ಪ್ರಾಣಿ ಬಲಿ ನೀಡಿದರೆ ನಾಲಿಗೆ ಕತ್ತರಿಸ್ತೀವಿ!...ಹುಮಾಯೂನ್ ಕಬೀರ್‌ಗೆ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಖಡಕ್ ವಾರ್ನಿಂಗ್ | Balmukund Acharya

Balmukund Acharya | ಹುಮಾಯೂನ್ ಕಬೀರ್‌ಗೆ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಖಡಕ್ ವಾರ್ನಿಂಗ್
Balmukund Acharya | ಹುಮಾಯೂನ್ ಕಬೀರ್‌ಗೆ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಖಡಕ್ ವಾರ್ನಿಂಗ್
Published on
Balmukund Acharya: ಬಕ್ರೀದ್ ಹಬ್ಬದ ಸಂದರ್ಭದಲ್ಲಿನ ಪ್ರಾಣಿ ಬಲಿ ಕುರಿತು ಮಾತನಾಡುವ ಭರದಲ್ಲಿ ಜೈಪುರದ ಹವಾಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಪಶ್ಚಿಮ ಬಂಗಾಳದ ಶಾಸಕ ಹುಮಾಯೂನ್ ಕಬೀರ್‌ಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಶಾಸಕ ಹುಮಾಯೂನ್ ಕಬೀರ್ ಪ್ರಾಣಿ ಬಲಿ ನೀಡಲು ಯತ್ನಿಸಿದರೆ ಅವರ ನಾಲಿಗೆಯನ್ನು ಸೀಳಲಾಗುವುದು ಎಂದು ಗುಡುಗಿರುವ ಶಾಸಕ ಆಚಾರ್ಯ, ಹಸುಗಳು ಮತ್ತು ಒಂಟೆಗಳ ಬಗ್ಗೆ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದಾಗಲಿ ಅಥವಾ ಅವುಗಳನ್ನು ಕಡಿಯುವ ಪ್ರಯತ್ನವನ್ನಾಗಲಿ ಮಾಡಿದರೆ ಅವರ ನಾಲಿಗೆಯನ್ನು ಕತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂತಹ ವಿಷಯಗಳಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದ್ದರೂ, ಅವರ ನಾಲಿಗೆಯನ್ನು ಸೀಳುವುದು ಖಚಿತ ಎಂದು ತಮ್ಮ ಹೇಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿ ಕೊಡುವ ಪದ್ಧತಿಯನ್ನು ಬಲವಾಗಿ ವಿರೋಧಿಸಿರುವ ಬಾಲಮುಕುಂದ್ ಆಚಾರ್ಯ, ಮುಸ್ಲಿಂ ಸಮುದಾಯದವರು ಪ್ರಾಣಿಗಳನ್ನು ಕೊಲ್ಲುವ ಬದಲಿಗೆ ಕೇಕ್ ಕತ್ತರಿಸುವ ಮೂಲಕ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ. ಅವರ ಪ್ರಕಾರ, ಪ್ರತಿಯೊಂದು ಪ್ರಾಣಿಗೂ ಒಂದು ಕುಟುಂಬವಿರುತ್ತದೆ ಮತ್ತು ಅವುಗಳಿಗೂ ಬದುಕುವ ಹಕ್ಕಿದೆ. ಹಬ್ಬದ ಆಚರಣೆಗಳಿಗಾಗಿ ಜೀವಂತ ಪ್ರಾಣಿಗಳನ್ನು ಕೊಲ್ಲುವುದರಿಂದ ಆಗುವ ನೋವಿನ ಬಗ್ಗೆ ಜನರು ಯೋಚಿಸಬೇಕು ಎಂದು ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಇದು ಮುಸ್ಲಿಂ ಸಮುದಾಯಕ್ಕೆ ತಾನು ನೀಡುತ್ತಿರುವ ವೈಯಕ್ತಿಕ ಸಲಹೆಯಾಗಿದ್ದು, ಇದನ್ನು ಸ್ವೀಕರಿಸುವುದು ಅಥವಾ ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಆಚಾರ್ಯ, ಬಕ್ರೀದ್ ಹಾಗೂ ಇತರ ಸಂದರ್ಭಗಳಲ್ಲಿ ರಸ್ತೆಗಳ ಮೇಲೆ ನಮಾಜ್ ಮಾಡುವುದರಿಂದ ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ, ವೈದ್ಯಕೀಯ ಚಿಕಿತ್ಸೆಗಳು ವಿಳಂಬವಾಗುತ್ತವೆ ಮತ್ತು ಕೆಲವೊಮ್ಮೆ ಇದರಿಂದ ಅಮೂಲ್ಯ ಪ್ರಾಣಹಾನಿಯೂ ಸಂಭವಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ನಿರ್ಧಾರಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ರಾಜಸ್ಥಾನದಲ್ಲೂ ಇಂತಹ ನಿರ್ಬಂಧಗಳನ್ನು ಹೇರಬೇಕೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಆಚಾರ್ಯ, ಜನರಿಗೆ ಹಬ್ಬಗಳನ್ನು ಆಚರಿಸುವ ಸ್ವಾತಂತ್ರ್ಯವಿದೆ ಆದರೆ ಅದು ಇತರರಿಗೆ ಅನಾನುಕೂಲ ಉಂಟುಮಾಡಬಾರದು ಎಂದು ಹೇಳಿದರು. ಇಂತಹ ಸೂಕ್ಷ್ಮ ಸಮಸ್ಯೆಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು, ಆದರೆ ರಸ್ತೆಗಳ ಮೇಲೆ ನಮಾಜ್ ಮಾಡುವುದು ಸಂಪೂರ್ಣವಾಗಿ ಅಸಮರ್ಥನೀಯ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net