ಹೋಟೆಲ್​, ಶೋರೂಂ, ಜಮೀನು, ಲಕ್ಷುರಿ ಕಾರುಗಳು ಅಬ್ಬಬ್ಬಾ... ಸಾರಿಗೆ ಅಧಿಕಾರಿಯ ಆಸ್ತಿ ಕಂಡು ACB ಸುಸ್ತು! Transport Officer

ಸಾರಿಗೆ ಇಲಾಖೆ ಅಧಿಕಾರಿ ಮೂದ್​ ಕಿಶಾನ್​
ಸಾರಿಗೆ ಇಲಾಖೆ ಅಧಿಕಾರಿ ಮೂದ್​ ಕಿಶಾನ್​
Published on

ಪ್ರಮುಖ ಮುಖ್ಯಾಂಶಗಳು

  • ಎಸಿಬಿ ದಾಳಿಗೆ ಒಳಗಾದ ತೆಲಂಗಾಣ ಸಾರಿಗೆ ಅಧಿಕಾರಿಯನ್ನು ಮೂದ್​ ಕಿಶನ್​
  • ಬರೋಬ್ಬರಿ 12.72 ಕೋಟಿ ರೂ. ಮೌಲ್ಯದ ಆಸ್ತಿ ಅಧಿಕಾರಿಗಳಿಂದ ಸೀಜ್​
  • ಆಸ್ತಿಯು ಆದಾಯದ ಮೂಲ ಮೀರಿರುವುದರಿಂದ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಕಿಶನ್​
ಹೈದರಾಬಾದ್​: ಸಾರಿಗೆ ಇಲಾಖೆ ಅಧಿಕಾರಿಯ ( Transport Officer ) ಆಸ್ತಿಯನ್ನು ನೋಡಿ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಅಧಿಕಾರಿಗಳೇ ದಂಗಾಗಿದ್ದಾರೆ. ಹಾಗಾದರೆ, ಆ ಸಾರಿಗೆ ಅಧಿಕಾರಿಯ ಬಳಿ ಎಷ್ಟು ಆಸ್ತಿ ಇದೆ? ಅಷ್ಟೊಂದು ಹಣವನ್ನು ಯಾವ ಮೂಲಗಳಿಂದ ಆ ಅಧಿಕಾರಿ ಪಡೆದರು? ಎಸಿಬಿ ಅಧಿಕಾರಿಗಳ ದಾಳಿಯ ವೇಳೆ ಸಿಕ್ಕಿದ್ದೇನು? ಎಂಬ ಮಾಹಿತಿ ಇಲ್ಲಿದೆ.
ಎಸಿಬಿ ದಾಳಿಗೆ ಒಳಗಾದ ತೆಲಂಗಾಣ ಸಾರಿಗೆ ಅಧಿಕಾರಿಯನ್ನು ಮೂದ್​ ಕಿಶನ್​ ಎಂದು ಗುರುತಿಸಲಾಗಿದೆ. ಇವರಿಗೆ ಸಂಬಂಧಿಸಿದ ಬರೋಬ್ಬರಿ 12.72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ. ಆದರೆ, ಅವರ ಬಳಿ ಇರುವ ಆಸ್ತಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 62 ಕೋಟಿ ರೂ. ಎಂದು ಹೇಳಲಾಗಿದೆ. ಇಷ್ಟೊಂದು ಹಣ ಪತ್ತೆಯಾದ ಬೆನ್ನಲ್ಲೇ ಮೂದ್​ ಕಿಶಾನ್​ ಅವರ ಸಂಬಳ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿ ಹೆಚ್ಚಿದೆ. ತನಿಖಾಧಿಕಾರಿಗಳ ಪ್ರಕಾರ, ಮೂದ್​ ಕಿಶಾನ್​ ಶ್ರೇಣಿಯ ಅಧಿಕಾರಿಗಳ ಒಂದು ತಿಂಗಳ ಸಂಬಳ 1 ರಿಂದ 1.25 ಲಕ್ಷ ರೂ. ಇದೆ. ಅವರ ಆಸ್ತಿಯು ಆದಾಯದ ಮೂಲವನ್ನು ಮೀರಿರುವುದರಿಂದ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕಿಶನ್ ಅವರ ನಿವಾಸ ಮತ್ತು ಅವರ ಸಹಚರರಿಗೆ ಸೇರಿದ ಇತರ 11 