ಅಕ್ಟೋಬರ್ 15 ರಿಂದ ಜಾರಿಯಾಗಲಿದೆ ಹೊಸ ಯುಪಿಐ ಶುಲ್ಕ: ವ್ಯಾಪಾರಿಗಳಿಗೆ 0.4% ಎಂಡಿಆರ್ ಹೊರೆ!...ಗ್ರಾಹಕರ ಕಥೆ ಏನು..? | UPI Charges

UPI Charges | ಅಕ್ಟೋಬರ್ 15 ರಿಂದ ಜಾರಿಯಾಗಲಿದೆ ಹೊಸ ಯುಪಿಐ ಶುಲ್ಕ
UPI Charges | ಅಕ್ಟೋಬರ್ 15 ರಿಂದ ಜಾರಿಯಾಗಲಿದೆ ಹೊಸ ಯುಪಿಐ ಶುಲ್ಕ
Published on
UPI Charges: ಭಾರತದ ಕ್ಲಿಕ್-ಆಂಡ್-ಪೇ ಯುಪಿಐ (UPI) ಸೇವೆಗಳಲ್ಲಿ ವರ್ತಕರ (Merchant) ಪಾವತಿಗೆ ಸಂಬಂಧಿಸಿದಂತೆ 2,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸಲಾಗುವುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ (Person-to-Person) ನಡೆಯುವ ಹಣಕಾಸಿನ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ನೂತನ ಯುಪಿಐ ಮರ್ಚೆಂಟ್ ಡಿಸ್ಕೌಂಟ್ ರೇಟ್ ನಿಯಮಾವಳಿಯು ಅಕ್ಟೋಬರ್ 15 ರಿಂದ ಜಾರಿಗೆ ಬರಲಿದೆ.
ರಾಷ್ಟ್ರೀಯ ಪಾವತಿ ನಿಗಮ ಜಾರಿಗೊಳಿಸಿರುವ ಹೊಸ ಯುಪಿಐ ನಿಯಮಗಳ ಪ್ರಕಾರ, ಗ್ರಾಹಕರು ವರ್ತಕರಿಗೆ ಮಾಡುವ 2,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕಕ್ಕೆ ಗರಿಷ್ಠ 300 ರೂಪಾಯಿಗಳ ಮಿತಿಯನ್ನು ನಿಗದಿಪಡಿಸಲಾಗಿದ್ದು, ಈ ಹೆಚ್ಚಿನ ಹೊರೆಯನ್ನು ವರ್ತಕರು ಗ್ರಾಹಕರಿಗೆ ವರ್ಗಾಯಿಸದಂತೆ ನೋಡಿಕೊಳ್ಳಲು ಹಣಕಾಸು ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿದೆ.
ರೈಲ್ವೆ, ಟೆಲಿಕಾಂ ಸೇವೆಗಳು, ವಿಮೆ ಮತ್ತು ಇಂಧನದಂತಹ ಪ್ರಮುಖ ಮರ್ಚೆಂಟ್ ವಿಭಾಗಗಳಿಗೆ 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ನಿಗದಿತ (Flat Rate) 5 ರೂಪಾಯಿ ಶುಲ್ಕವನ್ನು ವಿಧಿಸಲಾಗುವುದು ಎಂದು ಎನ್‌ಪಿಸಿಐ ತಿಳಿಸಿದೆ. ಗ್ರಾಹಕರು ಇದುವರೆಗೆ ಬಳಸುತ್ತಿದ್ದಂತೆಯೇ ಉಚಿತವಾಗಿಯೇ ಯುಪಿಐ ವಹಿವಾಟುಗಳನ್ನು ಮುಂದುವರಿಸಲಿದ್ದಾರೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವಹಿವಾಟುಗಳು ಹಾಗೂ 2,000 ರೂಪಾಯಿವರೆಗಿನ ಮರ್ಚೆಂಟ್ ವಹಿವಾಟುಗಳು ಎಂಡಿಆರ್ ಶುಲ್ಕದ ವ್ಯಾಪ್ತಿಯಿಂದ ಹೊರಗಿರುತ್ತವೆ ಎಂದು ಎನ್‌ಪಿಸಿಐ ಸ್ಪಷ್ಟಪಡಿಸಿದೆ.

