ಟಿವಿಕೆಗೆ ಗೆಲ್ಲುವ ಶಕ್ತಿ ಇಲ್ಲ!...ದಳಪತಿ ಪಾರ್ಟಿಗೆ ತಿರುಮಾವಲವನ್ ಖಡಕ್ ಟಾಂಗ್ | Tamil Nadu Election

Tamil Nadu Election | ದಳಪತಿ ಪಾರ್ಟಿಗೆ ತಿರುಮಾವಲವನ್ ಖಡಕ್ ಟಾಂಗ್
Tamil Nadu Election | ದಳಪತಿ ಪಾರ್ಟಿಗೆ ತಿರುಮಾವಲವನ್ ಖಡಕ್ ಟಾಂಗ್
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Election) ಫಲಿತಾಂಶ ಮೇ 4ರಂದು ಪ್ರಕಟವಾಗಲಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಬಗ್ಗೆ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿದ್ದು, ಡಿಎಂಕೆಯ ಪ್ರಮುಖ ಮಿತ್ರ ಪಕ್ಷವಾದ ವಿದುತಲೈ ಚಿರುತೈಗಲ್ ಕಚ್ಚಿ ಮುಖ್ಯಸ್ಥ ತೋಲ್ ತಿರುಮಾವಲವನ್, ಟಿವಿಕೆ ತಮಗೆ ಕಠಿಣ ಸ್ಪರ್ಧಿ ಅಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿರುಮಾವಲವನ್, ಟಿವಿಕೆ ಪಕ್ಷವು ಕೇವಲ ಹೊಸ ಅಭ್ಯರ್ಥಿಯಾಗಿ ಡಿಎಂಕೆ ವಿರೋಧಿ ಮತ್ತು ಎಐಎಡಿಎಂಕೆ ವಿರೋಧಿ ಮತಗಳನ್ನು ಸೆಳೆಯಬಹುದೇ ಹೊರತು, ಮೈತ್ರಿಕೂಟವನ್ನು ಹಿಂದಿಕ್ಕುವ ಶಕ್ತಿ ಹೊಂದಿಲ್ಲ. ವಿಜಯ್ ಪಕ್ಷವು ಮತಗಳನ್ನು ವಿಭಜಿಸಬಹುದು, ಆದರೆ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಶಕ್ತಿಯ ಕೊರತೆ ಅವರಿಗಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಮೈತ್ರಿಕೂಟವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಕ್ಸಿಟ್ ಪೋಲ್ ಭವಿಷ್ಯ ಮತ್ತು ಟಿವಿಕೆ ತಿರುಗೇಟು

ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಮಿಶ್ರ ಫಲಿತಾಂಶವನ್ನು ನೀಡಿದ್ದು, ಟುಡೇಸ್ ಚಾಣಕ್ಯ ಡಿಎಂಕೆ ಮೈತ್ರಿಕೂಟಕ್ಕೆ 125 ಸ್ಥಾನಗಳು ಹಾಗೂ ವಿಜಯ್​ರ ಟಿವಿಕೆಗೆ 63 ಸ್ಥಾನಗಳ ಭವಿಷ್ಯ ನುಡಿದಿದೆ. ಆದರೆ, ಆಕ್ಸಿಸ್ ಮೈ ಇಂಡಿಯಾ ಒಂದು ಹೆಜ್ಜೆ ಮುಂದೆ ಹೋಗಿ ವಿಜಯ್ ಪಕ್ಷಕ್ಕೆ 98-120 ಸ್ಥಾನಗಳು ಸಿಗಬಹುದು ಎಂದು ಅಚ್ಚರಿಯ ಸುಳಿವು ನೀಡಿದೆ. ಈ ಮುನ್ಸೂಚನೆಗಳನ್ನು ತಿರಸ್ಕರಿಸಿದ ಟಿವಿಕೆ ನಾಯಕ ಕೆ.ಎ. ಸೆಂಗೊಟ್ಟೈಯನ್, ಸಮೀಕ್ಷೆಗಳು ಜನರ ಬೆಂಬಲವನ್ನು ಅಳೆಯುವಲ್ಲಿ ವಿಫಲವಾಗಿವೆ. ನಾವು 200 ಸ್ಥಾನಗಳನ್ನು ಗೆದ್ದು ತಮಿಳುನಾಡನ್ನು ಆಳಲಿದ್ದೇವೆ ಎಂದು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಹಸಿರು ಮತ್ತು ಶ್ವೇತ ಕ್ರಾಂತಿಯ ಬಳಿಕ ಈಗ ದಳಪತಿ ನೇತೃತ್ವದ ಶಿಳ್ಳೆ ಕ್ರಾಂತಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ಗುಡುಗಿದ್ದಾರೆ.

ಸಜ್ಜಾಗಿದೆ ಮೂರು ಹಂತದ ಭದ್ರತೆ

ಡಿಎಂಕೆ ತನ್ನ ಜಾತ್ಯತೀತ ಪ್ರಗತಿಶೀಲ ಒಕ್ಕೂಟದೊಂದಿಗೆ (ಕಾಂಗ್ರೆಸ್, ಡಿಎಂಡಿಕೆ, ವಿಸಿಕೆ, ಸಿಪಿಐ, ಸಿಪಿಎಂ) ಕಣದಲ್ಲಿದ್ದರೆ, ಎಐಎಡಿಎಂಕೆ ಮತ್ತು ಟಿವಿಕೆ ಸ್ವತಂತ್ರ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಏಪ್ರಿಲ್ 23 ರಂದು ನಡೆದ ಮತದಾನದ ತೀರ್ಪು ಮೇ 4 ರಂದು ಹೊರಬೀಳಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗವು ಮೂರು ಹಂತದ ಬಿಗಿ ಭದ್ರತೆಯನ್ನು ಕೈಗೊಂಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net