ವಿಜಯ್-ಅಣ್ಣಾಮಲೈ ನಡುವೆ ಜಿದ್ದಾಜಿದ್ದಿ..? ಎಂಜಿಆರ್-ಕರುಣಾನಿಧಿ ಕಾಲದ ನೆನಪು ಮರುಕಳಿಸುವಂತೆ ಮಾಡಿದ ಹೊಸ ರಾಜಕೀಯ ಲೆಕ್ಕಾಚಾರ! | Tamil Nadu Politics

Tamil Nadu Politics > ಎಂಜಿಆರ್-ಕರುಣಾನಿಧಿ ಕಾಲದ ನೆನಪು ಮರುಕಳಿಸುವಂತೆ ಮಾಡಿದ ಹೊಸ ರಾಜಕೀಯ ಲೆಕ್ಕಾಚಾರ!
Tamil Nadu Politics > ಎಂಜಿಆರ್-ಕರುಣಾನಿಧಿ ಕಾಲದ ನೆನಪು ಮರುಕಳಿಸುವಂತೆ ಮಾಡಿದ ಹೊಸ ರಾಜಕೀಯ ಲೆಕ್ಕಾಚಾರ!
Published on
Tamil Nadu Politics: ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ. ಅಣ್ಣಾಮಲೈ ಭವಿಷ್ಯದ ರಾಜಕೀಯ ನಡೆಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಅವರ ಬೆಂಬಲಿಗರು ತಮಿಳುನಾಡು ಇತಿಹಾಸದ ರಾಜಕೀಯ ವೈಷಮ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್ (MGR) ಮತ್ತು ಎಂ. ಕರುಣಾನಿಧಿ ನಡುವೆ ಇದ್ದ ಐತಿಹಾಸಿಕ ಪೈಪೋಟಿಗೆ ಹೋಲಿಕೆಯಾಗುತ್ತಿದೆ.
ಅಣ್ಣಾಮಲೈ ಆಪ್ತ ಮೂಲಗಳ ಪ್ರಕಾರ, ಒಂದು ವೇಳೆ ಅವರು ಬಿಜೆಪಿಯಿಂದ ಹೊರಬಂದು ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿದರೆ, ತಮಿಳುನಾಡು ರಾಜಕೀಯ ರಂಗವು ಇಬ್ಬರು ಸಮಕಾಲೀನ ಯುವ ನಾಯಕರ ನಡುವಿನ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಅಂದರೆ, ಸಿಎಂ ವಿಜಯ್ ಮತ್ತು ಕೆ. ಅಣ್ಣಾಮಲೈ ನೇತೃತ್ವದ ಎರಡು ದ್ರಾವಿಡೇತರ ಶಕ್ತಿಗಳ ನಡುವೆ ನೇರ ಹಣಾಹಣಿ ಆರಂಭವಾಗುವ ಸಾಧ್ಯತೆಯಿದೆ.
ಮುಂಬರುವ ದಿನಗಳಲ್ಲಿ ವಿಜಯ್ ಮತ್ತು ಅಣ್ಣಾಮಲೈ ನಡುವಿನ ಸ್ಪರ್ಧೆಯು ಅಂದಿನ ಎಂಜಿಆರ್ ಹಾಗೂ ಕರುಣಾನಿಧಿ ಅವರ ನಡುವಿನ ರಾಜಕೀಯ ಸಮರದಂತೆ ರೂಪಾಂತರಗೊಳ್ಳಬಹುದು. ಆದರೆ, ಈ ಯುವ ನಾಯಕರು ಆ ಧೀಮಂತ ನಾಯಕರಿಗೆ ಸಾಟಿಯಾಗಲು ಸಾಧ್ಯವಿಲ್ಲ ಎಂದು ಅಣ್ಣಾಮಲೈ ಆಪ್ತರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದ್ರಾವಿಡ ಕೋಟೆಯಲ್ಲಿ ಬದಲಾದ ರಾಜಕೀಯ ಚಿತ್ರಣ

