ಅಂದೇ ನುಡಿದಿದ್ದರು ಯುಡಿಎಫ್​​ನ ಶತಕದ ಭವಿಷ್ಯ!...ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸಂಕ್ಷಿಪ್ತ ಪರಿಚಯ ಇಲ್ಲಿದೆ | V D Satheesan

V D Satheesan | .ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್
V D Satheesan | .ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್
Published on
V D Satheesan: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯಭೇರಿ ಬಾರಿಸಿದ ನಂತರ, ಕಳೆದ ಹತ್ತು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಮನೆಮಾಡಿದ್ದ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಆರು ಬಾರಿ ಶಾಸಕರಾಗಿರುವ ವಿ.ಡಿ. ಸತೀಶನ್​​ರನ್ನು ಕೇರಳದ ನೂತನ ಮುಖ್ಯಮಂತ್ರಿಯನ್ನಾಗಿ ಗುರುವಾರ ಆಯ್ಕೆ ಮಾಡಲಾಗಿದೆ.
ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿ ಯುಡಿಎಫ್ ಮೈತ್ರಿಕೂಟವು 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಮೂರನೇ ಎರಡರಷ್ಟು ಬಹುಮತ ಪಡೆದಿದ್ದರೂ, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಮ್ಯಾರಥಾನ್ ಚರ್ಚೆಗಳು ನಡೆದಿದ್ದವು. ಈ ಹುದ್ದೆಗಾಗಿ ಸತೀಶನ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಹೆಸರುಗಳು ಬಲವಾಗಿ ಕೇಳಿಬಂದಿದ್ದವು.

ರಾಹುಲ್​-ಖರ್ಗೆ ಭೇಟಿ ವೇಳೆ ನಡೆದಿದ್ದೇನು..?

ಈ ಎಲ್ಲ ಗೊಂದಲಗಳ ನಡುವೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸುಮಾರು 40 ನಿಮಿಷಗಳ ಕಾಲ ಸುದೀರ್ಘ ಸಮಾಲೋಚನೆ ನಡೆಸಿದ ಮರುದಿನವೇ ಈ ಅಧಿಕೃತ ಘೋಷಣೆ ಹೊರಬಿದ್ದಿದೆ. 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ (ಕೆಇಸಿ) 8 ಮತ್ತು ಆರ್‌ಎಸ್‌ಪಿ 3 ಸ್ಥಾನಗಳನ್ನು ಹೊಂದಿವೆ.
ಯುಡಿಎಫ್‌ನ ಪ್ರಬಲ ಮಿತ್ರಪಕ್ಷವಾದ ಐಯುಎಂಎಲ್ ಮೊದಲಿನಿಂದಲೂ ಸತೀಶನ್ ಪರವಾಗಿ ನಿಂತಿತ್ತು, ಆದರೂ ಕಾಂಗ್ರೆಸ್​ ಹೈಕಮಾಂಡ್ ಸಮೀಕರಣಗಳು, ಜಾತಿ ಮತ್ತು ಸಮುದಾಯಗಳ ದೃಷ್ಟಿಕೋನ ಹಾಗೂ ರಾಷ್ಟ್ರೀಯ ಕಾರ್ಯತಂತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರಕ್ಕೆ ಬಂದಿತು. ಪಕ್ಷದ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ನಂತರವೂ ಅನಿಶ್ಚಿತತೆ ಮುಂದುವರಿದಿತ್ತು, ಆದರೆ ಅಂತಿಮವಾಗಿ ಸತೀಶನ್​ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಶತಕದ ಭವಿಷ್ಯ ನುಡಿದಿದ್ದ ಸತೀಶನ್

ವಿ ಡಿ ಸತೀಶನ್ ರಾಜಕೀಯ ದೂರದೃಷ್ಟಿ ಮತ್ತು ಕಾರ್ಯತಂತ್ರಗಳು ಅವರ ಇಂದಿನ ಉನ್ನತ ಸ್ಥಾನಕ್ಕೆ ಭದ್ರವಾದ ಅಡಿಪಾಯ ಹಾಕಿವೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಹಲವಾರು ಉಪಚುನಾವಣೆಗಳು, 2024ರ ಲೋಕಸಭಾ ಚುನಾವಣೆ ಮತ್ತು 2025ರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳನ್ನು ಅವರು ಮೊದಲೇ ನಿಖರವಾಗಿ ಊಹಿಸಿದ್ದರು. ಇದು ಚುನಾವಣಾ ವಾಸ್ತವಗಳ ಬಗ್ಗೆ ಅವರಿಗಿರುವ ಆಳವಾದ ತಿಳುವಳಿಕೆಯನ್ನು ಸಾಬೀತುಪಡಿಸಿದೆ.
ಅವರ ನಾಯಕತ್ವದಡಿ ಯುಡಿಎಫ್ (UDF) ಒಕ್ಕೂಟ 2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದ 20 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಈ ಅದ್ಭುತ ಸಾಧನೆ ಇತ್ತೀಚಿನ ವಿಧಾನಸಭಾ ಚುನಾವಣೆಯ ಗೆಲುವಿಗೆ ಭದ್ರವಾದ ಪೀಠಿಕೆಯಾಯಿತು. ವಿಶೇಷವಾಗಿ, ಕಳೆದ ಫೆಬ್ರವರಿ ಮತ್ತು ಮಾರ್ಚ್ ನಡುವೆ ಕಾಸರಗೋಡಿನಿಂದ ತಿರುವನಂತಪುರದವರೆಗೆ ಅವರು ನಡೆಸಿದ 30 ದಿನಗಳ ಯುಡಿಎಫ್ ಪುದುಯುಗ ಯಾತ್ರೆ ಸತೀಶನ್ ನಾಯಕತ್ವವನ್ನು ಜನಸಾಮಾನ್ಯರ ಮಟ್ಟದಲ್ಲಿ ಮತ್ತಷ್ಟು ಗಟ್ಟಿಗೊಳಿಸಿತು. ಈ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸತೀಶನ್ ಸಾರ್ವಜನಿಕವಾಗಿ ಭವಿಷ್ಯ ನುಡಿದಿದ್ದರು. ಅಂದು ಅನೇಕರು ಈ ಮುನ್ಸೂಚನೆಯನ್ನು ಲಘುವಾಗಿ ಪರಿಗಣಿಸಿದ್ದರೂ, ಅಂತಿಮ ಫಲಿತಾಂಶ ಬಂದಾಗ ಯುಡಿಎಫ್​ ಭರ್ಜರಿ ಜಯ ಸಾಧಿಸಿತ್ತು.

