ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನವೀನ್​ರನ್ನು ಭೇಟಿಯಾದ ಅಣ್ಣಾಮಲೈ; ಗೌರವಯುತವಾಗಿಯೇ ಸಂಬಂಧ ಕಡಿದುಕೊಳ್ಳುತ್ತೇನೆ ಅಂದ್ರಾ ಸಿಂಗಂ..? | Annamalai

Annamalai | ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (ಸಂಗ್ರಹ ಚಿತ್ರ)
Annamalai | ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (ಸಂಗ್ರಹ ಚಿತ್ರ)
Published on
ನವದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಕೇಸರಿ ಪಡೆಯ ನಡುವಿನ ಸಂಬಂಧ ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆಯೇ? ಎಂಬ ಯಕ್ಷಪ್ರಶ್ನೆಗೆ ಈಗ ದೆಹಲಿ ಮಟ್ಟದಲ್ಲಿ ಉತ್ತರ ಹುಡುಕುವ ಕೆಲಸ ನಡೆದಿದೆ. ಮಂಗಳವಾರ ಬೆಳಗ್ಗೆ ಅಣ್ಣಾಮಲೈ (Annamalai) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿದ್ದು, ಇಂದು ಸಂಜೆ 4 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಣ್ಣಾಮಲೈ ಬಿಜೆಪಿಯಿಂದ ಈಗಾಗಲೇ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂಬ ಬಲವಾದ ವದಂತಿಗಳ ನಡುವೆಯೇ ಈ ಹೈವೋಲ್ಟೇಜ್ ಸಭೆಗಳು ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ತಾವು ಭವಿಷ್ಯದಲ್ಲಿ ಸ್ವತಂತ್ರ ರಾಜಕೀಯ ಹಾದಿ ಹಿಡಿಯಲು ಬಯಸುತ್ತಿರುವುದಾಗಿ ಅಣ್ಣಾಮಲೈ ಹೈಕಮಾಂಡ್ ನಾಯಕರಿಗೆ ಸ್ಪಷ್ಟಪಡಿಸಿದ್ದು, ಪಕ್ಷದಿಂದ ಯಾವುದೇ ಕಹಿ ನೆನಪುಗಳಿಲ್ಲದೆ, ಅತ್ಯಂತ ಸೌಹಾರ್ದಯುತವಾಗಿಯೇ ಹೊರಬರಲು ಇಚ್ಛಿಸಿರುವುದಾಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಕ್ಷದಿಂದ ದೂರ ಸರಿಯಲು ಇಚ್ಛಿಸುತ್ತಿರುವ ಹಿಂದಿನ ಕಾರಣಗಳನ್ನು ರಾಷ್ಟ್ರೀಯ ನಾಯಕರ ಮುಂದೆ ಬಿಚ್ಚಿಟ್ಟಿರುವ ಅಣ್ಣಾಮಲೈ ಅವರ ವಾದವನ್ನು ಆಲಿಸಿರುವ ಹೈಕಮಾಂಡ್, ಈ ಬಗ್ಗೆ ಯೋಚಿಸಲು ತಮಗೆ ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿದೆ. ಸದ್ಯಕ್ಕೆ ಅಣ್ಣಾಮಲೈ ಬಿಜೆಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಿಲ್ಲ ಹಾಗೂ ಬುಧವಾರದವರೆಗೂ ಅವರು ದೆಹಲಿಯಲ್ಲೇ ಮೊಕ್ಕಾಂ ಹೂಡುವ ಸಾಧ್ಯತೆಯಿದೆ. ಅಣ್ಣಾಮಲೈರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಹೈಕಮಾಂಡ್ ಕೊನೆಯ ಪ್ರಯತ್ನ ನಡೆಸುತ್ತಿದೆಯಾದರೂ, ಅವರು ಮಾತ್ರ ತಮ್ಮ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯಸಭಾ ಆಫರ್ ತಿರಸ್ಕರಿಸಿದ್ರಾ ಸಿಂಗಂ..?

ಬಿಜೆಪಿಯಲ್ಲಿ ತಮಗೆ ಉಜ್ವಲ ಭವಿಷ್ಯವಿಲ್ಲ ಎಂಬ ಅಂತಿಮ ತೀರ್ಮಾನಕ್ಕೆ ಅಣ್ಣಾಮಲೈ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ, ತೀವ್ರ ಮುನಿಸಿಕೊಂಡಿರುವ ಅವರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕರು ಅವರಿಗೆ ರಾಜ್ಯಸಭಾ ಸ್ಥಾನದ ದೊಡ್ಡ ಆಫರ್ ನೀಡಿದ್ದು, ಅಣ್ಣಾಮಲೈ ಅವರು ಅದನ್ನು ಅತ್ಯಂತ ನಯವಾಗಿಯೇ ನಿರಾಕರಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಅಣ್ಣಾಮಲೈ ತಕ್ಷಣವೇ ಯಾವುದೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಿಲ್ಲ. ಮೊದಲು ದೊಡ್ಡ ಮಟ್ಟದ ಸಾರ್ವಜನಿಕ ಜನಾಂದೋಲನ ಆರಂಭಿಸಲಿದ್ದಾರೆ. ಆ ನಂತರವಷ್ಟೇ ಹೊಸ ಪಕ್ಷವನ್ನು ಅಸ್ತಿತ್ವಕ್ಕೆ ತರಲಿದ್ದಾರೆ. ಸಮಾನ ಮನಸ್ಕ ಜನರನ್ನು ಒಂದೆಡೆ ಸೇರಿಸುವುದು ಹಾಗೂ ಬಲಿಷ್ಠ ಸ್ವಯಂಸೇವಕರ ಜಾಲವನ್ನು ದೇಶಾದ್ಯಂತ ಸೃಷ್ಟಿಸುವುದು ಅವರ ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ವಿವಿಧ ವೃತ್ತಿಪರರು ಹಾಗೂ ಸಾಮಾಜಿಕ ಹಿನ್ನೆಲೆಯುಳ್ಳ ಯುವಕರನ್ನು ಸೆಳೆಯಲು ಈ ಆಂದೋಲನ ನೆರವಾಗಲಿದೆ. ಈಗಾಗಲೇ ಅವರು ನಡೆಸುತ್ತಿರುವ ವಿ ದಿ ಲೀಡರ್ಸ್ ಎಂಬ ಸ್ವಯಂಸೇವಾ ಸಂಸ್ಥೆಯೇ ಅವರ ಈ ಬೃಹತ್ ರಾಜಕೀಯ ಯೋಜನೆಗೆ ಭದ್ರ ಬುನಾದಿಯಾಗುವ ಸಾಧ್ಯತೆ ಇದೆ.

