ಐದು ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಗಳನ್ನು ನೀಡಲಿಲ್ಲ. ಇದು ಎಸ್‌ಐಆರ್ ಮೂಲಕ ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ ಮತ್ತು ರಾಜ್ಯದ ಜನರು ಇದರಿಂದ ಚಿಂತೆಗೀಡಾಗಿದ್ದಾರೆ ಎಂದು ಹೇಳಿದರು.

ಟಿಎಂಸಿ ಆರೋಪಕ್ಕೆ ಇಸಿಐ ತಿರುಗೇಟು...

ಟಿಎಂಸಿ ನಾಯಕರ ಆರೋಪಗಳನ್ನು ತಿರಸ್ಕರಿಸಿದ್ದ ಚುನಾವಣಾ ಆಯೋಗ, ಅಧಿಕಾರಿಗಳಿಗೆ ಬೆದರಿಕೆ ಹಾಕಬೇಡಿ, ಅವರ ಮೇಲೆ ಒತ್ತಡ ಹೇರಬೇಡಿ ಎಂದು ಎಂದು ಎಚ್ಚರಿಕೆ ನೀಡಿತ್ತು. ಚುನಾವಣಾ ಕಾರ್ಯವಿಧಾನಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವುದನ್ನು ಪಕ್ಷ ನಿಲ್ಲಿಸಬೇಕು ಎಂದಿತ್ತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net