ನಿಮ್ಮ ಜೇಬಿಗೂ ಬೀಳುತ್ತಾ ಯುಪಿಐ ಕತ್ತರಿ...? ಆನ್‌ಲೈನ್ ಪಾವತಿ ಮಾಡುವ ಮುನ್ನ ಈ 10 ವಿಷಯಗಳನ್ನು ನೆನಪಿಡಿ! | UPI

UPI | ಆನ್‌ಲೈನ್ ಪಾವತಿ ಮಾಡುವ ಮುನ್ನ ಈ 10 ವಿಷಯಗಳನ್ನು ನೆನಪಿಡಿ!
UPI | ಆನ್‌ಲೈನ್ ಪಾವತಿ ಮಾಡುವ ಮುನ್ನ ಈ 10 ವಿಷಯಗಳನ್ನು ನೆನಪಿಡಿ!
Published on
UPI: ಅನೇಕ ವರ್ಷಗಳಿಂದ ಭಾರತೀಯರಿಗೆ ಯುಪಿಐ ಎಂದರೆ ಒಂದೇ ಸರಳ ಅರ್ಥವಾಗಿತ್ತು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು, ಪಿನ್ ನಮೂದಿಸುವುದು ಮತ್ತು ಹಣ ಪಾವತಿಸುವುದು. ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕಗಳಿರುತ್ತಿರಲಿಲ್ಲ. ಆದರೆ, ಮುಂಬರುವ ಅಕ್ಟೋಬರ್ 15ರಿಂದ ವರ್ತಕರ (ಮರ್ಚೆಂಟ್) ವಹಿವಾಟುಗಳಿಗೆ ಈ ಪದ್ಧತಿಯಲ್ಲಿ ಬದಲಾವಣೆ ಬರಲಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) 2,000 ರೂಪಾಯಿಗಿಂತ ಹೆಚ್ಚಿನ ಕೆಲವು ವ್ಯಕ್ತಿಯಿಂದ ವರ್ತಕರಿಗೆ (P2M) ನಡೆಯುವ ಯುಪಿಐ ಪಾವತಿಗಳ ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ ಪರಿಚಯಿಸಿದೆ. 75,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಈ ಶುಲ್ಕವನ್ನು ಗರಿಷ್ಠ 300 ರೂಪಾಯಿಗಳಿಗೆ ಮಿತಿಗೊಳಿಸಲಾಗಿದೆ. ಆದರೆ, ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಗ್ರಾಹಕರಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡಲಾಗುವುದಿಲ್ಲ.
ಈ ಹೊಸ ಎಂಡಿಆರ್ ಶುಲ್ಕವು ಕೇವಲ ವ್ಯಾಪಾರಿಗಳ ಪಾವತಿ ವ್ಯವಸ್ಥೆಗೆ ಮಾತ್ರ ಅನ್ವಯಿಸಲಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಪಾವತಿಗಳು ಉಚಿತವಾಗಿಯೇ ಇರಲಿವೆ. ಅಲ್ಲದೆ, ನಿಗದಿತ ಮಾಸಿಕ ಯುಪಿಐ ಆದಾಯದ ಮಿತಿಯೊಳಗಿರುವ ಸಣ್ಣ ವ್ಯಾಪಾರಿಗಳಿಗೂ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಈ ಹೊಸ ಚೌಕಟ್ಟಿನ ಕುರಿತು ಯುಪಿಐ ಬಳಕೆದಾರರು ಮತ್ತು ವ್ಯಾಪಾರಿಗಳು ಹೊಂದಿರಬಹುದಾದ ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ.

1. ಗ್ರಾಹಕನಾದ ನಾನು ಅಕ್ಟೋಬರ್ 15 ರಿಂದ ಯುಪಿಐ ಶುಲ್ಕ ಪಾವತಿಸಬೇಕೇ?

