ಮುಂದಿನ ಪ್ರಧಾನಿ ವಿಜಯ್‌ ಎಂದಿದ್ದಕ್ಕೆ ರೊಚ್ಚಿಗೆದ್ದ ಕೈ ನಾಯಕರು!...ಮೈತ್ರಿಯಿಂದ ಹೊರಬರೋ ಮುನ್ನೆಚ್ಚರಿಕೆ ನೀಡ್ತಾ ಕಾಂಗ್ರೆಸ್​..? | TVK Congress Rift

TVK Congress Rift | ಮೈತ್ರಿಯಿಂದ ಹೊರಬರೋ ಮುನ್ನೆಚ್ಚರಿಕೆ ನೀಡ್ತಾ ಕಾಂಗ್ರೆಸ್​..?
TVK Congress Rift | ಮೈತ್ರಿಯಿಂದ ಹೊರಬರೋ ಮುನ್ನೆಚ್ಚರಿಕೆ ನೀಡ್ತಾ ಕಾಂಗ್ರೆಸ್​..?
Published on
TVK Congress Rift: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳುಗಳು ಕಳೆದಿದ್ದು, ಆಗಲೇ ತನ್ನ ಮೊದಲ ಪ್ರಮುಖ ಮೈತ್ರಿಕೂಟದ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ. ದೋಸ್ತಿಗಳ ನಡುವೆ ಅಸಮಾಧಾನ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಟಿವಿಕೆ ನಾಯಕರ ನಡುವೆ ಜೋರಾಗುತ್ತಿರುವ ವಿಜಯ್ ಮುಂದಿನ ಪ್ರಧಾನಿ ಎಂಬ ಕೂಗು. 
ಇತ್ತೀಚಿನ ಇಂಡಿಯಾ ಟುಡೇ-ಸಿವೋಟರ್ ದೇಶವ್ಯಾಪಿ ಸಮೀಕ್ಷೆಯಲ್ಲಿ ವಿಜಯ್ ಅವರು ಪ್ರಧಾನಿ ಹುದ್ದೆಯ ಮೂರನೇ ಅತ್ಯಂತ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದ್ದು, ಟಿವಿಕೆ ಮತ್ತು ಕಾಂಗ್ರೆಸ್ ನಡುವಿನ ಘರ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. 2029 ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷಗಳ ಮುಖವಾಗಿ ಬಿಂಬಿಸಲು ಶ್ರಮಿಸುತ್ತಿರುವ ಕಾಂಗ್ರೆಸ್‌ಗೆ ಟಿವಿಕೆಯ ಈ ನಡೆ ತೀವ್ರ ಅಸಮಾಧಾನ ತಂದಿದೆ.
ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ನಂತರ ಟಿವಿಕೆಯಲ್ಲಿ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಆಗ್ರಹ ಹೆಚ್ಚಾಗಿದೆ. ಮುಖ್ಯಮಂತ್ರಿಯಾಗಿ ಕೇವಲ 100 ದಿನ ಪೂರೈಸಿರುವ ವಿಜಯ್ ಅವರಿಗೆ ಸಮೀಕ್ಷೆಯಲ್ಲಿ ಶೇ. 9 ಕ್ಕಿಂತ ಹೆಚ್ಚು ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ (ಶೇ. 48.7) ಮತ್ತು ರಾಹುಲ್ ಗಾಂಧಿ (ಶೇ. 27.1) ನಂತರದ ಸ್ಥಾನದಲ್ಲಿ ವಿಜಯ್ ಇದ್ದಾರೆ. ರಾಷ್ಟ್ರ ರಾಜಕೀಯದಲ್ಲಿ ದಶಕಗಳ ಅನುಭವ ಹೊಂದಿರುವ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ಹಿರಿಯ ನಾಯಕರನ್ನು ವಿಜಯ್ ಹಿಂದಿಕ್ಕಿದ್ದಾರೆ.

