ಅತ್ಯಂತ ಧನ್ಯತಾ ಭಾವ ತಂದಿದೆ! ಫಿಲಿಪೈನ್ಸ್‌ನ ಅತ್ಯಂತ ಹಳೆಯ ಗುರುದ್ವಾರದಲ್ಲಿ ಕರ ಸೇವೆ ಸಲ್ಲಿಸಿ ನಮೋ ಮಾತು | PM Modi Philippines Visit

ಗುರುದ್ವಾರದಲ್ಲಿ ಪ್ರಧಾನಿ ಮೋದಿ
ಗುರುದ್ವಾರದಲ್ಲಿ ಪ್ರಧಾನಿ ಮೋದಿ
Published on: 

PM Modi Philippines Visit: ಫಿಲಿಪೈನ್ಸ್‌ಗೆ ಮೂರು ದಿನಗಳ ಭೇಟಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಮನಿಲಾದಲ್ಲಿರುವ ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಅತ್ಯಂತ ಹಳೆಯ ಗುರುದ್ವಾರ ಖಾಲ್ಸಾ ದಿವಾನ್​ಗೆ ಭೇಟಿ ನೀಡಿದರು. ಈ ಐತಿಹಾಸಿಕ ಗುರುದ್ವಾರದ ಪುನರಾಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದ ನೇತೃತ್ವ ವಹಿಸಿದ ಅವರು, ಕರ ಸೇವೆ ಸಲ್ಲಿಸುವ ಮೂಲಕ ಭಕ್ತಿ ಭಾವ ಮೆರೆದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ಫಿಲಿಪೈನ್ಸ್‌ನ ಸೆನೆಟರ್ ಫ್ರಾನ್ಸಿಸ್ ಜೋಸೆಫ್ ಎಸ್ಕುಡೆರೊ ಮತ್ತು ಮನಿಲಾ ಮೇಯರ್ ಫ್ರಾನ್ಸಿಸ್ಕೊ ಇಸ್ಕೊ ಮೊರೆನೊ ಉಪಸ್ಥಿತರಿದ್ದರು. ಸಮಾರಂಭದ ವೇಳೆ ಪ್ರಧಾನಿ ಮೋದಿ ಅವರು ಅನಿವಾಸಿ ಭಾರತೀಯರು ಮತ್ತು ಸ್ಥಳೀಯ ಸಿಖ್ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು.

ಭೇಟಿಯ ಕುರಿತು ಪ್ರಧಾನಿ ಮೋದಿ ಭಾವುಕ ಮಾತು

ಶತಮಾನದಷ್ಟು ಹಳೆಯದಾದ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ ಕುರಿತು ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಮನಿಲಾದ ಗುರುದ್ವಾರ ಖಾಲ್ಸಾ ದಿವಾನ್‌ಗೆ ಭೇಟಿ ನೀಡಿರುವುದು ನನಗೆ ಅತ್ಯಂತ ಧನ್ಯತಾ ಭಾವವನ್ನು ತಂದಿದೆ ಎಂದು ಹೇಳಿದ್ದಾರೆ. ಇಂದು ಗುರುದ್ವಾರದಲ್ಲಿ ನಡೆದ ಕರ ಸೇವೆಯಲ್ಲಿ ಪಾಲ್ಗೊಂಡು ಅವರು ಸ್ವಯಂಸೇವೆ ಸಲ್ಲಿಸಿದರು. ಭಾರತದಿಂದ ಮನಿಲಾಗೆ ವಲಸೆ ಬಂದ ಪಂಜಾಬಿ ಸಮುದಾಯದ ಸದಸ್ಯರಿಂದ ನಿರ್ಮಾಣಗೊಂಡ ಈ ಗುರುದ್ವಾರವು ಪ್ರಸ್ತುತ ಪುನರ್ನಿರ್ಮಾಣ ಹಂತದಲ್ಲಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮನಿಲಾದ ಅತ್ಯಂತ ಹಳೆಯ ಗುರುದ್ವಾರದ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ತಿಳಿಸಿದೆ. ಖಾಲ್ಸಾ ದಿವಾನ್ ಗುರುದ್ವಾರವು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತ ಮತ್ತು ಫಿಲಿಪೈನ್ಸ್ ನಡುವಿನ ಸಾಂಸ್ಕೃತಿಕ ಹಾಗೂ ಜನರ ನಡುವಿನ ಬಾಂಧವ್ಯಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದೆ ಎಂದು ಸಚಿವಾಲಯ ಬಣ್ಣಿಸಿದೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಗುರುದ್ವಾರವನ್ನು 1901ರಲ್ಲಿ ಸ್ಥಾಪಿಸಲಾಯಿತು ಮತ್ತು 1903ರಲ್ಲಿ ಔಪಚಾರಿಕವಾಗಿ ಸಂಘಟಿಸಲಾಯಿತು. ತದನಂತರ 1924ರಲ್ಲಿ ಇದನ್ನು ಖಾಲ್ಸಾ ದಿವಾನ್ ಎಂದು ಅಧಿಕೃತವಾಗಿ ನೋಂದಾಯಿಸಲಾಯಿತು (ಮತ್ತು 1929ರಲ್ಲಿ ಪಂಜಾಬಿ ಸಮುದಾಯದಿಂದ ಅಭಿವೃದ್ಧಿಗೊಂಡಿತು). ಫಿಲಿಪೈನ್ಸ್‌ನ ಅತ್ಯಂತ ಹಳೆಯ ಗುರುದ್ವಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು, ಮನಿಲಾದಲ್ಲಿರುವ ಸಿಖ್ ಹಾಗೂ ಇತರ ಸಮುದಾಯಗಳಿಗಾಗಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳ ಮೂಲಕ ಮಹತ್ವದ ಪಾತ್ರ ವಹಿಸುತ್ತಿದೆ. ಅಲ್ಲದೆ, ಭಾರತೀಯ-ಸಿಖ್ ಸಮುದಾಯ ಮತ್ತು ಫಿಲಿಪೈನ್ಸ್ ಸಮಾಜದ ನಡುವೆ ಒಂದು ಮಹತ್ವದ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಧಾನಿ ಮೋದಿ ಅವರ ಫಿಲಿಪೈನ್ಸ್ ಪ್ರವಾಸದ ಹಿನ್ನಲೆ!

