

UAE President: ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದೊಳಗೆ ನಡೆದ ಭೀಕರ ದಾಳಿಯ ಯತ್ನವನ್ನು ವಿಫಲಗೊಳಿಸಿ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅದ್ಧೂರಿ ಸಮಾರಂಭದಲ್ಲಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದೆ.
ತಲೆಯ ಮೇಲಿನ ಹೊಲಿಗೆಗಳು ಹಾಗೂ ಎಡಗೈಗೆ ಸ್ಲಿಂಗ್ (ಕಟ್ಟು) ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದಕ್ಕಿಂತಲೂ ಹೆಚ್ಚಾಗಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ ಪೈಲಟ್ ನಡುವಿನ ಆತ್ಮೀಯ ಮತ್ತು ತಮಾಷೆಯ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಎಲ್ಲರ ಗಮನ ಸೆಳೆದಿದೆ.
ವಿಮಾನದ ಸಿಬ್ಬಂದಿಯ ಅಪ್ರತಿಮ ಧೈರ್ಯ, ವೃತ್ತಿಪರತೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ನೀಡಿದ ಬದ್ಧತೆಯನ್ನು ಗುರುತಿಸಿ ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕ್ಯಾಪ್ಟನ್ ಮಚ್ಚಾರ್ ಹಾಗೂ ಅವರ ಸಹ ಸಿಬ್ಬಂದಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II ಪದಕವನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಅಧ್ಯಕ್ಷರು ಗಾಯಗೊಂಡ ಪೈಲಟ್ ಬಳಿ ಆರೋಗ್ಯ ವಿಚಾರಿಸಿ, ಯಾವಾಗ ಗುಣಮುಖರಾಗುತ್ತೀರಿ ಎಂದು ಪ್ರೀತಿಯಿಂದ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಇಬ್ಬರ ನಡುವೆ ನಡೆದ ಸಂಭಾಷಣೆ ಅತ್ಯಂತ ಅದ್ಭುತವಾಗಿತ್ತು. ಕ್ಯಾಪ್ಟನ್ ಮಚ್ಚಾರ್ ಅವರ ಎಡಗೈಗೆ ಸ್ಲಿಂಗ್ ಹಾಕಿರೋದನ್ನು ಗಮನಿಸಿದ ಯುಎಇ ಅಧ್ಯಕ್ಷರು, ನೀವು ಯಾವಾಗ ಗುಣಮುಖರಾಗುತ್ತೀರಿ..? ಎಂದು ಪ್ರಶ್ನಿಸಿದರು. ಅದಕ್ಕೆ ಪೈಲಟ್, ಬಹುಶಃ ಎರಡು ತಿಂಗಳು ಬೇಕಾಗಬಹುದು ಎಂದರು. ತಕ್ಷಣ ನಗುತ್ತಲೇ ಅಧ್ಯಕ್ಷರು, ಹಾಗಾದರೆ ನಾನೊಂದು ಐಡಿಯಾ ಮಾಡುತ್ತೇನೆ. ನೀವು ಸಂಪೂರ್ಣ ಗುಣಮುಖರಾದ ಬಳಿಕ, ನಿಮಗೆ ಹೋರಾಟ (ಫೈಟಿಂಗ್) ಮಾಡುವುದು ಹೇಗೆ ಎಂದು ತರಬೇತಿ ನೀಡಲು ನಾನೊಂದು ಸೆಷನ್ ಇಟ್ಟುಕೊಳ್ಳುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದನ್ನು ಕೇಳಿ ಇಬ್ಬರೂ ಒಟ್ಟಿಗೆ ಜೋರಾಗಿ ನಕ್ಕರು. ಬಳಿಕ ಕೃತಜ್ಞತೆ ಸಲ್ಲಿಸಿದ ಮಚ್ಚಾರ್, ಇದು ನನಗೆ ಸಿಕ್ಕಿದ ಅತಿ ದೊಡ್ಡ ಗೌರವ ಎಂದು ಕೈಯನ್ನು ಎದೆ ಮೇಲೆ ಇಟ್ಟು ನಮಸ್ಕರಿಸಿದರು.
