ಅತ್ತೆ ಎದುರೇ ಅವಾಚ್ಯ ಪದ...ನನ್ನ ಮೇಲೆ ಕಿಡ್ನ್ಯಾಪ್ ಕೇಸ್: ಮೇನಕಾ ಗಾಂಧಿ ವಿರುದ್ಧ ಸೋನಿಯಾ ಸ್ಫೋಟಕ ಆರೋಪ! Sonia Gandhi

Rift in the Gandhi family: Sonia Gandhi reveals serious allegations against Maneka Gandhi in her book 'Belonging'.
ಗಾಂಧಿ ಕುಟುಂಬದ ಒಡಕು: ತಮ್ಮ 'ಬಿಲಾಂಗಿಂಗ್' ಪುಸ್ತಕದಲ್ಲಿ ಮೇನಕಾ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಬಹಿರಂಗಪಡಿಸಿದ ಸೋನಿಯಾ ಗಾಂಧಿ.
Published on: 

ನವದೆಹಲಿ: ಗಾಂಧಿ ಕುಟುಂಬದ ಇಬ್ಬರು ಪ್ರಮುಖ ಸೊಸೆಯಂದಿರಾದ ಸೋನಿಯಾ ಗಾಂಧಿ ಮತ್ತು ಮೇನಕಾ ಗಾಂಧಿ ನಡುವಿನ ಸಂಬಂಧ ಹಳಸಿಹೋಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾಲ್ಕು ಗೋಡೆಗಳ ಮಧ್ಯೆ ಅಸಲಿಗೆ ನಡೆದಿದ್ದೇನು? ಅವರ ನಡುವಿನ ದ್ವೇಷ ಎಷ್ಟು ಗಂಭೀರ ಮಟ್ಟಕ್ಕೆ ಹೋಗಿತ್ತು? ಇಂತಹ ಹತ್ತಾರು ರೋಚಕ ರಹಸ್ಯಗಳನ್ನು ಸೋನಿಯಾ ಗಾಂಧಿ ತಮ್ಮ 'ಬಿಲಾಂಗ್​ಗಿಂಗ್​: ಎ ಜರ್ನಿ ಆಫ್ ಲವ್' ಎಂಬ ಪುಸ್ತಕದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇಂದಿರಾ ಗಾಂಧಿಯವರ ಎದುರೇ ನಡೆದ ಜಗಳಗಳು, ಸಂಜಯ್ ಗಾಂಧಿ ಸಾವಿನ ನಂತರದ ಹೈಡ್ರಾಮಾಗಳ ಬಗ್ಗೆ ಸೋನಿಯಾ ಮಾಡಿರುವ ಸ್ಫೋಟಕ ಆರೋಪಗಳು ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ.

'ಚಿಕ್ಕ ಸೊಸೆ'ಯಾಗಿ ಬಂದ ಮೇನಕಾ: ಶಾಂತಿ ಬಯಸಿದ್ದ ಸೋನಿಯಾ

1973ರ ಕೊನೆಯಲ್ಲಿ ಸಂಜಯ್ ಗಾಂಧಿಯವರನ್ನು ಮದುವೆಯಾಗಿ ಮನೆಗೆ ಬಂದ ಮೇನಕಾ ತುಂಬಾ ಮಾತುಗಾರ ಹುಡುಗಿಯಾಗಿದ್ದರು. ನಾವಿಬ್ಬರೂ ಅಕ್ಕಪಕ್ಕದವರಂತೆ ಸಮಾನ ಗೌರವದಿಂದ ಬಾಳಬಹುದು ಎಂದು ತಾನು ಭಾವಿಸಿದ್ದಾಗಿ ಸೋನಿಯಾ ನೆನಪಿಸಿಕೊಂಡಿದ್ದಾರೆ. ಆದರೆ ದಿನ ಕಳೆದಂತೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಮೇನಕಾ ಅವರ ಒರಟು ಮಾತಿನಿಂದ ಮನೆಯಲ್ಲಿ ಪದೇ ಪದೇ ಕಿರಿಕಿರಿಗಳು ಶುರುವಾದವು. ಮನೆಯ ನೆಮ್ಮದಿ ಹಾಳಾಗಬಾರದು ಎಂದು ಸೋನಿಯಾ ಹೆಚ್ಚಾಗಿ ಮೌನಕ್ಕೆ ಶರಣಾಗುತ್ತಿದ್ದರಂತೆ. ಆದರೆ ವಿಷಯ ಕೈಮೀರಿ ಹೋದಾಗ ತಾವೂ ಖಾರವಾಗಿಯೇ ಉತ್ತರ ಕೊಡುತ್ತಿದ್ದೆ ಎಂದು ಸೋನಿಯಾ ಹೇಳಿಕೊಂಡಿದ್ದಾರೆ.

