Bridge Collapse: ಮಧ್ಯರಾತ್ರಿ ಭೀಕರ ದುರಂತ: ನದಿಗೆ ಕಟ್ಟುತ್ತಿದ್ದ ಸೇತುವೆ ಕುಸಿದು 6 ಕಾರ್ಮಿಕರ ಜಲಸಮಾಧಿ: ಮೂವರು ನಾಪತ್ತೆ!

Bridge Collapse
Bridge Collapse
Published on
ಹಮಿರ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಮಿರ್‌ಪುರ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ(Bridge Collapse) ದುರಂತವೊಂದರಲ್ಲಿ, ನಿರ್ಮಾಣ ಹಂತದಲ್ಲಿದ್ದ ಬೃಹತ್ ಸೇತುವೆಯ ಸ್ಲ್ಯಾಬ್ ಕುಸಿದುಬಿದ್ದು ಕನಿಷ್ಠ ಆರು ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಭಾರಿ ಮಳೆ ಮತ್ತು ಬಿರುಗಾಳಿಯ ನಡುವೆ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ನಿದ್ರೆಯಲ್ಲಿದ್ದಾಗಲೇ ಬಂದಪ್ಪಳಿಸಿದ ಸಾವು!

ಹಮಿರ್‌ಪುರ ಜಿಲ್ಲೆಯ ಮೊರಾಕಂದರ್‌ನಿಂದ ಕಂದೌರ್ ಗ್ರಾಮವನ್ನು ಸಂಪರ್ಕಿಸುವ ಈ ಸೇತುವೆಯನ್ನು ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಕಾರ್ಮಿಕರು ಸೇತುವೆಯ ಒಂದು ಭಾಗದ ಮೇಲೆ ಮಲಗಿದ್ದಾಗ ಈ ಅವಘಡ ಸಂಭವಿಸಿದೆ. ಭಾರಿ ಬಿರುಗಾಳಿ ಹಾಗೂ ಮಳೆಗೆ ಸೇತುವೆಯ ಕಾಂಕ್ರೀಟ್ ಸ್ಲ್ಯಾಬ್ ದಿಢೀರ್ ಕುಸಿದುಬಿದ್ದಿದ್ದರಿಂದ, ಕಾರ್ಮಿಕರು ಅದರಡಿಯೇ ಸಿಲುಕಿಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಮಿರ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅರವಿಂದ್ ಕುಮಾರ್ ವರ್ಮಾ ಮತ್ತು ಎಸ್‌ಡಿಆರ್‌ಎಫ್ (SDRF) ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿವೆ. ಪ್ರಸ್ತುತ ಅವಶೇಷಗಳ ಅಡಿಯಿಂದ ಐದು ಮಂದಿಯ ಮೃತದೇಹಗಳನ್ನು ಹೊರತೆಗೆದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟ ಅತ್ಯಂತ ಕಿರಿಯ ವಯಸ್ಸಿನ ಕಾರ್ಮಿಕನನ್ನು ಬಂಡಾ ಜಿಲ್ಲೆಯ ಚಿಲ್ಲಾ ಗ್ರಾಮದ ಕುಲದೀಪ್ ನಿಶಾದ್ (19) ಎಂದು ಗುರುತಿಸಲಾಗಿದೆ.

ಮೃತರ ವಿವರ

ಮೃತಪಟ್ಟವರು: ಲೋಕೇಂದ್ರ (22), ಕುಲದೀಪ್ ನಿಶಾದ್ (19), ಸಾವಂತ್ ಯಾದವ್ (28), ಸಭಾಜಿತ್ (30), ಪುಷ್ಪೇಂದ್ರ ಸಿಂಗ್ ಚೌಹಾಣ್ (34) ಮತ್ತು ರಾಜೇಶ್ ಪಾಲ್ (42). ಈ ಘಟನೆಯು ನಿರ್ಮಾಣ ಸಂಸ್ಥೆಯ ಸುರಕ್ಷತಾ ಕ್ರಮಗಳ ಲೋಪದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ,(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net