ಮೈತ್ರಿ ತೊರೆಯುವ ಎಚ್ಚರಿಕೆ ನೀಡಿದ ಕಾಂಗ್ರೆಸ್

ಸಮೀಕ್ಷೆಯ ಫಲಿತಾಂಶ ಬಂದ ನಂತರ ಟಿವಿಕೆ ನಾಯಕರು ಮತ್ತು ಸಚಿವರು ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕೆಂಬ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ತೂತುಕುಡಿಯಂತಹ ಪ್ರದೇಶಗಳಲ್ಲಿ ವಿಜಯ್ ಫಾರ್ ಪಿಎಂ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಮೈತ್ರಿಕೂಟದ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿವೆ. ವಿಜಯ್ ಈ ವಿಚಾರವಾಗಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ರಾಜಕೀಯದಲ್ಲಿ ಮೌನವೂ ಒಂದು ಶಕ್ತಿಶಾಲಿ ಅಸ್ತ್ರವಾಗಿದೆ. ಆದಾಗ್ಯೂ, ಇದುವರೆಗೆ ಈ ವಿಷಯವನ್ನು ನಿರ್ಲಕ್ಷಿಸುತ್ತಿದ್ದ ಕಾಂಗ್ರೆಸ್‌ಗೆ ವಿಜಯ್ ಮೌನ ಮತ್ತು ಟಿವಿಕೆ ನಾಯಕರ ಹೇಳಿಕೆಗಳು ತೀವ್ರ ಕಿರಿಕಿರಿ ಉಂಟುಮಾಡಿರುವುದರಲ್ಲಿ ಅನುಮಾನವಿಲ್ಲ.
ಆಗಸ್ಟ್ 30 ರಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯ ಸಚಿವ ಎಸ್. ರಾಜೇಶ್ ಕುಮಾರ್, 2029 ರ ಸಾರ್ವತ್ರಿಕ ಚುನಾವಣೆಯಲ್ಲಿ ಟಿವಿಕೆ ರಾಹುಲ್ ಗಾಂಧಿಯವರನ್ನು ಬೆಂಬಲಿಸದಿದ್ದರೆ ಮೈತ್ರಿಯಿಂದ ಹೊರಬರುವುದಾಗಿ ಎಚ್ಚರಿಕೆ ನೀಡಿದಾಗ ಪರಿಸ್ಥಿತಿ ತಾರಕಕ್ಕೇರಿತು. ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿವಿಕೆ ತನ್ನ ನಿಲುವನ್ನು ಬದಲಾಯಿಸದಿದ್ದರೆ ಕಾಂಗ್ರೆಸ್‌ನ ಇಬ್ಬರೂ ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕಿಯ ಆಸನ ಬದಲಾವಣೆ

ರಾಜೇಶ್ ಕುಮಾರ್ ಅವರ ಈ ಖಡಕ್ ಹೇಳಿಕೆಯ ಮರುದಿನವೇ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ತಾರಗೈ ಕುತ್ಬರ್ಟ್ ಅವರ ಆಸನದ ವ್ಯವಸ್ಥೆಯನ್ನು ಬದಲಾಯಿಸಲಾಯಿತು. ಕೋಲಚೆಲ್ ಶಾಸಕಿಯಾದ ಕುತ್ಬರ್ಟ್ ಅವರನ್ನು ಮುಂಚೆ ಟಿವಿಕೆ ಶಾಸಕರಿಗೆ ಮೀಸಲಿಟ್ಟಿದ್ದ ಜಾಗದಿಂದ ವಿರೋಧ ಪಕ್ಷದ ಸಾಲಿನ ಮುಂಭಾಗಕ್ಕೆ ಸ್ಥಳಾಂತರಿಸಲಾಯಿತು. ಟಿವಿಕೆ-ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದ್ದಂತೆ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಮಾಣಿಕಮ್ ಠಾಗೋರ್ ಸೋಮವಾರ ಸಂಜೆ ಸಚಿವಾಲಯದಲ್ಲಿ ವಿಜಯ್ ಅವರನ್ನು ಭೇಟಿಯಾದರು. ಈ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಉಭಯ ಪಕ್ಷಗಳು ಗೌಪ್ಯತೆ ಕಾಯ್ದುಕೊಂಡಿವೆ.
ಆದರೆ, ಕುತ್ಬರ್ಟ್ ಅವರು ಭಿನ್ನಾಭಿಪ್ರಾಯದ ಊಹಾಪೋಹಗಳನ್ನು ಅಲ್ಲಗಳೆದಿದ್ದು, ವಿಜಯ್ ಮತ್ತು ರಾಹುಲ್ ಗಾಂಧಿ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯ್ ಫಾರ್ ಪಿಎಂ ಎಂಬ ಕರೆ ಟಿವಿಕೆ ಕಾರ್ಯಕರ್ತರ ಉತ್ಸಾಹದಿಂದ ಬಂದಿದ್ದೇ ಹೊರತು, ಇದು ಪಕ್ಷದ ಅಧಿಕೃತ ನಿಲುವಲ್ಲ ಎಂದಿದ್ದಾರೆ. ಅಲ್ಲದೆ ತಮ್ಮ ಆಸನ ಬದಲಾವಣೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಅದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ.