ಯಾರು ಈ ಸತೀಶನ್..

ವಿ ಡಿ ಸತೀಶನ್ 2001 ರಿಂದ ಎರ್ನಾಕುಲಂ ಜಿಲ್ಲೆಯ ಪರವೂರು ವಿಧಾನಸಭಾ ಕ್ಷೇತ್ರವನ್ನು ಸತತ ಆರು ಬಾರಿ ಪ್ರತಿನಿಧಿಸುತ್ತಾ ಬಂದಿದ್ದು, ಕೇರಳ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. 1964 ರಲ್ಲಿ ಕೊಚ್ಚಿಯ ನೆಟ್ಟೂರಿನಲ್ಲಿ ಜನಿಸಿದ ಇವರು ತಳಮಟ್ಟದ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ವೃತ್ತಿಯಿಂದ ವಕೀಲರಾದ ಸತೀಶನ್, ಕೇರಳ ವಿದ್ಯಾರ್ಥಿ ಒಕ್ಕೂಟ (ಕೆಎಸ್‌ಯು) ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ ನಂತರ ಯುವ ಕಾಂಗ್ರೆಸ್‌ನಲ್ಲಿ ಆಕ್ರಮಣಕಾರಿ ಸಂಘಟಕರಾಗಿ ಮತ್ತು ಭಾಷಣಕಾರರಾಗಿ ಗುರುತಿಸಿಕೊಂಡರು.
2021 ರಲ್ಲಿ ಯುಡಿಎಫ್ ಸೋಲನುಭವಿಸಿದಾಗ ಪಕ್ಷವು ಅನಿರೀಕ್ಷಿತವಾಗಿ ಸತೀಶನ್​​ರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತು. ಆಗ ಸಚಿವರಾಗಿಯೂ ಕೆಲಸ ಮಾಡದ ವಿಡಿಎಸ್​​ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು, ಆದರೆ ಕಳೆದ ಐದು ವರ್ಷಗಳಲ್ಲಿ ಎಡರಂಗ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ನಡೆಸುವ ಮೂಲಕ ಸತೀಶನ್ ಯುಡಿಎಫ್‌ನ ಪ್ರಮುಖ ಮುಖವಾಗಿ ಹೊರಹೊಮ್ಮಿದರು.
ಇತ್ತೀಚಿನ ಚುನಾವಣೆಯಲ್ಲಿ ಸತೀಶನ್ 78,658 ಮತಗಳನ್ನು ಪಡೆಯುವ ಮೂಲಕ ಸಿಪಿಐನ ಇ.ಟಿ. ಟೈಸನ್ ಮಾಸ್ಟರ್​​ರನ್ನು 20,600 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಣ ರಾಜಕೀಯದಿಂದ ದೂರವಿದ್ದು, ಹೊಸ ಪೀಳಿಗೆಯ ಸುಧಾರಣಾ-ಆಧಾರಿತ ನಾಯಕರಾಗಿ ಕಾಣಿಸಿಕೊಂಡಿರುವುದು ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಲು ಪ್ರಮುಖ ಕಾರಣವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
2021 ರಲ್ಲಿ 99 ಸ್ಥಾನ ಗೆದ್ದು ಬೀಗಿದ್ದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಈ ಬಾರಿ 35 ಸ್ಥಾನಗಳಿಗೆ ಕುಸಿತ ಕಂಡರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಹತ್ತು ವರ್ಷಗಳ ನಂತರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಭರ್ಜರಿ ಗೆಲುವಿನ ರೂವಾರಿಯಾಗಿ ಈಗ ವಿ.ಡಿ. ಸತೀಶನ್ ಕೇರಳದ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net