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ತಿಳಿದುಬಂದ ಮತ್ತೊಂದು ಶಾಕಿಂಗ್​ ಸಂಗತಿ ಏನೆಂದರೆ, ಕಿಶಾನ್​ ಅವರ ಐಷಾರಾಮಿ ಜೀವನ ಮತ್ತು ಹೂಡಿಕೆಯಂತಹ ವಿವಿಧ ಬಂಡವಾಳಗಳು ಪತ್ತೆಯಾಗಿವೆ. ಲಹರಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಶೇ. 50 ರಷ್ಟು ಪಾಲು ಮತ್ತು ನಿಜಾಮಾಬಾದ್‌ನಲ್ಲಿ 3,000 ಚದರ ಗಜಗಳ ಪ್ರೀಮಿಯಂ ಪೀಠೋಪಕರಣಗಳ ಶೋರೂಂ ಕೂಡ ಕಿಶನ್​ ಹೆಸರಿನಲ್ಲಿವೆ.
ಕಿಶನ್​ ಆಸ್ತಿ ಡೀಟೇಲ್ಸ್​ ಇಲ್ಲಿಗೆ ನಿಲ್ಲುವುದಿಲ್ಲ. ಸಂಗಾರೆಡ್ಡಿ ಜಿಲ್ಲೆಯಲ್ಲಿ 31 ಎಕರೆ ಕೃಷಿ ಭೂಮಿ ಮತ್ತು ನಿಜಾಮಾಬಾದ್ ಪುರಸಭೆಯ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 10 ಎಕರೆ ವಾಣಿಜ್ಯ ಭೂಮಿಯನ್ನು ವಿಶಾಲವಾದ ಭೂ ಹಿಡುವಳಿಗಳಲ್ಲಿ ಸೇರಿಸಲಾಗಿದೆ. ಲಿಕ್ವಿಡ್ ಅಸೆಟ್ಸ್ ಮತ್ತು ವಾಹನಗಳು ಸಹ ಪತ್ತೆಯಾಗಿವೆ. ಪ್ರಸ್ತುತ ಸ್ಥಗಿತಗೊಳಿಸಿರುವ ಬ್ಯಾಂಕ್​ ಖಾತೆಯಲ್ಲಿ 1.37 ಕೋಟಿ ರೂ.ಗಳ ಹಣವಿದೆ. ಸುಮಾರು 1 ಕೆಜಿಗೂ ಹೆಚ್ಚು ಚಿನ್ನದ ಆಭರಣಗಳು ಮತ್ತು ಇನ್ನೋವಾ ಕ್ರಿಸ್ಟಾ ಮತ್ತು ಹೋಂಡಾ ಸಿಟಿ ಸೇರಿದಂತೆ ಐಷಾರಾಮಿ ವಾಹನಗಳು ಪತ್ತೆಯಾಗಿವೆ. ವಸತಿ ಆಸ್ತಿ ವಿಚಾರಕ್ಕೆ ಬಂದರೆ, ನಿಜಾಮಾಬಾದ್‌ನ ಅಶೋಕ ಟೌನ್‌ಶಿಪ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಮತ್ತು ಸಂಗಾರೆಡ್ಡಿಯಲ್ಲಿ ವಿಶೇಷ ಪಾಲಿಹೌಸ್ ಸೌಲಭ್ಯವನ್ನು ಕಿಶನ್​ ಹೊಂದಿದ್ದಾರೆಂದು ತಿಳಿದಬಂದಿದೆ.
ಇನ್ನು ಸೇವೆಯಲ್ಲಿರುವಾಗಲೇ ಹೋಟೆಲ್‌ಗಳು ಮತ್ತು ಶೋರೂಂಗಳನ್ನು ಆರಂಭಿಸಿರುವುದು ಭ್ರಷ್ಟಾಚಾರ ತಡೆ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ. ಸದ್ಯ ಕಿಶನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಬಿ) ಮತ್ತು 13(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಅಕ್ರಮವಾಗಿ ಶ್ರೀಮಂತರಾಗುವುದು ಮತ್ತು ಕ್ರಿಮಿನಲ್ ದುಷ್ಕೃತ್ಯಕ್ಕೆ ಸಂಬಂಧಿಸಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net