ಅಸಮಾಧಾನ ಸ್ಫೋಟಗೊಂಡಿದ್ದು ಹೇಗೆ..?

ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 234 ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಈ ಫಲಿತಾಂಶ ಬಂದ ಕೇವಲ ಒಂದು ತಿಂಗಳಲ್ಲೇ ಈ ಭಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದ್ರಾವಿಡ ಪಕ್ಷಗಳೇ ಆಳುತ್ತಿದ್ದ ಮಣ್ಣಿನಲ್ಲಿ ಬಿಜೆಪಿಯ ಅಸ್ತಿತ್ವ ಮತ್ತು ವರ್ಚಸ್ಸನ್ನು ಭಾರಿ ಮಟ್ಟದಲ್ಲಿ ಹೆಚ್ಚಿಸಿದ್ದರು. ತಮ್ಮ ಆಕ್ರಮಣಕಾರಿ ಶೈಲಿಯ ಪ್ರಚಾರ, ತಳಮಟ್ಟದ ಸರಣಿ ಪ್ರವಾಸಗಳು ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಪಕ್ಷದ ನೆಟ್‌ವರ್ಕ್ ಬೆಳೆಸಿದ್ದಲ್ಲದೆ, ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು.
ಇದೇ ನಂಬಿಕೆಯಿಂದ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಂಟಿಯಾಗಿ ಕಣಕ್ಕಿಳಿಯಬೇಕು ಎಂದು ಅಣ್ಣಾಮಲೈ ಪಟ್ಟು ಹಿಡಿದಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಮಾತ್ರ ಕೊನೆಯ ಕ್ಷಣದಲ್ಲಿ ಎಐಎಡಿಎಂಕೆ (AIADMK) ಜೊತೆ ಕೈಜೋಡಿಸಿತು. ಆಡಳಿತಾರೂಢ ಡಿಎಂಕೆ ವಿರುದ್ಧದ ವಿರೋಧ ಪಕ್ಷಗಳ ಮತಗಳು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎಂಬುದು ಹೈಕಮಾಂಡ್‌ನ ಈ ರಾಜಕೀಯ ಕಾರ್ಯತಂತ್ರದ ಪ್ರಮುಖ ಉದ್ದೇಶವಾಗಿತ್ತು.
ಆದರೆ, ಈ ಮೈತ್ರಿಕೂಟದ ಮರುಸ್ಥಾಪನೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕಠಿಣ ಷರತ್ತೊಂದನ್ನು ವಿಧಿಸಿದ್ದರು. ತಮಿಳುನಾಡು ಬಿಜೆಪಿಯಲ್ಲಿ ತಕ್ಷಣವೇ ನಾಯಕತ್ವ ಬದಲಾವಣೆಯಾಗಬೇಕು ಹಾಗೂ ಅಣ್ಣಾಮಲೈ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಬೇಕು ಎಂದು ಅವರು ಹಠ ಹಿಡಿದಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಹೈಕಮಾಂಡ್ ಅಣ್ಣಾಮಲೈ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಿತು. ತಮಗೆ ಎದುರಾದ ಈ ವ್ಯವಸ್ಥಿತ ಕಡೆಗಣನೆಯಿಂದ ತೀವ್ರ ಬೇಸತ್ತಿದ್ದ ಅವರು, ಇತ್ತೀಚಿನ ವಿಧಾನಸಭಾ ಚುನಾವಣಾ ಕಣದಿಂದ ಸಂಪೂರ್ಣ ದೂರ ಉಳಿದರಲ್ಲದೆ, ಪಕ್ಷದ ಪರವಾಗಿ ಯಾವುದೇ ಪ್ರಮುಖ ಪ್ರಚಾರದಲ್ಲೂ ಭಾಗವಹಿಸಲಿಲ್ಲ. ಈ ಎಲ್ಲಾ ಸರಣಿ ಬೆಳವಣಿಗೆಗಳೇ ಈಗ ಅವರು ಕಮಲ ಪಾಳೆಯಕ್ಕೆ ಗುಡ್‌ಬೈ ಹೇಳಲು ಮುಖ್ಯ ಕಾರಣ ಎನ್ನಲಾಗುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net