ಸೆ.17 ರಿಂದ ಒಂದು ತಿಂಗಳ ಕಾಲ 'ಸೇವಾ ಸಂಕಲ್ಪ ಅಭಿಯಾನ': ದುರ್ಬಲ ದೇಶಗಳ ಸಾಲಿನಲ್ಲಿದ್ದ ಭಾರತ ಈಗ ವಿಶ್ವದ ಪ್ರಮುಖ ಶಕ್ತಿ ಎಂದ ಜೆ ಪಿ ನಡ್ಡಾ! | JP Nadda

JP Nadda > ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಜೆ ಪಿ ನಡ್ಡಾ
JP Nadda > ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಜೆ ಪಿ ನಡ್ಡಾ
Published on
ಬೆಂಗಳೂರು: ಹಿಂದಿನ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಭಾರತವು ಐದು ದುರ್ಬಲ ರಾಷ್ಟ್ರಗಳ ಸಾಲಿನಲ್ಲಿತ್ತು. ಆದರೆ, ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ವಿಶ್ವದ ಐದು ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜೆ ಪಿ ನಡ್ಡಾ (JP Nadda) ಹೇಳಿದ್ದಾರೆ.
ಮಲ್ಲೇಶ್ವರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ನಡ್ಡಾ, ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಗೌರವಿಸಿ, ಸೆಪ್ಟೆಂಬರ್ 17 ರಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಜೂನ್ 10 ರಂದು ಮೋದಿಯವರು ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ, ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ದಿನವೂ ರಜೆ ಪಡೆಯದೆ ಅವರು 140 ಕೋಟಿ ದೇಶವಾಸಿಗಳ ಸೇವಕರಾಗಿ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ಆರ್ಥಿಕ ಪ್ರಗತಿ ಮತ್ತು ಸುಧಾರಣೆಗಳು!

ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಧಾವಿಸುತ್ತಿದ್ದು, ಇತ್ತೀಚಿನ ತ್ರೈಮಾಸಿಕದಲ್ಲಿ ಶೇಕಡಾ 7.80 ರಷ್ಟು ಜಿಡಿಪಿ ಪ್ರಗತಿ ಸಾಧಿಸಿದೆ. ಜಿಎಸ್‌ಟಿ ಅನುಷ್ಠಾನದ ಮೂಲಕ ಒಂದು ದೇಶ - ಒಂದು ತೆರಿಗೆ ವ್ಯವಸ್ಥೆ ತರಲಾಗಿದ್ದು, ತೆರಿಗೆ ಸ್ಲ್ಯಾಬ್‌ಗಳಲ್ಲಿ ಸುಧಾರಣೆ ಮಾಡಲಾಗಿದೆ. 12 ಲಕ್ಷ ರೂಪಾಯಿಯವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿರುವುದು ಕೋಟಿಗಟ್ಟಲೆ ಜನರಿಗೆ ಅನುಕೂಲವಾಗಿದೆ. ಇದರ ಪರಿಣಾಮವಾಗಿ ಸುಮಾರು 25 ಕೋಟಿ ಜನರು ಕಡುಬಡತನದಿಂದ ಹೊರಬಂದಿದ್ದಾರೆ ಎಂದು ನಡ್ಡಾ ತಿಳಿಸಿದರು.

ಮೂಲಸೌಕರ್ಯ ಮತ್ತು ಭದ್ರತೆ!

ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ವೇಗ ಪಡೆದುಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಜಾಲವು 91 ಸಾವಿರ ಕಿಲೋಮೀಟರ್‌ನಿಂದ 1.46 ಲಕ್ಷ ಕಿಲೋಮೀಟರ್‌ಗೆ ಏರಿಕೆಯಾಗಿದೆ. ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 165 ಕ್ಕೆ ಹೆಚ್ಚಳಗೊಂಡಿದೆ. ಇನ್ನು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಪಾಕಿಸ್ತಾನಕ್ಕೆ ಸೂಕ್ತ ರೀತಿಯಲ್ಲೇ ಪ್ರತ್ಯುತ್ತರ ನೀಡಲಾಗಿದ್ದು, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಹಾಗೂ ಆಪರೇಷನ್ ಸಿಂಧೂರಗಳು ದೇಶದ ಸುರಕ್ಷತೆಗೆ ನೀಡಿದ ಆದ್ಯತೆಗೆ ಸಾಕ್ಷಿಯಾಗಿವೆ ಎಂದು ಜೆ ಪಿ ನಡ್ಡಾ ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್, ಸಂಸದರಾದ ಡಾ. ಮಂಜುನಾಥ್, ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net