ಅಲ್ಲದೆ, ಸಮಾರಂಭದಲ್ಲಿ ಮಾತನಾಡಿದ ಯುಎಇ ಅಧ್ಯಕ್ಷರು, ಫ್ಲೈದುಬೈ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ತಮ್ಮ ಕುಟುಂಬ ಎಂದು ಸಂಬೋಧಿಸಿ ಯುಎಇಯ ಸಂಪೂರ್ಣ ಬೆಂಬಲವಿರುವುದಾಗಿ ಭರವಸೆ ನೀಡಿದರು. ನಿಮ್ಮ ಜೀವನದಲ್ಲಿ ಏನೇ ಸಂಭವಿಸಿದ್ದರೂ, ಯುಎಇ ನಿಮ್ಮದೇ ದೇಶ, ಇಲ್ಲಿ ನಿಮಗೊಂದು ಮನೆಯಿದೆ, ಕುಟುಂಬವಿದೆ ಎಂದು ಆತ್ಮಸ್ಥೈರ್ಯ ತುಂಬಿದರು.
ವಿಮಾನದೊಳಗೆ ನಡೆದ ಹಲ್ಲೆಯ ಗಾಯಗಳು ಕ್ಯಾಪ್ಟನ್ ಮಚ್ಚಾರ್ ಅವರ ತಲೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ವಿಮಾನದ ಕೋ-ಪೈಲಟ್ ಹಮಾಮ್ ಅಲ್ ಹಮ್ಮಮಿ ಎಂಬಾತ ಕಾಕ್‌ಪಿಟ್ ಒಳಗೆ ಇರಿಸಲಾಗಿದ್ದ ತುರ್ತು ಕ್ರ್ಯಾಶ್ ಆಕ್ಸ್‌ನಿಂದ (ಕೊಡಲಿ) ಮಚ್ಚಾರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದನು. ಇದರಿಂದಾಗಿ ಅವರಿಗೆ ತಲೆಬುರುಡೆಯ ಮೂಳೆ ಮುರಿತವಾಗಿತ್ತು. ಸೆಪ್ಟೆಂಬರ್ 11ರ ಅಮೆರಿಕದ ಭಯೋತ್ಪಾದನಾ ದಾಳಿಯ ಬಳಿಕ ಜಾರಿಗೆ ಬಂದ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳ ಪ್ರಕಾರ, ತುರ್ತು ಸಂದರ್ಭಗಳಿಗಾಗಿ ವಾಣಿಜ್ಯ ವಿಮಾನಗಳ ಕಾಕ್‌ಪಿಟ್‌ನಲ್ಲಿ ಈ ರೀತಿಯ ಕೊಡಲಿಗಳನ್ನು ಕಡ್ಡಾಯವಾಗಿ ಇಡಲಾಗುತ್ತದೆ.
ದುಬೈನಿಂದ 24 ಮಕ್ಕಳು ಸೇರಿದಂತೆ 170ಕ್ಕೂ ಅಧಿಕ ಪ್ರಯಾಣಿಕರೊಂದಿಗೆ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಎಫ್‌ಝೆಡ್ 1073 (FZ1073) ಹಾರಾಟದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿತು. ಸಹ-ಪೈಲಟ್ ಹಲ್ಲೆ ನಡೆಸಿದ ಬಳಿಕ ವಿಮಾನವು ಕೇವಲ 30 ಸೆಕೆಂಡ್‌ಗಳಲ್ಲಿ ಸುಮಾರು 14,000 ಅಡಿಗಳಷ್ಟು ಆಳಕ್ಕೆ ಧುಮುಕಿತ್ತು. ಆದರೂ ಎದೆಗುಂದದ ಸಿಬ್ಬಂದಿ ಮತ್ತು ಕ್ಯಾಪ್ಟನ್ ಸಾಹಸದಿಂದ ದೊಡ್ಡ ದುರಂತ ತಪ್ಪಿತು(ಏಜೆನ್ಸೀಸ್).