Delhi MCD ByPolls | ದೆಹಲಿ ಎಂಸಿಡಿ ಉಪಚುನಾವಣೆ; 12 ರಲ್ಲಿ 7 ವಾರ್ಡ್​ ಬಿಜೆಪಿ ತೆಕ್ಕೆಗೆ

Delhi MCD ByPolls |  ದೆಹಲಿ ಸಿಎಂ ರೇಖಾ ಗುಪ್ತಾ
Delhi MCD ByPolls | ದೆಹಲಿ ಸಿಎಂ ರೇಖಾ ಗುಪ್ತಾ
Published on
ದೆಹಲಿ: ನವೆಂಬರ್ 30 ರಂದು ನಡೆದ ಎಂಸಿಡಿ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಪೂರ್ಣಗೊಂಡಿದ್ದು, 12 ವಾರ್ಡ್‌ಗಳಲ್ಲಿ ಭಾರತೀಯ ಜನತಾ ಪಕ್ಷವು 7, ಆಮ್ ಆದ್ಮಿ ಪಕ್ಷವು 3, ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ತಲಾ ಒಂದು ವಾರ್ಡ್​ನಲ್ಲಿ ಗೆಲುವು ಸಾಧಿಸಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 11 ಕೌನ್ಸಿಲರ್‌ಗಳು ಮತ್ತು ಸಂಸತ್ತಿನ ಚುನಾವಣೆಯಲ್ಲಿ ಒಬ್ಬರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ 12 ವಾರ್ಡ್‌ಗಳಿಗೆ ಉಪಚುನಾವಣೆ ನಡೆಯಿತು. ಈ ವಾರ್ಡ್‌ಗಳಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಗೆದ್ದಿದ್ದ ಶಾಲಿಮಾರ್ ಬಾಗ್ ಬಿ ವಾರ್ಡ್ ಕೂಡ ಸೇರಿದೆ ವಾರ್ಡ್​ಗಳ ಹೆಸರು ( ಮುಂಡ್ಕಾ, ಶಾಲಿಮಾರ್ ಬಾಗ್-ಬಿ, ಅಶೋಕ್ ವಿಹಾರ್, ಚಾಂದನಿ ಚೌಕ್, ಚಾಂದನಿ ಮಹಲ್, ದ್ವಾರಕಾ-ಬಿ, ಡಿಚಾವ್ ಕಲಾನ್, ನರೈನಾ, ಸಂಗಮ್ ವಿಹಾರ್-ಎ, ದಕ್ಷಿಣ ಪುರಿ, ಗ್ರೇಟರ್ ಕೈಲಾಶ್ ಮತ್ತು ವಿನೋದ್ ನಗರ್)
2022 ರಲ್ಲಿ ನಡೆದ ಈ ಹಿಂದಿನ ದೆಹಲಿ ಎಂಸಿಡಿ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷವು 134 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತ್ತ ಭಾರತೀಯ ಜನತಾ ಪಕ್ಷವು 104, ಕಾಂಗ್ರೆಸ್ 3, ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಇದರಲ್ಲಿ ಕೆಲವು ಕೌನ್ಸಿಲರ್‌ಗಳು ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದ ಬಳಿಕ ಈ ಉಪಚುನಾವಣೆಗಳು ನಡೆದವು.
ರಾಜ್ಯ ಚುನಾವಣಾ ಆಯೋಗವು ಕಾಂಝವಾಲಾ, ಪಿತಾಂಪುರ, ಭಾರತ್ ನಗರ, ಸಿವಿಲ್ ಲೈನ್ಸ್, ರೌಸ್ ಅವೆನ್ಯೂ, ದ್ವಾರಕಾ, ನಜಫ್‌ಗಢ, ಗೋಲ್ ಮಾರುಕಟ್ಟೆ, ಪುಷ್ಪ್ ವಿಹಾರ್ ಮತ್ತು ಮಾಂಡವಾಲಿಯಲ್ಲಿ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿತ್ತು. ಇವಿಎಂಗಳನ್ನು ಸಂಗ್ರಹಿಸುವ ಸ್ಟ್ರಾಂಗ್ ರೂಮ್‌ಗಳಿಗೆ 24/7 ಸಿಸಿಟಿವಿ ಕಣ್ಗಾವಲು ಮತ್ತು ಪ್ಯಾರಾಮಿಲಿಟರಿ ಹಾಗೂ ದೆಹಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಉಪಚುನಾವಣೆಯಲ್ಲಿ ಶೇ 38.51 ರಷ್ಟು ಮತದಾನವಾಗಿದ್ದು, 2022 ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ (50.47) ಸುಮಾರು ಶೇ 12 ರಷ್ಟು ಕಡಿಮೆಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net