2026ನೇ ಸಾಲಿನ ಆಸಿಯಾನ್ ಅಧ್ಯಕ್ಷ ರಾಷ್ಟ್ರವಾಗಿರುವ ಫಿಲಿಪೈನ್ಸ್ ಆಯೋಜಿಸಿರುವ 23ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಸೋಮವಾರ ಮನಿಲಾಗೆ ಆಗಮಿಸಿದ್ದಾರೆ. ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಕುರಿತು ಚರ್ಚಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಉಭಯ ಪಕ್ಷಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿ, ವಿಶೇಷವಾಗಿ 2026–2030ರ ಅವಧಿಯ ಆಸಿಯಾನ್-ಭಾರತ ಕ್ರಿಯಾ ಯೋಜನೆಯ ಅನುಷ್ಠಾನದ ಕುರಿತು ಪರಾಮರ್ಶೆ ನಡೆಯಲಿದೆ. 1967ರಲ್ಲಿ ಸ್ಥಾಪನೆಯಾದ ಆಸಿಯಾನ್ ಒಕ್ಕೂಟವು ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್, ತಿಮೋರ್-ಲೆಸ್ಟೆ ಮತ್ತು ವಿಯೆಟ್ನಾಂ ಎಂಬ 11 ರಾಷ್ಟ್ರಗಳನ್ನು ಒಳಗೊಂಡಿದೆ. ಭಾರತ, ಅಮೆರಿಕ, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಇದರ ಸಂವಾದ ಪಾಲುದಾರ ರಾಷ್ಟ್ರಗಳಾಗಿವೆ. ಇದರೊಂದಿಗೆ, 21ನೇ ಪೂರ್ವ ಏಷ್ಯಾ ಶೃಂಗಸಭೆಯು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಪ್ರಮುಖ ವೇದಿಕೆಯಾಗಲಿದೆ.

ಪಂಜಾಬ್​ ಚುನಾವಣೆ ಲಿಂಕ್​!

ಪ್ರಧಾನಿ ಮೋದಿಯವರ ಈ ಭೇಟಿಯು ಕೇವಲ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮಾತ್ರ ಹೊಂದಿಲ್ಲ, ಬದಲಾಗಿ ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಸಿಖ್ ಸಮುದಾಯದ ಭಾವನೆಗಳಿಗೆ ಸ್ಪಂದಿಸುವ ಮತ್ತು ಅನಿವಾಸಿ ಪಂಜಾಬಿಗಳನ್ನು ತಲುಪುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿಯೂ ಈ ಭೇಟಿಯನ್ನು ರಾಜಕೀಯ ವಿಶ್ಲೇಷಕರು ನೋಡುತ್ತಿದ್ದಾರೆ(ಏಜೆನ್ಸೀಸ್​).