Flydubai Flight Incident: ಫ್ಲೈದುಬೈ ಘಟನೆಯು ಉಗ್ರವಾದ ಕೃತ್ಯ ಎಂದು ಶುಕ್ರವಾರ ಯುಎಇ ಘೋಷಿಸಿದೆ. ಈ ವಿಷಯದ ಕುರಿತು ತನಿಖೆಗೆ ಆದೇಶಿಸಿದ ಮಾರನೇ ದಿನವೇ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಸಲಹೆಗಾರರಾದ ಅನ್ವರ್ ಗರ್ಗಾಶ್ ಈ ಹೇಳಿಕೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಅರೇಬಿಕ್ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಗರ್ಗಾಶ್, 174 ಜೀವಗಳನ್ನು ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಶ್ರಮಿಸಿದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಶ್ಲಾಘಿಸಿದ್ದಾರೆ. ಕತ್ತಲೆಯ ಪರಿಸ್ಥಿತಿಯಲ್ಲಿ ಮಚ್ಚಾರ್ ಅವರ ವೃತ್ತಿಪರತೆ ಮತ್ತು ನೈತಿಕ ಪ್ರಜ್ಞೆಯು ಅವರನ್ನು ನಿಜವಾದ ನಾಯಕನನ್ನಾಗಿ ಮಾಡಿದೆ ಎಂದು ಅವರು ಬಣ್ಣಿಸಿದ್ದಾರೆ.
ಫೈದುಬೈ ವಿಮಾನದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರು ಎಲ್ಲಾ ಪ್ರಶಂಸೆಗೆ ಅರ್ಹರು. ಅಪಾಯಕಾರಿ ಭಯೋತ್ಪಾದನಾ ಕೃತ್ಯ ಮತ್ತು ಸಂಭಾವ್ಯ ವಿಪತ್ತನ್ನು ಎದುರಿಸುವಲ್ಲಿ, ಅವರು ಧೈರ್ಯ ಮತ್ತು ಜವಾಬ್ದಾರಿಯ ನಿಜವಾದ ಅರ್ಥವನ್ನು ಸಾಕಾರಗೊಳಿಸಿದ್ದಾರೆ. ಅತ್ಯಂತ ಕತ್ತಲೆಯ ಪರಿಸ್ಥಿತಿಯಲ್ಲಿ ಅವರ ವೃತ್ತಿಪರತೆ ಮತ್ತು ನೈತಿಕ ಪ್ರಜ್ಞೆಯು ಅವರನ್ನು ನಿಜವಾದ ನಾಯಕನನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಮೇಲ್ನೋಟಕ್ಕೆ ಸುಲಭವಾಗಿ ಏನೋ ಆಯಿತು ಎಂದುಕೊಳ್ಳುವುದು ಅಥವಾ ಇಲ್ಲಸಲ್ಲದ ಅನುಮಾನಗಳನ್ನು ನಂಬುವುದು ಹಾಗೂ ಹಬ್ಬಿಸುವುದನ್ನು ಬಿಡಬೇಕು. ಬದಲಾಗಿ, ಉಗ್ರವಾದ ಮತ್ತು ಭಯೋತ್ಪಾದನೆಯ ಅಪಾಯಗಳನ್ನು ಎದುರಿಸಲು ನಾವು ಯಾವಾಗಲೂ ಎಚ್ಚರದಿಂದ ಮತ್ತು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
ಈ ಘಟನೆಯ ಬಗ್ಗೆ ತನಿಖೆ ನಡೆಸಲು ಯುಎಇ ಈಗಾಗಲೇ ಆದೇಶಿಸಿದ್ದು, ಪಬ್ಲಿಕ್ ಪ್ರಾಸಿಕ್ಯೂಷನ್‌ನ ವಿಶೇಷ ಸದಸ್ಯರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿದೆ. ಇದು ತನ್ನ ಧ್ವಜವನ್ನು ಹೊಂದಿರುವ ವಿಮಾನದಲ್ಲಿ ನಡೆದಿರುವುದರಿಂದ ಈ ಘಟನೆಯನ್ನು ತನಿಖೆ ಮಾಡಲು ಯುಎಇಗೆ ಸಂಪೂರ್ಣ ಅಧಿಕಾರವಿದೆ ಎಂದು ಅದು ಸ್ಪಷ್ಟಪಡಿಸಿದೆ.
ಯುಎಇಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಮತ್ತು 174 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಪತನಗೊಳಿಸಲು ಪ್ರಯತ್ನಿಸಿದ ಒಮಾನ್ ಮೂಲದ ಸಹ-ಪೈಲಟ್‌ನ ಉದ್ದೇಶವೇನು ಎಂಬುದನ್ನು ಕಂಡುಹಿಡಿಯಲು ತನಿಖಾಧಿಕಾರಿಗಳು ಈಗ ಪ್ರಯತ್ನಿಸುತ್ತಿದ್ದಾರೆ. ವಿಮಾನವು ಅಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ, ಗುರುತು ಬಹಿರಂಗಪಡಿಸದ ಸಹ-ಪೈಲಟ್ ಪ್ರಸ್ತುತ ಸೌದಿ ಅರೇಬಿಯಾದಲ್ಲಿದ್ದಾರೆ.
