ಪೆರುವಿನಲ್ಲಿ ಭೀಕರ ವಿಮಾನ ಅಪಘಾತ: 'ನಜ್ಕಾ ಲೈನ್ಸ್' ವೀಕ್ಷಣೆಗೆ ತೆರಳಿದ್ದ 13 ಪ್ರವಾಸಿಗರ ದಾರುಣ ಅಂತ್ಯ! Peru Plane Crash

Peru Plane Crash (ಚಿತ್ರ X)
Peru Plane Crash (ಚಿತ್ರ X)
Published on: 

Peru Plane Crash: ಪೆರುವಿನ ಪ್ರಸಿದ್ಧ ಪ್ರವಾಸಿ ತಾಣವಾದ 'ನಜ್ಕಾ ಲೈನ್ಸ್' ವೀಕ್ಷಣೆಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ವಿಮಾನವೊಂದು ಶನಿವಾರ (ಆ.02) ನಜ್ಕಾ ನಗರದ ಹೊರವಲಯದ ಮೈದಾನದಲ್ಲಿ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ವಿಮಾನದಲ್ಲಿದ್ದ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೆರು ದೇಶದ ಆಡಳಿತ ಮಂಡಳಿ ಮತ್ತು ಸ್ಥಳೀಯ ಪುರಸಭೆ ಅಧಿಕೃತವಾಗಿ ದೃಢಪಡಿಸಿವೆ.

ಸ್ಥಳೀಯ ಏರೋಡಿಯಾನಾ ಸಂಸ್ಥೆಗೆ ಸೇರಿದ 'ಸೆಸ್ನಾ ಗ್ರಾಂಡ್ ಕ್ಯಾರವಾನ್' ಮಾದರಿಯ ಈ ವಿಮಾನವು ಇಕಾ ನಗರದಿಂದ ಹಾರಾಟ ಆರಂಭಿಸಿತ್ತು. ನೂರಾರು ವರ್ಷಗಳ ಹಿಂದೆ ಪೆರುವಿನ ಮೂಲ ನಿವಾಸಿಗಳು ಮರುಭೂಮಿಯ ನೆಲದ ಮೇಲೆ ಕೆತ್ತಿರುವ ಬೃಹತ್ ಆಕಾರದ ಚಿತ್ರಗಳನ್ನು ಆಕಾಶ ಮಾರ್ಗವಾಗಿ ಪ್ರವಾಸಿಗರಿಗೆ ತೋರಿಸುವುದು ಈ ಪ್ರಯಾಣದ ಉದ್ದೇಶವಾಗಿತ್ತು. ಆದರೆ, ವೀಕ್ಷಣೆಯ ವೇಳೆಯಲ್ಲೇ ಈ ದುರಂತ ಸಂಭವಿಸಿದೆ.

ಪೆರುವಿನ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಮೃತಪಟ್ಟವರಲ್ಲಿ 11 ವಿದೇಶಿ ಪ್ರವಾಸಿಗರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಸೇರಿದ್ದಾರೆ. ಮೃತಪಟ್ಟ ವಿದೇಶಿಗರಲ್ಲಿ ಇಟಲಿಯ ಏಳು, ಜರ್ಮನಿಯ ಇಬ್ಬರು ಹಾಗೂ ಸ್ಪೇನ್ ದೇಶದ ಇಬ್ಬರು ನಾಗರೀಕರಿದ್ದಾರೆ. ಪ್ರಸ್ತುತ ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಪೆರು ಸರ್ಕಾರವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ (ಏಜೆನ್ಸೀಸ್​).