ಅಂಬಾನಿ ಕುಟುಂಬದ ಅತಿಥಿಯಾಗಿ ಜಾಮ್​ನಗರಕ್ಕೆ ಭೇಟಿ ನೀಡಿದ ಟ್ರಂಪ್ ಜೂನಿಯರ್; ವಂತಾರಾ, ದೇವಾಲಯಕ್ಕೆ ಭೇಟಿ | Donald Trump Jr.

ಡೊನಾಲ್ಡ್ ಟ್ರಂಪ್ ಜೂನಿಯರ್
ಡೊನಾಲ್ಡ್ ಟ್ರಂಪ್ ಜೂನಿಯರ್
Published on
ಜಾಮ್​ನಗರ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್(Donald Trump Jr.) ಉದಯಪುರದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದು, ಗುರುವಾರ(ನ. 20) ಭಾರತದ ಖ್ಯಾತ ಉದ್ಯಮಿ ನಂ. 1 ಶ್ರೀಮಂತ ಮುಖೇಶ್ ಅಂಬಾನಿ ಕುಟುಂಬದ ಅತಿಥಿಯಾಗಿ ಗುಜರಾತ್​​ನ ಜಾಮ್​ನಗರಕ್ಕೆ ಭೇಟಿ ನೀಡಿದ್ದಾರೆ.
ಗುರುವಾರ ಬೆಳಗ್ಗೆ ಆಗ್ರಾದ ತಾಜ್​ ಮಹಲ್ ವೀಕ್ಷಿಸಿದ್ದ ಟ್ರಂಪ್ ಜೂನಿಯರ್, ಸಾಯಂಕಾಲ ಜಾಮ್‌ನಗರದಲ್ಲಿರುವ ಅಂಬಾನಿ ಕುಟುಂಬ ಒಡೆತನ ವಂತಾರಾ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾರೆ. ಇಡೀ ಅರಣ್ಯವನ್ನು ಸುತ್ತಿ ಪ್ರಾಣಿಗಳನ್ನು ವೀಕ್ಷಿಸಿ, ಸಿಬ್ಬಂದಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅನಂತ್ ಅಂಬಾನಿ ಜೊತೆಗಿದ್ದರು ಎನ್ನಲಾಗಿದೆ.
ಬಳಿಕ ಅಲ್ಲಿಂದ ವಾಂತಾರಾ ಬಳಿಯಿರುವ ಸ್ಥಳೀಯ ದೇವಾಲಯಲ್ಲಿ ತಮ್ಮ ಪತ್ನಿ ವನಸ್ಸಾ ಟ್ರಂಪ್ ಜೊತೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ದಾಂಡಿಯಾವನ್ನು ಆಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
ಉದಯಪುರದಲ್ಲಿ ಇಂದಿನಿಂದ ನ. 24ರವರೆಗೆ ಅಮೆರಿಕ ಮೂಲದ ಬಿಲಿಯನೇರ್ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಮತ್ತು ವಂಶಿ ಗಡಿರಾಜು ಅವರ ವಿವಾಹ ಸಮಾರಂಭ ನಡೆಯಲಿದೆ. ಸೋಮವಾರದವರೆಗೆ ದಿ ಲೀಲಾ ಪ್ಯಾಲೇಸ್‌ನಲ್ಲಿ ಉಳಿದುಕೊಂಡು ಮದುವೆ ಸಮಾರಂಭದಲ್ಲಿ ಜೂನಿಯರ್ ಟ್ರಂಪ್​ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net