

ಮುಂಬೈ: ಹಿಂದಿ ಚಿತ್ರರಂಗದ ಎವರ್‌ಗ್ರೀನ್ ಸುಂದರಿ ಶರ್ಮಿಳಾ ಟ್ಯಾಗೋರ್ ಅಂದಿನ ಕಾಲದಲ್ಲೇ ಸಮಾಜದ ಕಟ್ಟುಪಾಡುಗಳನ್ನು ಮುರಿದು ಬದುಕಿದ ದಿಟ್ಟ ಮಹಿಳೆ. 60ರ ದಶಕದಲ್ಲೇ ಬಿಕಿನಿ ಧರಿಸಿ ಮ್ಯಾಗಜೀನ್ ಮುಖಪುಟದಲ್ಲಿ ಮಿಂಚಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶರ್ಮಿಳಾ, ನಂತರ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಕೈಹಿಡಿದರು.
ಆದರೆ, ಮದುವೆಗೆ ಮುನ್ನ ಶರ್ಮಿಳಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ಆಯೇಷಾ’ ಎಂದು ಹೆಸರು ಬದಲಿಸಿಕೊಂಡಿದ್ದು ಆಗ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಈಗ ದಶಕಗಳ ಬಳಿಕ, ಶರ್ಮಿಳಾ ಟ್ಯಾಗೋರ್ ಮತಾಂತರದ ಅಸಲಿ ಸತ್ಯವನ್ನು ಅವರ ಪುತ್ರಿ ಸಬಾ ಅಲಿ ಖಾನ್ ಬಹಿರಂಗಪಡಿಸಿದ್ದಾರೆ.
ಖ್ಯಾತ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಬಾ ಪಟೌಡಿ, ತಮ್ಮ ತಾಯಿಯ ಮತಾಂತರದ ಹಿಂದಿದ್ದ ನೈಜ ಕಾರಣವನ್ನು ಹಂಚಿಕೊಂಡಿದ್ದಾರೆ.
"ಆ ಕಾಲದಲ್ಲಿ ಮತಾಂತರಗೊಳ್ಳುವುದು ಒಂದು ಅನಿವಾರ್ಯತೆಯಾಗಿತ್ತು. ಇದು ಮಾಡಬೇಕೋ ಬೇಡವೋ ಎಂದು ಚರ್ಚೆ ಮಾಡುವ ವಿಷಯವೇ ಆಗಿರಲಿಲ್ಲ. ಆ ಕಾಲದ ನಿಯಮಗಳ ಪ್ರಕಾರ, ಮದುವೆ ಹಾಗೂ ಹುಟ್ಟುವ ಮಕ್ಕಳಿಗೆ ಕಾನೂನುಬದ್ಧ ಮಾನ್ಯತೆ ಸಿಗಬೇಕೆಂದರೆ ಮತಾಂತರ ಅನಿವಾರ್ಯವಾಗಿತ್ತು. ಇದೆಲ್ಲದಕ್ಕಿಂತ ಹೆಚ್ಚಾಗಿ ಪಟೌಡಿ ರಾಜಮನೆತನದ ಸಂಪ್ರದಾಯವೂ ಇದರ ಹಿಂದಿತ್ತು. ನನ್ನ ಅಜ್ಜಿ (ಮನ್ಸೂರ್ ಅಲಿ ಖಾನ್ ಅವರ ತಾಯಿ) ಮತಾಂತರವಿಲ್ಲದೆ ಈ ಮದುವೆಗೆ ಯಾವುದೇ ಕಾರಣಕ್ಕೂ ಒಪ್ಪುತ್ತಿರಲಿಲ್ಲ," ಎಂದು ಸಬಾ ಹೇಳಿದ್ದಾರೆ.
ಮದುವೆಗಾಗಿ ಧರ್ಮ ಬದಲಿಸಿದರೂ ಪಟೌಡಿ ಕುಟುಂಬ ಶರ್ಮಿಳಾ ಅವರ ಮೇಲೆ ಯಾವುದೇ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಿಲ್ಲ ಎಂಬುದನ್ನು ಸಬಾ ಸ್ಪಷ್ಟಪಡಿಸಿದ್ದಾರೆ. "ನನ್ನ ತಾಯಿ ಇಸ್ಲಾಂಗೆ ಸೇರಿದ ಮೇಲೆ ‘ಆಯೇಷಾ’ ಎಂದು ಕರೆಯಲ್ಪಟ್ಟರೂ, ಪಾಸ್‌ಪೋರ್ಟ್ ಅಥವಾ ಅಧಿಕೃತ ದಾಖಲೆಗಳಲ್ಲಿ ಹೆಸರು ಬದಲಾಯಿಸಿಕೊಳ್ಳಿ ಎಂದು ನಮ್ಮ ತಂದೆಯಾಗಲಿ, ಅವರ ಮನೆಯವರಾಗಲಿ ಎಂದೂ ಒತ್ತಾಯಿಸಲಿಲ್ಲ. ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಮುಂದುವರಿಸಲು ತಾಯಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಇದರಿಂದ ಅವರ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆ ಬರಲಿಲ್ಲ," ಎಂದಿದ್ದಾರೆ.
ಹಿಂದೂ-ಮುಸ್ಲಿಂ ವಿವಾಹಗಳು ತೀರಾ ಅಪರೂಪವಾಗಿದ್ದ 1968ರ ಕಾಲಘಟ್ಟದಲ್ಲಿ ಈ ಮದುವೆ ಸುಲಭವಾಗಿರಲಿಲ್ಲ. ಶರ್ಮಿಳಾ ಟ್ಯಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದಾಗ ಇಬ್ಬರ ಕುಟುಂಬಗಳಿಗೂ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸ್ವತಃ ಶರ್ಮಿಳಾ ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ, "ನಮ್ಮ ಮದುವೆ ನಿಶ್ಚಯವಾದಾಗ ಸಾಲು ಸಾಲು ಬೆದರಿಕೆ ಟೆಲಿಗ್ರಾಮ್‌ಗಳು ಬಂದಿದ್ದವು. ಮದುವೆ ನಡೆದರೆ ಗುಂಡುಗಳು ಮಾತನಾಡುತ್ತವೆ ಎಂದು ಬೆದರಿಸಿದ್ದರು," ಎಂದು ಭಯಾನಕ ದಿನಗಳನ್ನು ನೆನಪಿಸಿಕೊಂಡಿದ್ದರು. ಆದರೆ ಈ ಎಲ್ಲಾ ವಿರೋಧ, ಬೆದರಿಕೆಗಳನ್ನು ಮೆಟ್ಟಿ ನಿಂತು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
1968ರಲ್ಲಿ ದಾಂಪತ್ಯ ಜೀವನ ಆರಂಭಿಸಿದ ಈ ಜೋಡಿಗೆ ಸೈಫ್ ಅಲಿ ಖಾನ್, ಸೋಹಾ ಅಲಿ ಖಾನ್ ಹಾಗೂ ಸಬಾ ಅಲಿ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ಸುದೀರ್ಘ ಕಾಲ ಸುಖ ಸಂಸಾರ ನಡೆಸಿದ ಪಟೌಡಿ ಅವರು ಶ್ವಾಸಕೋಶದ ಸಮಸ್ಯೆಯಿಂದ 2011ರಲ್ಲಿ ನಿಧನರಾದರು. ಇದೀಗ ಸಬಾ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಾಲಿವುಡ್‌ನ ಈ ಐತಿಹಾಸಿಕ ಪ್ರೇಮಕಥೆಯ ಹಳೆಯ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ, (ಏಜೆನ್ಸೀಸ್).