Shocking Twist: ಸತ್ತಳೆಂದು ಭಾವಿಸಿದ್ದ ಯುವತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ! ಪೊಲೀಸರು ಶಾಕ್

Shocking Twist
Shocking Twist
Published on
ಬುಲ್ಡಾನಾ (ಮಹಾರಾಷ್ಟ್ರ): ಪೊಲೀಸರ ಗಡಿಬಿಡಿಯ ತನಿಖೆ ಮತ್ತು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಅತ್ಯಂತ ಆಘಾತಕಾರಿ ಹಾಗೂ ವಿಲಕ್ಷಣ(Shocking Twist) ಘಟನೆಯೊಂದು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಗಡಿ ಭಾಗದಲ್ಲಿ ಜರುಗಿದೆ. ಪೊಲೀಸರಿಂದ ‘ಕೊಲೆಯಾಗಿದ್ದಾಳೆ’ ಎಂದು ಅಧಿಕೃತವಾಗಿ ಘೋಷಿಸಲ್ಪಟ್ಟು, ಶವ ಸಂಸ್ಕಾರದ ಹಂತ ತಲುಪಿದ್ದ 26 ವರ್ಷದ ಯುವತಿಯೊಬ್ಬಳು ಹಠಾತ್ತನೆ ಜೀವಂತವಾಗಿ ಪ್ರತ್ಯಕ್ಷಳಾಗಿದ್ದಾಳೆ. ಇತ್ತ ಯುವತಿಯ ಕೊಲೆ ಆರೋಪದ ಮೇಲೆ ಜೈಲು ಪಾಲಾಗಿದ್ದ ಆಕೆಯ ತಂದೆ ಮತ್ತು ಸಹೋದರ ಈಗ ನಿರಪರಾಧಿಗಳಾಗಿ ಹೊರಬರುವಂತಾಗಿದೆ.

ಯುವತಿ ನಾಪತ್ತೆ ಮತ್ತು ಶವ ಪತ್ತೆಯ ಹೈಡ್ರಾಮಾ

ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಖಾಕ್ನಾರ್ ವ್ಯಾಪ್ತಿಯ ಖಡ್ಕಿ ಗ್ರಾಮದ ನಿವಾಸಿಯಾದ ಶಿವಾನಿ ಕಲ್ಮೇಕರ್ ಎಂಬ ಯುವತಿ, ಕಳೆದ ಏಪ್ರಿಲ್ ತಿಂಗಳಲ್ಲಿ ಅದೇ ಗ್ರಾಮದ ಅರುಣ್ ದಾದು ಕಲ್ಮೇಕರ್ (24) ಎಂಬ ಯುವಕನೊಂದಿಗೆ ದಿಢೀರ್ ನಾಪತ್ತೆಯಾಗಿದ್ದಳು. ಈ ಸಂಬಂಧ ಉಭಯ ಕುಟುಂಬಸ್ಥರು ಮೇ ತಿಂಗಳ ಆರಂಭದಲ್ಲಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಇತ್ತ ಶಿವಾನಿ ಪೋಷಕರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾಗಲೇ, ನೆರೆಯ ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ಜಲಗಾಂವ್ ಜಾಮೋದ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜುರಾ ಅಣೆಕಟ್ಟು ಬಳಿ ಯುವತಿಯೊಬ್ಬಳ ಗುರುತು ಸಿಗದ ಮೃತದೇಹ ಪತ್ತೆಯಾಗಿತ್ತು. ಆ ಶವದ ತಲೆ ಕತ್ತರಿಸಲಾಗಿತ್ತು ಮತ್ತು ದೇಹವನ್ನು ಭಾಗಶಃ ಸುಡಲಾಗಿತ್ತು. ಮಹಾರಾಷ್ಟ್ರ ಪೊಲೀಸರು ಯಾವುದೇ ಡಿಎನ್‌ಎ (DNA) ಪರೀಕ್ಷೆ ನಡೆಸದೆ, ಆತುರಪಟ್ಟು ಅದು ನಾಪತ್ತೆಯಾಗಿದ್ದ ಶಿವಾನಿ ದೇಹವೇ ಎಂದು ಘೋಷಿಸಿಬಿಟ್ಟರು!

ತಂದೆ, ಸಹೋದರನ ಬಂಧನ ಮತ್ತು ಪವಾಡ ಸದೃಶ ವಾಪಸಾತಿ

ಕೊಲೆ (Honor Killing) ಶಂಕೆಯ ಮೇಲೆ ಮಹಾರಾಷ್ಟ್ರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಿವಾನಿಯ ತಂದೆ ಬಾಪುರಾಮ್ ಕಲ್ಮೇಕರ್ (55) ಮತ್ತು ಸಹೋದರ ಅಜಯ್ ಕಲ್ಮೇಕರ್ (27) ಅವರನ್ನು ಕೊಲೆ ಆರೋಪದ ಮೇಲೆ ಬಂಧಿಸಿ ಜೈಲಿಗಟ್ಟಿದ್ದರು. ಈ ಬಂಧನದಿಂದ ಬುರ್ಹಾನ್‌ಪುರ ಭಾಗದ ಸಾರ್ವಜನಿಕರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಆದರೆ, ಪ್ರಕರಣದ ಬೆನ್ನುಹತ್ತಿದ ಮಧ್ಯಪ್ರದೇಶದ ಖಾಕ್ನಾರ್ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ನಾಪತ್ತೆಯಾಗಿದ್ದ ಶಿವಾನಿ ಮತ್ತು ಅರುಣ್ ಮಹಾರಾಷ್ಟ್ರದ ನಾಸಿಕ್ ಬಳಿ ಕೂಲಿ ಕೆಲಸ ಮಾಡಿಕೊಂಡಿರುವುದು ಪತ್ತೆಯಾಗಿದೆ. ತಾವು ಸತ್ತಿಲ್ಲ, ಬದುಕಿದ್ದೇವೆ ಎಂಬ ವಿಷಯ ತಿಳಿಯುತ್ತಿದ್ದಂತೆ ಶಿವಾನಿ ಗುರುವಾರ ನೇರವಾಗಿ ಜಲಗಾಂವ್-ಜಾಮೋದ್ ಪೊಲೀಸ್ ಠಾಣೆಗೆ ನಡೆದುಕೊಂಡು ಬಂದು ಜಾಗೃತಳಾಗಿದ್ದಾಳೆ! "ನಾನು ಜೀವಂತವಾಗಿದ್ದೇನೆ, ನನಗೆ ಏನೂ ಆಗಿಲ್ಲ. ತಕ್ಷಣ ನನ್ನ ತಂದೆ ಮತ್ತು ಸಹೋದರನನ್ನು ಬಿಡುಗಡೆ ಮಾಡಿ," ಎಂದು ಠಾಣೆಯಲ್ಲಿ ಆಕೆ ಹೇಳಿಕೆ ನೀಡಿದ್ದಾಳೆ. ಈ ಬೆಳವಣಿಗೆಯಿಂದ ಪೊಲೀಸರು ತೀವ್ರ ಮುಖಭಂಗ ಅನುಭವಿಸುವಂತಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net