1967 ರಲ್ಲಿ ಡಿಎಂಕೆ ಸ್ಥಾಪಕ ಸಿ.ಎನ್. ಅಣ್ಣಾದೊರೈ ಕಾಂಗ್ರೆಸ್ ಆಡಳಿತಕ್ಕೆ ಮುಕ್ತಾಯ ಹಾಡಿದ ನಂತರ, ತಮಿಳುನಾಡು ರಾಜಕೀಯವು ಸಂಪೂರ್ಣವಾಗಿ ಎಂಜಿಆರ್ ಮತ್ತು ಕರುಣಾನಿಧಿ ಸುತ್ತಲೇ ಸುತ್ತುತ್ತಿತ್ತು. ಡಿಎಂಕೆಯಿಂದ ಹೊರಬಂದು ಎಐಎಡಿಎಂಕೆ ಕಟ್ಟಿದ ಎಂಜಿಆರ್, ಸತತ ಮೂರು ಬಾರಿ ವಿಧಾನಸಭಾ ಚುನಾವಣೆಗಳನ್ನು ಗೆದ್ದು 1987 ರಲ್ಲಿ ನಿಧನರಾಗುವವರೆಗೂ ಮುಖ್ಯಮಂತ್ರಿಯಾಗಿದ್ದರು. ಅವರ ಅಗಲಿಕೆ ಬಳಿಕ ಕರುಣಾನಿಧಿ ಅಧಿಕಾರ ಹಿಡಿದು ಒಟ್ಟು ಐದು ಬಾರಿ ಸಿಎಂ ಗದ್ದುಗೆ ಏರಿದ್ದರು.
ಸುಮಾರು ಆರು ದಶಕಗಳ ಬಳಿಕ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ದೊಡ್ಡ ಕ್ರಾಂತಿ ನಡೆದಿದ್ದು, ನಟನೆಯಿಂದ ರಾಜಕೀಯಕ್ಕೆ ಧುಮುಕಿದ ವಿಜಯ್, ತಮ್ಮ ಟಿವಿಕೆ ಪಕ್ಷದ ಮೂಲಕ ಇತ್ತೀಚಿನ ಚುನಾವಣೆಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಎರಡನ್ನೂ ಸೈಡ್‌ಲೈನ್ ಮಾಡಿದ್ದಾರೆ. ದಶಕಗಳ ಕಾಲ ರಾಜ್ಯವಾಳಿದ ಈ ಎರಡು ಪ್ರಮುಖ ದ್ರಾವಿಡ ಪಕ್ಷಗಳು ಈಗ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ.
ವಿಶೇಷವಾಗಿ ಎಐಎಡಿಎಂಕೆ ಪಕ್ಷದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮಾಜಿ ಸಿಎಂ ಜಯಲಲಿತಾ ನಿಧನದ ನಂತರ ಪಕ್ಷವು ಸತತ ನಾಲ್ಕು ಚುನಾವಣೆಗಳಲ್ಲಿ ಸೋಲನುಭವಿಸಿದೆ. ಇತ್ತೀಚೆಗಷ್ಟೇ ವಿಜಯ್​​ರೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳುವ ಯತ್ನ ವಿಫಲವಾದಾಗ, ಪಕ್ಷದ ವೀಪ್ ಉಲ್ಲಂಘಿಸಿ ಸುಮಾರು 25 ಎಐಎಡಿಎಂಕೆ ಶಾಸಕರು ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಬಂಡಾಯವೆದ್ದಿದ್ದಾರೆ.

ಹಿಂದುತ್ವ ಬಿಟ್ಟು ತಮಿಳು ರಾಷ್ಟ್ರೀಯತೆಯತ್ತ ಅಣ್ಣಾಮಲೈ ಚಿಂತನೆ?

ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಈ ಹೊಸ ಶೂನ್ಯತೆಯನ್ನು ತುಂಬಲು ಅಣ್ಣಾಮಲೈಗೆ ಸೂಕ್ತ ಅವಕಾಶವಿದೆ ಎಂದು ಅವರ ಬೆಂಬಲಿಗರು ಭಾವಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯ ಸಾಂಪ್ರದಾಯಿಕ ಹಿಂದುತ್ವ ರಾಜಕೀಯವು ಯಶಸ್ಸು ಕಾಣಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ, ಅಣ್ಣಾಮಲೈ ಕಟ್ಟಲಿರುವ ಹೊಸ ವೇದಿಕೆಯು ತಮಿಳು ರಾಷ್ಟ್ರೀಯತೆ ಮತ್ತು ಉತ್ತಮ ಆಡಳಿತ (Tamil Nationalism and Governance) ಎಂಬ ಮಂತ್ರದ ಆಧಾರದ ಮೇಲೆ ಮುನ್ನಡೆಯಲಿದೆ ಎನ್ನಲಾಗಿದೆ.
ಅಣ್ಣಾಮಲೈ ರಾಜಕೀಯವು ಪ್ರಾದೇಶಿಕ ಅಸ್ಮಿತೆ ಮತ್ತು ತಮಿಳು ರಾಷ್ಟ್ರೀಯತೆಯ ಸುತ್ತ ಇರಲಿದ್ದು, ಇದು ಮತದಾರರನ್ನು ಸುಲಭವಾಗಿ ಆಕರ್ಷಿಸಲಿದೆ ಎಂದು ಈ ಚರ್ಚೆಗಳ ಭಾಗವಾಗಿರುವ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಅವರು ಬಿಜೆಪಿಯ ಹಳೆಯ ಇಮೇಜ್‌ನಿಂದ ಹೊರಬಂದು, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ತೊಡಕಾಗಿದ್ದ ಮಿತಿಗಳನ್ನು ಮೀರಿ ನಿಲ್ಲಲು ಯೋಜಿಸಿದ್ದಾರೆ.

ವಿಜಯ್ ವರ್ಸಸ್ ಅಣ್ಣಾಮಲೈ; ಇಬ್ಬರ ಶಕ್ತಿ ಏನು..?

ಸಿಎಂ ವಿಜಯ್​ಗೆ ತಮಿಳುನಾಡಿನಲ್ಲಿ ಅಗಾಧವಾದ ಅಭಿಮಾನಿ ಬಳಗವಿದ್ದು, ಅದನ್ನು ಹಲವರು ಎಂಜಿಆರ್ ಅವರ ಸಿನೆಮಾ ಕಾಲದ ಕ್ರೇಜ್‌ಗೆ ಹೋಲಿಸುತ್ತಾರೆ. ಇನ್ನೊಂದೆಡೆ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ತಮ್ಮ ಆಕ್ರಮಣಕಾರಿ ಪ್ರಚಾರ, ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ತಳಮಟ್ಟದ ಸಂಪರ್ಕದ ಮೂಲಕ ಯುವ ಮತದಾರರಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ.
ಮೂಲಗಳ ಪ್ರಕಾರ, ಅಣ್ಣಾಮಲೈ ಶೀಘ್ರದಲ್ಲೇ ಆರಂಭಿಸಲಿರುವ ಜನಾಂದೋಲನ (People's Movement) ಪ್ರಕ್ರಿಯೆಯು, ಹೊಸ ಪಕ್ಷದ ಸ್ಥಾಪನೆಗೂ ಮುನ್ನ ರಾಜಕೀಯ ಪ್ರಜ್ಞೆಯುಳ್ಳ ಸ್ವಯಂಸೇವಕರು ಮತ್ತು ಯುವ ನಾಯಕರ ಪಡೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಹಿಂದೆ ಕರುಣಾನಿಧಿ ದ್ರಾವಿಡ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಹರಡಲು ಸಿನಿಮಾ ಹಾಗೂ ಸಾಹಿತ್ಯವನ್ನು ಬಳಸಿಕೊಂಡ ಮಾದರಿಯಲ್ಲೇ, ಅಣ್ಣಾಮಲೈ ಕೂಡ ಚುನಾವಣಾ ರಾಜಕೀಯಕ್ಕೆ ಧುಮುಕುವ ಮುನ್ನವೇ ಪ್ರಬಲ ರಾಜಕೀಯ ಸಾಂಸ್ಥಿಕ ವ್ಯವಸ್ಥೆಯನ್ನು ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ.

