

ದೇಶದ ಹಲವು ಭಾಗಗಳಲ್ಲಿ ಹಠಾತ್ತನೆ ಚಳಿ ಶುರುವಾಗಿದೆ. ಒಂಬತ್ತು ರಾಜ್ಯಗಳಲ್ಲಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಇದರ ಹಿಂದೆ ಎರಡು ಕಾರಣಗಳಿವೆ- ಅರ್ನಬ್ ಮತ್ತು ಮುರಾಸು. ಅಕ್ಟೋಬರ್ 28ರಂದು ಅರ್ನಬ್ ಚಂಡಮಾರುತವು ಆಂಧ್ರಪ್ರದೇಶಕ್ಕೆ ಅಪ್ಪಳಿಸಿತ್ತು ಮತ್ತು ಕೇವಲ 5 ದಿನಗಳ ನಂತರ ಮುರಾಸು ಕೂಡ ಅಪ್ಪಳಿಸಿದೆ. ಒಂದೇ ವಾರದಲ್ಲಿ ಎರಡು ಚಂಡಮಾರುತಗಳು ಮತ್ತು ಇವೆರಡೂ ಹುಟ್ಟಿಕೊಂಡಿದ್ದು ಬಂಗಾಳಕೊಲ್ಲಿಯಲ್ಲಿಯೇ. ಆದರೆ, ವಾರದಲ್ಲೇ ಎರಡು ಚಂಡಮಾರುತ ಅಪ್ಪಳಿಸಿರುವುದು ಕಾಕತಾಳೀಯವೇ ಅಥವಾ ಸಮುದ್ರದ ಯಾವುದೋ ದೊಡ್ಡ ಚಲನವಲನದ ಫಲಿತಾಂಶವೇ? ಚಳಿಗಾಲದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ? ಈ ಕುರಿತಾದ ಮಾಹಿತಿ ಇಲ್ಲಿದೆ.
ಉತ್ತರ ಹಿಂದೂ ಮಹಾಸಾಗರದಲ್ಲಿ ಚಂಡಮಾರುತದ ಎರಡು ಋತುಗಳಿರುತ್ತವೆ. ಮೊದಲನೆಯದು ಮಾನ್ಸೂನ್ಗಿಂತ ಮೊದಲು, ಅಂದರೆ ಏಪ್ರಿಲ್ನಿಂದ ಜೂನ್ ಆರಂಭದವರೆಗೆ. ಎರಡನೆಯದು ಮಾನ್ಸೂನ್ ನಂತರ, ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ ನಡುವೆ. ಸಾಮಾನ್ಯವಾಗಿ ಭಾರತದಲ್ಲಿ ಪ್ರತಿ ವರ್ಷ 4ರಿಂದ 5 ಸೈಕ್ಲೋನ್ಗಳು ಬರುತ್ತವೆ. ಮುರಾಸು ಈ ವರ್ಷದ ಎರಡನೇ ಸೈಕ್ಲೋನ್ ಆಗಿದೆ. ಮಾನ್ಸೂನ್ ಸಮಯದಲ್ಲಿ ಗಂಗಾ, ಬ್ರಹ್ಮಪುತ್ರ ಮತ್ತು ಗೋದಾವರಿಯಂತಹ ದೊಡ್ಡ ನದಿಗಳ ಅಪಾರ ಪ್ರಮಾಣದ ಸಿಹಿನೀರು ಸಮುದ್ರವನ್ನು ಸೇರುತ್ತದೆ. ಈ ನೀರು ಹಗುರವಾಗಿರುವುದರಿಂದ ಸಮುದ್ರದ ಮೇಲ್ಮೈಯಲ್ಲಿಯೇ ಉಳಿದು, ಕೆಳಗಿರುವ ತಂಪಾದ ನೀರು ಮೇಲಕ್ಕೆ ಬರದಂತೆ ತಡೆಯುತ್ತದೆ. ಈ ಬಿಸಿಯಾದ ಮೇಲ್ಮೈ ನೀರು ಚಂಡಮಾರುತದ ವ್ಯವಸ್ಥೆಗೆ (ಸೈಕ್ಲೋನಿಕ್ ಸಿಸ್ಟಮ್ ಇಂಧನದಂತೆ ಕೆಲಸ ಮಾಡುತ್ತದೆ.
