ಮೋದಿ ತುಂಬಾ ಗಟ್ಟಿ ಮನುಷ್ಯ, ಜಗತ್ತೇ ಗೌರವಿಸುವ ಶ್ರೇಷ್ಠ ನಾಯಕ! ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿಯನ್ನು ಹಾಡಿಹೊಗಳಿದ ಡೊನಾಲ್ಡ್ ಟ್ರಂಪ್ | Tough Guy

ಮೋದಿ ಜಗತ್ತೇ ಗೌರವಿಸುವ ಶ್ರೇಷ್ಠ ನಾಯಕ
ಮೋದಿ ಜಗತ್ತೇ ಗೌರವಿಸುವ ಶ್ರೇಷ್ಠ ನಾಯಕ
Published on: 

ಮನಿಲಾ (ಫಿಲಿಪೈನ್ಸ್): ಇರಾನ್ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಮಂಗಳವಾರ ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆಯುತ್ತಿರುವ ಆಸಿಯಾನ್ (ASEAN) ಶೃಂಗಸಭೆಯ ನಡುವೆಯೇ ಮಹತ್ವದ ಕ್ವಾಡ್ ನಾಯಕರ ಸಭೆ ಜರುಗಿತು. ಈ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಟಫ್ ಗೈ (Tough Guy) ಮತ್ತು ವಿಶ್ವದಾದ್ಯಂತ ಗೌರವಿಸಲ್ಪಡುವ ಶ್ರೇಷ್ಠ ನಾಯಕ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಭೆಗೂ ಮುನ್ನ ಕ್ವಾಡ್ ನಾಯಕರೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದ ಟ್ರಂಪ್, ಪ್ರಧಾನಿ ಮೋದಿ ಅವರನ್ನು ಹೊಗಳಿದರಲ್ಲದೆ, ಜಪಾನ್ ಪ್ರಧಾನಿ ಸನೇ ತಕೈಚಿ ಅವರತ್ತ ಬೆರಳು ತೋರಿಸಿ ಇವರು ಮೋದಿಗಿಂತಲೂ ಹೆಚ್ಚು ಗಟ್ಟಿಗಿತ್ತಿ ಇರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ವಾಡ್ ಒಕ್ಕೂಟದ ಎಲ್ಲಾ ನಾಯಕರೊಂದಿಗೂ ತಮಗೆ ಉತ್ತಮ ಬಾಂಧವ್ಯವಿದ್ದು, ಅವರೆಲ್ಲರೂ ತಮ್ಮ ಆಪ್ತ ಸ್ನೇಹಿತರು ಹಾಗೂ ಅದ್ಭುತ ವ್ಯಕ್ತಿಗಳು ಎಂದು ಟ್ರಂಪ್ ಬಣ್ಣಿಸಿದರು.

ಚೀನಾಗೆ ಟ್ರಂಪ್ ಪರೋಕ್ಷ ಟಾಂಗ್!

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಕಳೆದ ಕೆಲವು ವರ್ಷಗಳಲ್ಲಿ ಕ್ವಾಡ್ ರಾಷ್ಟ್ರಗಳ ನಡುವಿನ ಸಹಕಾರ ಗಣನೀಯವಾಗಿ ಹೆಚ್ಚಾಗಿದೆ. ಕ್ವಾಡ್ ಸದಸ್ಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯು ಇಡೀ ವಿಶ್ವದಲ್ಲೇ ಅತ್ಯಂತ ಮಹತ್ವದ್ದಾಗಿದೆ ಎನ್ನುತ್ತಾ, ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದರು. ಇಂಡೋ-ಪೆಸಿಫಿಕ್ ಪ್ರದೇಶವು ಯಾವಾಗಲೂ ಮುಕ್ತ, ಸ್ವತಂತ್ರ ಮತ್ತು ಸ್ಥಿರವಾಗಿರಬೇಕು, ನಮ್ಮ ದೇಶಗಳು ಮುಕ್ತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ನ ನಾಲ್ಕು ಮೂಲೆಗಳಾಗಿವೆ. ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ರಾಜತಾಂತ್ರಿಕತೆಯ ವಿಚಾರಗಳಲ್ಲಿ ನಾವು ಅತ್ಯುತ್ತಮ ಸಂಬಂಧ ಮತ್ತು ನಿಕಟ ಸಮನ್ವಯವನ್ನು ಹೊಂದಿದ್ದೇವೆ ಎಂದು ಟ್ರಂಪ್ ಹೇಳಿದರು.

ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕ್ವಾಡ್ ಒಕ್ಕೂಟವನ್ನು ರಚನಾತ್ಮಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ ಎಂದು ಬಣ್ಣಿಸಿದರು. ಕಡಲ ಭದ್ರತೆ ಮತ್ತು ವಿಪತ್ತು ನಿರ್ವಹಣೆಯಂತಹ ಪ್ರಮುಖ ವಿಷಯಗಳಲ್ಲಿ ಈ ಗುಂಪು ಯಾವಾಗಲೂ ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸಿದೆ ಎಂದು ಶ್ಲಾಘಿಸುತ್ತಾ ಕ್ವಾಡ್ ನಾಯಕರಿಗೆ ಶುಭಾಶಯ ತಿಳಿಸಿದ ಮೋದಿ, ಈ ಒಕ್ಕೂಟವು ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿದೆ ಎಂದರು.