ಇಂದಿರಾ ಗಾಂಧಿ ಎದುರೇ ಅವಾಚ್ಯ ಶಬ್ದಗಳ ಬಳಕೆ!

ಸೋನಿಯಾ ಅವರ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ಸಂಜಯ್ ಮತ್ತು ಮೇನಕಾ ನಡುವೆ ಭಾರಿ ಗಲಾಟೆಗಳು ನಡೆಯುತ್ತಿದ್ದವು. ಸಿಟ್ಟು ನೆತ್ತಿಗೇರಿದಾಗ ಮೇನಕಾ ಆ ಮನೆಯಲ್ಲಿ ಯಾರೂ ಬಳಸದ ಕೆಟ್ಟ ಪದಗಳಿಂದ ಬಯ್ಯುತ್ತಿದ್ದರು. ಅತ್ತೆ ಇಂದಿರಾ ಗಾಂಧಿಯವರ ಮುಂದೆಯೇ ಅಂತಹ ಮಾತುಗಳನ್ನಾಡುತ್ತಿದ್ದಾಗ ಸಂಜಯ್ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದರು ಮತ್ತು ಇಡೀ ಕುಟುಂಬವೇ ಆಘಾತಕ್ಕೆ ಒಳಗಾಗುತ್ತಿತ್ತು ಎಂದಿದ್ದಾರೆ.

ಮೇನಕಾ ಅವರ ವಿಪರೀತ ಹಸ್ತಕ್ಷೇಪವೇ ರಾಜೀವ್ ಮತ್ತು ಸಂಜಯ್ ನಡುವೆ ಬಿರುಕು ಮೂಡಲು ಪ್ರಮುಖ ಕಾರಣವಾಯಿತು ಎಂದು ಸೋನಿಯಾ ಆರೋಪಿಸಿದ್ದಾರೆ. 1978ರ ಚುನಾವಣಾ ಸೋಲಿಗೆ ಸಂಜಯ್ ಗಾಂಧಿಯವರ ಹಠಮಾರಿ ನಿರ್ಧಾರಗಳೇ ಕಾರಣ ಎಂದು ರಾಜೀವ್ ನೇರವಾಗಿಯೇ ಕಿಡಿಕಾರಿದ್ದರು. ರಾಜೀವ್ ಮತ್ತು ಇಂದಿರಾ ಗಾಂಧಿ ಇಬ್ಬರೂ ಸಂಜಯ್‌ನನ್ನು ತರಾಟೆಗೆ ತೆಗೆದುಕೊಂಡಾಗ, ಮಧ್ಯಪ್ರವೇಶಿಸಿದ ಮೇನಕಾರನ್ನು ಇಂದಿರಾ ಗಾಂಧಿ ತೀವ್ರವಾಗಿ ಗದರಿಸಿದ್ದರು. ಅಲ್ಲಿಂದ ಶುರುವಾದ ದ್ವೇಷ ದಿನೇ ದಿನೇ ಬೆಳೆಯುತ್ತಲೇ ಹೋಯಿತು.

