ಹೈಕಮಾಂಡ್ ಲೆಕ್ಕಾಚಾರವನ್ನೇ ಬದಲಿಸಿತು ಆ 22 ಸೀಟುಗಳ ತಾಕತ್ತು! ಸತೀಶನ್ ಆಯ್ಕೆಯ ಹಿಂದೆ ಅಡಗಿದೆ ದೊಡ್ಡ ರಾಜಕೀಯ ತಂತ್ರ | VD Satheesan

 VD Satheesan | ಹೈಕಮಾಂಡ್ ಲೆಕ್ಕಾಚಾರವನ್ನೇ ಬದಲಿಸಿತು ಆ 22 ಸೀಟುಗಳ ತಾಕತ್ತು!
VD Satheesan | ಹೈಕಮಾಂಡ್ ಲೆಕ್ಕಾಚಾರವನ್ನೇ ಬದಲಿಸಿತು ಆ 22 ಸೀಟುಗಳ ತಾಕತ್ತು!
Published on
VD Satheesan: ಗುರುವಾರ ಕೇರಳದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ತಿರುವೊಂದು ದಾಖಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್ ಬದಲಿಗೆ ಜನರ ಆಯ್ಕೆ ಎಂದೇ ಬಿಂಬಿತವಾಗಿರುವ ವಿ.ಡಿ. ಸತೀಶನ್​ರನ್ನು ದೇವರ ನಾಡಿನ ಮುಖ್ಯಮಂತ್ರಿಯನ್ನಾಗಿ ಘೋಷಿಸಿದೆ.
ಆರಂಭದಲ್ಲಿ 61 ವರ್ಷದ ಸತೀಶನ್ ಸಿಎಂ ರೇಸ್​ನಲ್ಲಿ ಹಿಂದುಳಿದಿದ್ದಾರೆ ಎಂದು ಅನೇಕರು ಭಾವಿಸಿದ್ದರು, ಏಕೆಂದರೆ ಕಳೆದ ವಾರ ಘೋಷಣೆಯಾದ ಕೇರಳದ ಚುನಾವಣೆಯ ಫಲಿತಾಂಶದ ದಿನ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದಾಗ, ಈ ಗೆಲುವಿನ ಕೀರ್ತಿ ಸಂಪುರ್ಣವಾಗಿ ಕೆ.ಸಿ. ವೇಣುಗೋಪಾಲ್​ಗೆ ಸಂದಿತ್ತು.
ಕಾಂಗ್ರೆಸ್​ ಕಚೇರಿಗಳ ಮುಂದೆ ವೇಣುಗೋಪಾಲ್​ರ ಬೆಂಬಲಿಗರ ಪೋಸ್ಟರ್‌ಗಳು ರಾರಾಜಿಸಿದ್ದವು. ಅಷ್ಟೇ ಅಲ್ಲದೆ, ಪಕ್ಷದ 63 ಶಾಸಕರಲ್ಲಿ ಸುಮಾರು 47 ಮಂದಿ ವೇಣುಗೋಪಾಲ್ ಪರವಾಗಿದ್ದರು ಮತ್ತು ರಾಹುಲ್ ಗಾಂಧಿ ಬೆಂಬಲವೂ ಅವರಿಗಿತ್ತು. ಆದರೂ ಚುನಾವಣಾ ಫಲಿತಾಂಶದ 10 ದಿನಗಳ ಬಳಿಕ ಸತೀಶನ್ ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಅಚ್ಚರಿಯ ನಿರ್ಧಾರ ಕೈಗೊಂಡಿದೆ.

ಸತೀಶನ್​​ರನ್ನೇ ಆಯ್ಕೆ ಮಾಡಿದ್ದೇಕೆ..?