ಐದನೇ ಪರ್ಯಾಯ ವೇದಿಕೆಯ ಹುಡುಕಾಟ

ರಾಜಕೀಯ ವಿಶ್ಲೇಷಕರಾದ ಆಸ್ಪೈರ್ ಸ್ವಾಮಿನಾಥನ್ ಪ್ರಕಾರ, ತಮಿಳುನಾಡಿನಲ್ಲಿ ಸದ್ಯ ಯಾರೂ ಆಕ್ರಮಿಸಿಕೊಳ್ಳದ ಒಂದು ದೊಡ್ಡ ರಾಜಕೀಯ ಜಾಗ ಖಾಲಿ ಇದೆ. ರಾಜ್ಯದಲ್ಲಿ ಸದ್ಯ ಐದನೇ ಪರ್ಯಾಯ ವೇದಿಕೆಯ ಅಗತ್ಯವಿದೆ. ಅದು ಭ್ರಷ್ಟಾಚಾರ ರಹಿತ, ಆಡಳಿತಕ್ಕೆ ಮೊದಲ ಆದ್ಯತೆ ನೀಡುವ, ತಮಿಳು ಹೆಮ್ಮೆಯ, ವಂಶಪಾರಂಪರ್ಯವಿಲ್ಲದ ಮತ್ತು ಸಿನಿಮಾ ಗೀಳಿಲ್ಲದ ರಾಜಕೀಯ ಹಾದಿಯಾಗಿರಬೇಕು. ಬಿಜೆಪಿಯಿಂದ ಹೊರಬಂದರೆ ಅಣ್ಣಾಮಲೈ ಈ ಜಾಗವನ್ನು ತುಂಬಬಹುದು ಎಂದು ಅವರು ಹೇಳಿದ್ದಾರೆ. ಇದು ಕೇವಲ ಬಿಜೆಪಿಯ ಸಾಂಪ್ರದಾಯಿಕ ಮತದಾರರನ್ನಷ್ಟೇ ಅಲ್ಲದೆ, ಡಿಎಂಕೆ ವಿರೋಧಿ ಅಲೆಯನ್ನೂ ಮೀರಿ ದೊಡ್ಡ ಮಟ್ಟದ ಮತಬ್ಯಾಂಕ್ ಸೃಷ್ಟಿಸಲಿದೆ ಎಂಬುದು ಅವರ ಲೆಕ್ಕಾಚಾರ.
ಡಿಎಂಕೆ ಮಾತ್ರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಣ್ಣಾಮಲೈ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ. ದ್ರಾವಿಡ ಸಿದ್ಧಾಂತವೇ ಬೇರೆ, ಅದು ತಮಿಳು ಸಂಸ್ಕೃತಿ ಮತ್ತು ಇಲ್ಲಿನ ಮಣ್ಣಿನ ಗುಣವನ್ನು ಹೊಂದಿದೆ. ಅಣ್ಣಾಮಲೈ ಅವರಿಗೆ ಇದು ಎಷ್ಟು ಅರ್ಥವಾಗಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಲಂಗೋವನ್ ತಿರುಗೇಟು ನೀಡಿದ್ದಾರೆ.
ಸದ್ಯಕ್ಕೆ ಅಣ್ಣಾಮಲೈ ತಾವು ಬಿಜೆಪಿ ತೊರೆಯುವ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ತಮಗೆ ಸದಾ ರಾಜಕೀಯ ಪ್ರೇರಣೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಆದರೆ ತೆರೆಮರೆಯಲ್ಲಿ ನಡೆಯುತ್ತಿರುವ ಹೊಸ ಸಂಘಟನೆಯ ಸಿದ್ಧತೆಗಳು ತಮಿಳುನಾಡಿನ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ದ್ರಾವಿಡ ಸಿದ್ಧಾಂತದ ನಂತರದ ಯುಗವನ್ನು ಬರೆಯಲು ಇಬ್ಬರು ಯುವ ನಾಯಕರು ಸಜ್ಜಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net