ನಕಲಿ ನಂದಿನಿ ತುಪ್ಪ ಮಾರಾಟ ಜಾಲ; ದಂಧೆಯ ಕಿಂಗ್​ಪಿನ್ ದಂಪತಿ ಬಂಧಿಸಿದ ಪೊಲೀಸರು | Fake Nandini ghee

ಶಿವಕುಮಾರ್ ಮತ್ತು ರಮ್ಯಾ ಬಂಧಿಸಲ್ಪಟ್ಟ ದಂಪತಿ
ಶಿವಕುಮಾರ್ ಮತ್ತು ರಮ್ಯಾ ಬಂಧಿಸಲ್ಪಟ್ಟ ದಂಪತಿ
Published on

ಬೆಂಗಳೂರು: ರಾಜ್ಯದಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲವನ್ನು(Fake Nandini ghee) ಬೇಧಿಸಿರುವ ಪೊಲೀಸರು, ಇಂದು (ನ. 26) ಜಾಲದ ಪ್ರಮುಖ ಕಿಂಗ್​ಪಿನ್ ಎಂದು ಬೆಂಗಳೂರಿನ ಗಂಡ-ಹೆಂಡತಿಯನ್ನು ಬಂಧಿಸಿದ್ದಾರೆ.

ಶಿವಕುಮಾರ್ ಮತ್ತು ರಮ್ಯಾ ಬಂಧಿಸಲ್ಪಟ್ಟ ದಂಪತಿ. ಇಬ್ಬರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಒಡೆತನದ ' ನಂದಿನಿ ' ಬ್ರಾಂಡ್ ಅಡಿಯಲ್ಲಿ ತಮ್ಮದೇ ನಕಲಿ ಉತ್ಪಾದನಾ ಘಟಕ ತೆರೆದು ನಕಲಿ ತುಪ್ಪ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಸಿಬಿ ಅಧಿಕಾರಿಗಳು, ಆರೋಪಿಗಳು ನಡೆಸುತ್ತಿದ್ದ ಕಟ್ಟಡದ ಮೇಲೆ ದಾಳಿ ನಡೆಸಿದಾಗ ನಕಲಿ ತುಪ್ಪ ಉತ್ಪಾದಿಸಲು ಬಳಸುವ ದೊಡ್ಡ, ಅತ್ಯಾಧುನಿಕ ಯಂತ್ರೋಪಕರಣಗಳು ಪತ್ತೆಯಾಗಿವೆ. ದಂಪತಿಗಳು ಸುಧಾರಿತ ಕೈಗಾರಿಕಾ ಉಪಕರಣಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ನಕಲಿ 'ನಂದಿನಿ' ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಉತ್ಪಾದನಾ ಪ್ರಕ್ರಿಯೆಗಳಲ್ಲಿ ಬಳಸಲಾದ ಎಲ್ಲಾ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತನಿಖಾಧಿಕಾರಿಗಳು ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣಾ ಎಂಟರ್‌ಪ್ರೈಸಸ್‌ಗೆ ಸಂಬಂಧಿಸಿದ ಗೋದಾಮುಗಳು, ಅಂಗಡಿಗಳು ಮತ್ತು ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಇದು ಪೂರೈಕೆ ಕೇಂದ್ರ ಎಂದು ನಂಬಲಾಗಿದೆ. ಕಾರ್ಯಾಚರಣೆ ವೇಳೆ ತಮಿಳುನಾಡಿನಿಂದ ಕಲಬೆರಕೆ ಪ್ಯಾಕ್ ಮಾಡಿದ ತುಪ್ಪವನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಇನ್ನೂ ಪೊಲೀಸರು 1.26 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 56.95 ಲಕ್ಷ ರೂ. ಮೌಲ್ಯದ 8,136 ಲೀಟರ್ ಕಲಬೆರಕೆ ತುಪ್ಪ, ಅದನ್ನು ತಯಾರಿಸಲು ಬಳಸುವ ಯಂತ್ರೋಪಕರಣಗಳು, ಮಿಶ್ರಣ ಮಾಡಲು ಬಳಸುವ ತೆಂಗಿನಕಾಯಿ ಮತ್ತು ತಾಳೆ ಎಣ್ಣೆ, ಐದು ಮೊಬೈಲ್ ಫೋನ್‌ಗಳು, 1.19 ಲಕ್ಷ ರೂ. ನಗದು ಮತ್ತು 60 ಲಕ್ಷ ರೂ. ಮೌಲ್ಯದ ನಾಲ್ಕು ಬೊಲೆರೊ ಸರಕು ವಾಹನಗಳು ಸೇರಿವೆ. ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆಯೇ ಎಂದು ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಡೈರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ನಂದಿನಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು, ಆರೋಪಿಗಳು ಕಲಬೆರಕೆ ತುಪ್ಪವನ್ನು ತಯಾರಿಸಿ ಅದನ್ನು ಅಸಲಿ ಎಂದು ಬಿಂಬಿಸುವ ಮೂಲಕ ಮಾರಾಟ ಮಾಡಿ ಹಣ ಸಂಪಾದನೆ ಮಾಡ್ತಿದ್ದರು. ಅನುಮಾನಾಸ್ಪದ ಪೂರೈಕೆ ಮಾದರಿಗಳು, ಆಂತರಿಕ ತಪಾಸಣೆ ನಡೆಸಿದ ನಂತರ ಈ ದಂಧೆ ಬೆಳಕಿಗೆ ಬಂದಿತು. ನ. 14ರಂದು ಸಿಸಿಬಿ, ಕೆಎಂಎಫ್​ ವಿಜಿಲೆನ್ಸ್ ವಿಂಗ್​ ತಂಡ ಜಂಟಿ ತಂಡ ಈ ಜಾಲವನ್ನು ಪತ್ತೆಹಚ್ಚಿತ್ತು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net