ಸತೀಶನ್ ಆಯ್ಕೆಯ ಹಿಂದೆ ಪ್ರಬಲ ಕಾರಣಗಳಿವೆ. ಅವರು ಕೇವಲ ಹಿರಿಯ ನಾಯಕನಷ್ಟೇ ಅಲ್ಲದೆ, ಹಿಂದಿನ ಸರ್ಕಾರದ ಸಮಯದಲ್ಲಿ ವಿರೋಧ ಪಕ್ಷದ ನಾಯಕನಾಗಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. 2001 ರಿಂದ ಪರವೂರು ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಅವರಿಗೆ ರಾಜ್ಯಾದ್ಯಂತ ಜನರ ಅಭ್ಯರ್ಥಿ ಎಂಬ ಹೆಸರಿದೆ. ವೇಣುಗೋಪಾಲ್​ರನ್ನು ಮುಖ್ಯಮಂತ್ರಿಯಾಗಿ ನೇಮಿಸುವುದರ ವಿರುದ್ಧ ಕೇಳಿಬಂದ ಸಾರ್ವಜನಿಕ ಆಕ್ರೋಶ ಮತ್ತು ಪೋಸ್ಟರ್‌ಗಳು ಸತೀಶನ್​ಗೆ ಜನರ ಬೆಂಬಲ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸಿದ್ದವು. ಇದರ ಜೊತೆಗೆ, ಯುಡಿಎಫ್‌ನ ಪ್ರಬಲ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸತೀಶನ್​ಗೆ ನೀಡಿದ ಬೆಂಬಲವು ಈ ಆಯ್ಕೆಯನ್ನು ಸುಲಭಗೊಳಿಸಿತು. 22 ಸ್ಥಾನಗಳನ್ನು ಹೊಂದಿರುವ ಐಯುಎಂಎಲ್ ಬೆಂಬಲವಿಲ್ಲದೆ ಸರ್ಕಾರ ರಚಿಸುವುದು ಕಾಂಗ್ರೆಸ್‌ಗೆ ಕಷ್ಟಸಾಧ್ಯವಾಗಿತ್ತು.

ವೇಣುಗೋಪಾಲ್​​ರನ್ನೇಕೆ ಕೈ ಬಿಟ್ಟರು..?

ಇನ್ನು ವೇಣುಗೋಪಾಲ್​​ರನ್ನು ಏಕೆ ಕೈಬಿಡಲಾಯಿತು ಎಂಬ ಪ್ರಶ್ನೆಗೆ ಇರುವ ಪ್ರಮುಖ ಉತ್ತರ ಅವರ ಲೋಕಸಭಾ ಸದಸ್ಯತ್ವ. ವೇಣುಗೋಪಾಲ್ ಮುಖ್ಯಮಂತ್ರಿಯಾದರೆ ಆರು ತಿಂಗಳೊಳಗೆ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಉಪಚುನಾವಣೆಯ ಮೂಲಕ ಸ್ಪರ್ಧಿಸಬೇಕಿತ್ತು. ಇದು ಸಂವಿಧಾನಬದ್ಧವಾಗಿ ಅನಿವಾರ್ಯವಲ್ಲದಿದ್ದರೂ (ಹಿಂದೆ ಮಮತಾ ಬ್ಯಾನರ್ಜಿ ಅಥವಾ ಯೋಗಿ ಆದಿತ್ಯನಾಥ್ ರೀತಿ), ಈ ಪ್ರಕ್ರಿಯೆಯು ರಾಜಕೀಯ ಅನಿಶ್ಚಿತತೆಗೆ ಕಾರಣವಾಗಬಹುದು ಎಂಬ ಭಯ ಕಾಂಗ್ರೆಸ್‌ಗಿತ್ತು ಎನ್ನಲಾಗಿದೆ.
ಒಂದು ವೇಳೆ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಯಾದವರು ಸೋತರೆ ಅದು ಕೇವಲ ವೈಯಕ್ತಿಕ ಸೋಲಲ್ಲದೆ ಇಡೀ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ದೊಡ್ಡ ಮುಜುಗರ ಉಂಟುಮಾಡುವ ಅಪಾಯವಿರುತ್ತದೆ. ಅಲ್ಲದೆ, ಅವರು ಲೋಕಸಭೆಯಲ್ಲಿ ಪ್ರತಿನಿಧಿಸುವ ಆಲಪ್ಪುಳ ಕ್ಷೇತ್ರಕ್ಕೆ ಮತ್ತೊಂದು ಉಪಚುನಾವಣೆ ಎದುರಿಸುವ ಅನಿವಾರ್ಯತೆ ಇರುತ್ತಿತ್ತು. ಈ ಎಲ್ಲಾ ಸಂಕೀರ್ಣತೆಗಳನ್ನು ಮತ್ತು ಅಸಮಾಧಾನದ ಅಪಾಯಗಳನ್ನು ಮನಗಂಡ ಕಾಂಗ್ರೆಸ್, ಅಂತಿಮವಾಗಿ ತಾನು ಬಯಸಿದ ವ್ಯಕ್ತಿಗಿಂತಲೂ ಪ್ರಸ್ತುತ ಸಂದರ್ಭಕ್ಕೆ ಬೇಕಾದ ವ್ಯಕ್ತಿಯನ್ನೇ ಆಯ್ಕೆ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net