ಇಲ್ಲ. ಹೊಸ ಎಂಡಿಆರ್ ಚೌಕಟ್ಟಿನಡಿಯಲ್ಲಿ ಗ್ರಾಹಕರು ಯಾವುದೇ ವಹಿವಾಟು ಶುಲ್ಕವಿಲ್ಲದೆ ಯುಪಿಐ ಬಳಸುವುದನ್ನು ಮುಂದುವರಿಸಲಿದ್ದಾರೆ. ಯುಪಿಐ ಆ್ಯಪ್‌ಗಳು ಈ ಪಾವತಿಗಳ ಮೇಲೆ ಪ್ರತ್ಯೇಕ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಇತರ ಯಾವುದೇ ಶುಲ್ಕವನ್ನು ಸೇರಿಸುವಂತಿಲ್ಲ. ಉದಾಹರಣೆಗೆ, ನೀವು ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಿಂದ 3,000 ರೂಪಾಯಿ ಪಾವತಿಸಿದರೆ, ಹೊಸ ಎಂಡಿಆರ್‌ನಿಂದಾಗಿ ನಿಮ್ಮ ಖಾತೆಯಿಂದ 3,012 ರೂಪಾಯಿ ಕಡಿತಗೊಳ್ಳುವುದಿಲ್ಲ. ಈ ಶುಲ್ಕವು ಕೇವಲ ವ್ಯಾಪಾರಿಗಳ ಕಡೆಗೆ ಮಾತ್ರ ಅನ್ವಯಿಸುತ್ತದೆ.

2. ಹೊಸ ಶೇಕಡಾ 0.4 ರ ಎಂಡಿಆರ್ (MDR) ಎಂದರೇನು..?

ಎಂಡಿಆರ್ ಎಂದರೆ ಮರ್ಚೆಂಟ್ ಡಿಸ್ಕೌಂಟ್ ರೇಟ್. ಇದು ಡಿಜಿಟಲ್ ಪಾವತಿಯನ್ನು ಸ್ವೀಕರಿಸಲು ವ್ಯಾಪಾರಿಗಳು ಪಾವತಿಸುವ ಶುಲ್ಕವಾಗಿದೆ. ಅಕ್ಟೋಬರ್ 15 ರಿಂದ, 2,000 ರೂಪಾಯಿಗಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ಶೇಕಡಾ 0.4 ರಷ್ಟು ಎಂಡಿಆರ್ ಅನ್ವಯಿಸುತ್ತದೆ. 75,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ 300 ರೂಪಾಯಿಗಳ ಮಿತಿ ವಿಧಿಸಲಾಗಿದೆ.
  • 3,000 ರೂ. ಪಾವತಿಗೆ: 12 ರೂ. ಎಂಡಿಆರ್
  • 50,000 ರೂ. ಪಾವತಿಗೆ: 200 ರೂ. ಎಂಡಿಆರ್
  • 1 ಲಕ್ಷ ರೂ. ಪಾವತಿಗೆ: ಶೇಕಡಾ 0.4 ರಂತೆ 400 ರೂ. ಆಗುತ್ತದೆ, ಆದರೆ ಗರಿಷ್ಠ ಮಿತಿ 300 ರೂ. ಮಾತ್ರ ಇರುತ್ತದೆ.
(ಇವು ವ್ಯಾಪಾರಿಯ ಕಡೆಯ ಶುಲ್ಕಗಳಾಗಿದ್ದು, ಗ್ರಾಹಕರು ಪಾವತಿಸಬೇಕಾದ ಹೆಚ್ಚುವರಿ ಮೊತ್ತವಲ್ಲ).

3. ಸ್ನೇಹಿತರು ಅಥವಾ ಕುಟುಂಬಕ್ಕೆ ಹಣ ಕಳುಹಿಸಲು ಶುಲ್ಕವಿರುತ್ತದೆಯೇ?

ಇಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಯುಪಿಐ ವಹಿವಾಟುಗಳು ಸಂಪೂರ್ಣ ಉಚಿತವಾಗಿರುತ್ತವೆ. ಕುಟುಂಬದ ಸದಸ್ಯರಿಗೆ ಹಣ ಕಳುಹಿಸುವುದು, ಸ್ನೇಹಿತರಿಗೆ ಹಣ ಮರುಪಾವತಿಸುವುದು, ಬಿಲ್ ಹಂಚಿಕೊಳ್ಳುವುದು ಅಥವಾ ನಿಮ್ಮದೇ ಸ್ವಂತ ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾಯಿಸುವುದು ಇದರಲ್ಲಿ ಸೇರಿದೆ.

4. ಅಂಗಡಿಯವನಿಗೆ 2,000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಪಾವತಿಸಿದರೆ ಏನಾಗುತ್ತೇ..?

2,000 ರೂಪಾಯಿಯವರೆಗಿನ ಯುಪಿಐ ಪಾವತಿಗಳು ಎಂಡಿಆರ್ ವ್ಯಾಪ್ತಿಯಿಂದ ಹೊರಗಿರುತ್ತವೆ. ಅಂದರೆ 500, 1,000 ಅಥವಾ 2,000 ರೂಪಾಯಿ ಪಾವತಿಸುವ ಗ್ರಾಹಕರು ಯಾವುದೇ ಯುಪಿಐ ವಹಿವಾಟು ಶುಲ್ಕವನ್ನು ಎದುರಿಸುವುದಿಲ್ಲ. ಈ ಬದಲಾವಣೆಯು ಕೇವಲ ಹೆಚ್ಚಿನ ಮೌಲ್ಯದ ವ್ಯಾಪಾರಿ ವಹಿವಾಟುಗಳ ಮೇಲೆ ಮಾತ್ರ ಗಮನಹರಿಸುತ್ತದೆ.

5. 2,000 ರೂಪಾಯಿಗಿಂತ ಹೆಚ್ಚು ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಯ ಕಥೆಯೇನು..?

ಇಲ್ಲಿ ಮಾಸಿಕ ಆದಾಯದ ಮಿತಿ ಮುಖ್ಯವಾಗುತ್ತದೆ. ಯುಪಿಐ ಕ್ಯೂಆರ್ ಕೋಡ್ ಮೂಲಕ ತಿಂಗಳಿಗೆ 1 ಲಕ್ಷ ರೂಪಾಯಿವರೆಗೆ ಸ್ವೀಕರಿಸುವ ಸಣ್ಣ ವ್ಯಾಪಾರಿಗಳು ಶೂನ್ಯ ಎಂಡಿಆರ್ ಅಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದ್ದಾರೆ. ಹೀಗಾಗಿ, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಚಿಲ್ಲರೆ ವ್ಯಾಪಾರಿಗಳು ಮತ್ತು ಅತಿ ಸಣ್ಣ ಉದ್ಯಮಗಳು ಈ ಶುಲ್ಕದಿಂದ ರಕ್ಷಣೆ ಪಡೆಯುತ್ತವೆ.

6. ಅಂಗಡಿಯವನು ಎಂಡಿಆರ್ ಶುಲ್ಕವನ್ನು ಗ್ರಾಹಕರ ಬಿಲ್‌ನಲ್ಲಿ ಸೇರಿಸಬಹುದೇ?

ವ್ಯಾಪಾರಿಗಳು ಈ ಶುಲ್ಕವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸುವುದನ್ನು ತಡೆಯಲು ನಿಯಮ ರೂಪಿಸಲಾಗಿದೆ. ವ್ಯಾಪಾರಿಗಳು ಹೊಸ ಶುಲ್ಕವನ್ನು ಯುಪಿಐ ಬಳಕೆದಾರರ ಮೇಲೆ ಹೇರದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಗ್ರಾಹಕರು ವಸ್ತುವಿನ ನಿಗದಿತ ಬೆಲೆಯನ್ನು ಮಾತ್ರ ಪಾವತಿಸಬೇಕು. ಉದಾಹರಣೆಗೆ, 5,000 ರೂಪಾಯಿ ಬೆಲೆಯ ವಸ್ತುವಿಗೆ ಯುಪಿಐ ಮೂಲಕ ಪಾವತಿಸುತ್ತಿದ್ದಾರೆ ಎಂಬ ಕಾರಣಕ್ಕೆ 5,020 ರೂಪಾಯಿ ಪಾವತಿಸುವಂತೆ ಕೇಳುವಂತಿಲ್ಲ.