ವಿಧಾನಸಭೆಯ ಸಂಖ್ಯಾಬಲ ಹೀಗಿದೆ!

ವಿಧಾನಸಭೆಯಲ್ಲಿ ಅತ್ಯಲ್ಪ ಬಹುಮತ ಹೊಂದಿರುವ ಟಿವಿಕೆ ಸರ್ಕಾರಕ್ಕೆ ಈ ರಾಜಕೀಯ ಪರಿಸ್ಥಿತಿ ಅತ್ಯಂತ ನಿರ್ಣಾಯಕವಾಗಿದೆ. ತಮಿಳುನಾಡು ಚುನಾವಣೆಯಲ್ಲಿ  ವಿಜಯ್ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, 118 ರ ಬಹುಮತದ ಗಡಿಯನ್ನು ತಲುಪಲು 11 ಸ್ಥಾನಗಳ ಕೊರತೆ ಇತ್ತು. ಬಹಳಷ್ಟು ಚರ್ಚೆಗಳ ನಂತರ ಟಿವಿಕೆ, ಕಾಂಗ್ರೆಸ್ (5 ಶಾಸಕರು), ವಿಸಿಕೆ (2), ಐಯುಎಂಎಲ್ (2) ಹಾಗೂ ಎಡಪಕ್ಷಗಳ (4) ಹೊರಗಿನ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ನಂತರ 2 ಶಾಸಕರನ್ನು ಹೊಂದಿರುವ ಎಂಡಿಎಂಕೆ ಕೂಡ ಸರ್ಕಾರ ರಚಿಸಲು ಬೆಂಬಲ ನೀಡಿತು.
ಪ್ರಸ್ತುತ, ಆರು ಎಐಎಡಿಎಂಕೆ ಶಾಸಕರ ರಾಜೀನಾಮೆ ಮತ್ತು ವಿಜಯ್ ಅವರು ತಿರುಚಿ ಈಸ್ಟ್ ಕ್ಷೇತ್ರವನ್ನು ತೆರವುಗೊಳಿಸಿದ ನಂತರ 234 ಸದಸ್ಯರ ವಿಧಾನಸಭೆಯಲ್ಲಿ 7 ಸ್ಥಾನಗಳು ಖಾಲಿ ಇವೆ. ಇದರಿಂದಾಗಿ ಪ್ರಸ್ತುತ ವಿಧಾನಸಭೆಯ ಬಲ 227 ಕ್ಕೆ ಇಳಿದಿದ್ದು, ಬಹುಮತದ ಗಡಿ 114 ಆಗಿದೆ. ಒಂದು ವೇಳೆ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡರೆ ತಕ್ಷಣಕ್ಕೆ ವಿಜಯ್ ಸರ್ಕಾರ ಬಿದ್ದುಹೋಗದಿರಬಹುದು, ಆದರೆ ಸರ್ಕಾರವು ಸಂಕಷ್ಟಕ್ಕೆ ಸಿಲುಕುವುದಂತೂ ಖಚಿತ.
ಎಂಡಿಎಂಕೆಯಂತಹ ಇತರ ಅಂಗಪಕ್ಷಗಳು ಸಹ ಟಿವಿಕೆ ನಿಲುವನ್ನು ವಿರೋಧಿಸಿದ್ದು, ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಮಾತ್ರವೇ ಏಕೈಕ ಆಯ್ಕೆ ಎಂದು ಸ್ಪಷ್ಟಪಡಿಸಿವೆ. ಪಕ್ಷದ ಮುಖ್ಯಸ್ಥ ವೈಕೋ ಅವರು ತಮ್ಮ ಸಚಿವರಿಗೆ ಕಡಿವಾಣ ಹಾಕುವಂತೆ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ.
ಮೈತ್ರಿಕೂಟದಲ್ಲಿನ ಈ ಬಿರುಕನ್ನು ಗಮನಿಸಿದ ಬಿಜೆಪಿ, ರಾಹುಲ್ ಗಾಂಧಿಗೆ ಅವಮಾನವಾದ ನಂತರವೂ ಕಾಂಗ್ರೆಸ್ ಏಕೆ ಟಿವಿಕೆ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದೆ. ಟಿವಿಕೆ ಸಚಿವರ ಹೇಳಿಕೆಗಳು ಕಾಂಗ್ರೆಸ್ ಮೇಲಿನ ಅಪನಂಬಿಕೆಯನ್ನು ತೋರಿಸುತ್ತಿದ್ದರೂ, ಈ ಅವಕಾಶವಾದಿ ಕಾಂಗ್ರೆಸ್ ಸಚಿವ ಸಂಪುಟದಿಂದ ಹೊರಬರಲು ಯಾವುದು ತಡೆಯುತ್ತಿದೆ...? ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ ಆರ್ ಕೇಶವನ್ ಪ್ರಶ್ನಿಸಿದ್ದಾರೆ.

