ಉತ್ತರ ಪ್ರದೇಶ 4 ರಾಜ್ಯಗಳಾಗಿ ವಿಭಜನೆ?; ಪ್ರಧಾನಿ ಹೇಳಿದ್ದಾರೆಂದ ಸಚಿವ ರಾಜ್​ಭರ್: ವಿಪಕ್ಷ ಎಸ್​ಪಿ ಸೇರಿ ಎನ್​ಡಿಎ ಮಿತ್ರಪಕ್ಷಗಳಲ್ಲೇ ವಿರೋಧ: ಏನಿದು ಇಲ್ಲಿ ಓದಿ! |Uttar Pradesh

ಜನಸಂಖ್ಯೆಯಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸುವ ಎರಡು ದಶಕಗಳ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಜಾತಿ ಜನಗಣತಿಯ ನಂತರ ರಾಜ್ಯವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸಲಾಗುವುದು ಎಂದು ಸಚಿವ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.
Om Prakash Rajbhar
ಓಂ ಪ್ರಕಾಶ್ ರಾಜ್​ಭರ್
Published on

ನವದೆಹಲಿ: ಜನಸಂಖ್ಯೆಯಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸುವ ಎರಡು ದಶಕಗಳ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಜಾತಿ ಜನಗಣತಿಯ ನಂತರ ರಾಜ್ಯವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸಲಾಗುವುದು ಎಂದು ಸಚಿವ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ. ಆದರೆ ಇದನ್ನು ವಿಪಕ್ಷ ಎಸ್​ಪಿ ಸೇರಿ ಎನ್​ಡಿಎ ಕೂಟದಲ್ಲಿರುವ ಮಿತ್ರ ಪಕ್ಷಗಳು ವಿರೋಧಿಸಿವೆ.

ಭಾರೀ ಗಾತ್ರದ ಜನಸಂಖ್ಯೆ ಮತ್ತು 75 ಜಿಲ್ಲೆಗಳ ಹೊಣೆಗಾರಿಕೆ ಸೇರಿ ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಪ್ರದೇಶವನ್ನು ಬುಂದೇಲ್‌ಖಂಡ್, ಪೂರ್ವಾಂಚಲ್, ಅವಧ್ ಪ್ರದೇಶ ಹಾಗೂ ಪಶ್ಚಿಮ ಪ್ರದೇಶ ಎಂಬ ನಾಲ್ಕು ಹೊಸ ರಾಜ್ಯಗಳಾಗಿ ವಿಭಜಿಸುವ ಬಗ್ಗೆ ಕಳೆದ ಎರಡು ದಶಕಗಳಿಂದ ಚರ್ಚೆ ನಡೆಯುತ್ತಿದೆ.

ಎನ್​ಡಿಎ ಮಿತ್ರ ಪಕ್ಷ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಮತ್ತು ಯುಪಿ ಸರ್ಕಾರದಲ್ಲಿ ಪ್ರಸ್ತುತ ಸಚಿವರಾಗಿರುವ ಓಂ ಪ್ರಕಾಶ್ ರಾಜ್​ಭರ್ ಅವರು, ಈ ವಿಚಾರವನ್ನು ಮತ್ತೆ ಎತ್ತಿದ್ದು, ಪ್ರಧಾನಿ ಮೋದಿಯವರು ನನಗೆ ಈ ಕುರಿತು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Also Read
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!...ಆಂತರಿಕ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗದ ಮೂಲಗಳು! | Election Commission
Om Prakash Rajbhar

ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, ಶೇ. 27ರಷ್ಟು ಮೀಸಲಾತಿ ವಿಷಯದ ಬಗ್ಗೆ ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಪ್ರಧಾನಿ ಮೋದಿಯವರ ಜೊತೆ ಮಾತನಾಡಿದ್ದೇನೆ. ಅವರು ಓಂ ಪ್ರಕಾಶ್ ಜಿ, ನಿಮ್ಮ ಮಾತು ಸಮರ್ಥನೀಯ, ಆದರೆ ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. ಮತ್ತು ನಾವು ಹೇಗೆ ಮುಂದುವರಿಯಬಹುದು ಎಂದು ಕೇಳಿದೆ. ಅವರು ನಾನು ಜಾತಿ ಜನಗಣತಿ ನಡೆಸುತ್ತೇನೆ. ಅದು ಮುಗಿದ ಬಳಿಕ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದಾರೆ ಎಂದು ಪ್ರಧಾನಿ ಜೊತೆಗಿನ ಸಂಭಾಷಣೆಯನ್ನು ವಿವರಿಸಿದ್ದರು.