7. ಉಚಿತ ಯುಪಿಐ ವಹಿವಾಟುಗಳಿಗೆ ಮಾಸಿಕ ಮಿತಿ ಇದೆಯೇ?

ಇಲ್ಲ. ಇಂತಿಷ್ಟೇ ವಹಿವಾಟುಗಳ ನಂತರ ಶುಲ್ಕ ವಿಧಿಸಲಾಗುತ್ತದೆ ಎಂಬ ಯಾವುದೇ ಮಾಸಿಕ ಮಿತಿ ಇರುವುದಿಲ್ಲ. ಗ್ರಾಹಕರು ಯಾವುದೇ ಮಿತಿಯಿಲ್ಲದೆ ಉಚಿತವಾಗಿ P2P ಮತ್ತು P2M ವಹಿವಾಟುಗಳನ್ನು ಮುಂದುವರಿಸಬಹುದು. (ಭದ್ರತಾ ಕಾರಣಗಳಿಗಾಗಿ ಬ್ಯಾಂಕ್‌ಗಳು ವಿಧಿಸುವ ದಿನನಿತ್ಯದ ವಹಿವಾಟು ಮಿತಿಗಳು ಬೇರೆ, ಎಂಡಿಆರ್ ಬೇರೆ).

8. ಯುಪಿಐ ಆಟೋಪೇ, ಎಸ್‌ಐಪಿ ಮತ್ತು ಒಟಿಟಿ ಚಂದಾದಾರಿಕೆಗಳ ಕಥೆಯೇನು?

ಯುಪಿಐ ಆಟೋಪೇ ಯುಪಿಐ ಪಾವತಿಗಳಿಗೆ ಈ ಎಂಡಿಆರ್ ಅನ್ವಯಿಸುವುದಿಲ್ಲ. ಒಟಿಟಿ ಚಂದಾದಾರಿಕೆಗಳು, ಕರೆಂಟ್ ಬಿಲ್‌ಗಳು ಮತ್ತು ನಿಯಮಿತ ಹೂಡಿಕೆಗಳು ಉಚಿತವಾಗಿರುತ್ತವೆ. ಆದರೆ, ಮ್ಯೂಚುವಲ್ ಫಂಡ್, ಶೇರು ಮಾರುಕಟ್ಟೆ ಮತ್ತು ಸ್ಟಾಕ್ ಬ್ರೋಕರ್ ಸಂಬಂಧಿತ ಬಂಡವಾಳ ಮಾರುಕಟ್ಟೆಯ ವಹಿವಾಟುಗಳಿಗೆ ಶೇಕಡಾ 0.02 ರಷ್ಟು ಎಂಡಿಆರ್ ಅನ್ವಯಿಸಲಿದ್ದು, ಗರಿಷ್ಠ 300 ರೂಪಾಯಿ ಮಿತಿ ಇರಲಿದೆ.

9. ಇನ್ಶೂರೆನ್ಸ್, ಪೆಟ್ರೋಲ್, ರೈಲ್ವೇ ಟಿಕೆಟ್ ಅಥವಾ ಕರೆಂಟ್ ಬಿಲ್‌ಗಳಿಗೆ ಹೆಚ್ಚು ಪಾವತಿಸಬೇಕೇ?