ಹೆಚ್ಚಾದ ವಿಜಯ್ ಪ್ರಧಾನಿ ಅಭ್ಯರ್ಥಿ ಬೇಡಿಕೆ

ಮೂಡ್​ ಆಫ್​ ದಿ ನೇಷನ್ ಸಮೀಕ್ಷೆಗೂ ಮುನ್ನವೇ, ಕೆಲ ಸಚಿವರು ಮುಂದಿನ ಪ್ರಧಾನಿ ದಕ್ಷಿಣ ಭಾರತದವರಿಂದಲೇ ಆಗಬೇಕು ಎಂಬ ಹೇಳಿಕೆಯನ್ನು ನೀಡಿದ್ದರು. ಕಳೆದ ತಿಂಗಳು ಮಾತನಾಡಿದ್ದ ಸಚಿವ ಆಧವ್ ಅರ್ಜುನ್, ಪ್ರಸ್ತುತ ಕೇವಲ ಐದು ಅಥವಾ ಆರು ಹಿಂದಿ ಮಾತನಾಡುವ ಉತ್ತರ ಭಾರತದ ರಾಜ್ಯಗಳು ಒಟ್ಟಾಗಿ ಪ್ರಧಾನಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ ಎಂದಿದ್ದರು. ವಿಜಯ್ ಫಾರ್ ಪಿಎಂ ಬೇಡಿಕೆ ವಿಧಾನಸಭೆಯಲ್ಲೂ ಕೇಳಿ ಬಂದಿತ್ತು. ವಿಜಯ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಚಿವ ಡಿ. ಶರತ್‌ಕುಮಾರ್, ಅವರನ್ನು ಮುಂದಿನ ಭಾರತದ ಪ್ರಧಾನಿ ಎಂದು ಘೋಷಿಸಿದ್ದರು. ನಮ್ಮ ನಾಯಕ... ಮುಂದಿನ ಭಾರತದ ಪ್ರಧಾನಿ. ಸಮಯ ನೋಡದೆ ಕೆಲಸ ಮಾಡುತ್ತೀರಿ, ನೀವು ಖಂಡಿತವಾಗಿಯೂ ಮುಂದಿನ ಪ್ರಧಾನ ಮಂತ್ರಿ ಎಂದಿದ್ದರು.
ಅದಕ್ಕೂ ಮುನ್ನ ಸಚಿವ ಕೆ ಎ ಸೆಂಗೊಟ್ಟೈಯನ್, ಸರ್ಕಾರದ 100 ದಿನಗಳ ಸಾಧನೆಗಳನ್ನು ಪಟ್ಟಿ ಮಾಡುವಾಗ, ವಿಜಯ್ ಅವರಿಗೆ ಇಡೀ ಭಾರತವನ್ನು ಆಳುವ ಶಕ್ತಿ ಇದೆ ಎಂದು ಹೇಳಿದ್ದರು. ನಾನು ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ಪ್ರಯಾಣಿಸಿದ್ದೇನೆ. ವಿಜಯ್ ಅವರು ತಮಿಳುನಾಡನ್ನು ಮಾತ್ರವಲ್ಲದೆ ಭವಿಷ್ಯದ ಭಾರತವನ್ನು ಆಳುವ ಶಕ್ತಿಯಾಗಿದ್ದಾರೆ ಎಂದಿದ್ದರು.