Also Read
ಅತ್ಯಂತ ಧನ್ಯತಾ ಭಾವ ತಂದಿದೆ! ಫಿಲಿಪೈನ್ಸ್‌ನ ಅತ್ಯಂತ ಹಳೆಯ ಗುರುದ್ವಾರದಲ್ಲಿ ಕರ ಸೇವೆ ಸಲ್ಲಿಸಿ ನಮೋ ಮಾತು | PM Modi Philippines Visit
ಮೋದಿ ಜಗತ್ತೇ ಗೌರವಿಸುವ ಶ್ರೇಷ್ಠ ನಾಯಕ

ಮನಿಲಾ ನಗರದ ಐತಿಹಾಸಿಕ ಮಹತ್ವವನ್ನು ಸ್ಮರಿಸಿದ ಪ್ರಧಾನಿ, 2007ರಲ್ಲಿ ನಾಲ್ಕು ದೇಶಗಳ ಅಧಿಕಾರಿಗಳು ಮೊದಲ ಬಾರಿಗೆ ಇದೇ ನಗರದಲ್ಲಿ ಸಭೆ ಸೇರಿದ್ದರು. ಅದಾದ 10 ವರ್ಷಗಳ ಬಳಿಕ 2017ರಲ್ಲಿ ನಾವು ಇದೇ ನಗರದಲ್ಲಿ ನಮ್ಮ ಸಂವಾದವನ್ನು ಪುನರಾರಂಭಿಸಿದೆವು. ಇಂದು ಈ ಐತಿಹಾಸಿಕ ನಗರದಲ್ಲಿ ಮತ್ತೊಮ್ಮೆ ಕ್ವಾಡ್ ಸಭೆ ನಡೆಸುತ್ತಿರುವುದು ಒಂದು ಪ್ರಮುಖ ಮೈಲಿಗಲ್ಲಾಗಿದೆ. ಕಳೆದ ವರ್ಷದ ಜನವರಿಯಿಂದ ಇಲ್ಲಿಯವರೆಗೆ ನಮ್ಮ ವಿದೇಶಾಂಗ ಸಚಿವರು 5 ಬಾರಿ ಭೇಟಿಯಾಗಿದ್ದಾರೆ. ಇದು ನಮ್ಮ ರಾಜಕೀಯ ಇಚ್ಛಾಶಕ್ತಿ ಮತ್ತು ಪಾಲುದಾರಿಕೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು. ಮಂಗಳವಾರದ ಈ ಸಭೆಯು ಮುಂದಿನ ಹಂತದ ಸಹಕಾರಕ್ಕಾಗಿ ಕ್ವಾಡ್‌ಗೆ ಕಾಂಕ್ರೀಟ್ ಗುರಿಗಳನ್ನು ನಿಗದಿಪಡಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನೂ ಮೋದಿ ವ್ಯಕ್ತಪಡಿಸಿದರು.

ಮನಿಲಾ ಭೇಟಿ ಮತ್ತು ಭಾರತದ ಮಹಾಸಾಗರ್ ದೃಷ್ಟಿಕೋನ

ಆಸಿಯಾನ್ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಸೋಮವಾರ ಮನಿಲಾಗೆ ಆಗಮಿಸಿದ್ದರು. ಆಸಿಯಾನ್ ದೇಶಗಳೊಂದಿಗಿನ ಭಾರತದ ಸಂಬಂಧವು ಆಕ್ಟ್ ಈಸ್ಟ್ ನೀತಿಯ ಹೃದಯಭಾಗದಲ್ಲಿದೆ ಮತ್ತು ಭಾರತದ ವಿಸ್ತೃತ ಜಾಗತಿಕ ಕಡಲ ಸಿದ್ಧಾಂತವಾದ ಮಹಾಸಾಗರ್ ದೃಷ್ಟಿಕೋನದಲ್ಲಿ ಕೇಂದ್ರ ಸ್ಥಾನವನ್ನು ಪಡೆದಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ. 1967ರಲ್ಲಿ ಸ್ಥಾಪನೆಯಾದ ಆಸಿಯಾನ್ 11 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಭಾರತ, ಅಮೆರಿಕ, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಇದರ ಸಂವಾದ ಪಾಲುದಾರ ರಾಷ್ಟ್ರಗಳಾಗಿವೆ. ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಸನ್ನಿವೇಶಗಳನ್ನು ಎದುರಿಸಲು ಮತ್ತು ಏಷ್ಯಾದಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಆಸಿಯಾನ್‌ನೊಂದಿಗಿನ ಬಲವಾದ ಕಾರ್ಯತಂತ್ರದ ಸಂಬಂಧ ಅತ್ಯಗತ್ಯವಾಗಿದೆ ಎಂದು ಭಾರತ ಪ್ರತಿಪಾದಿಸಿದೆ(ಏಜೆನ್ಸೀಸ್​).