ಪ್ರಸ್ತುತ ಮುರಾಸು ಚಂಡಮಾರುತ ಅಪ್ಪಳಿಸಿರುವುದರಿಂದ ನವೆಂಬರ್ 5ರವರೆಗೆ ಗೋವಾ, ಕೊಂಕಣ, ಮರಾಠವಾಡ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಲಘು ಮಳೆ, ಗುಡುಗು-ಮಿಂಚು ಸಹಿತ ಬಿರುಗಾಳಿ ಮತ್ತು ವೇಗವಾದ ಗಾಳಿ ಬೀಸುವ ಸಾಧ್ಯತೆಯಿದೆ. ನವೆಂಬರ್ 1ರಿಂದ 5ರ ಅವಧಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಮತ್ತು ನವೆಂಬರ್ 1ರಿಂದ 7ರ ಅವಧಿಯಲ್ಲಿ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರಾದ ಕೆಲವು ಭಾಗಗಳಲ್ಲಿ ಮಳೆ ಯಾಗುವ ಸಾಧ್ಯತೆಯಿದೆ. ಚಂಡಮಾರುತದ ಕಾರಣದಿಂದಾಗಿ ಮಧ್ಯಪ್ರದೇಶದಲ್ಲಿ ಕಳೆದ 4 ದಿನಗಳಲ್ಲಿ ಗರಿಷ್ಠ ತಾಪಮಾನವು 7ರಿಂದ 8 ಡಿಗ್ರಿ ಸೆಲ್ಸಿಯಸ್ನಷ್ಟು ಕುಸಿದಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಕೆಲವು ಪ್ರದೇಶಗಳಲ್ಲಿ ನವೆಂಬರ್ 5ರವರೆಗೆ ಮಳೆಯಾಗಲಿದೆ. ಕೆಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಬಿರುಗಾಳಿ ಹಾಗೂ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ನ. 7ರವರೆಗೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ; ಕೆಲವೆಡೆ ಚದುರಿದಂತೆ, ಇನ್ನು ಕೆಲವೆಡೆ ವ್ಯಾಪಕ ಮಳೆಯಾಗಲಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಸಮೀಪವಿರುವ ಕೊತ್ತಪಟ್ನಂ ಕರಾವಳಿಯಲ್ಲಿ ಮುರಾಸು ಚಂಡಮಾರುತ ಅಪ್ಪಳಿಸಿದ ನಂತರ ಮಂಗಳವಾರದಂದು ಸಮುದ್ರದಲ್ಲಿ ಬೃಹತ್ ಅಲೆಗಳು ಮತ್ತು ಬಿರುಗಾಳಿ ಕಂಡುಬಂತು.
ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಚಳಿಗಾಲ ಆರಂಭವಾಗುವುದು ಹಿಮಾಲಯದಿಂದ ಬೀಸುವ ಒಣ ಮತ್ತು ಶೀತ ಮಾರುತಗಳಿಂದ. ಆದರೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ರೂಪುಗೊಂಡಾಗ, ಅವು ದೈತ್ಯ ತೇವಾಂಶದ ಪಂಪ್ಗಳಂತೆ (Mಟಜಿಠಠ್ಠಿ್ಟ ಕ್ಠಞಟಠ) ವರ್ತಿಸುತ್ತವೆ ಮತ್ತು ಇಡೀ ದೇಶದ ಮೇಲಿರುವ ಗಾಳಿ ಹಾಗೂ ತೇವಾಂಶವನ್ನು ತನ್ನತ್ತ ಸೆಳೆದುಕೊಳ್ಳುತ್ತವೆ. ಇದರಿಂದಾಗಿ ಹಿಮಾಲಯದ ಶೀತಗಾಳಿಯು ಬಯಲುಸೀಮೆ ಮತ್ತು ಮಧ್ಯ ಭಾರತದತ್ತ ಹರಿಯುವ ವೇಗ ತಗ್ಗುತ್ತದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಚಟುವಟಿಕೆಗಳು ಸಂಪೂರ್ಣವಾಗಿ ಶಾಂತವಾಗುವವರೆಗೂ ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಬೀಸುವ ಶೀತ ಮಾರುತಗಳು ಬಲಗೊಳ್ಳುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಡಿಸೆಂಬರ್ನ ಎರಡನೇ ಅಥವಾ ಮೂರನೇ ವಾರದವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಸಮುದ್ರದ ತೇವಾಂಶ ಕಡಿಮೆಯಾದ ನಂತರವೇ ಶೀತಗಾಳಿ (ಕೋಲ್ಡ್ ವೇವ್) ಚುರುಕಾಗಲು ಸಾಧ್ಯ. ಭಾರತೀಯ ಹವಾಮಾನ ಇಲಾಖೆ ಹಾಗೂ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯಾರಾಲಜಿ ನಡೆಸಿರುವ ಸಂಶೋಧನೆಯ ಪ್ರಕಾರ, ಎಲ್-ನಿನೋ ವರ್ಷಗಳ ಚಳಿಗಾಲದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 0.5ರಿಂದ 1.5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ ಬಯಲು ಪ್ರದೇಶಗಳಲ್ಲಿ ಶೀತ ಮಾರುತಗಳ ಬೀಸುವಿಕೆಯ ದಿನಗಳು ಅರ್ಧದಷ್ಟು ಕಡಿಮೆಯಾಗಿ, ಚಳಿಯ ತೀವ್ರತೆ ಗಣನೀಯವಾಗಿ ತಗ್ಗುತ್ತದೆ.