ಸೈಬರ್​ ಭದ್ರತೆಗೆ ಸಹಕಾರಿ

ಸರಳವಾಗಿ ಹೇಳುವುದಾದರೆ, ನೀವು ವರ್ತಕರ ಬಳಿ 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಹಿವಾಟು ನಡೆಸಿದರೆ, ಆ ಮಾರಾಟಗಾರನು ಶೇಕಡಾ 0.4 ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಂದರೆ 2,001 ರೂಪಾಯಿಯ ವಹಿವಾಟಿಗೆ ಕನಿಷ್ಠ 8 ರೂಪಾಯಿ ಶುಲ್ಕವಾಗುತ್ತದೆ. ಆದರೆ, ನೀವು ಯುಪಿಐ ಮೂಲಕ ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಿದರೆ, ಅದು ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವಹಿವಾಟು ಎಂದು ಪರಿಗಣಿತವಾಗುವುದರಿಂದ 2,000 ರೂಪಾಯಿಗಿಂತ ಹೆಚ್ಚಿದ್ದರೂ ಸಹ ಸಂಪೂರ್ಣ ಉಚಿತವಾಗಿರುತ್ತದೆ.
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ವ್ಯಾಲೆಟ್‌ಗಳಂತಹ ಇತರ ಡಿಜಿಟಲ್ ಪಾವತಿ ಸಾಧನಗಳಿಗೆ ಹೋಲಿಸಿದರೆ ಈ ಶುಲ್ಕಗಳು ಸಾಕಷ್ಟು ಕಡಿಮೆಯಾಗಿವೆ ಎಂದು ಎನ್‌ಪಿಸಿಐ ಎತ್ತಿ ತೋರಿಸಿದೆ. 2,000 ರೂಪಾಯಿವರೆಗಿನ ಯುಪಿಐ ಪಾವತಿಗಳು ಉಚಿತವಾಗಿರುತ್ತವೆ ಎಂದು ಸರ್ಕಾರ ಹೇಳಿತ್ತಾದರೂ, ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಏನಾಗುತ್ತದೆ ಎಂಬ ಗೊಂದಲ ಯುಪಿಐ ಬಳಕೆದಾರರಲ್ಲಿತ್ತು. ಈ ಅಧಿಸೂಚನೆಯು ಆ ಗೊಂದಲಕ್ಕೆ ಸ್ಪಷ್ಟತೆ ನೀಡಿದೆ.
ಪರಿಷ್ಕೃತ ನಿಯಮಾವಳಿಯು ಶೇಕಡಾ 95 ರಷ್ಟು ಕಡಿಮೆ ಮೌಲ್ಯದ (2,000 ರೂಪಾಯಿಗಿಂತ ಕಡಿಮೆ) ಯುಪಿಐ ವಹಿವಾಟುಗಳನ್ನು ಹಾಗೂ ಸಣ್ಣ ವರ್ತಕರ ವಹಿವಾಟುಗಳನ್ನು ಸಂಪೂರ್ಣವಾಗಿ ಉಚಿತವಾಗಿರಿಸಿದೆ ಎಂದು ಎನ್‌ಪಿಸಿಐ ಹೇಳಿದೆ. ಈ ನೂತನ ಶುಲ್ಕವು ಯುಪಿಐ ಸೇವೆಯನ್ನು ಹೊಸ ಬಳಕೆದಾರರು ಮತ್ತು ವರ್ತಕರಿಗೆ ತಲುಪಿಸಲು, ಮೂಲಸೌಕರ್ಯದ ದೃಢತೆ, ಸೈಬರ್ ಭದ್ರತೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ ಎಂದು ಒತ್ತು ನೀಡಿದೆ.
ಗ್ರಾಹಕರ ಜೊತೆಗೆ, 2,000 ರೂಪಾಯಿವರೆಗಿನ ವಹಿವಾಟುಗಳನ್ನು ಉಚಿತವಾಗಿರಿಸುವ ಮೂಲಕ ಸಣ್ಣ ವರ್ತಕರನ್ನು ಹೆಚ್ಚುವರಿ ಶುಲ್ಕಗಳಿಂದ ರಕ್ಷಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದಲ್ಲದೆ, ಎಂಡಿಆರ್ ಎಂಬುದು ತೆರಿಗೆಯಲ್ಲ ಅಥವಾ ಅದನ್ನು ಸರ್ಕಾರ ಸಂಗ್ರಹಿಸುವುದಿಲ್ಲ. ಬದಲಾಗಿ ಈ ಶುಲ್ಕವನ್ನು ಬ್ಯಾಂಕುಗಳು ಮತ್ತು ಪಾವತಿ ಆ್ಯಪ್‌ಗಳಂತಹ ಡಿಜಿಟಲ್ ಪಾವತಿ ವ್ಯವಸ್ಥೆಯ ಪಾಲುದಾರರಿಗೆ ಹಂಚಲಾಗುತ್ತದೆ, ಇದು ಅವರ ಕಾರ್ಯಾಚರಣೆ ಮತ್ತು ವಿಸ್ತರಣೆಗೆ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಡಿಜಿಟಲ್ ಪಾವತಿಗಳ ಅಳವಡಿಕೆಯನ್ನು ಮತ್ತಷ್ಟು ವೇಗಗೊಳಿಸಲು, ಹಾಲಿ ಇರುವ ವರ್ತಕರಲ್ಲಿ ಡಿಜಿಟಲ್ ಪಾವತಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹಾಗೂ ಟೈರ್-3 ಮತ್ತು ಸಣ್ಣ ಮಾರುಕಟ್ಟೆಗಳಿಗಾಗಿ ಮೀಸಲಾದ ವಿಶೇಷ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net