ಇಸ್ರೇಲ್ ಮತ್ತು ಸೌದಿ ಅರೇಬಿಯಾ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದಿದ್ದರೂ, ಇಸ್ರೇಲಿ ಅಧಿಕಾರಿಗಳು, ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳು ತನಿಖೆಗೆ ಸಹಾಯ ಮಾಡಲು ಸೌದಿ ಅರೇಬಿಯಾಕ್ಕೆ ಬಂದಿದ್ದಾರೆ. ಆದಾಗ್ಯೂ, ಇಸ್ರೇಲಿಗಳು ತನಿಖೆಗೆ ಯಾವ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಹಮಾಸ್ ನೇತೃತ್ವದ ಅಕ್ಟೋಬರ್ 7 ರ ದಾಳಿಯ ವಾರ್ಷಿಕೋತ್ಸವಕ್ಕೆ ಒಂದು ವಾರವಿರುವಾಗ ಇಸ್ರೇಲ್, ತನಗೆ ದಾಳಿಯ ಬಗ್ಗೆ ಯಾವುದೇ ನಿರ್ದಿಷ್ಟ ಎಚ್ಚರಿಕೆ ಸಿಕ್ಕಿಲ್ಲ ಎಂದು ಮುಂಚಿತವಾಗಿ ಹೇಳಿತ್ತು. ಭಯೋತ್ಪಾದನೆಯಿಂದ ಹಿಡಿದು ಮಾನಸಿಕ ಅಸ್ವಸ್ಥತೆಗಳವರೆಗೆ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ ಎಂದು ಅಸೋಸೇಟೆಡ್ ಪ್ರೆಸ್ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ಲೈದುಬೈ ವಿಮಾನದ ಘಟನೆಯ ಹಿಂದೆ ಯಾವುದೇ ದೇಶದ ನೇರ ಕೈವಾಡವಿದೆ ಎಂಬುದಕ್ಕೆ ಖಚಿತ ಸಾಕ್ಷಿಯಿಲ್ಲದಿದ್ದರೂ ಸಹ, ತಪ್ಪು ಮಾಡಿದವರಿಂದ ಇಸ್ರೇಲ್ ತುಂಬಾ ದೊಡ್ಡ ಬೆಲೆ ತೆರಿಸಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಸಮಯ ಕಳೆದಂತೆ ವಿಷಯಗಳು ಸ್ಪಷ್ಟವಾಗುತ್ತಿವೆ, ಈ ದಾಳಿ ಮಾಡಿದವನು ಇಸ್ಲಾಮಿಕ್ ಉಗ್ರವಾದಕ್ಕೆ ಬಲಿಯಾಗಿದ್ದನು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರ ಜೊತೆ ಅದನ್ನು ಪತನಗೊಳಿಸಲು ಅವೆಲ್ಲವನ್ನೂ ಯೋಜಿಸಿ ಬಂದಿದ್ದನು ಎಂದು ನೆತನ್ಯಾಹು ತಿಳಿಸಿದ್ದಾರೆ.
ದಾಳಿ ನಡೆಸಿದ ಸಹ-ಪೈಲಟ್ ಕುರಿತು ಮಾತನಾಡುತ್ತಾ, ಅವರನ್ನು ಕಳುಹಿಸಲಾಗಿದೆಯೇ ಎನ್ನುವ ವಿಷಯವಾಗಿ ನಾವು ತನಿಖೆ ಮಾಡುತ್ತಿದ್ದು, ಅದು ನಿಜವೇ ಆಗಿದ್ದಲ್ಲಿ ಅವರು ತುಂಬಾ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ನೆತನ್ಯಾಹು ಹೇಳಿದರು. ನೆತನ್ಯಾಹು ತಮ್ಮ ಹೇಳಿಕೆಯಲ್ಲಿ ಯಾವುದೇ ದೇಶವನ್ನು ಸಂಭಾವ್ಯ ಅಪರಾಧಿ ಎಂದು ಗುರುತಿಸಿಲ್ಲ ಆದರೆ ಇಸ್ರೇಲ್ ಮತ್ತು ಅಮೆರಿಕಾ ಫೆಬ್ರವರಿಯಲ್ಲಿ ದಾಳಿ ಮಾಡಿದ ಇರಾನ್ ಕಡೆಗೆ ಬೆರಳು ಮಾಡಲು ವರ್ಷಗಳಿಂದ ಮುಂಚೂಣಿಯಲ್ಲಿದ್ದಾರೆ(ಏಜೆನ್ಸೀಸ್).