ಭಾರತದಲ್ಲಿ ಕಾಣಿಸಿಕೊಳ್ಳುವ ಚಂಡಮಾರುತಗಳಲ್ಲಿ ಶೇಕಡ 80ರಷ್ಟು ಬಂಗಾಳಕೊಲ್ಲಿಯಿಂದಲೇ ಉದ್ಭವಿ ಸುತ್ತವೆ; ಅರಬ್ಬಿ ಸಮುದ್ರದಿಂದ ಶೇ.20ರಷ್ಟು ಮಾತ್ರ ದಾಖಲಾಗುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂಗಾಳಕೊಲ್ಲಿಯೇ ಚಂಡಮಾರುತಗಳ ಕೇಂದ್ರವಾಗಲು ಮೂರು ಪ್ರಮುಖ ಕಾರಣಗಳಿವೆ:
ಹೆಚ್ಚಿನ ತಾಪಮಾನ: ಚಂಡಮಾರುತ ಸೃಷ್ಟಿಯಾಗಲು ಸಮುದ್ರದ ಮೇಲ್ಮೈ ಉಷ್ಣತೆಯು ಕನಿಷ್ಠ 26.5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿರಬೇಕು. ಬಂಗಾಳಕೊಲ್ಲಿಯು ಮೂರೂ ಕಡೆ ಭೂಮಿಯಿಂದ ಆವೃತವಾಗಿರುವ ಕಾರಣ ಇಲ್ಲಿನ ನೀರು ಸದಾ ಬೆಚ್ಚಗಿರುತ್ತದೆ (ಪ್ರಸ್ತುತ ಇದರ ಉಷ್ಣತೆ 28 ಡಿಗ್ರಿ ಸೆಲ್ಸಿಯಸ್ನಷ್ಟಿದೆ). ಇದಕ್ಕೆ ತದ್ವಿರುದ್ಧವಾಗಿ, ಅರಬ್ಬಿ ಸಮುದ್ರವು ಒಮಾನ್, ಆಫ್ರಿಕಾ ಮತ್ತು ಭಾರತದ ನಡುವೆ ವಿಶಾಲವಾಗಿ ಹರಡಿಕೊಂಡಿದ್ದು, ಅಲ್ಲಿ ತಂಪಾದ ಮಾರುತಗಳ ಹರಿವು ಹೆಚ್ಚಾಗಿರುತ್ತದೆ.
ಟೈಫೂನ್ಗಳ ಪುನರುಜ್ಜೀವನ: ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಉಂಟಾಗುವ ಟೈಫೂನ್ ಚಂಡಮಾರುತಗಳು ಪಶ್ಚಿಮ ದಿಕ್ಕಿಗೆ ಚಲಿಸಿ ವಿಯೆಟ್ನಾಂ ಮತ್ತು ಥೈಲ್ಯಾಂಡ್ ದಾಟಿ ಬಂಗಾಳಕೊಲ್ಲಿಯನ್ನು ಪ್ರವೇಶಿಸುತ್ತವೆ. ಬಂಗಾಳಕೊಲ್ಲಿಯ ಅತಿಯಾದ ತಾಪಮಾನ ಮತ್ತು ತೇವಾಂಶವು ಇವುಗಳಿಗೆ ಮತ್ತೆ ಶಕ್ತಿ ನೀಡಿ ಹೊಸ ಚಂಡಮಾರುತಗಳಾಗಿ ಮಾರ್ಪಡಿಸುತ್ತವೆ.
ಮಾರುತಗಳ ದಿಕ್ಕು: ಮಾನ್ಸೂನ್ ಮುಗಿದ ನಂತರ ಬೀಸುವ ಮಾರುತಗಳು ಚಂಡಮಾರುತಗಳನ್ನು ಪೂರ್ವದಿಂದ ಪಶ್ಚಿಮಕ್ಕೆ ತಳ್ಳುತ್ತವೆ. ಇದರಿಂದಾಗಿ ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳು ನೇರವಾಗಿ ಭಾರತದ ಕರಾವಳಿಯ ಮೇಲೆ ಅಪ್ಪಳಿಸುತ್ತವೆ. ಆದರೆ ಅರಬ್ಬಿ ಸಮುದ್ರದಲ್ಲಿ ಏಳುವ ಚಂಡ ಮಾರುತಗಳು ಭಾರತದಿಂದ ದೂರ ಸರಿದು ಒಮಾನ್ ಅಥವಾ ಮಧ್ಯಪ್ರಾಚ್ಯ ದೇಶಗಳತ್ತ ಮುಖಮಾಡುತ್ತವೆ.