Also Read
ಶರ್ಮಿಳಾ ಟ್ಯಾಗೋರ್ ‘ಆಯೇಷಾ’ ಆಗಿದ್ದು ಏಕೆ? ಇಸ್ಲಾಂಗೆ ಮತಾಂತರದ ಹಿಂದಿದ್ದ ಕಾರಣವೇನು? 'ಸಬಾ' ಬಿಚ್ಚಿಟ್ಟ ಸತ್ಯವೇನು? Saba Ali Khan
Rift in the Gandhi family: Sonia Gandhi reveals serious allegations against Maneka Gandhi in her book 'Belonging'.

ಸಂಜಯ್ ಸಾವಿನ ಬೆನ್ನಲ್ಲೇ ರಾಜಕೀಯ ಆಸೆ; ಆರ್‌ಎಸ್‌ಎಸ್ ನಂಟು

1980 ರಲ್ಲಿ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಅಕಾಲಿಕ ಸಾವನ್ನಪ್ಪಿದ ನಂತರ ಗಾಂಧಿ ಕುಟುಂಬದಲ್ಲಿ ಬಿರುಗಾಳಿ ಎದ್ದಿತು. ಕೇವಲ 23 ವರ್ಷದ ಮೇನಕಾ ಅವರಿಗೆ ಪಕ್ಷದಲ್ಲಿ ದೊಡ್ಡ ಹುದ್ದೆ ಕೊಡಬೇಕೆಂದು ಅವರ ಕುಟುಂಬದವರು ಲಾಬಿ ಶುರುಮಾಡಿದರು. ಆದರೆ ಮೂರು ತಿಂಗಳ ಕೂಸನ್ನು ಇಟ್ಟುಕೊಂಡು ತಕ್ಷಣ ರಾಜಕೀಯಕ್ಕೆ ಬರುವುದು ಬೇಡ ಎಂದು ಇಂದಿರಾ ಗಾಂಧಿ ಭಾವಿಸಿದ್ದರು.

ಆದರೆ, ಮೇನಕಾ ಕುಟುಂಬದಿಂದ ದೂರವಾಗಲು ನಿರ್ಧರಿಸಿದ್ದರು. ತಮ್ಮ ಮಗ ವರುಣ್ ಗಾಂಧಿಯ ಮೊದಲ ಹುಟ್ಟುಹಬ್ಬವನ್ನು ಇಂದಿರಾ ಗಾಂಧಿಯವರ ಕಟ್ಟಾ ರಾಜಕೀಯ ಎದುರಾಳಿಯಾಗಿದ್ದ ವಸುಂಧರಾ ರಾಜೇ ಮನೆಯಲ್ಲಿ ಆಚರಿಸಿದರು. ಅಷ್ಟೇ ಅಲ್ಲ, ತಮ್ಮ ಮಾಲೀಕತ್ವದ ಸೂರ್ಯ ಪತ್ರಿಕೆಯನ್ನು ಆರ್‌ಎಸ್‌ಎಸ್ ಮುಖಂಡರೊಬ್ಬರಿಗೆ ಮಾರಾಟ ಮಾಡಿದರು. ಇಡೀ ಜೀವಮಾನವಿಡೀ ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸಿಕೊಂಡು ಬಂದ ಇಂದಿರಾ ಗಾಂಧಿಯವರಿಗೆ ಇದು ತೀವ್ರ ಮುಖಭಂಗವಾಗಿತ್ತು.