ಎಲ್ಲಾ ಓಕೆ...ಆದ್ರೆ ವಾಸ್ತವ ಸ್ಥಿತಿ ಏನು...?

ಪ್ರಸ್ತುತ ಪರಿಸ್ಥಿತಿಯಲ್ಲಿ ವಿಜಯ್ ಪ್ರಧಾನಿಯಾಗುವುದು ಬಹುದೂರದ ಮಾತು. ರಾಷ್ಟ್ರೀಯ ರಾಜಕೀಯಕ್ಕೆ ಕಾಲಿಡುವ ಮುನ್ನ ಅವರು ಮುಖ್ಯಮಂತ್ರಿಯಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಿದೆ. ನಟನೆಯಿಂದ ರಾಜಕಾರಣಕ್ಕೆ ಕಾಲಿಟ್ಟಿರುವ ಅವರು, ಭ್ರಷ್ಟಾಚಾರದ ವಿರುದ್ಧದ ಕಠಿಣ ನಿಲುವು, ತಪ್ಪುಗಳನ್ನು ತಿದ್ದಿಕೊಳ್ಳುವ ಮನಸ್ಥಿತಿ ಮತ್ತು ಕಾರ್ಯವೈಖರಿಯಿಂದ ಅಭಿಮಾನಿಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ, ಕ್ಷೇತ್ರ ಮರುಪಂಗಡಣೆ ವಿಚಾರದಲ್ಲಿ ನಿಲುವು ಬದಲಾಯಿಸಿದ್ದು ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಬಂಧನದಂತಹ ದ್ವೇಷದ ರಾಜಕೀಯದ ಆರೋಪಗಳು ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲಿನ ಟೀಕೆಗಳಿಗೆ ಕಾರಣವಾಗಿವೆ.
ಇನ್ನೊಂದೆಡೆ ಟಿವಿಕೆ ತಮಿಳುನಾಡಿನಿಂದ ಹೊರಗೂ ವಿಸ್ತರಿಸಲು ಯತ್ನಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ವಾರ ಕೇರಳ ಬಿಜೆಪಿಯ ಉಪಾಧ್ಯಕ್ಷ ಮತ್ತು ನಟ ಎಸ್. ದೇವನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಟಿವಿಕೆ ಸೇರುವ ಸಾಧ್ಯತೆಯಿದೆ. ಅವರಿಗೆ ಪಕ್ಷದ ಕೇರಳ ರಾಜ್ಯ ಅಧ್ಯಕ್ಷ ಹುದ್ದೆ ನೀಡುವ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ, ವಿಜಯ್ ಫಾರ್ ಪಿಎಂ ಕೂಗು ಸದ್ಯಕ್ಕೆ ಅವಧಿಗಿಂತ ಮುಂಚಿತವಾಗಿ ಬಂದಂತಿದೆ. ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ ಮೂರು ವರ್ಷಗಳ ಸಮಯವಿದೆ ಮತ್ತು ವಿಜಯ್ ಮುಖ್ಯಮಂತ್ರಿಯಾಗಿ ಕೇವಲ 100 ದಿನಗಳನ್ನಷ್ಟೇ ಪೂರೈಸಿದ್ದಾರೆ.
ಆದರೆ ಟಿವಿಕೆ ನಿಜವಾಗಿಯೂ ವಿಜಯ್ ಅವರನ್ನು ರಾಷ್ಟ್ರೀಯ ನಾಯಕನಾಗಿ ಬಿಂಬಿಸಲು ಗಂಭೀರವಾಗಿ ಯೋಚಿಸುತ್ತಿದೆಯೇ ಅಥವಾ ರಾಜಕೀಯ ವಲಯದ ನಾಡಿಮಿಡಿತವನ್ನು ಪರೀಕ್ಷಿಸುತ್ತಿದೆಯೇ ಎಂಬುದೇ ಈಗ ಎದುರಾಗಿರುವ ಅತಿ ದೊಡ್ಡ ಪ್ರಶ್ನೆ. ಇದಕ್ಕೆ ಉತ್ತರ ಸಿಗಬೇಕಾದರೆ ಇನ್ನು ಎರಡುವರೆ ವರ್ಷ ದೇಶದ ಜನತೆ ಕಾಯಲೇಬೇಕು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net