ಇಲ್ಲ. ಈ ಸೇವೆಗಳಿಗೆ ಶೇಕಡಾ 0.4 ರ ಬದಲಾಗಿ ನಿಗದಿತ ರೂ. 5 ಎಂಡಿಆರ್ ಶ್ರೇಣಿ ನೀಡಲಾಗಿದೆ. 2,000 ರೂಪಾಯಿಗಿಂತ ಹೆಚ್ಚಿನ ರೈಲ್ವೇ, ಟೆಲಿಕಾಂ, ಇನ್ಶೂರೆನ್ಸ್, ಪೆಟ್ರೋಲ್, ವಿದ್ಯುತ್ ಮತ್ತು ನೀರು ಸರಬರಾಜು ಬಿಲ್‌ಗಳಿಗೆ ಕೇವಲ 5 ರೂಪಾಯಿ ಎಂಡಿಆರ್ ಅನ್ವಯಿಸುತ್ತದೆ. ಇದು ಕೂಡ ವ್ಯಾಪಾರಿಯ ಕಡೆಯ ಶುಲ್ಕವಾಗಿದ್ದು, ಗ್ರಾಹಕರ ಮೇಲಿನ ಹೆಚ್ಚುವರಿ ಹೊರೆಯಲ್ಲ.

10. ಯುಪಿಐ ಎಂಡಿಆರ್ ಈಗ ಏಕೆ ಪರಿಚಯಿಸಲಾಗಿದೆ?

ಯುಪಿಐ ಈಗ ದೇಶದ ಅತ್ಯಂತ ನಿರ್ಣಾಯಕ ಡಿಜಿಟಲ್ ಮೂಲಸೌಕರ್ಯವಾಗಿ ಬೆಳೆದಿದ್ದು, ಎನ್​ಪಿಸಿಐ ಅಂಕಿಅಂಶಗಳ ಪ್ರಕಾರ, ಕಳೆದ ಆಗಸ್ಟ್ ತಿಂಗಳಿನಲ್ಲೇ ಯುಪಿಐ 2,450 ಕೋಟಿಗೂ (24.5 ಶತಕೋಟಿ) ಹೆಚ್ಚು ವಹಿವಾಟುಗಳನ್ನು ನಿರ್ವಹಿಸಿದೆ. ಇಷ್ಟೊಂದು ದೊಡ್ಡ ಮಟ್ಟದ ವ್ಯವಸ್ಥೆಯನ್ನು ನಿರ್ವಹಿಸಲು ತಂತ್ರಜ್ಞಾನ, ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ಸಿಸ್ಟಮ್ ಸಾಮರ್ಥ್ಯದ ಮೇಲೆ ನಿರಂತರ ಹೂಡಿಕೆಯ ಅಗತ್ಯವಿದೆ.
ಜಂಪ್ (jUMPP) ಸಿಇಒ ಸರ್ವ್‌ಜೀತ್ ಸಿಂಗ್ ವಿರ್ಕ್ ಮಾತನಾಡಿ, ಯುಪಿಐ ಕೇವಲ ಪಾವತಿ ಉತ್ಪನ್ನವಾಗಿ ಉಳಿದಿಲ್ಲ, ಅದು ಡಿಜಿಟಲ್ ಮೂಲಸೌಕರ್ಯವಾಗಿದೆ. ವ್ಯವಸ್ಥೆಯ ಭದ್ರತೆ ಮತ್ತು ಸುರಕ್ಷತೆಗೆ ನಿರಂತರ ಹೂಡಿಕೆ ಬೇಕು ಎಂದಿದ್ದಾರೆ. ಅಲ್ಲದೆ, ತಿಂಗಳಿಗೆ 1 ಲಕ್ಷ ರೂಪಾಯಿಯವರೆಗಿನ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಗ್ರಾಹಕರು ಇದರಿಂದ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಡಿಮೆ ಲಾಭದಲ್ಲಿ ಕೆಲಸ ಮಾಡುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕ ಹೊರೆಯಾಗಬಹುದು ಮತ್ತು ಅವರು ಮತ್ತೆ ಡಿಜಿಟಲ್ ಪಾವತಿ ಬಿಟ್ಟು ನಗದಿನತ್ತ ಮುಖ ಮಾಡಬಹುದು ಎಂದು ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಎಚ್ಚರಿಸಿದೆ(ಏಜೆನ್ಸೀಸ್).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net