ಮನೆಯಿಂದ ಹೊರಬೀಳುವ ಹೈಡ್ರಾಮಾ: 'ರಿಯಾಲಿಟಿ ಶೋ' ಎಂದ ಸೋನಿಯಾ

ಇಂದಿರಾ ಗಾಂಧಿ ಲಂಡನ್ ಪ್ರವಾಸದಲ್ಲಿದ್ದಾಗ ಮೇನಕಾ ಮನೆಯಿಂದ ಸಾಮಾನುಗಳನ್ನು ಸಾಗಿಸಲು ಶುರುಮಾಡಿದ್ದರು. ವಾಪಸ್ ಬಂದ ಇಂದಿರಾ, "ಒಂದೋ ರಾಜಕೀಯ ಚಟುವಟಿಕೆ ಬಿಡು, ಇಲ್ಲವೇ ಬೇರೆ ಮನೆ ನೋಡು" ಎಂದು ನೇರವಾಗಿಯೇ ಹೇಳಿದರು. ಇದರಿಂದ ರೊಚ್ಚಿಗೆದ್ದ ಮೇನಕಾ ಆರೋಪಗಳ ಪತ್ರ ಬರೆದು, ಪತ್ರಕರ್ತರನ್ನು ಸೇರಿಸಿ ಮಾಧ್ಯಮಗಳ ಮುಂದೆ ದೊಡ್ಡ ರಂಪಾಟ ಸೃಷ್ಟಿಸಿದರು. ಆ ಕಾಲದಲ್ಲೇ ಅದೊಂದು ಟಿವಿ ರಿಯಾಲಿಟಿ ಶೋ ತರಹ ಇತ್ತು ಎಂದು ಸೋನಿಯಾ ಬರೆದಿದ್ದಾರೆ.

Also Read
"2,000 ರೂ. ಅಂತಿಮ ಪರಿಹಾರವಲ್ಲ, ವದಂತಿಗಳನ್ನ ನಂಬಬೇಡಿ": ಪ್ರತಿ ರೈತನಿಗೆ 5000 ರೂ. ಖಚಿತ; ಡಿಸಿಎಂ ಪರಮೇಶ್ವರ ಸ್ಪಷ್ಟನೆ! Dr G Parameshwara
Rift in the Gandhi family: Sonia Gandhi reveals serious allegations against Maneka Gandhi in her book 'Belonging'.

ನರ್ಸರಿ ಸ್ಕೂಲ್‌ಗೆ ಹೋದಾಗ 'ಕಿಡ್ನ್ಯಾಪ್' ಆರೋಪ!

ವರುಣ್ ಗಾಂಧಿಯನ್ನು ನೋಡಲು ಗಾಂಧಿ ಕುಟುಂಬಕ್ಕೆ ಮೇನಕಾ ಬಿಡಲಿಲ್ಲ. ವರುಣ್‌ನ ನಾಲ್ಕನೇ ಹುಟ್ಟುಹಬ್ಬದಂದು ಇಂದಿರಾ ಗಾಂಧಿಯವರ ಸೂಚನೆಯಂತೆ ಸೋನಿಯಾ ಅವರು ಮಗುವಿಗೆ ಉಡುಗೊರೆ ಕೊಡಲು ನರ್ಸರಿ ಶಾಲೆಗೆ ಹೋಗಿದ್ದರು. ಆದರೆ ಮರುದಿನವೇ ಪತ್ರಿಕೆಗಳಲ್ಲಿ ಸೋನಿಯಾ ಗಾಂಧಿ ಮಗುವನ್ನು ಕಿಡ್ನ್ಯಾಪ್ ಮಾಡಲು ಬಂದಿದ್ದರು ಎಂದು ಮೇನಕಾ ಆರೋಪ ಹೊರಿಸಿ ಲೇಖನ ಬರೆಸಿದರಂತೆ.

ನಂತರ ನಡೆದ 1984ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ವಿರುದ್ಧ ಮೇನಕಾ ಸ್ಪರ್ಧಿಸಿ ಸೋತರು. ಕಾಲಾನಂತರದಲ್ಲಿ ಅವರು ಬಿಜೆಪಿ ಸೇರಿದರು. ಗಾಂಧಿ ಕುಟುಂಬದ ಒಳಗಿನ ಈ ಕಹಿ ಸತ್ಯಗಳು ಈಗ ಮತ್ತೊಮ್ಮೆ ಸೋನಿಯಾ ಗಾಂಧಿ ಅವರ ಭಯೋಗ್ರಫಿ ಮೂಲಕ, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿವೆ ಎಂದರೆ ಸುಳ್ಳಲ್ಲ, (ಏಜೆನ್ಸೀಸ್​).