ಮುಂದುವರೆದು, ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುವುದು. ಹಾಗೂ ಪೂರ್ವಾಂಚಲ ರಾಜ್ಯ ರಚನೆಯಾದ ದಿನದಂದು ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಜಾತಿಯ ವ್ಯಕ್ತಿಯನ್ನು ಪರಿಗಣಿಸುವುದಾದರೂ, ಅಂತಿಮವಾಗಿ ಒಬ್ಬ ರಾಜ್‌ಭರ್ ಅವರ ಪುತ್ರನೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರು.

ಬಿಜೆಪಿಯ ಮಿತ್ರ ಪಕ್ಷಗಳಲ್ಲೇ ಭಿನ್ನಾಭಿಪ್ರಾಯ

ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವ ರಾಜ್​ಭರ್ ಹೇಳಿಕೆಯನ್ನು ಉತ್ತರ ಪ್ರದೇಶದ ಸಚಿವ ಮತ್ತು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ತಿರಸ್ಕರಿಸಿದ್ದು, ಇದು ದಾರಿ ತಪ್ಪಿಸುವ ಹೇಳಿಕೆ ಎಂದು ಖಂಡಿಸಿದ್ದಾರೆ. ಇದಕ್ಕೆ ನಮ್ಮ ಪಕ್ಷ ಬೆಂಬಲ ನೀಡವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಸಂಜಯ್ ನಿಶಾದ್, ಉತ್ತರಪ್ರದೇಶವನ್ನು ವಿಭಜಿಸುವ ಬೇಡಿಕೆ ಮೊದಲೇ ಇತ್ತು, ಆದರೆ ಈಗ ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಅಲ್ಲದೇ ಬುಂದೇಲ್‌ಖಂಡ್, ಪೂರ್ವಾಂಚಲ್‌ನಂತಹ ಸಹಾಯದ ಅಗತ್ಯವಿರುವ ಪ್ರದೇಶಗಳಿಗೆ ವಿಶೇಷ ಅಭಿವೃದ್ಧಿ ನಿಧಿಯನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.

Also Read
ಕೆಪಿಎಸ್​ಸಿ ಮುಚ್ಚುವೆ ಎಂಬ ಹೇಳಿಕೆ; ಸಿಎಂಗೆ ಶಾಸನದ ಗಂಧಗಾಳಿಯೇ ಗೊತ್ತಿಲ್ಲ: ಡಿಕೆ ವಿರುದ್ಧ ಹೆಚ್​ಡಿಕೆ ವಾಗ್ದಾಳಿ | HDK
Om Prakash Rajbhar

ಆದರೆ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರು ರಾಜ್​ಭರ್ ಹೇಳಿಕೆ ಬೆಂಬಲಿಸಿದ್ದು,ಅವರ ಮಾತುಗಳು ಭವಿಷ್ಯವಾಣಿಯಂತೆ ನಿಜವಾಗಲಿ. ನಾವು ಉತ್ತರ ಪ್ರದೇಶದ ವಿಭಜನೆಯನ್ನು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದೇವೆ. ಅದು ತುಂಬಾ ಒಳ್ಳೆಯದು. ರಾಜ್ಯವು ಅಭಿವೃದ್ಧಿ ಹೊಂದುತ್ತದೆ ಮತ್ತು ಪಶ್ಚಿಮ ಉತ್ತರ ಪ್ರದೇಶವು ದೇಶದ ಅತ್ಯಂತ ಸಮೃದ್ಧ ಮತ್ತು ಉತ್ತಮ ರಾಜ್ಯವಾಗಲಿದೆ ಎಂದಿದ್ದಾರೆ.

