

ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿರುವ ವಿಐಟಿ ಭೋಪಾಲ್ ವಿಶ್ವವಿದ್ಯಾಲಯದಲ್ಲಿ ತಡರಾತ್ರಿ(ನ. 25) ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು,(VIT campus vandalized) ಕ್ಯಾಂಪಸ್ ಅನ್ನು ಧ್ವಂಸಗೊಳಿಸಲಾಗಿದ್ದು, ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ನ. 30ರವರೆಗೆ ವಿವಿಗೆ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಸುಮಾರು 4 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ವಿಐಟಿ ವಿವಿಯಲ್ಲಿ ಅಸಮರ್ಪಕ ಸೌಲಭ್ಯಗಳು, ವಿಶೇಷವಾಗಿ ಕಳಪೆ ಕುಡಿಯುವ ನೀರು, ಗುಣಮಟ್ಟವಿಲ್ಲದ ಆಹಾರ, ನೈರ್ಮಲ್ಯವಿಲ್ಲದ ಶೌಚಾಲಯಗಳ ವಿರುದ್ಧ ವಿದ್ಯಾರ್ಥಿಗಳು ಮಂಗಳವಾರ ತಡರಾತ್ರಿ ಅಷ್ಟಾ-ಪ್ರದೇಶದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಆರಂಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ವಿವಿಯ ಭದ್ರತಾ ಸಿಬ್ಬಂದಿ ಬಾಲಕರ ಹಾಸ್ಟೆಲ್ನ ಹೊರಗೆ ಕೆಲವು ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ವಿಡಿಯೋ ಕಾಣಿಸಿಕೊಳ್ತಿದ್ದಂತೆ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು, ಕ್ಯಾಂಪಸ್ನ ಕುಲಪತಿಗಳ ನಿವಾಸ ಸೇರಿ ಹಲವೆಡೆ ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದು, ಮೋಟಾರ್ ಸೈಕಲ್‌ಗಳು, ಕಾರುಗಳು ಮತ್ತು ವಿಶ್ವವಿದ್ಯಾಲಯದ ಬಸ್ ಸೇರಿದಂತೆ ಆರರಿಂದ ಏಳು ವಾಹನಗಳಿಗೆ ಹಾನಿ ಅಥವಾ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯಲು ಯೋಗ್ಯವಲ್ಲದ ನೀರಿನಿಂದಾಗಿ ಶಂಕಿತ ಕಾಮಾಲೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಕೆಲವು ಸಾವುನೋವುಗಳು ಸಂಭವಿಸಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ ವಿವಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ರಾತ್ರಿಯ ಪ್ರತಿಭಟನೆಯ ತೀವ್ರತೆ ಹರಿವಾಗುತ್ತಿದ್ದಂತೆ ಸೆಹೋರ್ ಎಸ್ಪಿ ಜಿಲ್ಲೆಯ ಐದು ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿ ಬಿಗಿಬಂದೋಬಸ್ತ್ ಮಾಡಿದ್ದಾರೆ (ಏಜೆನ್ಸೀಸ್).