ಬಂಗಾಳಕೊಲ್ಲಿಯ ಚಂಡಮಾರುತಗಳಿಗೂ ಮತ್ತು ಎಲ್-ನಿನೋ ವಿದ್ಯಮಾನಕ್ಕೂ ನೇರ ಸಂಬಂಧವಿದೆ. ಇದು ಚಂಡಮಾರುತಗಳ ನಡವಳಿಕೆಯನ್ನು ಹಲವು ರೀತಿಯಲ್ಲಿ ಬದಲಾಯಿಸುತ್ತದೆ.
ತೀವ್ರ ಆಕ್ರಮಣಶೀಲತೆ: ಎಲ್-ನಿನೋ ಪ್ರಭಾವದಿಂದಾಗಿ ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯ ಮೇಲ್ಮೈ ನೀರಿನ ತಾಪಮಾನ 28ರಿಂದ 30 ಡಿಗ್ರಿ ಸೆಲ್ಸಿಯಸ್ವರೆಗೆ ಏರುತ್ತದೆ. ಇದು ಚಂಡಮಾರುತಕ್ಕೆ ಅತ್ಯುಗ್ರ ಇಂಧನದಂತೆ ಕೆಲಸ ಮಾಡುತ್ತದೆ. ಪರಿಣಾಮವಾಗಿ, ಸಮುದ್ರದಲ್ಲಿನ ಅಲ್ಪ ಒತ್ತಡದ ವಾಯುಭಾರ ಕುಸಿತವು ಕೇವಲ 24ರಿಂದ 36 ಗಂಟೆಗಳಲ್ಲಿ ಭೀಕರ ಚಂಡಮಾರುತವಾಗಿ ರೂಪಾಂತರಗೊಳ್ಳುತ್ತದೆ.
ಕಡಿಮೆ ಆವರ್ತನ, ಆದರೆ ಗರಿಷ್ಠ ಹಾನಿ: ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಷನ್ ಇನ್ಪಾಮೇಶನ್ ಸರ್ವಿಸಸ್ ಮತ್ತು ಆಂಧ್ರ ವಿಶ್ವವಿದ್ಯಾಲಯದ ವಿಜ್ಞಾನಿಗಳು 1995ರಿಂದ 2019ರವರೆಗಿನ ಚಂಡಮಾರುತಗಳನ್ನು ವಿಶ್ಲೇಷಿಸಿದ್ದಾರೆ. ಈ ವರದಿಯ ಪ್ರಕಾರ, 9 ಎಲ್-ನಿನೋ ವರ್ಷಗಳಲ್ಲಿ 15 ಚಂಡಮಾರುತಗಳು ಅಪ್ಪಳಿಸಿದರೆ, 11 ಲಾ-ನಿನಾ ವರ್ಷಗಳಲ್ಲಿ 33 ಚಂಡಮಾರುತಗಳು ದಾಖಲಾಗಿವೆ. ಅಂದರೆ, ಎಲ್-ನಿನೋ ಅವಧಿಯಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆಯಿದ್ದರೂ, ಅವುಗಳ ವೇಗ, ತೀವ್ರತೆ ಮತ್ತು ಹಾನಿಯ ಪ್ರಮಾಣ ಅತ್ಯಂತ ಭೀಕರವಾಗಿರುತ್ತದೆ.
ಮಾರ್ಗದಲ್ಲಿ ಬದಲಾವಣೆ: ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾನಿರ್ದೇಶಕ ಡಾ. ಮೃತ್ಯುಂಜಯ ಮಹಾಪಾತ್ರ ಅವರ ಪ್ರಕಾರ, ಎಲ್-ನಿನೋ ವರ್ಷಗಳಲ್ಲಿ ಬಂಗಾಳಕೊಲ್ಲಿಯ ಸೈಕ್ಲೋನಿಕ್ ವ್ಯವಸ್ಥೆಗಳು ಸಮಭಾಜಕ ವೃತ್ತಕ್ಕೆ (ಉಟ್ಠಿಚಠಿಟ್ಟ) ಹತ್ತಿರವಾಗಿ ರೂಪುಗೊಳ್ಳುತ್ತವೆ. ಇದರಿಂದ ಚಂಡಮಾರುತಗಳಿಗೆ ಸಮುದ್ರದ ಮೇಲೆ ದೀರ್ಘಕಾಲ ಸಂಚರಿಸಲು ಅವಕಾಶ ಸಿಗುತ್ತದೆ. ಪರಿಣಾಮವಾಗಿ ಇವು ಒಡಿಶಾ ಅಥವಾ ಪಶ್ಚಿಮ ಬಂಗಾಳದ ಬದಲು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿಯತ್ತ ಧಾವಿಸುವ ಸಾಧ್ಯತೆ ಹೆಚ್ಚಿರುತ್ತದೆ.