ಅಖಿಲೇಶ್ ಯಾದವ್ ವಿರೋಧ

ಉತ್ತರ ಪ್ರದೇಶ ವಿಭಜನೆಗೆ ಪ್ರಮುಖ ವಿಪಕ್ಷವಾಗಿರುವ ಸಮಾಜವಾದಿ ಪಕ್ಷ ವಿರೋಧಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅದರ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್, ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುವವರೇ ರಾಜ್ಯವನ್ನು ವಿಭಜಿಸುವ ಬಗ್ಗೆಯೂ ಮಾತನಾಡುತ್ತಿದ್ದಾರೆ. ಮುಂದೆ ಅವರು ದೇಶವನ್ನೇ ವಿಭಜಿಸಲು ಬಯಸಬಹುದು. ದೇಶವು ಬಹಳ ದೊಡ್ಡದಾಗಿದೆ. ನಮ್ಮ ದೇಶವನ್ನು ಬಲಪಡಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.

ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕ ಶಿವಪಾಲ್ ಯಾದವ್ ಕೂಡ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಪೂರ್ವಾಂಚಲ್ ರಚನೆಯಾದರೆ, ಪಶ್ಚಿಮ ಉತ್ತರ ಪ್ರದೇಶವೂ ರಚನೆಯಾಗುತ್ತದೆ. ನೀವು ಎಷ್ಟು ರಾಜ್ಯಗಳನ್ನು ರಚಿಸುತ್ತೀರಿ? ಒಂದು ರಾಜ್ಯ ಚಿಕ್ಕದಾದರೆ, ಅದರ ಮಹತ್ವ ಕಡಿಮೆಯಾಗುತ್ತದೆ. ಸಣ್ಣ ರಾಜ್ಯಗಳು ರೂಪುಗೊಂಡಲ್ಲೆಲ್ಲಾ ಅವುಗಳ ಆರ್ಥಿಕತೆ ದುರ್ಬಲಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ವಿಭಜಗೆ ಅನುಮೋದನೆ ಪಡೆದಿದ್ದ ಮಾಯಾವತಿ

2012ರ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಮುಖ್ಯಮಂತ್ರಿ ಮತ್ತು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯ ವಿಭಜನೆ ಬೇಡಿಕೆಯ ಪ್ರಸ್ತಾವನೆಯನ್ನು ಮಂಡಿಸಿದ್ದರು. ಉತ್ತರ ಪ್ರದೇಶವನ್ನು ಅವಧ್ ಪ್ರದೇಶ, ಪೂರ್ವಾಂಚಲ್, ಬುಂದೇಲ್‌ಖಂಡ್ ಹಾಗೂ ಪಶ್ಚಿಮ ಪ್ರದೇಶಗಳಾಗಿ ವಿಭಜಿಸಲು ರಾಜ್ಯ ವಿಧಾನಸಭೆಯಿಂದ ಅನುಮೋದನೆ ಪಡೆದುಮಕೊಂಡಿದ್ದರು.

ಭಾರತದ ನಾಲ್ಕನೇ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿನ ಅಭಿವೃದ್ಧಿ ಕುಂಠಿತಕ್ಕೆ, 75 ಜಿಲ್ಲೆಗಳನ್ನು ಒಳಗೊಂಡಿರುವ ಅದರ ಬೃಹತ್ ಗಾತ್ರವೇ ಕಾರಣ ಎಂದು ಪ್ರತಿಪಾದಿಸಿದ್ದ ಅವರು, ಉತ್ತಮ ಆಡಳಿತವನ್ನು ಒದಗಿಸುವ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ಗೋರಖ್‌ಪುರ ಸೇರಿದಂತೆ ರಾಜ್ಯದ 22 ಪೂರ್ವ ಜಿಲ್ಲೆಗಳನ್ನು ಒಳಗೊಂಡ ಪೂರ್ವಾಂಚಲ ರಾಜ್ಯ, ರಾಜಧಾನಿ ಲಖನೌ ಸೇರಿ 14 ಜಿಲ್ಲೆಗಳನ್ನು ಒಳಗೊಂಡಿರುವ ಅವಧ್ ಪ್ರದೇಶ ರಾಜ್ಯ, ಏಳು ಜಿಲ್ಲೆಗಳನ್ನೊಳಗೊಂಡು ಬುಂದೇಲ್ ಖಂಡ್ ಹಾಗೂ ಮೀರತ್ ಮತ್ತು ಗಾಜಿಯಾಬಾದ್ ಸೇರಿದಂತೆ 22 ಜಿಲ್ಲೆಗಳನ್ನೊಳಗೊಂಡು ಪಶ್ಚಿಮ ಪ್ರದೇಶ ರಚಿಸಬೇಕೆಂದು ಅವರು ಸಲಹೆ ನೀಡಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net